ADVERTISEMENT

ಮಾಡೆಲಿಂಗ್‌ನಲ್ಲಿ ಶ್ವೇತಾ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 19:30 IST
Last Updated 8 ಆಗಸ್ಟ್ 2019, 19:30 IST
ಶ್ವೇತಾ ಅಗರವಾಲ್‌
ಶ್ವೇತಾ ಅಗರವಾಲ್‌   

ಒಂದನೇ ತರಗತಿಯಲ್ಲಿ ಓದುವಾಗಲೇ ಶ್ವೇತಾ ಅಗರವಾಲ್‌, ಬಾಲನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾದವರು. ‘ಹೆಂಡ್ತಿಗೆ ಹೇಳ್ತೀನಿ’ ಸಿನಿಮಾದಲ್ಲಿ ವಿಷ್ಣುವರ್ಧನ್‌ ಮಗಳ ಪಾತ್ರದಲ್ಲಿ ಅಭಿನಯಿಸಿ ಶಬ್ಬಾಶ್ ಎನಿಸಿಕೊಂಡವರು. ಈ ಬಾಲನಟಿ ಇದೀಗ ‘ಮಿಸೆಸ್‌ ಇಂಡಿಯಾ ಗೆಲಾಕ್ಸಿ’ ಕಿರೀಟ ಹೊತ್ತು ಕಂಗೊಳಿಸುತ್ತಿದ್ದಾರೆ.

ಯಾಕೋ ಸಿನಿಮಾ ರಂಗದಿಂದ 20 ವರ್ಷಗಳ ಕಾಲ ದೂರವೇ ಉಳಿದ ಶ್ವೇತಾ,ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ‘ಪುಟಾಣಿ ಏಜೆಂಟ್‌’ ಧಾರಾವಾಹಿಯಲ್ಲೂ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಓದಿನ ಜೊತೆಗೆ ಅವರಿಗೆ ಸಿನಿಮಾ ಸಾಧ್ಯವಾಗಲೇ ಇಲ್ಲ.

‘ಓದು ಮುಗಿದ ಬಳಿಕ ಮದುವೆಯಾಯಿತು. ಇನ್ನೇನು ನನ್ನ ಕನಸು ನನಸಾಗಲು ಸಾಧ್ಯವಿಲ್ಲ ಅಂದುಕೊಂಡಾಗಲೇ ಮಿಸೆಸ್‌ ಇಂಡಿಯಾ ಗೆಲಾಕ್ಷಿ ಬಗ್ಗೆ ಓದಿದೆ. ನಾನು ಯಾಕೆ ಪ್ರಯತ್ನಿಸಬಾರದು ಎನಿಸಿತು. ಪತಿ ನನಗೆ ಬೆಂಬಲವಾಗಿ ನಿಂತರು’ ಎಂದು ಮತ್ತೆ ಕನಸು ಚಿಗುರೊಡೆದ ಕ್ಷಣವನ್ನು ಹಂಚಿಕೊಂಡರು.

ADVERTISEMENT

‘ಇಂತಹ ದೊಡ್ಡ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಸಿದ್ಧತೆ ಬೇಕು. ನನಗೆ 6 ತಿಂಗಳು ಸಮಯ ಮಾತ್ರ ಇತ್ತು. ಡಯೆಟ್ ಮಾಡಲಿಲ್ಲ. ಮನೆ ಊಟ ಮಾಡಿದೆ. ತುಪ್ಪ ತಿನ್ನಬಾರದು ಕೊಬ್ಬಿನಾಂಶ ಹೆಚ್ಚಿರುತ್ತದೆ ಎಂದು ಕೆಲವರು ಹೇಳುತ್ತಾರೆ. ನಾನು ಎಲ್ಲವನ್ನೂ ತಿನ್ನುತ್ತಿದ್ದೆ. ದಿನಕ್ಕೆ ನಾಲ್ಕು ಬಾರಿ ತಿನ್ನುವ ಅಭ್ಯಾಸ ಮಾಡಿಕೊಂಡೆ. 7ರಿಂದ 8 ಕೆ.ಜಿ ತೂಕ ಇಳಿಸಿದೆ. ವ್ಯಾಯಾಮ ಮಾಡಿದೆ’ ಎಂದು ತಮ್ಮ ತಯಾರಿಯ ಬಗ್ಗೆ ಹೇಳಿದರು.

‘ಮೇಕಪ್‌, ಕೂದಲಿನ ವಿನ್ಯಾಸ ಎಲ್ಲದರ ಬಗ್ಗೆಯೂ ಮೊದಲ ಬಾರಿ ಸಾಕಷ್ಟು ಕಾಳಜಿ ಮಾಡಿದೆ. ಆದರೆ ಮೊದಲ ಪ್ರಯತ್ನದಲ್ಲಿಯೇ ಪ್ರಶಸ್ತಿ ಗೆಲ್ಲುತ್ತೇನೆ ಎಂಬ ಕಲ್ಪನೆ ಇರಲಿಲ್ಲ. ಗೆದ್ದಾಗ ಖುಷಿಯಾಯಿತು’
ಎಂದರು.

ಪ್ರಾಣಿಗಳ ರಕ್ಷಣೆಗಾಗಿ ಮಾಡೆಲಿಂಗ್‌ ಪ್ರವೇಶ

‘ನಾನು ಮಾಡೆಲಿಂಗ್ ಮಾಡಬೇಕು, ಪ್ರಶಸ್ತಿ ಗೆಲ್ಲಬೇಕು ಎಂದು ಅಂದುಕೊಂಡಿದ್ದೇ ಪ್ರಾಣಿಗಳ ರಕ್ಷಣೆಗಾಗಿ. ಸಾಕು ಪ್ರಾಣಿಗಳನ್ನು ನಿರ್ಲಕ್ಷ್ಯ ಮಾಡುವುದರ ಕುರಿತು ಧ್ವನಿ ಎತ್ತಲು ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಬೇಸರಗೊಂಡು ನನಗೂ ಒಂದು ಅಸ್ಮಿತೆ ಇದ್ದರೆ ಆಗ ಜನರನ್ನು ಸೆಳೆಯಬಹುದು ಎಂದು ಯೋಚಿಸಿ ಮಾಡೆಲಿಂಗ್ ಬಗ್ಗೆ ಕನಸು ಕಂಡೆ’ ಎಂದು ತಮ್ಮ ಕಾಳಜಿಯ ಬಗ್ಗೆ ಹೇಳಿಕೊಂಡರು.

‘ಸಾಕುಪ್ರಾಣಿಗಳಿಗಾಗಿ ಒಂದು ಆಶ್ರಯತಾಣ ತೆರೆಯಬೇಕು. ಚಿಕ್ಕ ಮಕ್ಕಳಿಗೆ ಪ್ರಾಣಿಗಳ ಅಗತ್ಯತೆಯ ಅರಿವು ಮೂಡಿಸಬೇಕು. ಪಟಾಕಿ ಹೊಡೆದು ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಹೀಗೆ ಹತ್ತು ಹಲವು ವಿಷಯಗಳನ್ನು ಅವರಿಗೆ ಮುಟ್ಟಿಸುವ ಕೆಲಸವನ್ನು ಇನ್ನು ಮುಂದೆ ಮಾಡಲಿದ್ದೇನೆ’ ಎನ್ನುವುದು ಅವರ ಆತ್ಮವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.