ADVERTISEMENT

ಅಭಿಮನ್ಯುಗಳಿಗಿಲ್ಲ ಹಾದಿ (ಚಿತ್ರ: ಚಕ್ರವ್ಯೆಹ್ (ಹಿಂದಿ)

ಡಿ.ಕೆ.ರಮೇಶ್
Published 27 ಅಕ್ಟೋಬರ್ 2012, 19:30 IST
Last Updated 27 ಅಕ್ಟೋಬರ್ 2012, 19:30 IST

ನಿರ್ಮಾಪಕರು: ಪ್ರಕಾಶ್ ಝಾ, ಸುನೀಲ್ ಲುಲ್ಲಾ
ನಿರ್ದೇಶಕ: ಪ್ರಕಾಶ್ ಝಾ
ತಾರಾಗಣ:  ಅಭಯ್ ದಿಯೋಲ್, ಅರ್ಜುನ್ ರಾಂಪಾಲ್, ಮನೋಜ್ ವಾಜಪೇಯಿ, ಓಂಪುರಿ, ಅಂಜಲಿ ಪಾಟೀಲ್, ಇಶಾ ಗುಪ್ತಾ, ಸಮೀರಾರೆಡ್ಡಿ ಮತ್ತಿತರರು.


ಸೋದರ ಮಾವ ಎದುರಾದರೂ ಚೆಂಡಾಡು ಎನ್ನುವುದು ಯುದ್ಧನೀತಿ. ಇಂಥ ಕದನದೊಳು ಆಪ್ತಮಿತ್ರ ಎದುರಾಳಿಯಾಗಿದ್ದಾನೆ. ಯಥಾಪ್ರಕಾರ ರಣನೀತಿಗೇ ಗೆಲುವು. ಅಭಿಮನ್ಯುವಿಗೆ `ಚಕ್ರವ್ಯೆಹ~ ಭೇದಿಸುವುದು ಗೊತ್ತಿರಲಿಲ್ಲ. ಆದರೆ ಸಮರವ್ಯೆಹದಿಂದ ಬಿಡಿಸಿಕೊಳ್ಳುವುದು ಅದೆಷ್ಟೋ ಅಭಿಮನ್ಯುಗಳಿಗೆ ಈಗಲೂ ತಿಳಿದಿಲ್ಲ.

ರಂಜನೆಯ ಧಾಟಿಯಲ್ಲೇ ಇಂಥ ಅನೇಕ ಗಂಭೀರ ವಿಚಾರಗಳನ್ನು ದಾಟಿಸಿದ್ದಾರೆ ನಿರ್ದೇಶಕ ಪ್ರಕಾಶ್ ಝಾ. ಸಾಮಾಜಿಕ ಸಮಸ್ಯೆ, ರಾಜಕಾರಣ ಇತ್ಯಾದಿ ಸೂತ್ರಗಳನ್ನು ಹಿಡಿದು ಗೊಂಬೆ ಆಡಿಸುವ ಕಲೆಯಲ್ಲಿ ಅವರು ನಿಷ್ಣಾತರು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಏಳುವ `ಜ್ವಾಲಾಮುಖಿ~ಯತ್ತ ಈ ಬಾರಿ ಅವರ ಕಣ್ಣು ನೆಟ್ಟಿದೆ.

ಆ ಅಗ್ನಿಪರ್ವತ ಸ್ಫೋಟಿಸುವುದು ಭೂಪಾಲದ ಹಸಿರು ಸೀಮೆಯಲ್ಲಿ. ದಶಕಗಳಿಂದ ಸಾಗಿರುವ `ಜನ ಸಮರ~ ಚಿತ್ರದ ಕ್ಯಾನ್‌ವಾಸ್. ಆದರೆ ಅವರ ಗಮನ ಪೂರ್ಣ ಅದರತ್ತ ಇಲ್ಲ. ಬದಲಿಗೆ ವಾಸ್ತವ ಕತೆಗೆ ಕಲ್ಪನೆಯ ರಂಗು ಬೆರೆಸುವ ಧಾವಂತ. ಹೀಗಾಗಿ ಚಿತ್ರದಲ್ಲಿ ಸ್ನೇಹ ಆಟವಾಡಿದೆ. ಕತೆಗೆ ಹಲವು ತಿರುವು ಹಾಗೂ ಭಾವನಾತ್ಮಕ ಏರಿಳಿತಗಳನ್ನು ನೀಡಿರುವುದು ಈ ಸ್ನೇಹಪರ್ವವೇ.

ವ್ಯವಸ್ಥೆಯ ಪೊಳ್ಳುತನವನ್ನು ಝಾ ಬಿಂಬಿಸಿರುವ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಬಲಾಢ್ಯ ಬಂಡವಾಳಶಾಹಿಗಳು, ಅವರ ಕೈಗೊಂಬೆಯಾದ ರಾಜಕಾರಣ, ಲೋಪಗಳನ್ನೇ ಹೊದ್ದು ಮಲಗಿದ ಅಧಿಕಾರ ವರ್ಗವನ್ನು ಕುರಿತ `ವ್ಯಂಗ್ಯಚಿತ್ರ~ವೇ ಇಲ್ಲಿದೆ. ಆದರೆ ಚಿತ್ರದ ವ್ಯಾಪಾರಿ ಮನೋಭಾವ, ಪ್ರಜಾಸಮರವನ್ನು ಸಂಪೂರ್ಣ ವಾಸ್ತವ ನೆಲೆಯಲ್ಲಿ ನೋಡಿಲ್ಲ.
ಒಂದೆಡೆ ಕ್ರಾಂತಿಕಾರಿಗಳ ಹಿಂಸೆಯನ್ನು ವಿಜೃಂಭಿಸುವ ಚಿತ್ರ, ಮತ್ತೊಂದೆಡೆ ಅವರ ಬಗೆಗೆ ಮರುಕ ತೋರುತ್ತದೆ. ಇಂತಹ ಗೊಂದಲ ಅಗತ್ಯವಿರಲಿಲ್ಲ.

ತಲೆ ತುಂಬ ಆದರ್ಶ ತುಂಬಿಕೊಂಡ ಅಮಾಯಕನಾಗಿ ಅಭಯ್ ದಿಯೋಲ್ ಇಷ್ಟವಾಗುತ್ತಾರೆ. ಒಮ್ಮೆ ವ್ಯವಸ್ಥೆಯ ಪರ, ಮತ್ತೊಮ್ಮೆ ಅದರ ವಿರುದ್ಧ ನಿಲ್ಲುತ್ತ ಭಾವುಕ ನೆಲೆಯಲ್ಲಿ ತಟ್ಟುತ್ತಾರೆ. ಮೃದು ಮನಸ್ಸಿನ ಗಡಸು ಅಧಿಕಾರಿಯಾಗಿ ಅರ್ಜುನ್ ರಾಂಪಾಲ್ ಅಭಿನಯ ಚೆನ್ನಾಗಿದೆ. ಪೊಲೀಸ್ ಪಾತ್ರಕ್ಕೆ ಹೇಳಿಮಾಡಿಸಿದ ಚಹರೆ ಅವರದ್ದು.

ರಂಗಭೂಮಿ ಬತ್ತಳಿಕೆಯಿಂದ ಹೊರಟ ಅನೇಕ ಬಾಣಗಳನ್ನು ಪ್ರೇಕ್ಷಕರು ಕಾಣಬಹುದು. ನಟನೆಯ ಜತೆಗೆ ಸ್ನಿಗ್ಧ ಸೌಂದರ್ಯದಿಂದ ಕಂಗೊಳಿಸುವುದು `ಸಂಗಾತಿ~ ಅಂಜಲಿ ಪಾಟೀಲ್. ರಕ್ತಚರಿತ್ರೆಯ ಜೀವಂತ ನಾಯಕನೊಬ್ಬನನ್ನು ನೆನಪಿಸುತ್ತದೆ ಓಂಪುರಿ ನಟನೆ.
 
ಮನೋಜ್ ವಾಜಪೇಯಿ ಕಾಮ್ರೇಡರ ಒರಟು ಮುಖಂಡ. ಇಶಾ ಗುಪ್ತಾ ಪಾತ್ರ ಕ್ಲೈಮ್ಯಾಕ್ಸ್‌ನಲ್ಲಿ ಮುನ್ನೆಲೆಗೆ ಬರುತ್ತದೆ. ಸಮೀರಾ ರೆಡ್ಡಿ ಐಟಂ ಹಾಡಿಗೆ ಸೀಮಿತ. ಕತೆಯ ಓಘಕ್ಕೆ ಈ ಹಾಡು ಅಷ್ಟೇನೂ ಒಗ್ಗಿಲ್ಲ. `ಮೆಹಂಗಿಯೇ~ ಗೀತೆಯ ತುಂಬ ವ್ಯಂಗ್ಯೋಕ್ತಿಗಳು ತುಂಬಿ ಹೊಸ ವಿಸ್ತಾರಕ್ಕೆ ಚಾಚಿಕೊಂಡಿದೆ. `ಕೆಂಪು ಕಡಜ~ಗಳ ಝೇಂಕಾರಕ್ಕೆ ಹೊಸ ಮೇಳ ಕಟ್ಟಿದ್ದಾರೆ ವಿವಿಧ ಸಂಗೀತ ನಿರ್ದೇಶಕರು.

ಪ್ರೇಕ್ಷಕರ ಎದೆಗೆ ಗುಂಡು ಹೊಡೆದಷ್ಟೇ ಸಲೀಸಾಗಿ ಸಂಭಾಷಣೆ ನುಗ್ಗುತ್ತವೆ. ಸಾಹಸ ದೃಶ್ಯಗಳಲ್ಲಿರುವ ಭಿನ್ನತೆ ಕೂಡ ಸ್ವೀಕಾರಾರ್ಹ. ಆದರೆ ಹಿಂಸೆಯ ದೃಶ್ಯಗಳು ಸಾಕಷ್ಟು ಕಡೆ ಹಸಿ ಹಸಿಯಾಗಿವೆ. ಅಂಗಸೌಷ್ಠವ ಹೊಂದಿದ, ತೀಡಿದ ಹುಬ್ಬಿನ ಹೋರಾಟಗಾರರು ಚಿತ್ರದ ಹೊರತು ಬೇರೆಲ್ಲೂ ಕಾಣಸಿಗರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.