ADVERTISEMENT

ಅರೆ ಡಬ್ಬಿಂಗ್ ಚಿತ್ರ

ವಿಶಾಖ ಎನ್.
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಚಿತ್ರ: ನಮಿತಾ ಐ ಲವ್ ಯೂ

ಡಬ್ಬಿಂಗ್ ಬೇಕೋ ಬೇಡವೋ ಎಂಬ ಚರ್ಚೆ ಕಾವು ಪಡೆದುಕೊಂಡ ಈ ಸಂದರ್ಭದಲ್ಲಿ ಅರೆ ಡಬ್ಬಿಂಗ್ ಚಿತ್ರವೊಂದನ್ನು ನೋಡುವ ಭಾಗ್ಯವನ್ನು ನಿರ್ದೇಶಕ ಎಂ.ಜಯಸಿಂಹಾರೆಡ್ಡಿಯವರು ಕರುಣಿಸಿದ್ದಾರೆ.

ಹಾಗಾಗಿ ಡಬ್ಬಿಂಗ್ ಪರ-ವಿರೋಧದ ಚರ್ಚೆಯಲ್ಲಿ ತೊಡಗಿರುವವರು ನೋಡಲೇಬೇಕಾದ ಚಿತ್ರ `ನಮಿತಾ ಐ ಲವ್ ಯೂ~.ವಾರ್ತಾ ಇಲಾಖೆಯವರಿಂದ ಪಡೆದ ನಿರಾಕ್ಷೇಪಣಾ ಅರ್ಜಿಯನ್ನು ಮುಂದಿಟ್ಟು ತಮ್ಮದು ಡಬ್ಬಿಂಗ್ ಸಿನಿಮಾ ಅಲ್ಲ ಎಂದು ಜಯಸಿಂಹಾರೆಡ್ಡಿ ಸಮರ್ಥಿಸಿಕೊಂಡಿದ್ದರು.

ಆದರೆ, ಅವರ ಮಾತಿಗೆ ಚಿತ್ರದಲ್ಲಿ ಸಾಕಷ್ಟು ಆಧಾರಗಳಿಲ್ಲದಿರುವುದು ಸಿನಿಮಾ ನೋಡಿದಾಗ ಸ್ಪಷ್ಟವಾಗುತ್ತದೆ. ಒಂದೇ ದೃಶ್ಯದಲ್ಲಿ ಕೆಲವು ಪಾತ್ರಧಾರಿಗಳ ತುಟಿಚಲನೆ ಕನ್ನಡದಲ್ಲಿದ್ದರೆ, ಇನ್ನು ಕೆಲವರು ಅರ್ಥವಾಗದ ಭಾಷೆಯಲ್ಲಿ ಮಾತನಾಡುವಂತೆ ಭಾಸವಾಗುತ್ತದೆ.
 
ತುಟಿಚಲನೆಗೆ `ಡಬ್~ ಆದ ಮಾತನ್ನು ಸರಿಯಾದ ರೀತಿಯಲ್ಲಿ ಮಿಳಿತಗೊಳಿಸದೇ ಇರುವುದರ ಹಿಂದೆಯೂ ಡಬ್ಬಿಂಗ್‌ನ ದುರುದ್ದೇಶವಿರುವಂತೆ ಕಾಣುತ್ತಿದೆ. ಕನ್ನಡದಲ್ಲಿ ಮಾತನಾಡಲು ಸಾಧ್ಯವಿಲ್ಲದ ನಿರ್ದೇಶಕರೊಬ್ಬರು ಸಂಭಾಷಣೆಯನ್ನೂ ತಾವೇ ಬರೆದು ಕನ್ನಡ ಭಾಷೆಯ ಸಿನಿಮಾ ನಿರ್ದೇಶಿಸಿದ್ದಾರೆಂಬುದು ಅಚ್ಚರಿಯ ವಿಷಯ.

ಜಯಸಿಂಹಾರೆಡ್ಡಿ ಮಾತು, ಕೃತಿಯಷ್ಟೇ ಅಲ್ಲದೆ ಸಂಗೀತ ಕೂಡ ತಮ್ಮದೆಂದು ಶೀರ್ಷಿಕೆಪಟ್ಟಿಯಲ್ಲಿ ಹಾಕಿಕೊಂಡಿದ್ದಾರೆ. ಹಿಂದಿಯ `ದೀವಾನಾ~ ಚಿತ್ರಕ್ಕೆ ನದೀಂ ಶ್ರವಣ್ ಸಂಯೋಜನೆ ಮಾಡಿದ್ದ `ಪಾಯಲಿಯಾ ಹೋಹೋಹೋಹೋ...~ ಜನಪ್ರಿಯ ಗೀತೆಯ ಟ್ಯೂನನ್ನು ಅನಾಮತ್ತಾಗಿ ಎತ್ತಿಕೊಂಡಿರುವ ಜಯಸಿಂಹಾರೆಡ್ಡಿಯವರ ಭಂಡತನವನ್ನು ಮೆಚ್ಚಿಕೊಳ್ಳಬೇಕು!

ಚಿತ್ರದ ಶೀರ್ಷಿಕೆಯಲ್ಲೇ ಮೋಸವಿದೆ. ನಮಿತಾ ಅಭಿನಯಿಸಿದ ಮಾತ್ರಕ್ಕೆ ಅವರ ಹೆಸರನ್ನೇ ಒಳಗೊಂಡ ಶೀರ್ಷಿಕೆಯನ್ನು ಇಟ್ಟಿರುವುದಕ್ಕೆ ಸಮರ್ಥನೆಯೇ ಕಾಣುವುದಿಲ್ಲ. ಯಾಕೆಂದರೆ, ಪಾತ್ರವರ್ಗದ ಯಾವ ಪ್ರಮುಖ ನಟಿಯ ಹೆಸರೂ ನಮಿತಾ ಅಲ್ಲ.

ಎರಡು ಹಾಡುಗಳು, ಕೆಲವೇ ಕೆಲವು ದೃಶ್ಯಗಳಲ್ಲಿ ನಮಿತಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಯೋಗ ಶಿಕ್ಷಕಿ. ಯೋಗ ಹೇಳಿಕೊಡುವಾಗ ಅವರ ಅಂಕುಡೊಂಕುಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕ ಪಿ.ದಿವಾಕರ್ ವಿಫಲಯತ್ನ ಮಾಡಿದ್ದಾರೆ.

ಅತಿ ಹೆಚ್ಚು ಅಂಕ ಪಡೆದರೆ ಬಯಸಿದ್ದನ್ನು ಕೊಡುವ ಆಮಿಷವೊಡ್ಡುವ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ತಿದ್ದುವ ಶಿಕ್ಷಕಿಯ ಧೋರಣೆಯೇ ವಿಚಿತ್ರವೂ ವಿಲಕ್ಷಣವೂ ಆಗಿದೆ.

ಚಿತ್ರ ನಡೆಯುವುದು ವೈದ್ಯಕೀಯ ಕಾಲೇಜಿನ ಪರಿಸರದಲ್ಲಿ. ಅಧ್ಯಯನದ ಒತ್ತಡವಿರುವ ಈ ಕೋರ್ಸ್‌ನ ಗಾಂಭೀರ‌್ಯವನ್ನು ನಿರ್ದೇಶಕರು ಸಂಪೂರ್ಣವಾಗಿ ಮರೆತಿದ್ದಾರೆ. ಬಿಳಿಕೋಟು, ಅದರ ಮೇಲೆ ಸ್ಟೆಥೋಸ್ಕೋಪ್ ಸಿಕ್ಕಿಸಿಕೊಂಡು ಓಡಾಡುವ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಅಸಹ್ಯವಾಗಿಯೂ ಅಸಭ್ಯವಾಗಿಯೂ ಮಾತನಾಡುವುದನ್ನು ನೋಡಿದರೆ ಈಗಿನ ವಿದ್ಯಾರ್ಥಿಗಳಿಗೂ ನಾಚಿಕೆಯಾದೀತೇನೋ. 

ಮುಖದಲ್ಲಿ ಸ್ವಲ್ಪವೂ ಭಾವನೆ ತೋರಿಸಲಾಗದ, ಮಾತಿನಲ್ಲಿ ಹಿಡಿತವೇ ಇಲ್ಲದ ಚಿತ್ರದ ನಾಯಕ ಡಿ.ಶ್ರೀಕಾಂತ್ ನಟಿಸುವ ಧೈರ್ಯ ಮಾಡಿದ್ದಾರೆ. ಪ್ರೇಕ್ಷಕರಿಗೆ ಅದನ್ನು ಸಹಿಸಿಕೊಳ್ಳುವ ಧೈರ್ಯ ತುಂಬುವುದು ಕಷ್ಟ.

ಸುಮ್ಮಸುಮ್ಮನೆ ಮುಖ ಕೊಂಕಿಸುತ್ತಾ, ದುಪಟ್ಟವನ್ನು ಗಾಳಿಗೆ ತೂರಿ ಹೇಗೆಗೇಗೋ ನರ್ತಿಸಿರುವ ಅಕ್ಷತಾ ಶೆಟ್ಟಿ ಕೂಡ ನಾಯಕನ ಜೊತೆ ಪೈಪೋಟಿಗೆ ಇಳಿದವರಂತೆ ಕೆಟ್ಟದಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಒಂದು `ಅದ್ಭುತ~ವಾದ ಫೈಟಿಂಗ್ ಇದೆ. ಅದರಲ್ಲಿ ನಮಿತಾ ಯದ್ವಾತದ್ವಾ ಹೊಡೆದಾಡುತ್ತಾರೆ. ಹೊಡೆದಾಟವೆಲ್ಲಾ ಮುಗಿಯಿತು ಎಂದುಕೊಳ್ಳುವಾಗ ಖಳನೊಬ್ಬ ಗುಂಡು ಹಾರಿಸುತ್ತಾನೆ.

ಆ ಗುಂಡನ್ನು ಎರಡು ಬೆರಳುಗಳಲ್ಲೇ ನಮಿತಾ ತುಂಡುಮಾಡುತ್ತಾರೆ. ನಿರ್ದೇಶಕರು ನಮಿತಾ ಅವರಲ್ಲಿ ರಜನೀಕಾಂತ್ ಗುಣವನ್ನೂ ಕಂಡಿದ್ದಾರೆಂಬುದಕ್ಕೆ ಇದು ಉದಾಹರಣೆ. ಚಿತ್ರದಲ್ಲಿ ಕಾಣಸಿಗುವ ಏಕೈಕ ಹಾಸ್ಯ ಸನ್ನಿವೇಶ ಇದೊಂದೇ.

ಕಳೆದ ವರ್ಷ `ಬೊಂಬಾಟ್ ಕಾರ್~ ಎಂಬ ಅರೆ ಡಬ್ಬಿಂಗ್ ಚಿತ್ರ ಬಂದಿತ್ತು. ಅದರ ರೂವಾರಿಗಳೂ ತೆಲುಗಿನವರೇ. ಈಗ ಅದೇ ಪಟ್ಟಿಗೆ ಸೇರುವಂಥ `ನಮಿತಾ ಐ ಲವ್ ಯೂ~ ಬಂದಿದೆ.

ಡಬ್ಬಿಂಗ್ ದಿಡ್ಡಿಬಾಗಿಲು ತೆರೆಯುವುದನ್ನೇ ಕಾಯುತ್ತಿರುವವರು ಯಾರ‌್ಯಾರುಎಂಬುದಕ್ಕೆ ಹಾಗೂ ಡಬ್ಬಿಂಗ್‌ನಿಂದಾಗಿ ಕನ್ನಡ ಪ್ರೇಕ್ಷಕರಿಗೆ ಸಿಗಬಹುದಾದ `ಸುಖ~ಕ್ಕೆ ಇವೆಲ್ಲಾ ಉದಾಹರಣೆಗಳಷ್ಟೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.