ADVERTISEMENT

ಕಂಗಳು ಮಾಡಿದ ಪುಣ್ಯವೋ...

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ಚಿತ್ರ: ಕಠಾರಿವೀರ ಸುರಸುಂದರಾಂಗಿ
ಬೇರೆ ಭಾಷೆಯ ಚಿತ್ರವೊಂದನ್ನು ಧ್ವನಿ ಬದಲಿಸಿ ನಮ್ಮ ನುಡಿಯಲ್ಲಿಯೇ ನೋಡುವುದು ಡಬ್ಬಿಂಗ್. ಆದರೆ, ಹಲವು ಚಿತ್ರಗಳನ್ನು ಒಂದೇ ಚಿತ್ರದಲ್ಲಿ ನೋಡಿಸಲಿಕ್ಕೆ ಸಾಧ್ಯವಾದರೆ? ಅಂಥದೊಂದು ಸಾಹಸವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ `ಕಠಾರಿವೀರ ಸುರಸುಂದರಾಂಗಿ~ ಚಿತ್ರದ ಮೂಲಕ ಮಾಡಿದ್ದಾರೆ.

`ಯಮದೊಂಗ~, `ಯಮಗೋಲ~ ಸೇರಿದಂತೆ ಹಲವು ಸಿನಿಮಾಗಳನ್ನು ಒಟ್ಟಿಗೇ ನೋಡಿಸುವ ಚಿತ್ರವಿದು. `ಅವತಾರ್~ ಚಿತ್ರವನ್ನು ನಿವಾಳಿಸುವಂಥ `3ಡಿ~ ಕನ್ನಡಕದ ರಕ್ಷೆಯೂ ಇದಕ್ಕಿದೆ.

ಡಾನ್ ಆಗುವ ಆಸೆಯ ಯುವಕನೊಬ್ಬ ತನ್ನ ಪ್ರಯತ್ನದಲ್ಲಿ ಸಾಯುತ್ತಾನೆ. ಅವನ ಪಾಪ ಪುಣ್ಯಗಳು ತಲಾ ನೂರು ಗ್ರಾಂ ತೂಗಿದ್ದರಿಂದಾಗಿ, ನರಕ-ಸ್ವರ್ಗ ಎರಡರ ದರ್ಶನವೂ ಅವನಿಗೆ ಸಮಪ್ರಮಾಣದಲ್ಲಿ ದೊರೆಯುತ್ತದೆ. ಮನುಷ್ಯನೊಬ್ಬ ಯಮಲೋಕ ಪ್ರವೇಶಿಸಿದರೆ ಅಲ್ಲಿ ಚುನಾವಣೆ ನಡೆಯಲೇಬೇಕು, ಅಪ್ಸರಸಿಯರು ಕುಣಿಯಲೇಬೇಕು.

ಈ `3ಡಿ~ ಕಥನದಲ್ಲಿ ಭೂಲೋಕದ ಸುಂದರಿಯರೂ ಕುಣಿಯುತ್ತಾರೆ. `ವೀರ~ ಸ್ವರ್ಗಕ್ಕೆ ಬಂದು, ಇಂದ್ರಜಳನ್ನು ಪ್ರೇಮಿಸುತ್ತಾನೆ. ಮುಂದಿನದು ಪ್ರಣಯ, ಸ್ವಯಂವರ, ಭೂಲೋಕ ದರ್ಶನದ ಕಥೆ. ಪ್ರೇಮದ ಉದಾತ್ತತೆಗೆ ದೇವತೆಗಳೇ ಸೋಲೊಪ್ಪಿಕೊಳ್ಳುವ ಪುಣ್ಯಕಥೆ.

ಪೂರ್ಣ ಪ್ರಮಾಣದ ಮೊದಲ `3ಡಿ ಕನ್ನಡ ಸಿನಿಮಾ~ ಎನ್ನುವುದು `ಕಠಾರಿವೀರ~ನ ಬಣ್ಣನೆ. ಸೋಪುನೀರು ಮಾಡಿಕೊಂಡು ಮಕ್ಕಳು ಬಿಡುವ ನೀರಗುಳ್ಳೆಗಳು ಮತ್ತು ಧೂಮಲೀಲೆ ಇಂದ್ರಲೋಕದಲ್ಲೂ ಕಾಣಿಸುತ್ತವೆ. ಯಮನ ಗದೆ ನೋಡುಗರ ಹಣೆಯನ್ನೇ ಗುರಿಯಾಗಿಸಿಕೊಳ್ಳುತ್ತವೆ. ಪುಷ್ಪಾರ್ಚನೆಯಾಗುತ್ತದೆ.
 
ಇವೆಲ್ಲ, ಒಂದು ಕಾಲದ ಪೌರಾಣಿಕ ನಾಟಕಗಳ ಭರ್ಜರಿ ಸೀನರಿಗಳನ್ನು ನೆನಪಿಸುವಂತಿವೆ. ನಾಟಕಗಳಲ್ಲಿ, ಪಾತ್ರಧಾರಿಯೊಬ್ಬ ತನ್ನ ಹಿಂದಿರುವ ಪರಿಕರಗಳಿಂದ ಮುಂದೆ ಬಂದು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದಂತೆ, ನಟಿಸಿದಂತೆ ಈ `3ಡಿ~ ಚಿತ್ರವೂ ಕಾಣಿಸುತ್ತದೆ. ಹೀಗೆ, ಇತಿಹಾಸವನ್ನು ನೆನಪಿಸುವುದು ಪರಂಪರೆಯನ್ನು ಉಳಿಸುವ ಕೆಲಸವೂ ಹೌದಲ್ಲವೇ?

ನಟಿ ರಮ್ಯಾ ದೇವಕನ್ನಿಕೆಯಾಗಿ, ಆಗಷ್ಟೇ ಎಣ್ಣೆನೀರು ಎರೆದುಕೊಂಡು ಬಂದಂತಿದ್ದಾರೆ. ಪ್ರೇಕ್ಷಕರು ರೆಪ್ಪೆ ಮಿಟುಕಿಸದಂತೆ ನೋಡಬೇಕಾದ ಅಪ್ರತಿಮ `3ಡಿ~ ಚೆಲುವು ಅವರದು. ಇಂಥ ಚೆಲುವೆ, ಭೂಸ್ಪರ್ಶವಾದ ಕೂಡಲೇ ಬೆದರಿದ ಬೆವರಿದ ಚಿಗರೆಯಾಗುತ್ತಾರೆ.

ಬೆವರಿದ ಮೇಲೆ ದೇವಕನ್ನಿಕೆಯಾದರೂ ಸಾಮಾನ್ಯ ಹೆಣ್ಣಾಗಬೇಕು ತಾನೆ? ನಾಯಕ ಉಪೇಂದ್ರ ಅರ್ಧಕ್ಕೆ ಸಾಮು ನಿಲ್ಲಿಸಿ ಬಂದ ಪೈಲ್ವಾನನಂತೆ (ಕೊಂಚ ವಯಸ್ಸಾದ ಪೈಲ್ವಾನ) ಕಾಣಿಸುತ್ತಾರೆ.

ಚಿತ್ರಕಥೆ - ಸಂಭಾಷಣೆ ಅವರದ್ದೇ. ಹೊಸ ಡೈಲಾಗುಗಳ ಜೊತೆಗೆ ತಮ್ಮದೇ ಹಳೆಯ ಚಿತ್ರಗಳ ಡೈಲಾಗುಗಳನ್ನೂ ಅವರು ಎರವಲು ಪಡೆದಿದ್ದಾರೆ. ಇಂದ್ರ ವಜ್ರಾಯುಧ ಝಳಪಿಸಿದರೆ ಉಪೇಂದ್ರರಿಗೆ ಡೈಲಾಗೇ ಬ್ರಹ್ಮಾಸ್ತ್ರ. ಶೀರ್ಷಿಕೆಯಲ್ಲಿನ ಕಠಾರಿಯನ್ನು ಸಿನಿಮಾ ನಾಯಕನ ಸೊಂಟದಲ್ಲೋ ಕೈಯಲ್ಲೋ ನಿರೀಕ್ಷಿಸುವಂತಿಲ್ಲ. `ಕಠಾರಿ~ ಮಾತಿನ ರೂಪದಲ್ಲಿದೆ, ನಾಯಕನ ಬಾಯಲ್ಲೇ ಇದೆ. ಆತನ ಡೈಲಾಗ್‌ಗಳ ಎದುರು ಚಿತ್ರದ `3ಡಿ~ ಗುಳ್ಳೆಗಳೂ ಠುಸ್ಸೆನ್ನಬೇಕು!

ಯಮನಾಗಿ ಅಂಬರೀಷ್ ಪಾತ್ರದ ಗಾತ್ರಕ್ಕೆ ಹೊಂದುವಂತಿದ್ದಾರೆ. ಅವರಿಗೆ, ಚಿತ್ರಗುಪ್ತನ ಪಾತ್ರದಲ್ಲಿ ದೊಡ್ಡಣ್ಣನವರದ್ದು ಭರ್ಜರಿ ಸವಾಲು. ಚಿತ್ರದ ಕೊನೆಯಲ್ಲೊಂದು ಭರ್ಜರಿ ಫೈಟಿದೆ. ಟ್ವೆಂಟಿ ಟ್ವೆಂಟಿ ಸಿಕ್ಸರ್‌ಗಳಂತೆ ನಾಯಕ ಖಳರನ್ನು ಎತ್ತಿ ಎತ್ತಿ ಒಗೆಯುತ್ತಾನೆ. ಆ ಸಿಕ್ಸರ್‌ಗಳಿಗೆ, ಕ್ರೀಡಾಂಗಣದಲ್ಲಿ ಕುಳಿತು ಚಪ್ಪಾಳೆ ತಟ್ಟಿ ಸಂಭ್ರಮಿಸುವ ತಂಡದ ಮಾಲೀಕರಂತೆ ಅಂಬರೀಷ್ ಸಂಭ್ರಮಿಸುತ್ತಾರೆ. ಅವರದ್ದು ಸಹಜ ನಟನೆ.

ಇಡೀ ಚಿತ್ರದಲ್ಲಿ ಅಸಹಜವಾಗಿ ಕಾಣಿಸುವುದು ದೇವೇಂದ್ರನ ಪಾತ್ರದಲ್ಲಿ ನಟಿಸಿರುವ ಶ್ರೀಧರ್. ಥೇಟು ಹಳೆಯ ಕಾಲದ ಪೌರಾಣಿಕ ಪಾತ್ರಗಳಂತೆ ನಟಿಸಿರುವ, ಅಸ್ಖಲಿತ ಮಾತಿನ ಅವರು ಚಿತ್ರದ ಚೌಕಟ್ಟಿಗೆ ಸಲ್ಲುವುದಿಲ್ಲ. ಉಳಿದಂತೆ- ಮುತ್ತಪ್ಪ ರೈ ಸೇರಿದಂತೆ- ಮುನಿರತ್ನರ ತಾರಾಗಣದ ಆಯ್ಕೆ ಸ್ವರ್ಗದ ಸೆಟ್‌ನಂತೆ ಅಚ್ಚುಕಟ್ಟು.

ಸೆಟ್‌ನ ಮಾತಿಗೆ ಬರುವುದಾದರೆ ಸ್ವರ್ಗಕ್ಕಿಂತ ನರಕವೇ ಹೆಚ್ಚು ಆಕರ್ಷಕ.
ನಿರ್ಮಾಪಕರು ಮತ್ತು ನಾಯಕ ನಟರ ಕಾಳಜಿ ಹೆಚ್ಚಾಗಿರುವುದರಿಂದ ನಿರ್ದೇಶಕರಾಗಿ ಸುರೇಶ್‌ಕೃಷ್ಣ ಅವರಿಗಿದು ಸುಲಭದ ಸಿನಿಮಾ. ಹರಿಕೃಷ್ಣರ ಸಂಗೀತ ಕಳಪೆಯೇನಲ್ಲ. `3ಡಿ~ ನೀರಗುಳ್ಳೆಗಳನ್ನು ತೋರಿಸಿರುವುದರಲ್ಲಿ ವೇಣು ಅವರ ಛಾಯಾಗ್ರಹಣದ ಸೊಗಸಿದೆ.ಕನ್ನಡ ಸಿನಿಮಾದ ತ್ರಾಣ ಮತ್ತು ಯಮನ ಕೋಣ- ಎರಡು ಕಾರಣದಿಂದಲೂ `ಕಠಾರಿವೀರ~ನನ್ನು ಕಡೆಗಣಿಸುವಂತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.