ADVERTISEMENT

ಟಗರಿಗೆ ಮೈತುಂಬಾ ಪೊಗರು

ಕೆ.ಎಚ್.ಓಬಳೇಶ್
Published 24 ಫೆಬ್ರುವರಿ 2018, 15:14 IST
Last Updated 24 ಫೆಬ್ರುವರಿ 2018, 15:14 IST
‘ಟಗರು’ ಚಿತ್ರದ ದೃಶ್ಯ
‘ಟಗರು’ ಚಿತ್ರದ ದೃಶ್ಯ   

ಚಿತ್ರ ವಿಚಿತ್ರ ರೌಡಿಗಳು. ಅವರಿಗೆ ಡಾಲಿ, ಚಿಟ್ಟೆ, ಕಾಕ್ರೋಚ್‌ ಎನ್ನುವ ವಿಚಿತ್ರ ಹೆಸರು. ಹೆಣ್ಣುಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡು ಸದ್ದಿಲ್ಲದೆ ಸಾಯಿಸುವ ವಿಕೃತ ಮನಸ್ಥಿತಿ ಅವರದ್ದು. ಇನ್ನೊಂದೆಡೆ ಸಮಾಜದ ಒಳಿತಿಗಾಗಿ ಜೀವನ ಮುಡಿಪಿಟ್ಟಿರುವ ಖಡಕ್‌ ಪೊಲೀಸ್‌ ಅಧಿಕಾರಿ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸಂಕೀರ್ಣ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ‘ಟಗರು’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸೂರಿ.

ಚಿತ್ರದಲ್ಲಿ ಲಾಂಗ್‌, ಪಿಸ್ತೂಲ್‌ನಿಂದ ಚಿಮ್ಮುವ ಗುಂಡುಗಳು ನೆತ್ತರು ಹರಿಸಿದರೂ, ಸೂರಿ ಅವರು ರಕ್ತವನ್ನು ಕವಿತೆಯಾಗಿಸಿರುವ ಪರಿ ಬೆರಗು ಹುಟ್ಟಿಸುತ್ತದೆ. ಬಿಗಿಯಾದ ಚಿತ್ರಕಥೆ, ಉತ್ತಮ ನಿರೂಪಣೆಯಿಂದಾಗಿ ಚಿತ್ರ ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದಿಡುತ್ತದೆ. ಪ್ರತಿಯೊಬ್ಬ ಕಲಾವಿದರನ್ನು ಪಾತ್ರಕ್ಕೆ ಅನುಗುಣವಾಗಿ ಬಳಸಿಕೊಂಡಿರುವ ನಿರ್ದೇಶಕರ ಕಸುಬುಗಾರಿಕೆ ಎದ್ದುಕಾಣುತ್ತದೆ.  

ನಾರಾಯಣಸ್ವಾಮಿ ಭೂಗತ ದೊರೆ. ಡಾಲಿ (ಧನಂಜಯ್), ಚಿಟ್ಟೆ (ವಸಿಷ್ಠ ಸಿಂಹ) ಅವನ ಶಿಷ್ಯರು. ಹನಿಟ್ರ್ಯಾಪ್‌ ಮಾಡುವಲ್ಲಿಯೂ ಈ ಇಬ್ಬರು ನಿಸ್ಸೀಮರು. ಆ ಮೂಲಕ ಹಣ ವಸೂಲಿ ಮಾಡುವುದು ಅವರ ದಂಧೆ. ಡಾಲಿಗೆ ಹುಡುಗಿಯರೆಂದರೆ ಹುಚ್ಚು. ಆತ ಕೈಯಲ್ಲಿ ಬಿಯರ್‌ ಬಾಟಲಿ ಹಿಡಿದರೆ ಮನುಷ್ಯರ ತಲೆಗಳು ನಿರ್ದಯವಾಗಿ ಉರುಳುತ್ತವೆ ಎಂದರ್ಥ. ಕೊನೆಗೊಂದು ದಿನ ಗುರುವಿನ ವಿರುದ್ಧವೇ ಡಾಲಿ, ಚಿಟ್ಟೆ ತಿರುಗಿ ಬೀಳುತ್ತಾರೆ.

ADVERTISEMENT

ಶಿವ(ಶಿವರಾಜ್‌ಕುಮಾರ್) ಜನರ ಕಷ್ಟ ಆಲಿಸುವ ಕರುಣಾಮಯಿ. ಜೊತೆಗೆ, ರೌಡಿಗಳ ಪಾಲಿಗೆ ಸಿಂಹಸ್ವಪ್ನ. ಡಾಲಿಯ ಸಾಮ್ರಾಜ್ಯವನ್ನು ಧ್ವಂಸಗೊಳಿಸಲು ಪಣ ತೊಡುತ್ತಾನೆ. ಆತ ಹೇಗೆ ಭೂಗತ ಜಗತ್ತಿನ ಕೋಟೆಯನ್ನು ಛಿದ್ರಗೊಳಿಸುತ್ತಾನೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ಭಿನ್ನವಾದ ಪಾತ್ರದ ಮೂಲಕ ಶಿವರಾಜ್‌ಕುಮಾರ್‌ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದ ಟೈಟಲ್‌ ಸಾಂಗ್‌ನಲ್ಲಿ ವಿಜೃಂಭಿಸಿದ್ದಾರೆ. ಸಿನಿಮಾದಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಡಾಲಿ ಪಾತ್ರ. ಖಳನಟನಾಗಿ ಕಾಣಿಸಿಕೊಂಡಿರುವ ಧನಂಜಯ್‌ ಅವರಲ್ಲಿರುವ ನಟನಾ ಶಕ್ತಿಗೆ ನಿರ್ದೇಶಕರು ನೈಜ ಹೊಳಪು ನೀಡಿದ್ದಾರೆ. ಚಿತ್ರದುದ್ದಕ್ಕೂ ಧನಂಜಯ್‌ ಖಡಕ್‌ ಡೈಲಾಗ್‌ಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿ ಉಳಿಯುತ್ತಾರೆ. ಕವಿಯಾಗಿ ಭೂಗತ ಜಗತ್ತು ಪ್ರವೇಶಿಸಿ ಒಬ್ಬಳೇ ಹುಡುಗಿಯನ್ನೂ ಪ್ರೇಮಿಸುವ ಚಿಟ್ಟೆ ಪಾತ್ರದಲ್ಲಿ ವಸಿಷ್ಠ ಸಿಂಹ ಅವರ ಅಭಿನಯ ಮನೋಜ್ಞವಾಗಿದೆ.

ಮಾನ್ವಿತಾ ಹರೀಶ್‌, ಭಾವನಾ, ದೇವರಾಜ್‌ ಅವರದ್ದು ಅಚ್ಚುಕಟ್ಟಾದ ಅಭಿನಯ. ಪ್ರತಿ ದೃಶ್ಯದಲ್ಲೂ ಛಾಯಾಗ್ರಾಹಕ ಮಹೇನ್‌ ಸಿಂಹ ಅವರ ಕೈಚಳಕ ಎದ್ದುಕಾಣುತ್ತದೆ. ಚರಣ್‌ ರಾಜ್‌ ಸಂಗೀತ ಸಂಯೋಜಿಸಿರುವ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ.

****
ಚಿತ್ರ: ಟಗರು
ನಿರ್ಮಾಪಕರು: ಶ್ರೀಕಾಂತ್‌ ಕೆ.ಪಿ.
ನಿರ್ದೇಶನ: ಸೂರಿ‌
ತಾರಾಗಣ: ಶಿವರಾಜ್‌ಕುಮಾರ್‌, ಧನಂಜಯ್‌, ವಸಿಷ್ಠ ಸಿಂಹ, ದೇವರಾಜ್‌, ಮಾನ್ವಿತಾ ಹರೀಶ್‌, ಭಾವನಾ, ಅಚ್ಯುತ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.