ADVERTISEMENT

ತೆಳು ಕತೆ; ರಂಜನೆಯ ಒರತೆ (ಚಿತ್ರ: ಜುಲಾಯಿ (ತೆಲುಗು)

ಡಿ.ಕೆ.ರಮೇಶ್
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ನಿರ್ಮಾಪಕ: ಎಸ್. ರಾಧಾಕೃಷ್ಣ
ನಿರ್ದೇಶಕ: ತ್ರಿವಿಕ್ರಂ ಶ್ರೀನಿವಾಸ್
ತಾರಾಗಣ: ಅಲ್ಲು ಅರ್ಜುನ್, ಇಲಿಯಾನಾ, ರಾಜೇಂದ್ರ ಪ್ರಸಾದ್, ಸೋನು ಸೂದ್, ಕೋಟ ಶ್ರೀನಿವಾಸರಾವ್, ಬ್ರಹ್ಮಾನಂದಂ, ತನಿಕೆಳ್ಳ ಭರಣಿ, ಅಲಿ, ಶೀತಲ್ ಮೆನನ್ ಮತ್ತಿತರರು.

ಮೋಡಗಳ ಹೊತ್ತು ತರುವ ಗಾಳಿ, ಮಳೆಯ ನಿರೀಕ್ಷೆ ಹುಟ್ಟಿಸುವುದು ಸಹಜ. ಒಮ್ಮೆಮ್ಮೆ ಹೀಗೂ ನಡೆಯುವುದುಂಟು. ಜೋರು ಗಾಳಿ ಬೀಸಿದರೂ, ಗುಡುಗು- ಸಿಡಿಲಿನಿಂದ ನೆಲವ ನಡುಗಿಸಿದರೂ ಮಳೆ ನಾಪತ್ತೆ. `ಜುಲಾಯಿ~ ಕತೆ ಕೂಡ ಹೀಗೆಯೇ.

ಅಲ್ಲು ಅರ್ಜುನ್ ಎಂಬ ಸಿಡಿಲು, ಸೋನು ಸೂದ್ ಎಂಬ ಗುಡುಗು `ಮಳೆಗೆ ಮುಂಚಿನ ಆಕಾಶ~ವನ್ನು ಸೃಷ್ಟಿಸಿರುವುದು ನಿಜ. ಹಾಗೆಯೇ ಇಲಿಯಾನಾ ಬಳುಕುವ ಮಿಂಚಿನ ಗೊಂಚಲು. ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ಮುಂತಾದವರಿಂದ ಹಾಸ್ಯದ ತಂಪು. ಮಳೆಗಾಲದ ಮಣ್ಣ ವಾಸನೆಯಂತೆ ದೇವಿ ಶ್ರೀಪ್ರಸಾದರ ಸಂಗೀತ. ಆದರೆ ಕತೆ ಮಾತ್ರ ಗರ್ಭ ಕಟ್ಟದ ಮೋಡ.

ರವಿ (ಅಲ್ಲು ಅರ್ಜುನ್) ಸಲೀಸಾಗಿ ಹಣ ಗಳಿಸಬೇಕೆಂಬ ಮನಸ್ಸಿನ, ವಿಶಾಖಪಟ್ಟಣದ ತರಲೆ ಹುಡುಗ. ಬಾಜಿ ಅಡ್ಡೆಗೆ ತೆರಳುವ ಉತ್ಸಾಹದಲ್ಲಿ ಆತ ದರೋಡೆಕೋರ ಬಿಟ್ಟುವನ್ನು (ಸೋನು ಸೂದ್) ಲಿಫ್ಟ್ ಕೇಳುತ್ತಾನೆ. ಬೆಟ್ಟಿಂಗ್ ಸುಳಿವು ಅರಿತ ಪೊಲೀಸರು ರವಿಯನ್ನು ಬಂಧಿಸಲು ಮುಂದಾಗುತ್ತಾರೆ. ಆದರೆ ರವಿ ಜಾಣ. ಬಿಟ್ಟುವಿನ ಬ್ಯಾಂಕ್ ದರೋಡೆ ಸಂಚು ಈತನಿಂದ ಬಯಲು. ಪೊಲೀಸರ ಕೈಗೆ ಸಿಕ್ಕ ಬಿಟ್ಟು ಮತ್ತೆ ತಪ್ಪಿಸಿಕೊಳ್ಳುತ್ತಾನೆ.

ಬ್ಯಾಂಕ್‌ನಿಂದ ಲೂಟಿಯಾದ ಕೋಟ್ಯಂತರ ರೂಪಾಯಿ ಬಿಟ್ಟುವಿನ ಕೈ ತಪ್ಪಿದೆ. ಆತನ ಹಗೆ ರವಿಯ ಮೇಲೆ. ರವಿ ತಲೆ ತಪ್ಪಿಸಿಕೊಳ್ಳುವಂತೆ ಮಾಡುತ್ತಾರೆ ಪೊಲೀಸರು. ಹೈದರಾಬಾದ್ ಪ್ರವೇಶಿಸುವ ರವಿ ಬಳಿಕ ಮಧುವಿನ (ಇಲಿಯಾನಾ) ಪ್ರೇಮಪಾಶದಲ್ಲಿ. ಆದರೆ ಈತ ಬದುಕಿರುವ ಸಂಗತಿ ಬಿಟ್ಟುವಿಗೆ ತಿಳಿಯುತ್ತದೆ. ಇಬ್ಬರ ನಡುವೆ ಜಟಾಪಟಿ. ಕಡೆಗೆ ದುಷ್ಟರ ಶಿಕ್ಷೆ ಶಿಷ್ಟರ ರಕ್ಷೆ. 

`ಮಳೆ~ ಬಾರದಿದ್ದರೇನಂತೆ ಅದರ ತಣ್ಣನೆ ಸ್ಪರ್ಶ ಸಾಕು ಎನ್ನುವವರಿಗೆ ಮಾತ್ರ ಯಾವುದೇ ನಷ್ಟವಿಲ್ಲ. ಕತೆಯಲ್ಲಿ ಹೊಸತನ ಇಲ್ಲದಿದ್ದರೂ ನಿರೂಪಣೆಯ ಸೂತ್ರ ಹಿಡಿದು ಆಡಬಲ್ಲ ಜಾಣ್ಮೆ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರದು. ಆರಂಭದಲ್ಲಿ ನಟ ಪ್ರಕಾಶ್ ರೈ ದನಿಯಿಂದ ಮೂಡಿ ಬರುವ ಮಾತುಗಳು ಇಡೀ ಚಿತ್ರದ ಬಗ್ಗೆ ಕುತೂಹಲ ಕೆರಳಿಸುತ್ತವೆ.

ಬ್ಯಾಂಕ್ ದರೋಡೆಯ ದೃಶ್ಯ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಹಾಲಿವುಡ್ ಚಿತ್ರಗಳ ಛಾಯೆಯಿದೆ. ನಿರ್ದೇಶಕರೇ ಬರೆದಿರುವ `ಹುಡುಗ ವಯಲೆಂಟ್ ಆಗಿದ್ದಾನೆ. ಅವನಿಗೆ ಹೂವು, ಹುಡುಗಿಯರನ್ನು ತೋರಿಸಿ~, `ನಮ್ಮ ದೇಶದಲ್ಲಿ ವಿಜ್ಞಾನಿಗಳಿಗಿಂತ ಬಾಬಾಗಳು ಫೇಮಸ್ಸು~ ಎಂಬಂಥ ಮಾತುಗಳು ಪ್ರೇಕ್ಷಕರ ಚಿತ್ತಾಪಹರಣ ಮಾಡಬಲ್ಲವು. ಬಿಟ್ಟು ಜೀವಭಿಕ್ಷೆ ಬೇಡುವ ಪರಿಯೂ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

`ಓ ಮಧು ಓ ಮಧು~, `ಮೀ ಇಂಟಿಕಿ ಮುಂದೋ ಗೇಟ್~, `ಪಕಡೋ ಪಕಡೋ~ ಹಾಡುಗಳಲ್ಲಿ ಅಲ್ಲು ಅರ್ಜುನ್ ಮೈ ಅಕ್ಷರಶಃ ರಬ್ಬರು. ಇಲಿಯಾನಾ ಅಭಿನಯಕ್ಕಿಂತಲೂ ಅವರ ಸೊಂಟವೇ ಹೆಚ್ಚು ನಟಿಸಿದೆ. ಕೋಟ ಶ್ರೀನಿವಾಸರಾವ್ ಖಳಪಟ್ಟದಲ್ಲಿ ವಿರಾಜಮಾನರಾಗಿರುವ ಮತ್ತೊಬ್ಬ ನಟ. ರಾವ್ ರಮೇಶ್‌ರ ಗೋಮುಖ ವ್ಯಾಘ್ರನ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT