ಚಿತ್ರ: ಬ್ಯೂಟಿಫುಲ್ ಮನಸುಗಳು
ನಿರ್ಮಾಪಕರು: ಎಸ್. ಪ್ರಸನ್ನ, ಎಸ್. ಶಶಿಕಲಾ ಬಾಲಾಜಿ
ನಿರ್ದೇಶಕ: ಜಯತೀರ್ಥ
ತಾರಾಗಣ: ನೀನಾಸಂ ಸತೀಶ್, ಶ್ರುತಿ ಹರಿಹರನ್, ಅಚ್ಯುತಕುಮಾರ್, ಪ್ರಶಾಂತ ಸಿದ್ದಿ
ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು’ ಸಮಾಜದ ಹುಳುಕುಗಳನ್ನು ತೋರಿಸುತ್ತಲೇ, ಅದೇ ಸಮಾಜದ ಭಾಗವಾಗಿರುವ ಚಂದದ ಮನಸುಗಳನ್ನು ಅನಾವರಣಗೊಳಿಸುವ ಸಿನಿಮಾ. ಒಳ್ಳೆಯ ಮನಸು ಮತ್ತು ತನ್ನನ್ನು ನಂಬುವ ಜೊತೆಗಾರರಿದ್ದರೆ ಹೆಣ್ಣೊಬ್ಬಳು ಎಂಥ ಪರಿಸ್ಥಿತಿಯನ್ನಾದರೂ ಮೀರಿ ನಿಲ್ಲುತ್ತಾಳೆ ಎನ್ನುವುದು ಚಿತ್ರದ ಕಥೆ.
ಲಂಚಗುಳಿ ಪೊಲೀಸರ ಹೊಣೆಗೇಡಿತನ, ಟಿಆರ್‌ಪಿ ಹಪಹಪಿಗೆ ಬಿದ್ದು ಒಂದೇ ಸಂಗತಿಯನ್ನು ದಿನವಿಡೀ ಪ್ರಸಾರ ಮಾಡುವ ವಾಹಿನಿಗಳ ನೈತಿಕ ಅಧಃಪತನ, ಅವಕಾಶ ಸಿಕ್ಕರೆ ಯಾರನ್ನಾದರೂ ಮಾತಿನಲ್ಲೇ ಬೀದಿಗೆಳೆಯುವ ಜನರ ವಿಚಾರಶೂನ್ಯತೆ, ಜೊತೆಗೆ ಒಂದಷ್ಟು ಸುಂದರವಾದ ಮನಸುಗಳನ್ನು ಇಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಬಳಸಲಾಗಿರುವ ‘ಸೋರುತಿಹುದು ಮನೆಯ ಮಾಳಿಗೆ’ ಹಾಡು ಇಡೀ ಚಿತ್ರಕ್ಕೆ ರೂಪಕದಂತಿದೆ.
ಆಗಾಗ ತಿರುವು ಪಡೆದುಕೊಳ್ಳುವ ಕಥೆಯನ್ನು ತೆರೆಗೆ ತರಲು ನಿರ್ದೇಶಕರು ಆಯ್ದುಕೊಂಡ ದಾರಿ ತೀರಾ ಹೊಸತಲ್ಲದಿದ್ದರೂ ತಾವು ಹೇಳಬೇಕಿರುವುದನ್ನು ಭಾವೋದ್ವೇಗವಿಲ್ಲದೆ ಸಂಯಮದಿಂದ ಪ್ರೇಕ್ಷಕನಿಗೆ ದಾಟಿಸಿರುವುದರಲ್ಲಿ ಅವರ ಗೆಲುವಿದೆ. ಮಾಧ್ಯಮಗಳಲ್ಲಿ ಕಾಣೆಯಾಗುತ್ತಿರುವ ಸಾಮಾಜಿಕ ಕಳಕಳಿಗೆ ಚುರುಕು ಮುಟ್ಟಿಸುವ ಪ್ರಯತ್ನವೂ ಚಿತ್ರದಲ್ಲಿದೆ. ಒಳ್ಳೆಯದನ್ನು ಸಾಧಿಸಲು ನಾಯಕ ಅಡ್ಡದಾರಿ ತುಳಿಯುವುದರಲ್ಲಿ ಯಾವ ಸದಾಶಯ ಇಲ್ಲದಿದ್ದರೂ – ಜಡ್ಡುಗಟ್ಟಿದ ವ್ಯವಸ್ಥೆ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಆತ ಮಾಡಿದ್ದರಲ್ಲಿ ತಪ್ಪಿಲ್ಲವೇನೋ ಎನ್ನಿಸುವುದೂ ಸಹಜ.
ಬಡಕುಟುಂಬದಲ್ಲಿ ಹುಟ್ಟಿದ ನಂದಿನಿಯ (ಶ್ರುತಿ ಹರಿಹರನ್) ಯೋಚನೆಗಳು, ಆಸೆಗಳು ತಾನು ಬೆಳೆದ ಪರಿಸರದ ಹಿನ್ನೆಲೆಯಲ್ಲಿಯೇ ರೂಪುಗೊಂಡಿವೆ. ಬ್ಯೂಟಿಪಾರ್ಲರ್‌ನಲ್ಲಿ ದುಡಿದು ಮನೆ ನಿಭಾಯಿಸುವ ಆಕೆಯ ಪಾಲಿಗೆ ಕನಸುಗಳು ಕನಸುಗಳಷ್ಟೇ. ನಂದಿನಿಯ ಸೌಂದರ್ಯಕ್ಕೆ ಮರುಳಾಗಿ ಪಚ್ಚಿ ಅಲಿಯಾಸ್ ಪ್ರಶಾಂತ (ನೀನಾಸಂ ಸತೀಶ್) ಆಕೆಯ ಹಿಂದೆ ಬೀಳುತ್ತಾನೆ. ಅದುವರೆಗೂ ಬೇಜವಾಬ್ದಾರಿ ಮನುಷ್ಯನಾಗಿದ್ದ ಪಚ್ಚಿ ಆಕೆಗಾಗಿ ಬದುಕಲು ಶುರುಮಾಡುತ್ತಾನೆ.
ಲಂಚ ಕೊಡದ ಬ್ಯೂಟಿಪಾರ್ಲರ್ ಮಾಲೀಕನ ಮೇಲಿನ ದ್ವೇಷಕ್ಕಾಗಿ, ಬ್ಯೂಟಿಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸರು ಬಿಂಬಿಸುತ್ತಾರೆ. ಮಾಧ್ಯಮಗಳಿಗೆ ಅದು ಎಕ್ಸ್‌ಕ್ಲೂಸಿವ್ ಸುದ್ದಿ. ಮುಗ್ಧೆ ನಂದಿನಿ ಈ ಪ್ರಕರಣದ ಬಲಿಪಶು. ಸುಳ್ಳು ಆರೋಪದಿಂದ ಕಂಗೆಟ್ಟ ನಂದಿನಿಯನ್ನು ಅನುಮಾನಿಸುವ ಪ್ರಶಾಂತ ನಿಜಸಂಗತಿ ತಿಳಿದಾಗ ಯಾವ ರೀತಿ ಆಕೆಗೆ ಬೆಂಬಲವಾಗಿ ನಿಲ್ಲುತ್ತಾನೆ ಎಂಬುದು ಕಥೆಯಲ್ಲಿನ ಕೌತುಕ.
ಸಂಭಾಷಣೆಯಲ್ಲಿನ ಚುರುಕುತನ ಮತ್ತು ವೇಗದ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದ ಒಟ್ಟುಗುಣದಲ್ಲಿ ಕಿರಣ್ ಹಂಪಾಪುರ ಅವರ ಛಾಯಾಗ್ರಹಣದ ಕಾಣಿಕೆಯೂ ಸೇರಿದೆ. ಬಿ.ವಿ. ಕಾರಂತರು ನಾಟಕವೊಂದಕ್ಕೆ ಸಂಯೋಜಿದ್ದ ಹಾಡಿನ ರಾಗವನ್ನೇ ಯಥಾವತ್ತಾಗಿ ಬಳಸಿಕೊಂಡಿರುವುದು ಮತ್ತು ಹಿನ್ನೆಲೆಯಲ್ಲಿ ಆಗಾಗ ಜನಪ್ರಿಯ ಹಾಡುಗಳು ಬರುವುದನ್ನು (ಸಂದರ್ಭಕ್ಕೆ ಸೂಕ್ತವಾಗಿದ್ದರೂ) ಗಮನಿಸಿದರೆ ಸಂಗೀತ ಸಂಯೋಜಕ ಬಿ.ಜೆ. ಭರತ್ ಹೆಚ್ಚೇನೂ ಶ್ರಮವಹಿಸಿದಂತೆ ಕಾಣುವುದಿಲ್ಲ. ನೀನಾಸಂ ಸತೀಶ್ ಬಿಲ್ಡಪ್ ಇಲ್ಲದೆ ತಮ್ಮ ಸಹಜಾಭಿನಯ ಮುಂದುವರಿಸಿದ್ದಾರೆ. ನಂದಿನಿ ಪಾತ್ರವನ್ನು ಶ್ರುತಿ ಹರಿಹರನ್ ಜೀವಂತವಾಗಿಸಿದ್ದಾರೆ. ಪಾತ್ರದ ಮಹತ್ವ ಮತ್ತು ಅದನ್ನು ಪೋಷಿಸಿದ ರೀತಿಯಿಂದಾಗಿ ಅಚ್ಯುತಕುಮಾರ್, ತಬಲಾ ನಾಣಿ ನೆನಪಿನಲ್ಲಿ ಉಳಿಯುತ್ತಾರೆ.
‘ಒಲವೇ ಮಂದಾರ’. ‘ಟೋನಿ’ಯಂಥ ಸದಭಿರುಚಿಯ ಸಿನಿಮಾಗಳ ನಿರ್ದೇಶಕ, ಅಡ್ಡದಾರಿಯಿಂದ ಮತ್ತೆ ತಮ್ಮ ಟ್ರ್ಯಾಕ್‌ಗೆ ಮರಳಿರುವುದನ್ನು ‘ಬ್ಯೂಟಿಫುಲ್ ಮನಸುಗಳು’ ಅಚ್ಚುಕಟ್ಟಾಗಿ ಸಾಬೀತುಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.