ADVERTISEMENT

ರಂಜನೆಗೆ ಒತ್ತು; ಕಥೆ ಸುಸ್ತು (ಚಿತ್ರ: ಜೋಡಿ ಬ್ರೇಕರ್ಸ್)

ಅಮಿತ್ ಎಂ.ಎಸ್.
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಮದುವೆಯಾದ ಕೆಲವೇ ದಿನಗಳಲ್ಲಿ ಸಂಬಂಧ ಮುರಿದುಕೊಳ್ಳುವ ಆಧುನಿಕ ಸಮಾಜದ ಕೌಟುಂಬಿಕ ಸ್ಥಿತಿಗತಿಯ ತಳಹದಿಯಲ್ಲಿ ರೂಪುಗೊಂಡ ಚಿತ್ರ `ಜೋಡಿ ಬ್ರೇಕರ್ಸ್~.

ಮನರಂಜನೆ ಮತ್ತು ಕಥಾವಸ್ತುವಿನ ಆಯ್ಕೆಯ ದೃಷ್ಟಿಯಲ್ಲಿ ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗಬಹುದು. ಆದರೆ ಚಿತ್ರಕಥೆಯ ನಿರೂಪಣೆಯಲ್ಲಿ ಮತ್ತು ಸಂಬಂಧಗಳ ಭಾವ ತೀವ್ರತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ನಿರ್ದೇಶಕ ಅಶ್ವಿನಿ ಚೌಧರಿ ಎಡವಿದ್ದಾರೆ. ವಿವಾಹ ಬಂಧಗಳನ್ನು ಸಲೀಸಾಗಿ ಮುರಿದುಕೊಳ್ಳುವ ಆಧುನಿಕ ಯುಗದ ಜನರ ಮನೋಭಾವವನ್ನು ಚಿತ್ರ ಬಿಂಬಿಸಿದರೂ, ಕೆಲವು ಗಂಭೀರ ಸನ್ನಿವೇಶಗಳನ್ನು ಹಾಸ್ಯದ ಧಾಟಿಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಬಾಲಿವುಡ್‌ನ ಅನೇಕ ಹಾಸ್ಯ ಚಿತ್ರಗಳನ್ನು ನೆನಪಿಗೆ ತರುತ್ತದೆ.

ವಿಚ್ಛೇದನ ಬಯಸುವವರಿಗೆ ಸುಲಭವಾಗಿ ಅದು ದಕ್ಕುವಂತೆ ಮಾಡುವುದು ಮಾಧವನ್ ಮತ್ತು ಬಿಪಾಶಾ `ವೃತ್ತಿ~. ಜೋಡಿಗಳನ್ನು ಬೇರ್ಪಡಿಸುವುದರಲ್ಲಿ ಇಬ್ಬರೂ ನಿಷ್ಣಾತರು. ಹೊಸದಾಗಿ ಮದುವೆಯಾದ ಜೋಡಿಯೊಂದನ್ನು (ಮಿಲಿಂದ್ ಸೋಮನ್- ದೀಪನ್ನಿತಾ ಶರ್ಮಾ) ಬೇರೆ ಮಾಡಲು ಇಬ್ಬರೂ ಗ್ರೀಕ್‌ಗೆ ತೆರಳುತ್ತಾರೆ. ಅವರನ್ನು ದೂರ ಮಾಡುವ ಕೆಲಸವನ್ನು ಒಪ್ಪಿಸುವುದು ಮಾಧವನ್‌ನ ಮಾಜಿ ಪತ್ನಿ. ಅಲ್ಲಿಯೇ ಬಿಪಾಶಾಗೆ ಮಾಧವನ್ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ ಅದು ದೀರ್ಘಕಾಲ ಬಾಳುವುದಿಲ್ಲ. ವಿಚ್ಛೇದನ ದೊರಕಿಸಿಕೊಡುವ ತಮ್ಮ ಕೆಲಸ ತಪ್ಪು ಎಂಬ ಅರಿವು ಬಿಪಾಶಾಗೆ ಆಗುತ್ತದೆ.

ಹೀಗೆ ದೂರವಾದ ಅವರನ್ನು ಒಂದು ಮಾಡಲು ಅವರ ಗೆಳೆಯರು ಮುಂದಾಗುತ್ತಾರೆ. ತಮ್ಮಿಂದ ದೂರವಾದ ಮಿಲಿಂದ್ ಮತ್ತು ದೀಪನ್ನಿತಾರ ಸಂಬಂಧವನ್ನು ಸರಿಪಡಿಸಲು ಇಬ್ಬರೂ ಜೊತೆಯಾಗುತ್ತಾರೆ. ಇದು ಕಥೆಯ ತಿರುಳು.

ಮೊದಲರ್ಧದಲ್ಲಿ ಒಂದಷ್ಟು ಮನರಂಜನೆಯ ಹೊರತಾಗಿ ಕಥೆ ಕಾಣುವುದೇ ಇಲ್ಲ. ಮಾಧವನ್ ಮದುವೆ ಮತ್ತು ವಿಚ್ಛೇದನದ ಕಥೆ ಸಂಭಾಷಣೆಗಷ್ಟೇ ಸೀಮಿತ. ಅನಗತ್ಯ ಸನ್ನಿವೇಶ ಮತ್ತು ಪೇಲವ ನಿರೂಪಣೆಯಿಂದಾಗಿ ದ್ವಿತೀಯಾರ್ಧದಲ್ಲಿಯೂ ಚಿತ್ರ ಮಂದವಾಗಿ ಸಾಗುತ್ತದೆ. ಮಾಧವನ್ ಮತ್ತು ಬಿಪಾಶಾ ಪಾತ್ರಗಳು ಚಿತ್ರದ ಹೈಲೈಟ್.

ಭಾವಪೂರ್ಣ ಸನ್ನಿವೇಶಗಳನ್ನು ಇಬ್ಬರೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಓಮಿ ವೈದ್ಯ ಪಾತ್ರ ನಗಿಸುವಲ್ಲಿ ಸಫಲವಾದರೂ `ಥ್ರೀ ಈಡಿಯಟ್ಸ್~ ಗುಂಗಿನಿಂದ ಅವರು ಹೊರಬಂದಂತೆ ಕಾಣುವುದಿಲ್ಲ. ಮಿಲಿಂದ್ ಸೋಮನ್, ದೀಪನ್ನಿತಾ ಶರ್ಮಾ, ಮೃಣಾಲಿನಿ ಶರ್ಮಾ, ಹೆಲನ್ ಅಲ್ಲಲ್ಲಿ ನಿರ್ಜೀವವಾಗುವ ಚಿತ್ರಕಥೆಗೆ ಅಭಿನಯದ ಮೂಲಕ ಜೀವ ತುಂಬುತ್ತಾರೆ.

ಸಲೀಮ್ -ಸುಲೈಮಾನ್ ಸಂಗೀತ ಇತ್ತೀಚಿನ ಹಾಡುಗಳ ಅನುಕರಣೆಯ ಫಲವಾಗಿ ಜನ್ಮತಳೆದಿವೆ. ಗ್ರೀಕ್‌ನ ಸುಂದರ ತಾಣಗಳನ್ನು ಮತ್ತಷ್ಟು ಸುಂದರವಾಗಿ ಚಿತ್ರಿಸುವ ಕ್ಯಾಮೆರಾಕಣ್ಣು ಭಾವನಾತ್ಮಕ ಸನ್ನಿವೇಶಗಳನ್ನು ಸಮರ್ಪಕವಾಗಿ ಸೆರೆಹಿಡಿಯುವಲ್ಲಿ ಹಿಂದೆ ಬೀಳುತ್ತದೆ. ಚಿತ್ರಕಥೆಯ ವೇಗ ಮತ್ತು ಅದನ್ನು ತೆರೆದಿಡುವ ರೀತಿಯಲ್ಲಿ ಹಲವು ಲೋಪಗಳಿದ್ದರೂ `ಜೋಡಿ ಬ್ರೇಕರ್ಸ್~ ಎರಡು ಗಂಟೆಗಳ ಮನರಂಜನೆಯನ್ನು ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.