ADVERTISEMENT

ವಿರೋಧಾಭಾಸಗಳ ಮರೆಯಲಿ...

ಚಿತ್ರ: ಮನದ ಮರೆಯಲಿ

ಡಿ.ಎಂ.ಕುರ್ಕೆ ಪ್ರಶಾಂತ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನಿರ್ಮಾಪಕ: ಮಹೇಶ್ ಆನೇಕಲ್
ನಿರ್ದೇಶಕ: ರಾಜೀವ್ ನೇತ್ರಾ
ತಾರಾಗಣ: ಶ್ರೀಕಿ, ವಿಂಧ್ಯಾ, ಅನಂತನಾಗ್, ರಂಗಾಯಣ ರಘು, ಅಜಯ್‌ ರಾವ್, ವಿಶ್ವ, ಸಂದೀಪ್, ಬುಲೆಟ್ ಪ್ರಕಾಶ್, ಮತ್ತಿತರರು


‘ಮನದ ಮರೆಯಲಿ’ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಥಾವಸ್ತುವಿನ ಚಿತ್ರ. ಈ ಅಂಶದಿಂದಲೇ ಚಿತ್ರತಂಡ ಒಂದಿಷ್ಟು ಪ್ರಚಾರವನ್ನೂ ಪಡೆದಿತ್ತು. ಆದರೆ ಈ ಆಶಯ ಸಿನಿಮಾದಲ್ಲಿ ಗೌಣವಾಗಿದೆ. ಪ್ರೀತಿ–ಪ್ರೇಮದ ಕಥೆಯ ನಡುವೆ ನೇತ್ರದಾನದಂಥ ಸೂಕ್ಷ್ಮ ಮತ್ತು ವಿಚಾರಾರ್ಹ ವಿಷಯಕ್ಕೆ ಒತ್ತು ಸಿಕ್ಕಿಲ್ಲ. ಚಿತ್ರಕಥೆಯ ಅಂತಿಮ ಗಳಿಗೆಯಲ್ಲಿ ನೇತ್ರದಾನಕ್ಕೆ ಸ್ವಲ್ಪ ಮಹತ್ವ ಸಿಕ್ಕಿದೆ ಅಷ್ಟೇ.

ತಮ್ಮ ಚಿತ್ರವನ್ನು ಮನರಂಜನೆಗಿಂತ ಸಂದೇಶಾತ್ಮಕಗೊಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆ ಪ್ರಯತ್ನ ಅಲ್ಲಲ್ಲಿ ಕಾಣಿಸುತ್ತದೆ. ಈ ಸಂದೇಶಾತ್ಮಕ ವಿಚಾರಗಳನ್ನು ಸಮರ್ಥವಾಗಿ ನಿರೂಪಿಸುವಲ್ಲಿಯೂ ಅವರು ಯಶಸ್ವಿಯಾಗಿಲ್ಲ. ಒಂದೇ ಸಾಲಿನಲ್ಲಿ ಹೇಳುವುದಾದರೆ, ಅಂಧ ಯುವತಿಯ ಪ್ರೀತಿಗಾಗಿ ತ್ಯಾಗ ಮಾಡುವ ನಾಯಕನ ಕಥೆ ಇದು. ತನ್ನ ಅಂಧ ತಂಗಿಗೆ ಕಣ್ಣು ಕೊಡಿಸಲು ವೇಶ್ಯೆಯಾಗುವ ಹೆಣ್ಣೊಬ್ಬಳು, ಆ ವರ್ತುಲದೊಳಗಿನಿಂದ ಹೊರಬರಲಾರದೆ ಚಡಪಡಿಸಿ ಸಾಯುವ ಸನ್ನಿವೇಶ ಮನಸ್ಸಿಗೆ ಭಾರವಾಗುತ್ತದೆ. ಮುಖ್ಯಕಥೆಗೆ ತುಸು ಬಲತುಂಬಿರುವುದು ಚಿತ್ರದಲ್ಲಿನ ವೇಶ್ಯೆಯ ಒಡಲಾಳದ ದೃಶ್ಯಗಳೇ.

ಪಿಳ್ಳಂಗೋವಿ (ಕೊಳಲು) ಮಾರುವ ಹುಡುಗ ಜೀವನಿಗೆ ಅಂಧ ಹುಡುಗಿ ಸಂಧ್ಯಾಳ ಮೇಲೆ ಪ್ರೀತಿ ಚಿಗುರುತ್ತದೆ. ಸಂಧ್ಯಾಳ ಅಕ್ಕ ಭಾವನಾ ವೇಶ್ಯೆ. ತನ್ನ ತಂಗಿಗೆ ಕಣ್ಣು ಕೊಡಿಸಲು ಆಕೆ ಈ ವೃತ್ತಿಯಲ್ಲಿ ತೊಡಗಿರುತ್ತಾಳೆ. ಕ್ಯಾನ್ಸರ್‌ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇತ್ತ ಖಳನಾಯಕ ಜಗ್ಗಿ, ಸಂಧ್ಯಾಳನ್ನು ಅನುಭವಿಸುವ ಯತ್ನದಲ್ಲಿ ನಾಯಕನಿಂದ ಪದೇ ಪದೇ ಪೆಟ್ಟು ತಿಂದು ಸೇಡಿಗೆ ಹಾತೊರೆಯುತ್ತಾನೆ. ಈ ನಡುವೆ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಜೀವ ಕಣ್ಣು ಕಳೆದುಕೊಂಡರೆ, ಆತನ ತಂಗಿ ಪ್ರಾಣ ಕಳೆದುಕೊಳ್ಳುತ್ತಾಳೆ. ತನ್ನ ತಂಗಿಯ ಕಣ್ಣುಗಳನ್ನು ಪ್ರೇಯಸಿ ವಿಂಧ್ಯಾಳಿಗೆ ಕೊಟ್ಟು ಜೀವ ತ್ಯಾಗಿಯಾಗುತ್ತಾನೆ.

ಈ ತ್ಯಾಗದ ಕಥೆಗೆ ವೇಗದ ನಿರೂಪಣೆ ಇಲ್ಲ. ಉಬ್ಬು ತಗ್ಗುಗಳಿಲ್ಲದ ರಸ್ತೆಯಲ್ಲಿ ನಿಧಾನವಾಗಿ ಚಲಿಸುವ ಗಾಡಿಯಂತೆ ಸಾಗುವ ಚಿತ್ರದ ಕಥೆ ಪ್ರೇಕ್ಷಕನನ್ನೂ ಪೂರ್ಣವಾಗಿ ತನ್ನೊಳಗೆ ಸೆಳೆದುಕೊಳ್ಳುವುದಿಲ್ಲ. ಮೊದಲು ಐಟಂ ಹಾಡಿನಿಂದ ಪಡ್ಡೆ ಹುಡುಗರನ್ನು ಕುಣಿಸುವ ನಿರ್ದೇಶಕರು, ನಂತರ ರಾಷ್ಟ್ರಗೀತೆಯ ಮೂಲಕ ಪ್ರೇಕ್ಷಕನನ್ನು ಸೀಟಿನಿಂದ ಎದ್ದು ನಿಲ್ಲುವಂತೆ ಕೋರುವುದು ಆಭಾಸವಾಗಿಯೇ ಕಾಣುತ್ತದೆ.

ಗುನುಗಿಕೊಳ್ಳುವ ಮತ್ತು ಆಪ್ತವಾಗುವ ಗುಣವನ್ನು ಯಾವ ಹಾಡೂ ಪಡೆದಿಲ್ಲ. ನಾಯಕ ಶ್ರೀಕಿ ತಮಗೆ ಕೊಟ್ಟ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ. ತಮ್ಮ ಎಂದಿನ ಹಾವಭಾವದಲ್ಲಿ ರಂಗಾಯಣ ರಘು ಇಷ್ಟವಾಗುತ್ತಾರೆ. ಅನಂತ್‌ನಾಗ್ ಅವರ ಪಾತ್ರ ಸೀಮಿತವಾಗಿದೆ. ನಾಯಕಿ ವಿಂಧ್ಯಾ ಪ್ರೇಮದ ನೋವು ನಲಿವುಗಳ ಅಭಿವ್ಯಕ್ತಿಯಲ್ಲಿ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಅವರ ಹಾವಭಾವಗಳು ಅಂಧ ಯುವತಿಯ ಪೋಷಾಕನ್ನು ಸರಿಯಾಗಿ ತೊಟ್ಟಿಲ್ಲ ಎನ್ನುವುದನ್ನು ತೋರುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT