ADVERTISEMENT

ವೃದ್ಧರ ನಾಟಕದಲ್ಲಿ ಯುವ ಬೋಧನೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 12:39 IST
Last Updated 5 ಮೇ 2018, 12:39 IST
ವೃದ್ಧರ ನಾಟಕದಲ್ಲಿ ಯುವ ಬೋಧನೆ
ವೃದ್ಧರ ನಾಟಕದಲ್ಲಿ ಯುವ ಬೋಧನೆ   

ನಿರ್ಮಾಣ: ಟ್ರೀ ಟಾಪ್ ಎಂಟರ್‌ಟೇನ್‌ಮೆಂಟ್, ಬೆಂಚ್‌ಮಾರ್ಕ್ ಪಿಕ್ಚರ್ಸ್, ಸೋನಿ ಪಿಕ್ಚರ್ಸ್, ಎಂಟರ್‌ಟೇನ್‌ಮೆಂಟ್ ಫಿಲ್ಮ್ಸ್ ಇಂಡಿಯಾ
ನಿರ್ದೇಶನ: ಉಮೇಶ್ ಶುಕ್ಲಾ
ತಾರಾಗಣ: ಅಮಿತಾಭ್ ಬಚ್ಚನ್, ರಿಶಿ ಕಪೂರ್, ಜಿಮಿತ್ ತ್ರಿವೇದಿ

ಈ ಕಾಲದಲ್ಲೂ ಬೋಧನೆ ಬಯಸುವ ಮನಸ್ಸುಗಳಿವೆ. ಅದು ಹಾಸ್ಯದ ಮೂಲಕ ದಕ್ಕಿದರೆ ಸ್ವೀಕರಿಸುವವರ ಪ್ರಮಾಣ ಹೆಚ್ಚು. ಸೌಮ್ಯಾ ಜೋಷಿ ಬರೆದ ‘102 ನಾಟ್ ಔಟ್’ ಗುಜರಾತಿ ನಾಟಕದ ಯಶಸ್ಸಿನ ಹಿಂದೆ ಇರುವುದು ಅದೇ. ಯುವ ಮನಸ್ಸುಗಳನ್ನು ಹಿಡಿದಿಡಲು ಯುವಕರೇ ಆಗಬೇಕಿಲ್ಲ ಎನ್ನುವ ರಂಗತಂತ್ರವೊಂದನ್ನು ಅವರು ಪ್ರಯೋಗಿಸಿದ್ದರು. ಅದೇ ಈಗ ಸಿನಿಮಾ ಆಗಿ ರೂಪುತಳೆದಿದೆ. ಈ ಸಿನಿಮಾ ಕೂಡ ನಾಟಕದಂತೆಯೇ ಭಾಸವಾಗುವುದು ಅದರ ಮೂಲಶಿಲ್ಪದ ಕಾರಣಕ್ಕೆ.

ನೂರಾಎರಡು ವರ್ಷ ವಯಸ್ಸಿನ ಪಾದರಸದಂಥ ಮುದುಕ. ವ್ಯಾಕುಲದಲ್ಲಿ ಕಳೆದುಹೋಗಿರುವ ಎಪ್ಪತ್ತೈದರ ಮಗ. ತಾನು ವಿಶ್ವದಲ್ಲೇ ಅತಿ ದೀರ್ಘ ಕಾಲ ಬದುಕಿದ ವ್ಯಕ್ತಿ ಎಂಬ ದಾಖಲೆ ನಿರ್ಮಿಸಬೇಕು ಎಂಬ ಹೆಬ್ಬಯಕೆ ವ್ಯಕ್ತಪಡಿಸುವ ಅಪ್ಪ, ಮಗನನ್ನೇ ವೃದ್ಧಾಶ್ರಮಕ್ಕೆ ಸೇರಿಸುವುದಾಗಿ ಹೆದರಿಸುತ್ತಾನೆ. ಕೆಲವು ಷರತ್ತುಗಳನ್ನು ಪೂರೈಸಿದರಷ್ಟೇ ಅದರಿಂದ ವಿನಾಯಿತಿ. ಆ ಷರತ್ತುಗಳನ್ನು ಪೂರೈಸುತ್ತಾ ಹೋಗುವ ಮಗ ಹಾಗೂ ಅದರಲ್ಲೇ ಭೂತಕಾಲದ ಘಟನೆಗಳನ್ನು ಕಾಣಿಸುವ ಅಪ್ಪ ಭಿನ್ನವಾಗಿ ಕಾಣುತ್ತಾರೆ.

ADVERTISEMENT

ಮೊದಲರ್ಧ ಹಾಸ್ಯಮಯ ಪ್ರಸಂಗಗಳು, ತುಂಟತನದ ಸಂಭಾಷಣೆಗಳಿಂದ ನವಿರಾಗಿ ಸಾಗುವ ಕಥಾನಕ, ಎರಡನೇ ಭಾಗದಲ್ಲಿ ಅತಿ ಗಂಭೀರವಾಗುತ್ತದೆ. ಷರತ್ತುಗಳ ಪ್ರಹಸನಕ್ಕೆ ಇರುವ ಗಹನವಾದ ಉದ್ದೇಶ ಅನಾವರಣಗೊಳ್ಳುವುದೇ ಆಗ. ಅದು ಬೋಧನಾ ಪ್ರಧಾನ. ಅಪ್ಪ-ಅಮ್ಮನನ್ನು ತಿರಸ್ಕರಿಸಿ, ಆಸ್ತಿಗಾಗಿ ಹಪಹಪಿಸುವ ಹೊಸಕಾಲದ ಹುಡುಗರಿಗೆ ಕೊನೆಯಲ್ಲಿ ‘ಟಾಂಟ್’ ಕೊಡಲಾಗಿದೆ.

ಥೇಟ್ ನಾಟಕವನ್ನೇ ನೋಡಿದ ಅನುಭವ ಕೊಡುವ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅಭಿನಯ ಶ್ರದ್ಧೆ ಇಷ್ಟವಾಗುತ್ತದೆ. ರಿಷಿ ಕಪೂರ್ ಕೆಂಪಾದ ಕೆನ್ನೆಯ ಗೆರೆಗಳಲ್ಲಿ ತುಳುಕುವ ಭಾವನೆಗಳಿಗೂ ಹ್ಯಾಟ್ಸಾಫ್. ಯುವ ಸಾಕ್ಷೀಪ್ರಜ್ಞೆಯಂತೆ ಎರಡೂ ಪಾತ್ರಗಳ ನಡುವಿನ ಯುವಕನಾಗಿ ಜಿಮಿತ್ ತ್ರಿವೇದಿ ಗುಜರಾತಿ ಶೈಲಿಯ ಹಿಂದಿಯಿಂದ ಗಮನ ಸೆಳೆಯುತ್ತಾರೆ. ಒಂದೂ ಮುಖ್ಯವಾದ ಹೆಣ್ಣುಪಾತ್ರ ಇಲ್ಲದ ಸಿನಿಮಾ ಇದು.

ನಾಟಕದ ಗುಂಗಿನಿಂದ ಹೊರಗೆಳೆದು ಬೇರೆಯದೇ ರಕ್ತಮಾಂಸ ತುಂಬಿದ್ದಿದ್ದರೆ ನಿರ್ದೇಶಕ ಉಮೇಶ್ ಶುಕ್ಲಾ ಪ್ರಯತ್ನ ಇನ್ನಷ್ಟು ಕಾಡುವಂತೆ ಮೂಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.