ADVERTISEMENT

‘ಸರ್ಕಾರ್’ ಹೆಸರಲ್ಲಿ ಮಾರಾಮಾರಿ

ಕೆ.ಎಚ್.ಓಬಳೇಶ್
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಲೇಖಾಚಂದ್ರ, ಜಗ್ಗಿ
ಲೇಖಾಚಂದ್ರ, ಜಗ್ಗಿ   

ಚಿತ್ರ: ಸರ್ಕಾರ್
ನಿರ್ಮಾಪಕರು: ಪಾರ್ವತಿ ಎಸ್.
ನಿರ್ದೇಶನ: ಎಸ್‌. ಮಂಜು ಪ್ರೀತಂ
ತಾರಾಗಣ: ಜಗ್ಗಿ, ಲೇಖಾ ಚಂದ್ರ, ಯಮುನಾ, ಕೀರ್ತಿರಾಜ್, ಶೋಭರಾಜ್

ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಕುಖ್ಯಾತ ರೌಡಿಯೊಬ್ಬನ ಬಿಡುಗಡೆಯೊಂದಿಗೆ ‘ಸರ್ಕಾರ್‌’ ಸಿನಿಮಾ ಆರಂಭವಾಗುತ್ತದೆ. ಆ ರೌಡಿಯ ಹೆಸರು ಸರ್ಕಾರ್‌. ಆತ ಕಟ್ಟಿದ ಭೂಗತ ಜಗತ್ತಿನ ಕೋಟೆಗೆ ಜಗ್ಗಿ ಅಧಿಪತಿ. ರೌಡಿಸಂ ಕಥೆ ಇಟ್ಟುಕೊಂಡು ಬಂದಿರುವ ಹಲವು ಸಿನಿಮಾಗಳಲ್ಲಿ ಕಾಣಸಿಗುವ ಸಾಮಾನ್ಯ ಅಂಶಗಳೇ ಈ ಚಿತ್ರದಲ್ಲಿಯೂ ಮೇಳೈಸಿವೆ. ಹಾಗಾಗಿ, ಚಿತ್ರದ ಕಥೆಯಲ್ಲಾಗಲಿ, ಅದರ ನಿರೂಪಣಾ ಶೈಲಿಯಲ್ಲಾಗಲಿ ವಿಶೇಷ ಇಲ್ಲ.

ಗಾಂಧಿನಗರದಲ್ಲಿ ಸಾಕಷ್ಟು ಬಾರಿ ಬಳಕೆಯಾಗಿ ಸವಕಲಾಗಿರುವ ಸೂತ್ರಗಳನ್ನು ಇಟ್ಟುಕೊಂಡೇ ‘ಸರ್ಕಾರ್‌’ ಚಿತ್ರದ ಕಥೆ ಹೊಸೆದಿದ್ದಾರೆ ನಿರ್ದೇಶಕ ಎಸ್‌. ಮಂಜು ಪ್ರೀತಂ. ಆದರೆ, ಚಿತ್ರಕಥೆಯಲ್ಲಿನ ಜಾಳುತನ, ನೀರಸ ನಿರೂಪಣೆಯಿಂದ ಚಿತ್ರ ನೋಡುಗರಲ್ಲಿ ಕುತೂಹಲ ಹುಟ್ಟಿಸುವುದಿಲ್ಲ.

ADVERTISEMENT

ಆತ ಜಗ್ಗಿ ಅಲಿಯಾಸ್‌ ಜಾಗ್ವಾರ್‌ ಜಗ್ಗಿ. ಅವನಿಗೆ ರೌಡಿಸಂನ ಪಟ್ಟುಗಳನ್ನು ಕಲಿಸಿದ್ದು ಸರ್ಕಾರ್‌. ಈ ಇಬ್ಬರ ಹೆಸರು ಕೇಳಿದರೆ ಎದುರಾಳಿಗಳ ಎದೆಯಲ್ಲಿ ನಡುಕು. ತನ್ನ ಗುರುವಿಗೆ ಅವಮಾನ ಮಾಡಿದವರ ಎದೆ ಸೀಳುವುದೇ ಜಗ್ಗಿಯ ಕೆಲಸ. ಇಂಥಹ ಒರಟನ ಹೃದಯಕ್ಕೆ ಲಗ್ಗೆ ಇಡುತ್ತಾಳೆ ಕೀರ್ತಿ.

ತಾಯಿಯ ಸೆಂಟಿಮೆಂಟ್‌, ದ್ವೇಷ, ಪ್ರೀತಿಯ ಎಳೆ ಇಟ್ಟುಕೊಂಡು ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕಥೆ ಸಾಗುವ ದಾರಿಯಲ್ಲಿ ಅಪರೂಪಕ್ಕೆ ಒಮ್ಮೆ ಮನತಣಿಸುವ ನೋಟಗಳು ಸಿಗುತ್ತವೆ. ಆದರೆ, ಕೆಲವೇ ಕ್ಷಣಗಳಲ್ಲಿ ಲಾಂಗ್‌, ಪಿಸ್ತೂಲ್‌ನ ಗುಂಡಿನ ಮೊರೆತಕ್ಕೆ ಚಿಮ್ಮುವ ನೆತ್ತರು ಆ ನೋಟವನ್ನು ಮಸುಕಾಗಿಸುತ್ತದೆ.

ಚಿತ್ರದ ಕೆಲವೆಡೆ ಅನಗತ್ಯವಾಗಿ ತುರುಕಿರುವ ಸಂಭಾಷಣೆ, ದೃಶ್ಯಗಳು ನೋಡುಗರಿಗೆ ತ್ರಾಸ ಮಾಡುತ್ತವೆ. ನಾಯಕನನ್ನು ಜಾಗ್ವಾರ್‌ಗೆ ಹೋಲಿಸಲು ಬಳಸಿರುವ ಕಾರು ಮತ್ತು ಅದರ ಮುಂಭಾಗದ ಜಾಗ್ವಾರ್‌ ಚಿಹ್ನೆ ಕಂಡಾಗ ತಬ್ಬಿಬ್ಬುಗೊಳ್ಳುವ ಸರದಿ ಪ್ರೇಕ್ಷಕರದ್ದು.

ಸರ್ಕಾರ್‌ನನ್ನು ಕೊಂದ ಎದುರಾಳಿಗಳನ್ನು ಕೊಲ್ಲಲು ಜಗ್ಗಿ ಮುಂದಾಗುತ್ತಾನೆ. ಆಗ ಸಾಲು ಸಾಲಾಗಿ ಹೆಣಗಳು ಉರುಳುತ್ತವೆ. ಕೊನೆಗೆ, ಜಗ್ಗಿಯ ಎನ್‌ಕೌಂಟರ್‌ಗೆ ಪೊಲೀಸರು ಮುಂದಾಗುತ್ತಾರೆ. ಈ ಸುದ್ದಿ ನಾಯಕಿಗೆ ಮುಟ್ಟುತ್ತದೆ. ಪ್ರೀತಿಗಾಗಿ ಹಂಬಲಿಸುವ ಆಕೆ ಆತನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

‘ಅಂತೂ ಸಿನಿಮಾ ಮುಗಿಯಿತು’ ಎಂದು ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ. ಆದರೆ, ದೇಹಕ್ಕೆ ನಾಲ್ಕು ಗುಂಡು ಹೊಕ್ಕರೂ ಬದುಕುವ ಜಗ್ಗಿ ಮತ್ತೆ ರಕ್ತದೋಕುಳಿ ಹರಿಸಲು ಶುರುವಿಟ್ಟುಕೊಳ್ಳುತ್ತಾನೆ. ಅಸಂಬದ್ಧವಾಗಿ ಕಥೆ ಮುಂದುವರಿಸುವ ಪ್ರಯತ್ನಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.

ಜಗ್ಗಿ ಅಭಿನಯದಲ್ಲಿ ಇನ್ನೂ ಪಳಗಬೇಕಿದೆ. ಲೇಖಾ ಚಂದ್ರ ಅವರ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಶೋಭರಾಜ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸತೀಶ್‌ ಆರ್ಯನ್‌ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಅರುಣ್‌ಕುಮಾರ್‌ ಛಾಯಾಗ್ರಹಣದಲ್ಲಿ ಹೊಸತೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.