ADVERTISEMENT

ಸಾಸಿವೆಯಷ್ಟು ರಂಜನೆಗೆ ಸಾಗರದಷ್ಟು ಓಳು ನೋಡಾ!

ಪದ್ಮನಾಭ ಭಟ್ಟ‌
Published 20 ಏಪ್ರಿಲ್ 2018, 11:23 IST
Last Updated 20 ಏಪ್ರಿಲ್ 2018, 11:23 IST
ಸಾಸಿವೆಯಷ್ಟು ರಂಜನೆಗೆ ಸಾಗರದಷ್ಟು ಓಳು ನೋಡಾ!
ಸಾಸಿವೆಯಷ್ಟು ರಂಜನೆಗೆ ಸಾಗರದಷ್ಟು ಓಳು ನೋಡಾ!   

ಸಿನಿಮಾ: 6 ಟು 6

ನಿರ್ಮಾಣ: ಅಭಿಷೇಕ್‌ ಎಂ.ಎಂ.

ನಿರ್ದೇಶನ: ಶ್ರೀನಿವಾಸ್ ಶಿಡ್ಲಘಟ್ಟ

ADVERTISEMENT

ತಾರಾಗಣ: ತಾರಖ್ ಪೊನ್ನಪ್ಪ, ಸ್ವರೂಪಿಣಿ, ಸುರೇಶ್‌ ಹೆಬ್ಳೀಕರ್

ಅವನು ಮೂತ್ರವಿಸರ್ಜನೆ ಮಾಡಿಕೊಂಡು ಟಾಯ್ಲೆಟ್‌ನಿಂದ ಎದ್ನೋ ಬಿದ್ನೋ ಎಂದು ಓಡಿಬರುತ್ತಾನೆ. ಸ್ಲೋಮೋಷನ್‌ನಲ್ಲಿ ಓಡಿಬರುವಾಗ ಹಿನ್ನೆಲೆಯಲ್ಲಿ ಭಯಾನಕ ಭಾವ ಹುಟ್ಟಿಸುವ ಸಂಗೀತ. ಎಲ್ಲರೂ ಗಾಬರಿಯಾಗಿ ನೋಡುತ್ತಿರುವ ಹಾಗೆ ಬಂದು ನಿಲ್ಲುವ ಅವನು ‘ಅಬ್ಬಾ, ಅಂತೂ ಸಮಾಧಾನ ಆಯ್ತು’ ಎಂದು ಉದ್ಗರಿಸುತ್ತಾನೆ!

ಇದರಲ್ಲೇನು ವಿಶೇಷ? ಮೂತ್ರವಿಸರ್ಜನೆಯಲ್ಲಿನ ಸಮಾಧಾನವನ್ನು ಹಂಚಿಕೊಳ್ಳುವುದಕ್ಕೆ ಇಷ್ಟೊಂದು ಬಿಲ್ಡಪ್‌ ಬೇಕಾ? ಇಂಥ ಪ್ರಶ್ನೆ ಪ್ರೇಕ್ಷಕನಿಗೆ ಕಾಡುತ್ತದೆ, ನಿರ್ದೇಶಕರಿಗಲ್ಲ.

ನಾಳೆ ಸಂಜೆ ಪ್ರಾರಂಭವಾಗಲಿರುವ ಕಾರ್ಯಕ್ರಮವೊಂದಕ್ಕೆ ಭಿನ್ನ ಕಾನ್ಸೆಪ್ಟ್‌ ಹುಡುಕುತ್ತ ವಾಹಿನಿಯ ಒಂಬತ್ತು ಜನರು ಹೊರಡುತ್ತಾರೆ. ಯಾವುದೋ ಸ್ವಾಮೀಜಿ ಹೇಳಿದರು ಎಂದು ಮೊದಲು ಎದುರಾಗುವ ವ್ಯಕ್ತಿಯ ಹಿಂದೆ ಕ್ಯಾಮೆರಾ ಹಿಡಿದು ಹಿಂಬಾಲಿಸುತ್ತಾರೆ. ಟಿ.ವಿ. ವಾಹಿನಿಯವರು ಇಷ್ಟು ಪೆದ್ದುಗಳಾ? ಸಂಜೆ ಪ್ರಾರಂಭವಾಗುವ ಕಾರ್ಯಕ್ರಮಕ್ಕೆ ಬೆಳಿಗ್ಗೆ ಕಾನ್ಸೆಪ್ಟ್‌ ಹುಡುಕಿಕೊಂಡು ಹೊರಡುತ್ತಾರಾ? ಎಂಬೆಲ್ಲ ಪ್ರಶ್ನೆಗಳು ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಕಾಡುತ್ತದೆ. ಆದರೆ, ನಿರ್ದೇಶಕರಿಗಲ್ಲ.

ಸಿನಿಮಾದ ಆರಂಭದಲ್ಲಿ ಇದೊಂದು ಹಾರರ್ ಸಿನಿಮಾ ಆಗಿರಬಹುದೇನೋ ಎಂಬ ಭಾವ ಹುಟ್ಟಿಸಲು ನಿರ್ದೇಶಕರು ನಡೆಸುವ ಕಸರತ್ತುಗಳು, ಅಪಕ್ವ ಕಲಾವಿದರು, ಅಸಂಬದ್ಧ ಸನ್ನಿವೇಶಗಳು ಕಾರಣವಾಗುತ್ತವೆ. ಆದರೆ, ಇದೊಂದು ಹಾಸ್ಯಾತ್ಮಕ ಚಿತ್ರ ಎಂದು ನಂಬಿಕೊಂಡು ಸಹಿಸಿಕೊಳ್ಳುವ ಅವಕಾಶವನ್ನೂ ನಿರ್ದೇಶಕರು ನೀಡದೆ ನೋಡುಗರನ್ನು ‘ಗಂಭೀರ ಪರಿಸ್ಥಿತಿ’ಗೆ ದೂಡುತ್ತಾರೆ.

ನಾಯಕ ಆಜನ್ಮ ಬ್ರಹ್ಮಚಾರಿ ಆಗಿರುವ ಶಪಥ ಮಾಡಿರುವವ. ಪೇಟೆಗೆ ಹೋಗುವ ದಾರಿಯಲ್ಲಿ ಅವನಿಗೆ ಒಬ್ಬಳು ಹುಡುಗಿ ಸಿಗುತ್ತಾಳೆ. ಅವಳು ಮಹಾಮೌನಿ. ಇವನೋ ಕೇಳಿಸಿಕೊಳ್ಳುವವರಿಗೂ ಉಸಿರೆಳೆದುಕೊಳ್ಳಲು ಅವಕಾಶ ಕೊಡದಷ್ಟು ಮಾತಿನ ಮಳೆ ಸುರಿಸುತ್ತಲೇ ಇರುತ್ತಾನೆ. ಅವರಿಬ್ಬರ ಪೇಟೆ ಪಯಣದ ಕಡುಕಷ್ಟದ ಕಥೆಯನ್ನು ನೋಡುತ್ತ ಆದ ಗಾಯಕ್ಕೆ, ಉದ್ದಮಂಡೆಯ ಖಳ, ಟಿ.ವಿ. ವಾಹಿನಿಯವರ ಅಸಂಬದ್ಧ ಪ್ರಲಾಪಗಳನ್ನು ಕಾಣಿಸುವುದರ ಮೂಲಕ ಉಪ್ಪು ಸವರುವ ಕೆಲಸವನ್ನೂ ಮಾಡುತ್ತಾರೆ.

ಸಂಭಾಷಣೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಚುರುಕುತನವೂ ಜಡಿಮಳೆಗೆ ಸಿಕ್ಕ ಹಕ್ಕಿಕೂಗಿನಂತೆ ಕೊಚ್ಚಿಹೋಗುತ್ತದೆ. ಮಧ್ಯಂತರದ ವೇಳೆಗೆ ಖಳನಟನ ಕಿರುಚುವಿಕೆಯಲ್ಲಿ ಕಾಣುವ ಅಸಹನೆ ನೋಡುವವರ ಮನಸ್ಸಿನಲ್ಲಿಯೂ ಮಡುಗಟ್ಟತೊಡಗುತ್ತದೆ. ದ್ವಿತೀಯಾರ್ಧದಲ್ಲಿ ಅದು ಹೆಚ್ಚುತ್ತಲೇ ಹೋಗುತ್ತದೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಈ ಕಥೆ ‘ದಿನವೊಂದು ಯುಗ’ವಾದ ಅನುಭವ ನೀಡುತ್ತದೆ. ಈ ಚಿತ್ರದ ಕಥೆ ಇರುವುದು ಕೊನೆಯ ಹದಿನೈದು ನಿಮಿಷಗಳಲ್ಲಿ. ಆ ಹದಿನೈದು ನಿಮಿಷಗಳಿಗಾಗಿ ಉಳಿದ ಸಮಯವನ್ನು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟ. ತಾರಖ್‌ ಪೊನ್ನಪ್ಪ ಅವರ ಬಡಬಡ ಮಾತಿಗಿಂತ ಸ್ವರೂಪಿಣಿ ಮೌನವೇ ಹೆಚ್ಚು ಇಷ್ಟವಾಗುತ್ತದೆ. ಉಳಿದವರ ಅಭಿನಯದ ಬಗ್ಗೆ ಹೇಳುವುದೇನೂ ಇಲ್ಲ. ಸಡಿಲವಾದ ಚಿತ್ರಕಥೆ, ಕೆಲವು ಕಡೆಗಳಲ್ಲಿ ಆಕ್ಟ್ರೆಸ್ಟ್ರಾ ನೆನಪಿಸುವ ಹಿನ್ನೆಲೆ ಸಂಗೀತ, ಕಥೆಯನ್ನು ಅನಗತ್ಯ ಲಂಬಿಸಿರುವುದು, ತಾಂತ್ರಿಕ ಬಡತನ - ಹೀಗೆ ಈ ಚಿತ್ರದ ವೈಫಲ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು. ಎರಡು ಹಾಡುಗಳು ಕೊಂಚ ಸಹನೀಯ.

ಚಿತ್ರದ ದೃಶ್ಯವೊಂದರಲ್ಲಿ ನಾಯಕಿ ನಾಯಕನನ್ನು ಉದ್ದೇಶಿಸಿ ತನ್ನಲ್ಲೇ ಆಡಿಕೊಳ್ಳುವ ಮಾತೊಂದು ಪ್ರೇಕ್ಷಕನಿಗೆ ನೀಡುವ ಎಚ್ಚರಿಕೆಯಂತೆಯೂ ಭಾಸವಾಗುತ್ತದೆ. ಆ ಮಾತು ಹೀಗಿದೆ: ‘ನೀವು ಬಲಿಯಾಗಬಾರ್ದು... ನೀವು ಚೆನ್ನಾಗಿರ್ಬೇಕು. ಚೆನ್ನಾಗಿರ್ಬೇಕು...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.