ADVERTISEMENT

ಸೌಂದರ್ಯದ ಚೌಕಟ್ಟಿನಲ್ಲಿ ತಲ್ಲಣದ ಮೆರವಣಿಗೆ

ವಿಶಾಖ ಎನ್.
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಚಿತ್ರ: ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ

ಆಧುನಿಕ ಸಮಾಜದ ಬದಲಾದ ಕೌಟುಂಬಿಕ ತಲ್ಲಣವನ್ನು ಅತಿ ಸುಂದರವಾಗಿ ತೋರಿಸಿರುವ ಚಿತ್ರ `ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ~. ಹೊಸತಿಗಾಗಿ ಉದ್ದುದ್ದ ಕೈಚಾಚಿರುವ ನಿರ್ದೇಶಕ ರವೀಂದ್ರ ಅವರ ಶ್ರಮ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಚಿತ್ರಕಥೆಯ ಹೆಣಿಗೆಯಲ್ಲಿ ಅವರು ಅನುಕೂಲಸಿಂಧುವಾದರೂ ಅಂದುಕೊಂಡಿದ್ದನ್ನು ತೆರೆಮೇಲೆ ಮೂಡಿಸಿರುವುದರಲ್ಲಿ ವೃತ್ತಿಪರತೆ ಎದ್ದು ಕಾಣುತ್ತದೆ.

ಈ ಚಿತ್ರ ಬಿಡುಗಡೆಗೆ ಮೊದಲು ವಿವಾದಗಳಿಂದ ಸುದ್ದಿಯಾಗಿತ್ತು. ನಾಯಕ-ನಾಯಕಿ ನಡುವೆ ಬಿಸಿಬಿಸಿ ದೃಶ್ಯಗಳಿವೆ ಎಂಬ ಪುಕಾರಿತ್ತು. ನಾಯಕಿ ಕೂಡ ಈ ಅಭಿಪ್ರಾಯದಿಂದ ಬೇಸತ್ತಿರುವುದಾಗಿ ಪ್ರತಿಕ್ರಿಯಿಸಿದ್ದರು. ಈ ತಕರಾರುಗಳೆಲ್ಲಾ ಪ್ರಚಾರದ ಗಿಮಿಕ್ಕೇ ಹೌದೆಂಬುದನ್ನು ಚಿತ್ರ ಸಾಬೀತುಪಡಿಸುತ್ತದೆ.

ಚಿತ್ರದ ಕಥೆಯ ಎಳೆ ತೆಳುವಾದದ್ದು. ಒಂದು ಭಾವನಾತ್ಮಕ ಹೆಣಗಾಟವನ್ನು ಅದರಲ್ಲಿ ಸೇರಿಸಿ ನಿರ್ದೇಶಕರು ಕಥಾನಕಗಳನ್ನು ಹಿಗ್ಗಿಸುತ್ತಾ ಹೋಗಿದ್ದಾರೆ. ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಉಜ್ಜುತ್ತಾ ಹೋಗುವ ಅವರು ಕಥಾನಕಗಳನ್ನು ಊಹಾತೀತವಾಗಿ ಬೆಳೆಸಿದ್ದಾರೆ. ಚಿತ್ರದ ಗೆಲುವು ಇರುವುದೇ ಈ ಸಣ್ಣ ಸಸ್ಪೆನ್ಸ್‌ನಲ್ಲಿ.

ನಾಯಕ-ನಾಯಕಿ ಸಂಸಾರ ಹೂಡುವವರೆಗೆ ಮಾಮೂಲಿ ಧಾಟಿಯಲ್ಲಿ ಸಾಗುವ ಚಿತ್ರ ತಿರುವು ಪ್ರಾಪ್ತಿಯಾದ ನಂತರ ಸಂಪೂರ್ಣವಾಗಿ ಕ್ಲೈಮ್ಯಾಕ್ಸ್ ಎಂಬಂತೆಯೇ ಮೂಡಿದೆ. ಯಾವ ಹಂತದಲ್ಲಿ ಬೇಕಾದರೂ ಮುಗಿಸಬಹುದಾದ ಸಿನಿಮಾವನ್ನು ಅಷ್ಟು ಲಂಬಿಸಲು ಅನುಕೂಲಸಿಂಧುತ್ವದ ಜೊತೆಗೆ ಜಾಣತನವೂ ಬೇಕಿದೆ. ಅದು ತಮಗಿದೆ ಎಂಬುದನ್ನು ನಿರ್ದೇಶಕರು ರುಜುವಾತು ಪಡಿಸಿದ್ದಾರೆ.

ದೃಶ್ಯ ಸಂಯೋಜನೆಯ ಅದ್ದೂರಿತನದಲ್ಲಿ `ಐ ಆಮ್ ಸಾರಿ~ ಬಾಲಿವುಡ್‌ಗೆ ಸರಿಸಮಾನವಾಗಿ ನಿಲ್ಲುತ್ತದೆ. ಸುಂದರವಾದ ನಾಯಕ, ಅತಿ ಸುಂದರಿ ನಾಯಕಿ, ಸೊಗಸಾದ ಮನೆ ಹೀಗೆ ಸೌಂದರ್ಯದ ಚೌಕಟ್ಟಿನಲ್ಲೇ ತಲ್ಲಣದ ಮೆರವಣಿಗೆಯನ್ನೂ ರವೀಂದ್ರ ಮಾಡಿಸಿದ್ದಾರೆ. ಆಧುನಿಕ ಸಮಾಜದ ಯಾವುದೇ ಗಂಡ-ಹೆಂಡತಿಯ ಮನದಲ್ಲಿ ಕಟ್ಟಬಹುದಾದ ಅನುಮಾನದ ಹುತ್ತದ ದರ್ಶನ ಚಿತ್ರದಲ್ಲಿದೆ. ನಾಯಕನ ಅನುಮಾನಕ್ಕೆ ಉತ್ತರವನ್ನೇ ನೀಡದ ಅಂತ್ಯ ಕೂಡ ಹೊಸತನದ್ದು.

ಬೋರ್ ಹೊಡೆಸಬಹುದಾದ ಕಥಾನಕಗಳು ದೃಶ್ಯ ವೈಭವದಿಂದಾಗಿ ಕಣ್ಸೆಳೆಯುತ್ತವೆ. ಬದುಕಿನ ತಾಕಲಾಟವನ್ನು ಮುಗುಮ್ಮಾದ ತತ್ವಜ್ಞಾನದ ನೆಲೆಗಟ್ಟಿನಲ್ಲಿ ಹೇಳುವ ಭಿಕ್ಷುಕನ ಪಾತ್ರದಲ್ಲೂ ವಿಶೇಷತೆ ಇದೆ. ಚಿತ್ರದುದ್ದಕ್ಕೂ ಹಾಡುಗಳು ಮೂಡುತ್ತಲೇ ಹೋಗುತ್ತವೆ. ಒಂದು ಹಾಡಿನಂತೆ ಇನ್ನೊಂದು ಇಲ್ಲದಿರುವುದು ಅನೂಪ್ ಸೀಳಿನ್ ಸಾಮರ್ಥ್ಯಕ್ಕೆ ಸಾಕ್ಷಿ. ಸಿದ್ಧ ಮಾದರಿಯ ಹಾಡುಗಾರಿಕೆಯನ್ನು ಮೀರಿ ಅವರು ಹೊಸಕಂಠಗಳನ್ನು ಕೇಳಿಸಿದ್ದಾರೆ. ಅತಿ ಸುಂದರ ಒಳಾಂಗಣಗಳು, ಅರ್ಥಪೂರ್ಣ ಭಾವಲೋಕ ಎರಡನ್ನೂ ಅಶೋಕ್ ಕಶ್ಯಪ್ ಕ್ಯಾಮೆರಾ ತೋರಿಸಿದೆ. ಗುರುಪ್ರಸಾದ್ ಬರೆದಿರುವ ಮಾತುಗಳು ಔಚಿತ್ಯಪೂರ್ಣ.

ಚಿತ್ರದ ದೊಡ್ಡ ಅಚ್ಚರಿ ನಾಯಕಿ ಕರಿಷ್ಮಾ ತನ್ನಾ. ಕಿರುತೆರೆಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಇರುವ ಅವರು ಇಲ್ಲಿ ತಮ್ಮ ದಿವ್ಯ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸೌಂದರ್ಯ, ಭಾವಾಭಿನಯ ಎರಡರಲ್ಲೂ ಅವರನ್ನು ಮೆಚ್ಚಿಕೊಳ್ಳದಿರಲು ಕಾರಣಗಳೇ ಸಿಗುವುದಿಲ್ಲ. ನಾಯಕ ಪ್ರೇಮ್ ಪಾಲಿಗೆ ಈ ಅವಕಾಶ ಎರಡನೇ ಇನಿಂಗ್ಸ್. ಅವರೂ ಇದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಅಭಿನಯದಲ್ಲಿ ತುಸು ಹಿಂದುಳಿಯುವ ಸಂಜನಾ ಅವರಿಗೂ ಅಪರೂಪದ ಪಾತ್ರ ಸಿಕ್ಕಿದೆ. ಎಂದಿನಂತೆ ಮಾತಿನ ಮಲ್ಲನಾಗಿ ತಬಲಾ ನಾಣಿ ಗಮನ ಸೆಳೆಯುತ್ತಾರೆ.
ಸೂತ್ರ ಹರಿಯುವ ಮನಸ್ಸಿನವರ ಸಾಲಿನಲ್ಲಿ ಕಾಣುವ ನಿರ್ದೇಶಕ ರವೀಂದ್ರ ಅವರ ಕುರಿತು ಮೆಚ್ಚುಗೆ ಮೂಡಲು ಇಷ್ಟು ಕಾರಣಗಳು ಸಾಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.