ADVERTISEMENT

ಪ್ರೇಮದ ಬಟ್ಟಲಲ್ಲಿ ಹಲಬಗೆಯ ಖಾದ್ಯಗಳು

ಪದ್ಮನಾಭ ಭಟ್ಟ‌
Published 9 ಫೆಬ್ರುವರಿ 2018, 16:16 IST
Last Updated 9 ಫೆಬ್ರುವರಿ 2018, 16:16 IST
ಐಶ್ವರ್ಯಾ ಮತ್ತು ಚಂದನ್‌
ಐಶ್ವರ್ಯಾ ಮತ್ತು ಚಂದನ್‌   

ಸಿನಿಮಾ: ಪ್ರೇಮ ಬರಹ

ನಿರ್ಮಾಣ: ನಿವೇದಿತಾ ಅರ್ಜುನ್‌

ನಿರ್ದೇಶನ: ಅರ್ಜುನ್‌ ಸರ್ಜಾ

ADVERTISEMENT

ತಾರಾಗಣ: ಐಶ್ವರ್ಯಾ ಅರ್ಜುನ್‌, ಚಂದನ್‌, ಸಾಧುಕೋಕಿಲ, ಜಹಾಂಗೀರ್‌, ಸುಹಾಸಿನಿ, ಪ್ರಕಾಶ್‌ ರೈ

**

ಚಟಪಟ ಮಾತಾಡುವ ಹುಡುಗಿ, ರಸ್ತೆ, ಓಣಿ, ಮನೆ, ಕಿಟಕಿ, ಟೆರೇಸುಗಳ ಮೇಲೆಲ್ಲ ಸೂಪರ್‌ಮ್ಯಾನ್‌ ರೀತಿಯಲ್ಲಿ ಜಿಗಿಯುತ್ತ ಖಳರಿಂದ ತಪ್ಪಿಸಿಕೊಳ್ಳುವ ಚುರುಕು ಹುಡುಗ, ಜತೆಗೆ ನೆಂಚಿಕೊಳ್ಳಲು ಒಂದಿಷ್ಟು ಹೊಸತೆನಿಸುವ ಹಾಸ್ಯ, ಮತ್ತಿಷ್ಟು ಭಾವುಕತೆ, ನಾಯಕ ನಾಯಕಿಯರ ಮಧ್ಯೆ ಮಜಕೊಡುವ ಜಗಳ... ಈ ಎಲ್ಲವೂ ಈಗಾಗಲೇ ಯಾವ್ಯಾವುದೋ ಸಿನಿಮಾಗಳಲ್ಲಿ ನೋಡಿದಂಥವೇ. ‘ಇನ್ನೇನು ಆ ಹುಸಿಜಗಳವೇ ಪ್ರೀತಿಯಾಗಿ ಬದಲಾಗುತ್ತದೆ, ವಿಧಿ ಅವರ ಪ್ರೇಮಕ್ಕೆ ಅಡ್ಡಗಾಲಾಗುತ್ತದೆ. ಕೊನೆಯಲ್ಲಿ ಅಡೆತಡೆ ದಾಟಿ ಒಂದಾಗುತ್ತಾರೆ’ ಎಂದು ಸುಲಭವಾಗಿ ಊಹಿಸುವಷ್ಟು ಈ ಬಗೆಯ ಕಥೆಗಳು ಈಗಾಗಲೇ ಬಂದು ಹೋಗಿವೆ.

ಈ ಚಿತ್ರದಲ್ಲಿಯೂ ಹಾಗೆಯೇ ಆಗುತ್ತದೆ. ಆದರೆ ಆ ಸಾರ್ವತ್ರಿಕ ಎಳೆಯನ್ನು ಕೊಂಚ ಬಾಗಿಸಿ ದೇಶಭಕ್ತಿಯ ತಿರುವೊಂದನ್ನು ಇಟ್ಟು, ಇನ್ನೊಂದಿಷ್ಟು ಸುತ್ತಾಡಿಸಿ ತುದಿ ಮುಟ್ಟಿಸುತ್ತಾರೆ ನಿರ್ದೇಶಕ ಅರ್ಜುನ್‌ ಸರ್ಜಾ. ಮಗಳನ್ನು ಸಾಮಾನ್ಯ ಪ್ರೇಮಕಥೆಯ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯಿಸಬಾರದು ಎಂಬ ಅವರ ಎಚ್ಚರ ಕಥೆಯ ಆಯ್ಕೆ ಮತ್ತು ನಿರೂಪಣೆಯ ಹೆಣಿಗೆಯಲ್ಲಿಯೇ ಎದ್ದು ಕಾಣುತ್ತದೆ.

ಒಂದೇ ತಟ್ಟೆಯಲ್ಲಿ ಹಲಬಗೆಯ ಖಾದ್ಯಗಳನ್ನು ಇಟ್ಟುಕೊಡುವ ತಂತ್ರವನ್ನು ಅವರು ಅನುಸರಿಸಿದ್ದಾರೆ. ಆದರೆ ಆ ಖಾದ್ಯಗಳ ನಡುವೆ ಸಾವಯವ ಸಂಬಂಧವೇ ಇಲ್ಲದೆ ಊಟ ಸಾಧಾರಣ ಎನಿಸಿಬಿಡುತ್ತದೆ. ಮೊದಲರ್ಧದಲ್ಲಿ ತಮಾಷೆ, ತುಂಟತನ, ಥ್ರಿಲ್‌ ಹುಟ್ಟಿಸುವ ಸ್ಟಂಟ್‌ಗಳು, ತಾರಾಹೊಳಪಿಗಾಗಿಯೇ ತೂರಿಸಿದ ಹಾಡು, ನಗಿಸಬಲ್ಲ ಸಾಧುಕೋಕಿಲ, ಜಹಾಂಗೀರ್‌, ಕುರಿಪ್ರತಾಪ್‌ ಹಾಸ್ಯ ಜುಗಲ್‌ಬಂದಿ, ತಾತ, ಮೊಮ್ಮಗಳ ಭಾವುಕ ಸಂಬಂಧ ಇವುಗಳಿಂದ ನೋಡಿಸಿಕೊಳ್ಳುವ ಸಿನಿಮಾ ದ್ವಿತೀಯಾರ್ಧದಲ್ಲಿ ನೇರ ಕಾರ್ಗಿಲ್‌ ಯುದ್ಧಭೂಮಿಗೆ ಜಿಗಿಯುತ್ತದೆ. ನಾಯಕ ನಾಯಕಿ ಹೊರತುಪಡಿಸಿ ಅದುವರೆಗೆ ಇದ್ದ ಉಳಿದೆಲ್ಲ ಪಾತ್ರಗಳೂ ಹಿನ್ನೆಲೆಗೆ ಸರಿದುಬಿಡುತ್ತವೆ. ಅಲ್ಲಿಯೂ ಭಾವುಕ ದೇಶಭಕ್ತಿ ಹುಟ್ಟಿಸುವ ಸೈನಿಕರ ಬಿಡಿ ಕಥೆಗಳು, ಯುದ್ಧದ ಸನ್ನಿವೇಶಗಳನ್ನು ಒಂದರ ಪಕ್ಕ ಇನ್ನೊಂದು ಪೋಣಿಸಿಕೊಂಡು ಹೋಗಲಾಗಿದೆ. ಅವೂ ಕೃತಕವಾಗಿವೆ.

ಕಥೆ ನಡೆಯುವುದು 1999ರಲ್ಲಿ. ಆಗ ಕನ್ನಡದಲ್ಲಿ ಖಾಸಗಿ ಸುದ್ದಿ ವಾಹಿನಿಗಳೇ ಇರಲಿಲ್ಲ. ಆದರೆ ಕಥಾ ನಾಯಕ– ನಾಯಕಿ ಪ್ರತ್ಯೇಕ ಸುದ್ದಿವಾಹಿನಿಗಳ ಪ್ರತಿನಿಧಿಗಳಾಗಿ ನೇರ ವರದಿ ಮಾಡಲು ಕಾರ್ಗಿಲ್‌ಗೆ ತೆರಳುತ್ತಾರೆ. ಅಲ್ಲಿ ಲೀಲಾಜಾಲವಾಗಿ ಸಿಡಿಯುತ್ತಿರುವ ಬಾಂಬುಗಳ ಎದುರೇ ನಿಂತು ವರದಿ ನೀಡುತ್ತಾರೆ.  ಪ್ರೇಮಗೀತೆಗಳಲ್ಲಿ ಕಾಣುವ ಹಿಮದ ರಾಶಿಗಳು, ಮೈನಸ್‌ 23 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಇರುವ ಯುದ್ಧಕ್ಷೇತ್ರದಲ್ಲಿ ಕಾಣುವುದಿಲ್ಲ!

ಹೀಗೆ ಸರಳ ತರ್ಕಗಳನ್ನು ಇಟ್ಟುಕೊಂಡು ನೋಡಿದರೆ ಸಿನಿಮಾದ ಹಲವು ದೃಶ್ಯಗಳು ಬಾಲಿಶ ಅನಿಸುತ್ತವೆ. ಬಿಡಿ ಸನ್ನಿವೇಶಗಳ ಮೂಲಕವೇ ಕಟ್ಟಿಕೊಳ್ಳಲು ಹೊರಡುವ ಈ ಸಿನಿಮಾ ಇಡಿ ಅನುಭವವನ್ನು ನೀಡುವಲ್ಲಿ ಸೋಲುತ್ತದೆ. ಆದರೆ ಅರ್ಜುನ್‌ ಸರ್ಜಾ ಅವರ ಸಿನಿಮಾ ಅನುಭವದ ಕಾರಣಕ್ಕೋ ಏನೋ, ತೀರಾ ಬೋರ್‌ ಹೊಡೆಸದೆ ನೋಡಿಸಿಕೊಳ್ಳುವ ಗುಣವನ್ನೂ ಹೊಂದಿದೆ.

ಡಾನ್ಸ್‌ನಲ್ಲಿಯೂ, ಹೊಡೆದಾಟದಲ್ಲಿಯೂ, ನಟನೆಯಲ್ಲಿಯೂ ಚಂದನ್‌ ಗಮನ ಸೆಳೆಯುತ್ತಾರೆ. ಮೊದಲರ್ಧಕ್ಕೆ ಹೋಲಿಸಿದರೆ ಐಶ್ವರ್ಯಾ ಅರ್ಜುನ್‌ ದ್ವಿತೀಯಾರ್ಧದಲ್ಲಿಯೇ ಹೆಚ್ಚು ಉತ್ತಮವಾಗಿ ನಟಿಸಿದ್ದಾರೆ. ಒಂದೇ ದೃಶ್ಯದಲ್ಲಿ ಬಂದು ಹೋಗುವ ಪ್ರಕಾಶ್‌ ರೈ ತೆರೆಯ ಮೇಲೂ ಮನಸ್ಸಿನಲ್ಲಿಯೂ ಆವರಿಸಿಕೊಂಡು ಬಿಡುತ್ತಾರೆ. ಸನ್ನಿವೇಶಗಳ ಹಾಗೆಯೇ ಸಾಧುಕೋಕಿಲ ಹಿನ್ನೆಲೆ ಸಂಗೀತವೂ ಹಲವು ಸಿನಿಮಾಗಳನ್ನು ನೆನಪಿಸುತ್ತದೆ. ಜೆಸ್ಸಿ ಗಿಫ್ಟ್‌ ಸಂಯೋಜನೆಯ ಒಂದು ಹಾಡನ್ನು ಗುನುಗಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.