ಅದು ಹುಡುಗರ ಗ್ಯಾಂಗ್. ಪ್ರೀತಿಸಿ ಓಡಿಹೋಗುವವರಿಗೆ ಸಹಾಯ ಹಸ್ತ ಒದಗಿಸುವ ಗೆಳೆಯರ ಬಳಗವದು. ಈ ಗ್ಯಾಂಗ್ ಪ್ರೀತಿಸಿದ ಜೋಡಿಯೊಂದು ಊರು ಬಿಟ್ಟು ಪರಾರಿಯಾಗಲು ಸಹಾಯ ಮಾಡುತ್ತದೆ ಎಂಬ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಈ ದೃಶ್ಯಕ್ಕೆ ಸಿನಿಮಾದೊಂದಿಗೆ ಸಂಬಂಧವಿದೆ ಎಂದು ತಿಳಿಯುವ ಹೊತ್ತಿಗೆ ಮೊದಲಾರ್ಧ ಮುಗಿದಿರುತ್ತದೆ. ಸಹಾಯ ಮಾಡಿದ್ದು ಚಿತ್ರದ ನಾಯಕ ಅರುಣನ ಗ್ಯಾಂಗ್. ಆದರೆ ಬೇರೆ ಪ್ರೇಮಿಗಳಿಗೆ ಸಹಾಯ ಮಾಡುವ ಈತನದ್ದೇ ಒಂದು ದುರಂತ ಪ್ರೇಮಕಥೆ.
ಪ್ರಾಥಮಿಕ ಶಾಲೆಯಲ್ಲಿಯೇ ಪ್ರೀತಿಯ ಬಲೆಗೆ ಬಿದ್ದವನು ಅರುಣ. ಮೂರನೆ ತರಗತಿಯಲ್ಲಿಯೇ ಸಹಪಾಠಿ ಕಾವ್ಯಾ ಜೊತೆ ಒಂದು ಆಕರ್ಷಣೆ ಬೆಳೆದಿರುತ್ತದೆ. ತಂದೆಯ ವರ್ಗಾವಣೆಯಿಂದ ಆ ಊರು ಬಿಟ್ಟ ಈತನಿಗೆ ಆಕೆ ಸಿಗುವುದೇ ಇಲ್ಲ. ಇವಿಷ್ಟು ಹಿನ್ನೆಲೆಯಲ್ಲಿ ಬರುತ್ತದೆ. ಈಗ ಅರುಣ ಮದುವೆ ವಯಸ್ಸಿಗೆ ಬಂದಿದ್ದಾನೆ. ಮನೆಯಲ್ಲಿ ಮದುವೆ ಒತ್ತಡ ಹೆಚ್ಚಾಗಿದೆ. ಆದರೆ ಈತ ಮಾತ್ರ ಕಾವ್ಯಾ ಸಿಗುತ್ತಾಳೆಂದು ಹುಡುಕುತ್ತಲೇ ಇದ್ದಾನೆ. ಮೊದಲಾರ್ಧ ಮುಗಿಯುವ ತನಕವೂ ಹುಡುಕುತ್ತಲೇ ಇರುತ್ತಾನೆ! ನಿರ್ದೇಶಕರು ಬಹಳ ಸಣ್ಣ ಎಳೆಯನ್ನು ಇಟ್ಟುಕೊಂಡು ಧಾರಾವಾಹಿ ರೀತಿಯಲ್ಲಿ ಹಿಗ್ಗಿಸಿದ್ದಾರೆ. ಹೀಗಾಗಿ ಇಡೀ ಪ್ರೇಮ ಪಯಣ ಪೇಲವ ಎನ್ನಿಸುತ್ತದೆ.
ಚಿತ್ರದಲ್ಲಿ ಇರುವುದೇ ನಾಲ್ಕಾರು ಪಾತ್ರಗಳು. ಎಲ್ಲವೂ ಅಲ್ಲಲ್ಲೇ ಗಿರಕಿ ಹೊಡೆದು ಸಾಕಷ್ಟು ಕಡೆ ನೋಡುಗನ ತಾಳ್ಮೆ ಕೆಡುತ್ತದೆ. ಎರಡು ಮಕ್ಕಳು, ಶಾಲೆ, ಅರುಣ ಮತ್ತು ಕಾವ್ಯಾಳ ಬದುಕು, ಬಳ್ಳಾರಿ ಸುತ್ತಲಿನ ಪರಿಸರ, ಜನಜೀವನ ಇಟ್ಟುಕೊಂಡು ಬಯಲು ಸೀಮೆಯ ನವೀರಾದ ಪ್ರೇಮಕಥೆಯನ್ನು ಹೆಣೆಯುವ ಅವಕಾಶ ನಿರ್ದೇಶಕರಿಗಿತ್ತು. ಆದರೆ ಭಾಷೆಯೊಂದರ ಹೊರತಾಗಿ ಮತ್ತೆಲ್ಲಿಯೂ ಈ ಚಿತ್ರ ಬಯಲು ಸೀಮೆಯಲ್ಲಿ ನಡೆಯುತ್ತಿದೆ ಎಂಬ ಭಾವನೆ ಮೂಡಿಸುವುದೇ ಇಲ್ಲ. ಬಹುತೇಕ ದೃಶ್ಯಗಳು ಧಾರಾವಾಹಿಯ ಅನುಭವ ನೀಡುತ್ತವೆ.
ಅರುಣನಾಗಿ ಹರಿಶರ್ವಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆತನ ಗೆಳೆಯನಾಗಿ ಧರ್ಮಣ್ಣ ಕಡೂರು ಅಲ್ಲಲ್ಲಿ ನಗಿಸುತ್ತಾರೆ. ಆದರೆ ಹಲವೆಡೆ ಬಲವಂತವಾಗಿ ನಗಿಸುವ ಯತ್ನಗಳು ಕಿರಿಕಿರಿ ಮೂಡಿಸುತ್ತವೆ. ನಾಯಕಿಯರು ನಟನೆಯಲ್ಲಿ ಇನ್ನಷ್ಟು ಪಳಗಬೇಕಿತ್ತು. ನಾಯಕನ ತಂದೆಯಾಗಿ ಬಲ ರಾಜವಾಡಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ, ಛಾಯಾಚಿತ್ರಗ್ರಹಣದಲ್ಲಿಯೂ ಹೊಸತನವೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.