ಸಿನಿಮಾದುದ್ದಕ್ಕೂ ಬಗೆಬಗೆಯ ಪ್ರಮಾಣದಲ್ಲಿ ಪರದೆಯ ಬಳಕೆ, ತೆರೆ ತುಂಬಾ ಬಣ್ಣದೋಕುಳಿ, ಬೆಳಕಿನೋಕುಳಿ. ಸಂದರ್ಭಕ್ಕನುಗುಣವಾಗಿ ಹಿನ್ನೆಲೆಯಲ್ಲಿ ಹಳೆಯ ಹಾಡುಗಳು, ಮಿತವಾದ ಸಂಗೀತ, ಕಣ್ಣಿಗೆ ಹಿತವಾದ ಛಾಯಾಚಿತ್ರಗ್ರಹಣ... ಹೀಗೆ ಭಿನ್ನವಾದ ಪ್ರಸ್ತುತಿಯಲ್ಲಿ ವಂಶಿ ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ ‘ಫೈರ್‌ಫ್ಲೈ’ ಅನ್ನು ತೆರೆಗೆ ತಂದಿದ್ದಾರೆ.
ವಿವೇಕಾನಂದ ಅಪ್ಪ–ಅಮ್ಮನ ಪ್ರೀತಿಯ ವಿಕ್ಕಿ(ವಂಶಿ). ವಿದೇಶದಲ್ಲಿ ಓದುತ್ತಿದ್ದಾತ ನಾಲ್ಕು ವರ್ಷಗಳ ಬಳಿಕ ತನ್ನೂರಾದ ಮೈಸೂರಿಗೆ ಮರಳಿದ್ದಾನೆ. ಆತನನ್ನು ಸ್ವಾಗತಿಸಲು ಅಪ್ಪ–ಅಮ್ಮ(ಅಚ್ಯುತ್ ಕುಮಾರ್–ಸುಧಾರಾಣಿ) ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಮರಳುವ ವೇಳೆ ನಡೆಯುವ ಘಟನೆಯೊಂದು ರಿಕ್ಕಿಗೆ ಆಘಾತ ತರುತ್ತದೆ. ಆತ ಅಲ್ಲಿಂದ ವಿಕ್ಕಿ ಖಿನ್ನತೆಗೆ ಜಾರುತ್ತಾನೆ, ನಿದ್ರಾಹೀನನಾಗುತ್ತಾನೆ. ಇದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಚಿತ್ರದ ಕಥೆ.
ಹೀಗೆ ಕಥೆಯ ಎಳೆ ಸರಳವಾಗಿದೆ. ಆದರೆ ಇದನ್ನು ಒಂದು ಭಿನ್ನವಾದ ರೀತಿಯ ಚಿತ್ರಕಥೆಯಲ್ಲಿ ವಂಶಿ ಪ್ರಸ್ತುತಪಡಿಸಿದ್ದಾರೆ. ಚಿತ್ರಕಥೆಯ ಆಲೋಚನೆಯೇ ವಿಭಿನ್ನವಾಗಿದೆ. ಕೌನ್ಸಿಲಿಂಗ್ ಸಂದರ್ಭದಲ್ಲಿ ವಂಶಿ ತನ್ನ ಜೀವನದ ಕಥೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ರೀತಿಯಲ್ಲಿ ಸಿನಿಮಾ ಕಥೆಯ ನಿರೂಪಣೆಯಿದೆ. ರಿವರ್ಸ್ ಸ್ಕ್ರೀನ್‌ಪ್ಲೇಯಿಂದ ಕಥೆ ಆರಂಭವಾಗುತ್ತದೆ. ವಿಕ್ಕಿ ಅನುಭವಿಸುತ್ತಿರುವ ನೋವನ್ನು ಮನರಂಜನಾತ್ಮಕವಾಗಿಯೇ ತೆರೆಗೆ ತರಲಾಗಿದೆ. ಆದರೆ ಹಲವೆಡೆ ದೃಶ್ಯಗಳು, ಪಾತ್ರಗಳು ಬಹಳ ಕೃತಕವಾಗಿ ಎನ್ನುವ ಭಾವನೆ ಮೂಡುತ್ತದೆ. ಅತಿಯಾದ ಕಾಳಜಿ ಹೊಂದಿರುವ ದೊಡ್ಡಪ್ಪ, ಸಂಬಂಧಿಕರ ಪಾತ್ರಗಳ ಬರವಣಿಗೆ ಹಾಗೂ ನಟನೆ ಕೃತಕವಾಗಿದೆ.
ವಂಶಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ನಟನೆಯಲ್ಲಿ ಅವರು ಪಳಗಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಹೆಚ್ಚಿನ ಅಂಕ ಗಿಟ್ಟಿಸುತ್ತಾರೆ. ಶ್ರೀವತ್ಸ ಅವರ ಪಾತ್ರವನ್ನು ಮತ್ತಷ್ಟು ಹಿಗ್ಗಿಸಿಕೊಳ್ಳಲು ಅವಕಾಶವಿತ್ತು. ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶಿವರಾಜ್‌ಕುಮಾರ್, ಮೂಗು ಸುರೇಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ‘ಇನ್ ದಿ ನೈಟ್..’ ಹಾಡು ಗುನುಗುನುಗುವಂತಿದೆ. ಚರಣ್‌ರಾಜ್ ಸಂಗೀತ ನಿರ್ದೇಶನ ಹಾಗೂ ಅಭಿಲಾಷ್ ಕಳತ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕೆ ಹೊಸ ರೂಪ ನೀಡಿದೆ.
ಇದು ನೋಡಬಹುದಾದ ಸಿನಿಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.