ADVERTISEMENT

ಗತವೈಭವ ಸಿನಿಮಾ ವಿಮರ್ಶೆ: ಸಿಂಪಲ್‌ ಸುನಿ ಕಟ್ಟಿದ ಸಂಕೀರ್ಣ ಕಥನವಿದು!

ಅಭಿಲಾಷ್ ಪಿ.ಎಸ್‌.
Published 14 ನವೆಂಬರ್ 2025, 9:55 IST
Last Updated 14 ನವೆಂಬರ್ 2025, 9:55 IST
<div class="paragraphs"><p>ಗತವೈಭವ</p></div>

ಗತವೈಭವ

   

2010ರಲ್ಲಿ ತೆರೆಕಂಡ ಹಾಲಿವುಡ್‌ನ ‘ಶಟರ್‌ ಐಲ್ಯಾಂಡ್‌’ ಮಿಥ್ಯಾದರ್ಶನವಿರುವ (ಭ್ರಾಂತಿ) ‘ಚಕ್‌’ ಎಂಬ ವ್ಯಕ್ತಿಯೊಬ್ಬನ ಕಥೆಯನ್ನು ಕಟ್ಟಿಕೊಟ್ಟ ಚಿತ್ರವಾಗಿತ್ತು. ‘ಚಕ್‌’ ತಾನೇ ಹೆಣೆದಿರುವ ಕಥಾಲೋಕದಲ್ಲಿ ಸಿಲುಕಿರುವಾತ. ಇದೇ ಮಾದರಿಯನ್ನನುಸರಿಸಿ ಪುನರ್ಜನ್ಮ, ಪ್ರೇಮಕಥೆಯ ವಿಷಯವಿಟ್ಟುಕೊಂಡು ಸಂಕೀರ್ಣವಾದ ಸಿನಿಮಾ ಹೆಣೆದು ತಮ್ಮ ‘ಚಾಕಚಕ್ಯತೆ’ ತೋರಿದ್ದಾರೆ ‘ಸಿಂಪಲ್‌’ ಖ್ಯಾತಿಯ ನಿರ್ದೇಶಕ ಸುನಿ. ಮೊದಲಾರ್ಧದಲ್ಲಿ ಕೊಂಚ ನಿಧಾನವಾಗಿ ಹರಿಯುವ ಈ ಸಿನಿಮಾ ದ್ವಿತೀಯಾರ್ಧದಲ್ಲಿ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ. 

ಪುರಾತನ್‌(ದುಷ್ಯಂತ್‌) ವಿಎಫ್‌ಎಕ್ಸ್‌ (ಗ್ರಾಫಿಕ್ಸ್‌) ಕಲಾವಿದ. ತನ್ನನ್ನೇ ಹೋಲುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಕಂಡಾಗ, ಆ ಚಿತ್ರ ಬಿಡಿಸಿದ ಯುವತಿ ಆಧುನಿಕಾಳ (ಆಶಿಕಾ ರಂಗನಾಥ್‌) ಸಂಪರ್ಕಕ್ಕೆ ಬರುತ್ತಾನೆ. ಇಲ್ಲಿಂದ ಪುನರ್ಜನ್ಮದ ಕಥೆಗಳು ತೆರೆದುಕೊಳ್ಳುತ್ತವೆ. 

ADVERTISEMENT

ಕಥೆಗಳಲ್ಲಿ ತಿರುವು ಸುನಿ ಬರವಣೆಗೆಯ ಟ್ರೇಡ್‌ ಮಾರ್ಕ್‌. ನಾಲ್ಕು ಕಥೆಗಳನ್ನು ಇಲ್ಲಿ ತೆರೆಗೆ ತಂದಿರುವ ಅವರು ಅವುಗಳನ್ನು ಜೋಡಿಸಿರುವ ರೀತಿ ಚೆನ್ನಾಗಿದೆ. ಮೊದಲಾರ್ಧದಲ್ಲಿನ ದೇವಲೋಕ ಮತ್ತು ಪೋರ್ಚುಗಲ್‌ ಕಥನಕ್ಕೆ ಕೊಂಚ ಕತ್ತರಿ ಹಾಕಬಹುದಿತ್ತು. ತಮ್ಮ ಗುರುತಾದ ಪಂಚಿಂಗ್‌ ಸಂಭಾಷಣೆಗಳನ್ನು ಅಲ್ಲಲ್ಲಿ ಪ್ರಯೋಗಿಸುತ್ತಾ, ನಗುವಿನ ಕಚಗುಳಿ ಇಡುತ್ತಾ, ಪ್ರಸ್ತುತವಿರುವ ವೈರಲ್‌ ಮೀಮ್‌ಗಳನ್ನು ಬಳಸುತ್ತಾ ಸಾಗಿದ್ದಾರೆ ಸುನಿ. ಸ್ವಾತಂತ್ರ್ಯಪೂರ್ವದ ‘ಕಂಬಳವೀರ ಶ್ರೀನಿವಾಸ’ನ ಕಥೆಯ ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಭಾವನಾತ್ಮಕವಾಗಿ ಕಟ್ಟಿಹಾಕುವಲ್ಲಿ ಈ ಭಾಗ ಹೆಚ್ಚು ಅಂಕ ಪಡೆಯುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕಥೆಗೆ ಬೇರೊಂದು ತಿರುವಿನ ಅಗತ್ಯವಿತ್ತು ಎಂದೆನಿಸುತ್ತದೆ.  

ದುಷ್ಯಂತ್‌ಗೆ ಇದು ಮೊದಲ ಸಿನಿಮಾವಾದರೂ ಅಳುಕಿಲ್ಲದೆ ತಮ್ಮನ್ನು ನಿರೂಪಿಸಿದ್ದಾರೆ. ನಟನೆಯಲ್ಲಿ ಭರವಸೆ ಮೂಡಿಸಿದ್ದಾರೆ. ‘ಕಂಬಳವೀರ ಶ್ರೀನಿವಾಸ’ನ ಪಾತ್ರದೊಳಗೆ ಜೀವಿಸಿದ್ದಾರೆ. ಇಡೀ ಸಿನಿಮಾದೊಳಗೆ ಆಶಿಕಾ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡು ಕಥೆಯನ್ನು ಹೊತ್ತು ಸಾಗಿದ್ದಾರೆ. ‘ಮಂಗಳ’ ಎನ್ನುವ ಪಾತ್ರದಲ್ಲಿನ ನಟನೆ ಉತ್ಕೃಷ್ಟವಾಗಿದೆ. ‘ಅವನೊಂತರ ಈ ಹ್ರಸ್ವಸ್ವರ..’ ಹಾಡು ಚೆನ್ನಾಗಿದೆ. ವಿಲಿಯಂ ಡೇವಿಡ್‌ ಛಾಯಾಚಿತ್ರಗ್ರಹಣ ಪೋರ್ಚುಗಲ್‌, ಕರಾವಳಿಯ ದೃಶ್ಯಗಳನ್ನು ಕಣ್ಣಿಗೆ ಕಟ್ಟಿದಂತಿದೆ.

–ಇದು ನೋಡಬಹುದಾದ ಚಿತ್ರ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.