ಸಿನಿಮಾ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ತಾರಾಗಣ: ರಾಜ್ ಬಿ. ಶೆಟ್ಟಿ, ಪ್ರಮೋದ್ ಶೆಟ್ಟಿ, ಕವಿತಾ ಗೌಡ
ನಿರ್ದೇಶನ: ಸುಜಯ್ ಶಾಸ್ತ್ರಿ
ನಿರ್ಮಾಣ: ಟಿ.ಆರ್. ಚಂದ್ರಶೇಖರ್
ದೀನ ವ್ಯಕ್ತಿಯನ್ನು ಬಲಾಢ್ಯನೊಬ್ಬ ತನ್ನೆಲ್ಲ ಶಕ್ತಿ ಬಳಸಿ ಆಕ್ರಮಣ ನಡೆಸುವುದನ್ನು ರೂಪಕದ ರೀತಿಯಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದು ಹೇಳುವುದುಂಟು. ಸಾಮಾನ್ಯವಾಗಿ, ಈ ಮಾತು ಹಾಸ್ಯವನ್ನು ಖಂಡಿತ ಉಕ್ಕಿಸುವುದಿಲ್ಲ. ಆದರೆ, ಸಂದರ್ಭೋಚಿತವಾಗಿ ಈ ಮಾತು ಬಳಸಿ, ನಗು ತರಿಸಬಾರದು ಎಂಬುದೇನೂ ಇಲ್ಲ.
ನಟ ರಾಜ್ ಬಿ. ಶೆಟ್ಟಿ ಮತ್ತು ನಿರ್ದೇಶಕ ಸುಜಯ್ ಶಾಸ್ತ್ರಿ ಜೋಡಿ ಗುಬ್ಬಿಯ ಮೇಲೆ ಸಂದರ್ಭೋಚಿತವಾಗಿ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಸಿನಿಮಾ ನೋಡಲು ಬಂದವರು ಹಲವು ಬಾರಿ ಹೊಟ್ಟೆತುಂಬಾ ನಗುವುದು ಅನಿವಾರ್ಯವಾಗುತ್ತದೆ. ಈ ಜೋಡಿಯ ಕಸರತ್ತಿಗೆ ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ಅವರಂತಹ ಕಲಾವಿದರು ಕೈಜೋಡಿಸಿದ್ದಾರೆ.
ವೆಂಕಟಕೃಷ್ಣ ಗುಬ್ಬಿಗೆ (ರಾಜ್) ಮದುವೆ ಆಗಬೇಕು, ಅದರಲ್ಲೂ ಪ್ರೇಮ ವಿವಾಹವೇ ಬೇಕು ಎಂಬ ಆಸೆ ಇರುತ್ತದೆ. ಆದರೆ, ಅಂತಹ ವಿವಾಹಕ್ಕೆ ಕಾಲ ಕೂಡಿ ಬಂದಿರುವುದಿಲ್ಲ. ಕಾಲ ಕೂಡಿ ಬರುತ್ತದೆ ಎಂಬ ಹೊತ್ತಿನಲ್ಲಿ ಈ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರಗಳ ಪ್ರಯೋಗ ಆರಂಭವಾಗುತ್ತದೆ. ಅಸ್ತ್ರವನ್ನು ಸ್ನೇಹಿತ, ವಿಲನ್, ಪಾತಕಿ ಒಬ್ಬರಾದ ನಂತರ ಒಬ್ಬರಂತೆ ಮಾಡುತ್ತಾರೆ. ಬ್ರಹ್ಮಾಸ್ತ್ರಗಳೆಲ್ಲ ಗುಬ್ಬಿಯನ್ನು ಎಷ್ಟರಮಟ್ಟಿಗೆ ಗಾಸಿಗೊಳಿಸುತ್ತವೆ ಎಂಬುದು ಸಿನಿಮಾ ಕಥೆ.
ರಾಜ್ ಅವರ ನಟನೆಯಲ್ಲಿ ಅವರದೇ ಸಿನಿಮಾ ‘ಒಂದು ಮೊಟ್ಟೆಯ ಕಥೆ’ಯ ಛಾಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ತನಗಿನ್ನೂ ಮದುವೆ ಆಗಿಲ್ಲವಲ್ಲಾ ಎಂದು ಇನ್ನೊಬ್ಬರು ನಗುವಂತೆ ಸಂಕಟಪಡುವುದು, ಸುಂದರ ಹುಡುಗಿಗೆ ಫೇಸ್‌ಬುಕ್ ಮೂಲಕ ಸಂದೇಶ ಕಳುಹಿಸುವ ಪ್ರಸಂಗ, ಹುಡುಗಿ ಎದುರಾದಾಗ ಆಕೆಯ ಜೊತೆ ಏನು ಮಾತನಾಡಬೇಕು ಎಂಬುದು ಗೊತ್ತಾಗದೆ ಪೆಕರನಂತೆ ವರ್ತಿಸುವ ರೀತಿ ನಗೆ ಚಿಮ್ಮಿಸುವ ಜೊತೆಯಲ್ಲೇ, ‘ಮೊಟ್ಟೆಯ ಕಥೆ’ಯನ್ನು ಅನಾಯಾಸವಾಗಿ ನೆನಪಿಗೆ ತಂದುಕೊಡುತ್ತವೆ.
ಹಾಸ್ಯ ಈ ಚಿತ್ರದ ರುಚಿ. ಆದರೆ, ಇದರ ನಡುನಡುವೆ ಬೋಧನೆ–ಭಾವುಕತೆ ಮಿಶ್ರವಾಗಿರುವ ಒಂದೆರಡು ಸಂಭಾಷಣೆಗಳು ಬರುತ್ತವೆ. ಈ ಸಂಭಾಷಣೆಗಳು ಹಾಸ್ಯರುಚಿ ಆಸ್ವಾದಿಸುವ ವೀಕ್ಷಕರಲ್ಲಿ ತುಸು ಕಸಿವಿಸಿ ಸೃಷ್ಟಿಸಬಲ್ಲವು – ಹಾಸ್ಯದೂಟಕ್ಕೆ ಇವು ಅಷ್ಟು ಸರಿಹೊಂದುವುದಿಲ್ಲ. ದ್ವಿತೀಯಾರ್ಧದಲ್ಲಿ ಚಿತ್ರದ ವೇಗ ತುಸು ತಗ್ಗಿದಂತೆ ಅನ್ನಿಸಿ, ವೀಕ್ಷಕ ಆಕಳಿಸಬಹುದು ಕೂಡ!
ನಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಜಯ್, ನಿಧಾನ, ವೈರಾಗ್ಯ, ವಂಚಕ ಪ್ರವೃತ್ತಿಯಿಂದಲೇ ನಗು ತರಿಸುತ್ತಾರೆ. ನಾಯಕಿ ಕವಿತಾ ಗೌಡ ಪಾತ್ರ ಸೀಮಿತವಾಗಿದ್ದರೂ, ಇತರರ ನಟನೆಯ ಎದುರು ಮಂಕಾಗುತ್ತಾರೆ. ಖಡಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಮೋದ್ ಶೆಟ್ಟಿ ರಾಬಿನ್‌ಹುಡ್ ಎಂಬ ವಿಲನ್ ಆಗಿ ನಗಿಸುವ ಕೆಲಸ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತವು ಚಿತ್ರದ ಹರಿವಿಗೆ ಪೂರಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.