ADVERTISEMENT

'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು': ಚಿತ್ರ ವಿಮರ್ಶೆ

ಭಿನ್ನ ಕಳ್ಳರ ಲೋಕದಲ್ಲೊಂದು ಸುತ್ತು

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 12:42 IST
Last Updated 10 ಜನವರಿ 2025, 12:42 IST
   

ಕನ್ನಡ ಸಿನಿಮಾಗಳಲ್ಲಿ ಹೊಸ ರೀತಿಯ ಕಥೆಗಳು ಇರುವುದಿಲ್ಲ. ಭಿನ್ನ ಬಗೆಯ ಸಿನಿಮಾಗಳನ್ನು ಮಾಡಲು ನಿರ್ದೇಶಕರು ಯತ್ನಿಸುವುದಿಲ್ಲ ಎನ್ನುವ ಟೀಕೆಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಅದಕ್ಕೆ ಅಪವಾದ ಎನ್ನುವಂತೆ ಆಗೀಗ ಒಂದೊಂದು ಸಿನಿಮಾ ಬರುತ್ತದೆ. ಆ ಸಾಲಿಗೆ ಸೇರಿಸಬಹುದಾದ ಚಿತ್ರ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’. ಚಿತ್ರದ ಶೀರ್ಷಿಕೆಯೇ ಹೇಳುವಂತೆ ವಸ್ತುಗಳನ್ನು ಕದಿಯುವ, ಯಾಮಾರಿಸುವ ಕಳ್ಳರ ಕಥೆಯಿದು. ನಮ್ಮ ನಡುವೆ ನಿತ್ಯವೂ ನಡೆಯುವ ನೈಜ ಘಟನೆಗಳನ್ನೇ ಚಿತ್ರವಾಗಿಸಿದ್ದಾರೆ ನಿರ್ದೇಶಕ. ಆದರೆ ಸಿನಿಮಾ ಶಕ್ತಿ ಇರುವುದು ಚಿತ್ರಕಥೆಯಲ್ಲಿ. ಕಥೆ ಹೇಳಿಕೊಂಡು ಹೋದ ರೀತಿ ಭಿನ್ನವಾಗಿದೆ. ದೃಶ್ಯಗಳನ್ನು ಕಟ್ಟಿಕೊಟ್ಟ ಬಗೆ ಹೊಸತಾಗಿದೆ. 

ಚಿತ್ರದಲ್ಲಿ ಮೂರು ಬಗೆಯ ಕಳ್ಳರ ಕಥೆಯಿದೆ. ಮೂರು ಕಥೆಗಳೂ ಭಿನ್ನವಾಗಿವೆ. ಮೊದಲಾರ್ಧದಲ್ಲಿ ಎರಡು ಕಥೆಗಳಿದ್ದರೆ, ದ್ವಿತೀಯಾರ್ಧದಲ್ಲೊಂದು ಕಥೆ ನಡೆಯುತ್ತದೆ. ಕಳ್ಳತನದ ಹೊರತಾಗಿ ಈ ಮೂರು ಕಥೆಗಳಿಗೆ ಪರಸ್ಪರ ಸಂಬಂಧವಿಲ್ಲ. ಇನಾಯತ್‌ ವಾಟರ್‌ ಫ್ಯೂರಿಫೈಯರ್‌ ಕಂಪನಿಯಲ್ಲಿ ಕೆಲಸ ಮಾಡುವಾತ. ಕಷ್ಟದ ಜೀವನ ನಡೆಸುತ್ತಿರುವ ಆತನಿಗೆ ಅಚನಾಕ್ಕಾಗಿ ಒಂದು ಬೈಕ್‌ ಸಿಗುತ್ತದೆ. ಅಲ್ಲಿಂದ ಅವನಿಗೆ ಬೈಕ್‌ ಕದಿಯುವ ಗೀಳು ಶುರುವಾಗುತ್ತದೆ. ಇದೊಂದು ರೀತಿಯ ಕಾಯಿಲೆ. ಹಲವರಿಗೆ ಈ ರೀತಿಯ ಕಾಯಿಲೆ ಇರುತ್ತದೆ ಎಂಬ ಸ್ಪಷ್ಟನೆಯನ್ನು ನಿರ್ದೇಶಕ ಚಿತ್ರದಲ್ಲಿಯೇ ನೀಡುತ್ತಾರೆ. ಇನಾಯತ್‌ ಪಾತ್ರದಲ್ಲಿ ಪ್ರಸನ್ನ ವಿ.ಶೆಟ್ಟಿ ಸಹಜವಾದ ನಟನೆಯೊಂದಿಗೆ ಇಷ್ಟವಾಗುತ್ತಾರೆ. ಸಹಜ ಹಾಸ್ಯದೊಂದಿಗೆ ಈ ಕಥೆಯನ್ನು ಹೇಳಿಕೊಂಡು ಹೋದ ರೀತಿಯೂ ಚೆನ್ನಾಗಿದೆ. 

ಮನೆಯಲ್ಲಿ ಬೇಕಾದಷ್ಟು ಶ್ರೀಮಂತಿಕೆ ಇರುತ್ತದೆ. ಆದರೂ ಕದಿಯುವ ಚಾಳಿ. ಅದರಲ್ಲಿಯೇ ಸುಖ ಕಾಣುವ ಖಯಾಲಿ. ಅಂಥ ಒಂದು ಜೋಡಿಯದ್ದು ಎರಡನೇ ಕಥೆ. ಇಡೀ ಸಿನಿಮಾದಲ್ಲಿ ಒಂದಷ್ಟು ಮನರಂಜನೆ ನೀಡುವ ಕಥೆಯಿದು. ಚಿತ್ರಕಥೆ, ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಸೊಗಸಾಗಿದೆ. ಮಧುಸೂದನ್‌ ಮತ್ತು ಅಪೂರ್ವ ಜೋಡಿಯಾಗಿ ಇಷ್ಟವಾಗುತ್ತಾರೆ. ಈ ಎರಡೂ ಕಥೆಗಳಲ್ಲಿ ಪಾತ್ರ ಪರಿಚಯಕ್ಕೆಂದು ಮಾಡಿದ ಹಾಡುಗಳು ಸಿನಿಮಾದ ವೇಗವನ್ನು ನಿಧಾನವಾಗಿಸುತ್ತವೆ. ಮೊದಲಾರ್ಧದಲ್ಲಿ 15 ನಿಮಿಷ ಅವಧಿ ತಗ್ಗಿಸುವ ಅವಕಾಶ ನಿರ್ದೇಶಕರಿಗಿತ್ತು.

ADVERTISEMENT

ದ್ವೀತಿಯಾರ್ಧದಲ್ಲಿ ಹನಿಟ್ರಾಪ್‌ ಮಾಡುವ ತಂಡದ ನಾಯಕನಾಗಿ ದಿಲೀಪ್‌ ರಾಜ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಈ ಕಥೆ ಬಹಳ ಗಂಭೀರವಾಗಿ, ಸಾಕಷ್ಟು ಕಡೆ ತಾಳ್ಮೆ ಪರೀಕ್ಷಿಸುತ್ತದೆ. ಮೊದಲಿಗೆ ‘ಇಲ್ಲಿ ಏನೋ ನಡೆಯುತ್ತಿದೆ’ ಎಂಬ ಕುತೂಹಲ ಮೂಡಿದರೂ ಚಿತ್ರ ಸಾಗಿದಂತೆ ಆ ಕುತೂಹಲ ಉಳಿದುಕೊಳ್ಳುವುದಿಲ್ಲ. ಕಂಟೆಂಟ್‌ ಸಿನಿಮಾಗಳಲ್ಲಿ ಲಾಜಿಕ್‌ ಬಹಳ ಮುಖ್ಯ. ಆದರೆ ನಿರ್ದೇಶಕ ಚಿತ್ರದುದ್ದಕ್ಕೂ ಲಾಜಿಕ್‌ಗೆ ಹೆಚ್ಚು ಮಹತ್ವ ನೀಡಿದಂತೆ ಕಾಣಿಸುವುದಿಲ್ಲ. ‘ಸದಾ’ ಎಂಬ ಒಂದು ಹಾಡು ಮಾತ್ರ ತುಸು ಕಾಲ ನೆನಪಿನಲ್ಲಿ ಉಳಿಯುತ್ತದೆ. ಕೆಲವೆಡೆ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾದಂತೆ ಭಾಸವಾಗುತ್ತದೆ. ಒಟ್ಟಾರೆ ಚಿತ್ರದ ಅವಧಿಯನ್ನು 30 ನಿಮಿಷ ತಗ್ಗಿಸಿದ್ದರೆ ಅಥವಾ ದ್ವಿತೀಯಾರ್ಧದಲ್ಲಿಯೂ ಎರಡು ಭಿನ್ನ ಕಥೆಗಳನ್ನು ಆಯ್ದುಕೊಂಡಿದ್ದರೆ ಸಿನಿಮಾದ ವೇಗ ಇನ್ನಷ್ಟು ಹೆಚ್ಚುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.