ಸಂಗೀತಾ ಭಟ್
ಆಕೆ ಶ್ರೀದೇವಿ. ಎಪ್ಪತ್ತು ಸಾವಿರ ರೂಪಾಯಿ ಸಂಪಾದನೆಗಾಗಿ ವೇಶ್ಯಾವಾಟಿಕೆಗೆ ಬರುತ್ತಾಳೆ. ಅಲ್ಲಿ ದಲ್ಲಾಳಿ ‘ಮಾಮು’ ಪರಿಚಯವಾಗುತ್ತದೆ. ಆತನಿಂದ ಗಿರಾಕಿಗಳನ್ನು ಪಡೆಯುವ ಶ್ರೀದೇವಿ ಅಂದೇ ಕೊಲೆಯಾಗುತ್ತಾಳೆ. ಶ್ರೀದೇವಿ ಕೊಲೆಯಿಂದಲೇ ಚಿತ್ರ ಪ್ರಾರಂಭವಾಗುತ್ತದೆ. ಕೊಲೆ ಮಾಡಿದ್ದು ಯಾರು ಎಂಬ ಹುಡುಕಾಟವೇ ಇಡೀ ಚಿತ್ರದ ಕಥೆ. ಇದರ ಜೊತೆಜೊತೆಗೆ ಶ್ರೀದೇವಿಯನ್ನು ಭೇಟಿಯಾಗಲು ಬರುವ ಕಮಲ್ ಕಥೆಯೂ ತೆರೆದುಕೊಳ್ಳುತ್ತದೆ. ಆದಾಗ್ಯೂ ಸಸ್ಪೆನ್ಸ್, ಥ್ರಿಲ್ಲರ್ ಅಥವಾ ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ಇರಬೇಕಿದ್ದ ಕುತೂಹಲ ಇಲ್ಲಿ ಕಾಣುವುದಿಲ್ಲ.
ಕೊಲೆಯಾದ ದಿನ ಶ್ರೀದೇವಿಯನ್ನು ಭೇಟಿಯಾಗುವುದು ಆರು ಗಿರಾಕಿಗಳು. ಅವರಲ್ಲಿ ಯಾರೋ ಒಬ್ಬ ಕೊಲೆಗಾರ ಎಂಬ ಅನುಮಾನದೊಂದಿಗೆ ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸುತ್ತಾರೆ. ಇಲ್ಲಿ ಬರುವ ಆರು ಪಾತ್ರಗಳು ಭಿನ್ನವಾಗಿ, ಮಜವಾಗಿವೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ವೈಶಿಷ್ಟ್ಯವಿದೆ. ಜೊತೆಗೆ ಈ ಪಾತ್ರಗಳು ನಮ್ಮ ಸಮಾಜದ ಪ್ರತಿಬಿಂಬಗಳಂತಿವೆ. ಸಿನಿಮಾ ನಿರ್ದೇಶಕನಾಗಿ ಅಲ್ಲಿಗೆ ಬರುವ ಮೊದಲ ಗಿರಾಕಿಯೇ ಕಮಲ್. ಆತನದ್ದು ಬೇರೆಯೇ ಕಥೆ. ಅದರ ಜೊತೆಗೆ ಶ್ರೀದೇವಿ ಬದುಕು–ಬವಣೆ ತೆರೆದುಕೊಳ್ಳುತ್ತ ಹೋಗುತ್ತದೆ.
ಕಮಲ್ ಪಾತ್ರದ ಮೂಲಕ ಸೋತ ಸಿನಿಮಾದ ನಿರ್ದೇಶಕನೊಬ್ಬನ ಕಥೆಯನ್ನು ಹೇಳುತ್ತ ಹೋಗುತ್ತಾರೆ. ಕಮಲ್ ಮತ್ತು ಶ್ರೀದೇವಿಯ ಸ್ನೇಹ ಗಟ್ಟಿಯಾಗುತ್ತ, ಸಣ್ಣ ಪ್ರೀತಿಯ ಪಯಣವೂ ಇಲ್ಲಿ ಆಗುತ್ತದೆ. ಚಿತ್ರದಲ್ಲಿ ಕಮಲ್ ಕಥೆ ಇಲ್ಲದಿದ್ದರೆ ಶ್ರೀದೇವಿ ಕಥೆ ಅಪೂರ್ಣವಾಗುತ್ತಿತ್ತು ಎನ್ನುವಂಥ ಸನ್ನಿವೇಶಗಳಿಲ್ಲ. ಹೀಗಾಗಿ ಈ ಕಥೆ ಸಾಕಷ್ಟು ಕಡೆ ಮುಖ್ಯ ಕಥೆಗೆ ಅಪ್ರಸ್ತುತ ಎನ್ನಿಸುತ್ತದೆ. ಗಿರಾಕಿಯಾಗಿ ಬಂದ ಕಮಲ್ ಶ್ರೀದೇವಿಯನ್ನು ಕೊಲೆ ಮಾಡಿರಬಹುದಾ ಎಂಬ ಅನುಮಾನವನ್ನು ಮೂಡಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ ಅದು ಇನ್ನಷ್ಟು ಗಟ್ಟಿಯಾಗಿದ್ದರೆ, ಕೊಲೆಯ ಸುತ್ತದ ತನಿಖೆ, ಸಾಕ್ಷ್ಯಗಳ ಮೇಲೆ ಇನ್ನಷ್ಟು ಗಮನ ನೀಡಿದ್ದರೆ ಚಿತ್ರ ಸ್ವಲ್ಪ ಕುತೂಹಲ ಮೂಡಿಸುತ್ತಿತ್ತು. ಕೊಲೆಗಿಂತ ಆರೋಪಿಗಳ ಕಥೆಯೇ ಹೆಚ್ಚಾಗಿ ಯಾರೋ ಒಬ್ಬರು ಕೊಲೆ ಮಾಡಿರುತ್ತಾರೆ ಎಂಬ ಭಾವನೆ ಮೂಡಿಸುತ್ತದೆ.
ಇಡೀ ಚಿತ್ರದ ಹೈಲೈಟ್ ರಮೇಶ ಇಂದಿರಾ. ನೀರನ್ನು ಯಾವ ಪಾತ್ರೆಗೆ ಹಾಕಿದರೂ ಪಾತ್ರೆಯ ಆಕಾರ ತಾಳಬಲ್ಲದು ಎಂಬಂತಿದೆ ಅವರ ನಟನೆ. ಮಾರುಕಟ್ಟೆಯಲ್ಲಿ ವೇಶ್ಯಾವಾಟಿಕೆಗೆ ಗಿರಾಕಿಗಳನ್ನು ಹುಡುಕಿಕೊಡುವ ದಲ್ಲಾಳಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ತಮ್ಮ ಹಾವಭಾವಗಳಿಂದ ಸಿನಿಮಾ ಮುಗಿದ ನಂತರವೂ ಅವರು ನೆನಪಿನಲ್ಲಿ ಉಳಿಯುತ್ತಾರೆ. ಶ್ರೀದೇವಿಯಾಗಿ ಸಂಗೀತಾ ಭಟ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಂತ್ರವಾದಿಯಾಗಿ, ಗಿರಾಕಿಗಳಲ್ಲಿ ಒಬ್ಬರಾಗಿ ಮಿತ್ರ ಕೂಡ ಗಮನ ಸೆಳೆಯುತ್ತಾರೆ. ಕಿಶೋರ್‌ಗೆ ಇಲ್ಲಿ ಪೊಲೀಸ್ ಪಾತ್ರ. ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಚಿನ್ ಚಲುವರಾಯಸ್ವಾಮಿ ನಟನೆಗೆ ಇನ್ನೂ ಸ್ವಲ್ಪ ಶ್ರಮ ಹಾಕುವ ಅಗತ್ಯವಿತ್ತು. ಕೆಲ ಡಬ್ಬಲ್ ಮೀನಿಂಗ್ ಮಾತುಗಳನ್ನು ಹೊರತುಪಡಿಸಿ ಒಟ್ಟಾರೆ ಸಂಭಾಷಣೆ ಗಮನ ಸೆಳೆಯುವಂತಿದೆ.
ಬಹುತೇಕ ಕಥೆ ನಡೆಯುವುದು ಲಾಡ್ಜ್ ಮತ್ತು ಪೊಲೀಸ್ ಠಾಣೆಯಲ್ಲಿ. ಆದಾಗ್ಯೂ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಛಾಯಾಚಿತ್ರಗ್ರಾಹಕ ನಾಗೇಶ್ ಆಚಾರ್ಯ ಪ್ರತಿ ದೃಶ್ಯವನ್ನೂ ವರ್ಣಮಯವಾಗಿಸಿದ್ದಾರೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಹಿನ್ನೆಲೆ ಸಂಗೀತ ನಡೆಯುವ ಕಥೆಗೆ ಪೂರಕವಾಗಿದೆ. ಭಿನ್ನಕಥೆಯನ್ನು ಇಷ್ಟಪಡುವವರಿಗೆ ಸೂಕ್ತವಾದ ಸಿನಿಮಾವಿದು. ವೇಶ್ಯೆಯ ಕುರಿತಾಗಿ ಸಮಾಜಕ್ಕೆ ಸಾಕಷ್ಟು ಕಲ್ಪನೆಗಳಿರುತ್ತವೆ. ಅವರಿಗೆ ಒಂದು ಗಟ್ಟಿಯಾದ ಹಿನ್ನೆಲೆ ಕಥೆ ಇರುತ್ತದೆ. ಚಿತ್ರಕಥೆಯಲ್ಲಿ ಶ್ರೀದೇವಿ ಹಿನ್ನೆಲೆಯನ್ನು ಇನ್ನಷ್ಟು ಗಟ್ಟಿಯಾಗಿ, ಕಾಡುವಂತೆ ಹೇಳುವ ಹಾಗೂ ಸಾಕಷ್ಟು ಕಡೆ ತರ್ಕವಿಲ್ಲದ ಕಮಲ್ ಕಥೆಯನ್ನು ಸಿನಿಮಾದ ಮುಖ್ಯ ಕಥೆಯೊಂದಿಗೆ ಪ್ರಭಾವಶಾಲಿಯಾಗಿ ಬೆಸೆಯುವ ಅವಕಾಶ ನಿರ್ದೇಶಕರಿಗಿತ್ತು.
ನೋಡಬಹುದಾದ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.