ADVERTISEMENT

ಕನ್ನಡಕ್ಕೆ ಬಂದ ಪತ್ತೇದಾರ ಶೆರ್ಲಾಕ್

ರಂಗಭೂಮಿ -ನಾಟಕ: ಜುಪಿಟರ್

ಗುಡಿಹಳ್ಳಿ ನಾಗರಾಜ
Published 16 ಅಕ್ಟೋಬರ್ 2016, 19:30 IST
Last Updated 16 ಅಕ್ಟೋಬರ್ 2016, 19:30 IST
‘ಜುಪಿಟರ್’ ನಾಟಕದ ದೃಶ್ಯ
‘ಜುಪಿಟರ್’ ನಾಟಕದ ದೃಶ್ಯ   

ಕನ್ನಡದಲ್ಲಿ ಪತ್ತೇದಾರಿ ಕತೆ, ಕಾದಂಬರಿಯ ಫಸಲು ಇದ್ದದ್ದು 1960-70ರ ದಶಕದಲ್ಲಿ. ಆದರೆ ಪತ್ತೇದಾರಿ ನಾಟಕಗಳು ಇರಲೇ ಇಲ್ಲ. ಪ್ರಯತ್ನ ನಡೆದಿರಬೇಕು. ಗಮನ ಸೆಳೆಯುವಷ್ಟು ಪ್ರಧಾನವಾಗಿ ಬರಲಿಲ್ಲ. ಬೆರಳೆಣಿಕೆಯಷ್ಟು ಪತ್ತೇದಾರಿ ನಾಟಕಗಳು ಪ್ರಕಟವಾಗಿವೆ. ಆದರೆ ಬಹುತೇಕ ಕೃತಿಗಳಿಗೆ ಪ್ರಯೋಗದ ಭಾಗ್ಯ ಲಭಿಸಿಲ್ಲ.

‘ಜುಪಿಟರ್’ ಎಂಬ ಪತ್ತೇದಾರಿ ನಾಟಕವನ್ನು ಪ್ರವರ ಆರ್ಟ್ ಸ್ಟುಡಿಯೋ ಎಂಬ ಯುವಕರ ರಂಗತಂಡವೊಂದು ಇತ್ತೀಚೆಗೆ ಎಡಿಎ ರಂಗಮಂದಿರ ಹಾಗೂ ಕೆ.ಎಚ್.ಕಲಾಸೌಧದಲ್ಲಿ ಪ್ರಯೋಗಿಸಿತು. ಸರ್ ಆರ್ಥರ್ ಕಾನನ್ ಡಾಯಲ್‌ನ ಕತೆಯಿಂದ ಪ್ರೇರಣೆ ಪಡೆದು ಹಿರಿಯ ನಾಟಕಕಾರ ಎಸ್.ವಿ. ಕೃಷ್ಣಶರ್ಮ ಅವರು ರಚಿಸಿದ ಈ ನಾಟಕದ ನಿರ್ದೇಶನ ಹನು ರಾಮಸಂಜೀವ ಅವರದು.

ಜುಪಿಟರ್ ಒಂದು ಕುದುರೆಯ ಹೆಸರು. ಅದು ಕಾಣೆಯಾಗಿದೆ. ಅದರ ತರಬೇತುದಾರ ಬೋಪಟಲಾಲ್ ಕೊಲೆಯಾಗಿದ್ದಾನೆ. ಮಾಲೀಕ ಪ್ರತಾಪ್ ಜೈನ್‌ಗೆ ಆ ಕುದುರೆ ತುರ್ತಾಗಿ ಬೇಕಾಗಿದೆ. ಡರ್ಬಿ ಪಂದ್ಯ ಸನಿಹದಲ್ಲಿದೆ.

ಕುದುರೆ ಎಲ್ಲಿ ಮಾಯವಾಯಿತು? ಪತ್ತೆ ಹಚ್ಚಬೇಕಾದ ಪೊಲೀಸ್ ವ್ಯವಸ್ಥೆಯಲ್ಲಿ ಕುದುರೆ ಮಾಲೀಕ ಜೈನ್‌ಗೆ ನಂಬಿಕೆ ಇಲ್ಲ. ಶರಲೇಖ (ಶರ್ಲಾಕ್) ಎಂಬ ಪತ್ತೇದಾರನನ್ನು ಹಾಗೂ ಅವನ ಸಹಾಯಕನಾಗಿ ಡಾಕ್ಟರ್ ವಾತ್ಸಾಯನನನ್ನು (ವ್ಯಾಟ್ಸನ್) ನೇಮಿಸುತ್ತಾನೆ.

ಶರಲೇಖನ ಪತ್ತೇದಾರಿಕೆಯ ವಿಧಾನವೇ ಬೇರೆ. ಮಾಮೂಲಿ ಪೊಲೀಸ್ ಶೈಲಿಯಂತಲ್ಲ. ಸಹಜವಾಗಿ ಎಲ್ಲರ ಕಷ್ಟಸುಖದಲ್ಲಿ ಭಾಗಿಯಾದಂತೆ ನಟಿಸಿ ಮಾತಿಗೆಳೆಯುವುದು, ಮಾಹಿತಿಯನ್ನು ಹೊರತೆಗೆಯುವುದು ಅವನ ವಿಧಾನ. ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಕಳ್ಳ, ಕೊಲೆಗಾರರನ್ನು ಪತ್ತೆ ಹಚ್ಚುತ್ತಾನೆ. ಪತ್ತೇದಾರಿ ಸಿನಿಮಾಗಳಲ್ಲಿ ಕೊನೆಯಲ್ಲಿ ಗುಂಪುಚಿತ್ರದಲ್ಲಿ (ಗ್ರುಪ್‌ಫೋಟೊ) ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಪೊಲೀಸ್ ಇನ್‌ಸ್ಪೆಕ್ಟರ್ ಆಗಮಿಸುತ್ತಾನೆ.

ಪತ್ತೆದಾರಿಕೆಯ ಪ್ರಶ್ನೆಗಳ ಸರಮಾಲೆಯಲ್ಲಿ ಪಾತ್ರಗಳ ಸ್ವಭಾವ ಅನಾವರಣಗೊಳ್ಳುವುದು ಇಂಥ ಪತ್ತೇದಾರಿ ಕತೆಗಳ ಮಹತ್ವವನ್ನು ಹೆಚ್ಚಿಸಿದೆ. ಪೆನ್ನು, ಪುಸ್ತಕ ಎದುರಿಗೆ ಹಿಡಿದು ಕುಳಿತು ಬರೆಯತೊಡಗಿದರೆ ಹೇಗೆ ಸಂಪೂರ್ಣ ಸತ್ಯ ಹೊರತೆಗೆಯಲು ಸಾಧ್ಯವಿಲ್ಲವೋ– ಪತ್ತೇದಾರಿಕೆಯೂ ಹಾಗೆಯೇ. ಪತ್ರಕರ್ತನಿಗೆ ಅಂತಹ ಕ್ರಮ ರೂಢಿಯಾಗಿದ್ದು ಪತ್ತೇದಾರಿಕೆಯ ಮಾದರಿಯಿಂದಲೇ ಇರಬಹುದು.

ವಿಶ್ವದ ಹೆಸರಾಂತ ಪತ್ತೇದಾರರಲ್ಲಿ ಶೆರ್ಲಾಕ್ ಹೋಮ್ಸ್ ಸಹ ಒಬ್ಬ. ಅರ್ಥರ್ ಕಾನನ್ ಡಾಯಲ್ ಎಂಬ ಕತೆಗಾರನ ಸೃಷ್ಟಿ ಈ ಶೆರ್ಲಾಕ್. ಅವನೆಷ್ಟು ನಿಪುಣ ಪತ್ತೇದಾರನೆಂದರೆ; ಅಂಥ ಒಬ್ಬ ವ್ಯಕ್ತಿ ಬದುಕಿದ್ದನೆಂದೇ ಇಂಗ್ಲೆಂಡಿನ ಪತ್ತೇದಾರಿ ಕತೆಗಳ ಬಹುಪಾಲು ಓದುಗರು ನಂಬಿದ್ದಾರೆ. ಅದೊಂದು ಕಾಲ್ಪನಿಕ ಪಾತ್ರ ಎಂದರೆ ಬಿಲ್‌ಕುಲ್ ಒಪ್ಪುವುದಿಲ್ಲ.

ಶರ್ಲಾಕ್‌ನನ್ನು ಶರಲೇಖಚಂದ್ರ ಎಂದು ಕನ್ನಡದ ವಾತಾವರಣಕ್ಕೆ ಒಗ್ಗಿಸಿರುವ ನಾಟಕಕಾರ ಕೃಷ್ಣಶರ್ಮ ಪುಂಖಾನುಪುಂಖವಾಗಿ ತರ್ಕಬದ್ಧವಾಗಿ ಅವನು ಎಸೆಯುವ ಪ್ರಶ್ನೆಗಳ ಬಾಣದಿಂದ ನಾಟಕದುದ್ದಕ್ಕೂ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆ ನೋಡಿದರೆ ಈ ನಾಟಕ 70–80ರ ದಶಕಗಳಲ್ಲಿ ಬರಬೇಕಿತ್ತು. ಆಗ ಬರಲಿಲ್ಲ. ಚಂದನ, ಜೀ ಟಿವಿ ವಾಹಿನಿಯಲ್ಲಿ ‘ಅಜಿತನ ಸಾಹಸಗಳು’ ಮತ್ತು ‘ಧನುಷ್’ ಹೆಸರಲ್ಲಿ ಕಾನನ್ ಡಾಯಲ್‌ನ ಪತ್ತೇದಾರಿ ಧಾರಾವಾಹಿಗಳು ಪ್ರಸಾರವಾಗಿದ್ದವು.

ಆ ಮಾಲಿಕೆಗೆ ಹೆಚ್ಚಿನ ಕತೆ, ಅನುವಾದಗಳನ್ನು ಕೃಷ್ಣಶರ್ಮ ಅವರೇ ಒದಗಿಸಿದ್ದರು. ಆ ದಿನಗಳಲ್ಲೇ ಡಾಯಲ್‌ನ ಕತೆಯಿಂದ ಪ್ರೇರಣೆ ಪಡೆದು ಬರೆದಿಟ್ಟುಕೊಂಡಿದ್ದ ‘ಜುಪಿಟರ್' ಕತೆಯನ್ನು ಇದೀಗ ರಂಗದ ಮೇಲೆ ತಂದ ಕೀರ್ತಿ ಹನು ರಾಮಸಂಜೀವರ ಪ್ರವರ ಆರ್ಟ್ ಸ್ಟುಡಿಯೋಕ್ಕೆ ದಕ್ಕಿತು.
ಕನ್ನಡದಲ್ಲಿ ಮೊದಲ ಬಾರಿಗೆ ಶರ್ಲಾಕ್ ಹೋಂ ಬಂದ, ಎಂಬ ಹೆಗ್ಗಳಿಕೆಯೂ ಈ ತಂಡಕ್ಕೆ ಲಭಿಸಿತು.

ಶರಲೇಖನಾಗಿ ವೆಂಕಟೇಶ್ ಭಾರದ್ವಾಜ್, ಡಾ.ವಾತ್ಸಾಯನ- ಅಭಿಷೀತ್‍ರಾವ್, ಗೂರ್ಖಾ- ರಕ್ಷಿತ್ ಜೈನ್, ಬೋಪಟಲಾಲ್- ಅವಿನ್ ಗೌಡ, ಇನ್ಸ್‌ಪೆಕ್ಟರ್- ಗಿರೀಶ್ ಅಲಜೆ, ಬರೋಸ್- ನಿತಿನ್, ಚಂಪಾ- ಸ್ನೇಹಾ ಶೆಣೈ, ಆಗಂತುಕ- ಗಿರೀಶ್‌ ಗೌಡ, ಪ್ರತಾಪ್‌ಜೈನ್- ಪ್ರಜ್ವಲ ಜಯರಾಜ್, ಭೂಪೇಂದ್ರ ಆರ್ಯ- ಆಕಾಶ್‌ನಾಗು, ಸಂದೀಪ ಶರ್ಮಾ, ವಿಭಾ ಮುಂತಾದವರು ತಮ್ಮ ಶಕ್ತಾನುಸಾರ ನಟಿಸಿದರು.

ಕೆಲ ದೃಶ್ಯಗಳನ್ನು ಗಮನಿಸಿದಾಗ ಮತ್ತಷ್ಟು ತಾಲೀಮು ಬೇಕು ಎನಿಸಿತು. ಅಕ್ಷಯ ಬೋನ್ಸೆ, ಅರ್ಪಿತ್ ಬೋನ್ಸೆ ಅವರ ಸಂಗೀತ, ಮಾಲತೇಶ ಬಡಿಗೇರರ ರಂಗಸಜ್ಜಿಕೆ, ಮಂಜು ನಾರಾಯಣ ಅವರ ನೆರಲು ಬೆಳಕಿನ ಆಟ ಪತ್ತೇದಾರಿ ಕಥಾವಸ್ತುವಿಗೆ ಸೂಕ್ತ ಆವರಣ ರೂಪಿಸಿದವು. ನಿರ್ವಹಣೆ– ಪವನ್ ಮಹೇಂದ್ರಕರ್ ಹಾಗೂ ತೇಜಸ್ವಿನಿ ರಮೇಶ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.