ADVERTISEMENT

‘ಬಸವಣ್ಣನ ಕಥಿ ಹೇಳ್ತಿನಿ ಬರ‍್ರಿ’

ಯಶವಂತ ಸರದೇಶಪಾಂಡೆ ಅವರ ಹೊಸ ಏಕವ್ಯಕ್ತಿ ರಂಗಪ್ರಯೋಗ

ರಾಮಕೃಷ್ಣ ಸಿದ್ರಪಾಲ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಬಸವಣ್ಣನ ಪಾತ್ರದಲ್ಲಿ ಯಶವಂತ ಸರದೇಶಪಾಂಡೆ
ಬಸವಣ್ಣನ ಪಾತ್ರದಲ್ಲಿ ಯಶವಂತ ಸರದೇಶಪಾಂಡೆ   

ಬಸವಣ್ಣನ ಬಗ್ಗೆ ಈವರೆಗೆ ಅನೇಕ ನಾಟಕಗಳು ಬಂದಿವೆ. ಕಥೆ, ಸಿನಿಮಾಗಳಿವೆ. ಅವರ ಜೀವನ, ಸಾಧನೆ, ಕೆಲಸಗಳನ್ನು ಇಟ್ಟುಕೊಂಡು ಹೊಸ ಹೊಸ ಪ್ರಯೋಗಗಳನ್ನು ಬಹಳಷ್ಟು ಮಂದಿ ಮಾಡ್ಯಾರ. ಅವುಗಳಲ್ಲಿ ನನ್ನದೂ ಒಂದು ಸಣ್ಣ ಪ್ರಯತ್ನ. ಇದನ್ನು ನಾನು ‘ಡಾಕ್ಯು–ಡ್ರಾಮಾ’ ಅಂತ ಕರೀತೀನಿ.

ರಂಗಭೂಮಿ ಮೂಲಕ ಬಸವಣ್ಣನನ್ನು ಈಗಿನ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇಲ್ಲಿದೆ. ಬಸವಣ್ಣನ ಬಗ್ಗೆ ಕೆಲವು ವಾದ–ವಿವಾದಗಳು ಇರಬಹುದು. ಅವು ಏನೂ ಇಲ್ಲದಂಗ ಮಾಡುವ ಪ್ರಯತ್ನ ನನ್ನದು. ರಂಗವಿನ್ಯಾಸ, ನಿರ್ದೇಶನ, ಅಭಿನಯದ ಹೊಣೆಯನ್ನೂ ಹೊತ್ತಿದ್ದೇನೆ. ಆಧುನಿಕ ತಂತ್ರಜ್ಞಾನ, ಸಂಗೀತ, ಸಾಹಿತ್ಯವನ್ನೂ ‘ಕಥಿ’ ಹೇಳಲು ಬಳಸಿಕೊಂಡಿದ್ದೇನೆ.

ಬಸವಣ್ಣನವರ ಬದುಕು ಕಟ್ಟಿಕೊಡುವ ಭಾವ ಪುಟ್ಟ ಮಗುವಿಗೂ ಅರ್ಥವಾಗಬೇಕು ಎನ್ನುವುದು ನನ್ನ ಉದ್ದೇಶ. 90 ನಿಮಿಷ ಅವಧಿಯ ನಾಟಕ ಇದು. ವೇದಿಕೆಯ ಸುತ್ತಲೂ ಕಲಾವಿದರು ಬರೆದ ಚಿತ್ರಗಳಿರುತ್ತವೆ. ಹಿನ್ನೆಲೆಯಲ್ಲಿ ಡಿಜಿಟಲ್‌ ಪರದೆಯ ಮೇಲೆ ಆಗೊಮ್ಮೆ ಈಗೊಮ್ಮೆ ಬಸವಣ್ಣನ ವ್ಯಕ್ತಿತ್ವ ಬಿಂಬಿಸುವ ದೃಶ್ಯಾವಳಿಗಳು ಬಂದು ಹೋಗುತ್ತವೆ. ಸುಶ್ರಾವ್ಯವಾಗಿ ವಚನಸುಧೆ ಮೂಡಿಬರುತ್ತವೆ. ಒಮ್ಮೆ ಬಸವಣ್ಣನ ಪಾತ್ರಧಾರಿಯಾಗುತ್ತ ಇನ್ನೊಮ್ಮೆ ಬಸವಣ್ಣನೇ ಆಗಿ ಬಿಡುವ ತಂತ್ರಗಾರಿಕೆಯೂ ಈ ನಾಟಕದಲ್ಲಿದೆ.

ADVERTISEMENT

ಬಸವಣ್ಣನ ಜೊತೆಗೆ ಮಾದಲಾಂಬಿಕೆ, ಮಾದರಸ, ಜಾತವೇದ ಮುನಿಗಳು, ಅಲ್ಲಮಪ್ರಭು, ಬಿಜ್ಜಳ ಮಹಾರಾಜ, ಬಲದೇವ, ಮಂಚಣ್ಣ ಪಾತ್ರಗಳಾಗಿಯೂ ನಾನೇ ಅಭಿನಯಿಸಲಿದ್ದೇನೆ. ಕೊನೆಯ 8 ನಿಮಿಷಗಳಲ್ಲಿ ಬಸವಣ್ಣನ ಇಡೀ ಜೀವನ, ಬದುಕು ಏನು ಎನ್ನುವುದರ ಸಾರ ಕಟ್ಟಿಕೊಡಲು ಯತ್ನಿಸುತ್ತೇನೆ.

‘ಬಸವಣ್ಣನ ಕಥಿ ಹೇಳ್ತಿನಿ... ಬರ‍್ರಿ’ ಹೆಸರಿನ ನಾಟಕವನ್ನು 2011ರಲ್ಲಿ ಮಧುಕರ ಕೋಣನತಂಬಿಗೆ ರಚಿಸಿದರು. ಮೊದಲು ಎರಡೂವರೆ ತಾಸಿನ ಸ್ಕ್ರಿಪ್ಟ್‌ ಮಾಡಲಾಗಿತ್ತು. 30 ವಚನಗಳಿದ್ದವು. ಅದನ್ನು 15ಕ್ಕೆ ಇಳಿಸಿ ಒಂದೂವರೆ ಗಂಟೆಯ ನಾಟಕ ಮಾಡಲಾಯಿತು. ಒಟ್ಟು ನಾಲ್ವರ ತಂಡ ಈ ನಾಟಕದ ಹಿಂದಿದೆ. ಕಲಾವಿದ ಮೋನಪ್ಪ ಹಾಗೂ ಪುಂಡಲೀಕ ಕಲ್ಲಿಗನೂರು ಅವರು ಬರೆದ ಚಿತ್ರಗಳನ್ನು ನಾಟಕದ ಹಿನ್ನೆಲೆಯಾಗಿ ವೇದಿಕೆಯ ಸುತ್ತ ಬಳಸಿಕೊಳ್ಳಲಾಗುತ್ತದೆ. ಗಾಯಕ ಅಜಯ್ ವಾರಿಯರ್‌ ವಚನಗಳನ್ನು ಹಾಡಿದ್ದಾರೆ. ಡಿಜಿಟಲ್‌ ಪರದೆಯ ಮೇಲೆ ಬಸವಣ್ಣನ ಬದುಕಿನ ವೃತ್ತಾಂತ ಆಗಾಗ ಕೇಳಿಬರಲಿದೆ.

ಸಂಪರ್ಕಕ್ಕೆ: allthebest01@icloud.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.