ADVERTISEMENT

ಮೇಘ ರಾಗಕ್ಕೆ ಮಳೆಯ ಹಿಮ್ಮೇಳ

ಉಮಾ ಅನಂತ್
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಖ್ಯಾತ ಮತ್ತು ಹಿರಿಯ ಸಂಗೀತ ಕಲಾವಿದರ ಸಂಗೀತ ಕಛೇರಿ ಕಳೆ ಕಟ್ಟುವುದು ಕೇಳುಗರಿಂದ ಸಭಾಂಗಣ ತುಂಬಿದಾಗ.

ಆದರೆ ಬನಾರಸ್ ಘರಾಣೆಯ ವಿಶ್ವವಿಖ್ಯಾತ ಕಲಾವಿದರಾದ ಪಂಡಿತ್ ರಾಜನ್ ಮತ್ತು ಸಾಜನ್ ಮಿಶ್ರಾ ಸೋದರರ ಕಛೇರಿ ಇದ್ದರೆ ಸಭಾಂಗಣ ತುಂಬಿ ತುಳುಕಲು ಮತ್ತೊಂದು ಕಾರಣವೂ ಇದೆ. ಅವರ ಪ್ರೌಢ ಗಾಯನ ಒಂದು ಕಡೆಯಾದರೆ ಪ್ರತಿ ಕಛೇರಿಯಲ್ಲಿಯೂ ಏನಾದರೊಂದು ಹೊಸತನ. ಇದು ಅವರ ವಿದ್ವತ್‌ಪೂರ್ಣತೆಗೆ ಸಾಕ್ಷಿ.

ಗಾಯನ ಸಮಾಜದಲ್ಲಿ ರಾಮ ಲಲಿತ ಕಲಾ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಿಶ್ರಾ ಸಹೋದರರ ಜುಗಲ್‌ಬಂದಿ. ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಕಲಾವಿದರು ಬೇರೆ ಬೇರೆ ಜನಪ್ರಿಯ ರಾಗಗಳನ್ನು ಪ್ರಸ್ತುತಪಡಿಸುವುದು ರೂಢಿ.

ಆದರೆ ಈ ಸಲ ಈ ಮೇರು ಕಲಾವಿದರು ಒಂದು ಪ್ರಧಾನ ರಾಗವನ್ನು ಹಾಡಿ ಈ ರಾಗಕ್ಕೆ ಅತ್ಯಂತ ಸಮೀಪದ ರಾಗವನ್ನು ಆಯ್ಕೆ ಮಾಡಿ ಹಾಡಿದ್ದು ಕೇಳುಗರಿಗೆ ವಿಶಿಷ್ಟ ಅನುಭವ ನೀಡಿತು.

ಸುಪ್ರಸಿದ್ಧ ಭೀಮಪಲಾಸಿ ರಾಗವನ್ನು ವಿಲಂಬಿತ್‌ನಲ್ಲಿ ಆರಂಭಿಸಿ (ವಿಲಂಬಿತ್ ಏಕ್‌ತಾಲ್) ಮಧ್ಯಲಯದಲ್ಲಿ`ಆಕಾರ್~ ಬೋಲ್ ತಾನ್‌ಗಳನ್ನು ಹಾಡಿ ಧೃತ್‌ನಲ್ಲಿ ಮುಗಿಸುತ್ತಿರುವಾಗಲೇ ಈ ರಾಗಕ್ಕೆ ಅತ್ಯಂತ ಸಮೀಪ ಮತ್ತು ಒಂದಕ್ಕೊಂದು ಪೂರಕವಾದ ರಾಗ `ಧಾನಿ~ ಆರಂಭಿಸಿದ್ದು ಸಂಗೀತ ಕಛೇರಿ ವಿಭಿನ್ನವಾಗಿ ಮೂಡಿಬರಲು ಕಾರಣವಾಯಿತು.

ಕ್ಲಿಷ್ಟಕರವಾದ `ಕೂಟ್~ ಮತ್ತು `ವುಟ್~ ತಾನ್‌ಗಳು ಕಲಾವಿದರ ಗಾನ ಪ್ರಬುದ್ಧತೆ ಎತ್ತಿತೋರಿಸಿತು. ನಂತರ ಹಾಡಿದ ರಾಗ ಮುಲ್ತಾನಿ ಕೂಡ ಹೆಚ್ಚು ಕಡಿಮೆ ಒಂದೇ ತರದ ಸ್ವರಗಳನ್ನು ಹೊಂದಿದ್ದು ಅದನ್ನು ಕೂಡ ತಾನ್‌ಗಳ ಸುರಿಮಳೆಯೊಂದಿಗೆ ಪ್ರಸ್ತುತಪಡಿಸಿದರು.

ಸಭಾಂಗಣದ ಹೊರಗೆ ಭೋರ್ಗರೆಯುವ ಮಳೆ, ಗುಡುಗು; ಇತ್ತ ವೇದಿಕೆಯಲ್ಲಿ `ಮಳೆ~ಯನ್ನು ಬಿಂಬಿಸುವ ರಾಗ `ಮೇಘ್~ ಮಧ್ಯಲಯ ಝಪ್‌ತಾಲ್‌ನಲ್ಲಿ ಮೂಡಿ ಬಂದದ್ದು ಸಂದರ್ಭೋಚಿತವಾಗಿಯೂ ಇತ್ತು.

ಕಲಾವಿದರಿಗೆ ನೀಡಿದ್ದ ನಿಗದಿತ ಸಮಯ ಮೀರುತ್ತಿದ್ದರೂ ಕೇಳುಗರ ಒತ್ತಾಸೆ ಮೇರೆಗೆ ರಾಗ `ದುರ್ಗಾ~ ಮತ್ತು `ಜನಸಮ್ಮೊಹಿನಿ~ ರಾಗವನ್ನು ಸಂಕ್ಷಿಪ್ತವಾಗಿಪ್ರಸ್ತುತಪಡಿಸಿದರು. ಕೊನೆಯಲ್ಲಿ ರಾಗ `ಭೈರವಿ~ಯಲ್ಲಿ ಜನಪ್ರಿಯವಾದ `ಭವಾನಿ ದಯಾನಿ~ ಭಜನ್ ಹಾಡಿ ಮುಗಿಸಿದಾಗ ಗಾಯನ ಕಛೇರಿ ಮೂರು ತಾಸುಗಳ ಕಾಲ ಕಳೆದಿತ್ತು.

ಇಷ್ಟು ಸಮಯವನ್ನು ಸುಮಧುರ ಸಂಗೀತದಲ್ಲೇ ಕಳೆದರೂ ಇನ್ನೂ ಇವರ ಸಂಗೀತ ಕೇಳುವ ಉತ್ಸಾಹ ಶ್ರೋತೃಗಳಲ್ಲಿ ಇದ್ದದ್ದು, ಮಿಶ್ರಾ ಸಹೋದರರ ಗಾಯನದ ಉತ್ಕೃಷ್ಟತೆಗೆ ಸಾಕ್ಷಿಯಾಯಿತು.

ತಬಲಾದಲ್ಲಿ ಪಂ. ರವೀಂದ್ರ ಯಾವಗಲ್ ಮತ್ತು ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಹಕರಿಸಿದರೆ, ತಂಬೂರಿಯಲ್ಲಿ ಜಗನ್ನಾಥ ಮತ್ತು ದೇಸಾಯಿ ಸಾಥಿ ನೀಡಿ ಕಛೇರಿಗೆ ಕಳೆ ಕಟ್ಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.