ADVERTISEMENT

ನಟನೆ ದೈವಿಕ ಅನುಭೂತಿ

ಗುಡಿಹಳ್ಳಿ ನಾಗರಾಜ
Published 27 ಅಕ್ಟೋಬರ್ 2018, 19:45 IST
Last Updated 27 ಅಕ್ಟೋಬರ್ 2018, 19:45 IST
‘ವಿರಾಸತ್‌’ ಹಿಂದಿ ನಾಟಕದಲ್ಲಿ ನಟಿ ಸವಿತಾ
‘ವಿರಾಸತ್‌’ ಹಿಂದಿ ನಾಟಕದಲ್ಲಿ ನಟಿ ಸವಿತಾ   

ಸಮಕಾಲೀನ ಭಾರತೀಯ ರಂಗಸಂದರ್ಭದ ಅತ್ಯುತ್ತಮ ನಟಿಯರ ಸಾಲಿನಲ್ಲಿ ನಿಲ್ಲುವ ಹೆಮ್ಮೆಯ ಕನ್ನಡತಿ ಸವಿತಾ. ಮಾತಿನಲ್ಲಿ ಅಸ್ಖಲಿತತೆ, ಆಂಗಿಕ ಅಭಿನಯದಲ್ಲಿ ಲೀಲಾಜಾಲತೆ, ಸಂದರ್ಭೋಚಿತ ನೃತ್ಯ– ಹೀಗೆ ಪಾತ್ರ ಬಯಸುವ ಎಲ್ಲ ಆಯಾಮಗಳಲ್ಲಿ ತಕ್ಕ ಪರಿಣತಿ ಪಡೆದ ನಟಿ. ಪಾತ್ರವೇ ತಾವಾಗುವುದು ಹಳೆಯ ಮಾತಾಯಿತು. ಇವರು ನಾಟಕದ ಒಂದು ಪಾತ್ರವಾಗುತ್ತಾರೆ: ಅದರಲ್ಲಿ ಒಳ್ಳೆಯದಿದ್ದರೆ ಪಡೆಯುತ್ತಾರೆ, ಕೆಟ್ಟದಿದ್ದರೆ ಕಳಚುತ್ತಾರೆ. ಅದು ವಿಮೋಚನೆಯೂ ಹೌದು, ಸಾಕ್ಷಾತ್ಕಾರವೂ ಹೌದು.

ಅವರ ಮಾತಿನಲ್ಲೇ ಕೇಳಿ- ‘ನನ್ನ ಒಲವು ಏನಿದ್ದರೂ ಅಭಿನಯದ ಕಡೆಗೆ. ಪಾತ್ರದಲ್ಲಿರುವ ಒಳ್ಳೆಯದನ್ನು ಆವಾಹಿಸಿಕೊಳ್ಳಬೇಕು. ಕೆಟ್ಟದ್ದನ್ನು ಕಳಚಬೇಕು ಎನಿಸುತ್ತದೆ. ಅದೊಂದು ದೈವಿಕ ಅನುಭೂತಿ. ಮಾನಸಿಕ ನೆಮ್ಮದಿ ಕದಡಿದರೆ, ಓಹೋ ಪಾತ್ರ ಮಾಡಿದರೆ ಸರಿ ಹೋಗಿಬಿಡುತ್ತೇನೆ ಎನಿಸುತ್ತಿರುತ್ತದೆ. ನನ್ನ ಮನಸ್ಸನ್ನ, ಅದರ ಹೊಯ್ದಾಟಗಳನ್ನ ಸಮಸ್ಥಿತಿಯಲ್ಲಿಡೋಕೆ ಅಭಿನಯ ನನಗೆ ಸಹಾಯ ಮಾಡುತ್ತೆ...’

ಇನ್ನೇನು ಬೇಕು?

ADVERTISEMENT

ಅಭಿನಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡ ಅಂತಹ ನಟಿ ಸವಿತ. ಜನಿಸಿದ್ದು ಬೆಂಗಳೂರಿನಲ್ಲಿ. ಅಮ್ಮ ಪದ್ಮಾವತಿ ಕನಕಪುರ ಮೂಲದವರು. ಬಾಲ್ಯದ ಕೆಲಕಾಲವನ್ನು ಅಲ್ಲೇ ಕಳೆಯುತ್ತಾರೆ. ಅಪ್ಪ ಬೈರಪ್ಪ. ಸಹಾಯಕ ಕಮಿಷನರ್ (ಎಸಿ) ಆಗಿ ನಿವೃತ್ತಿ ಹೊಂದಿದವರು. ಒಬ್ಬ ಅಕ್ಕ, ತಮ್ಮ ಇದ್ದಾರೆ. ಸವಿತಾಗೆ ಶಾಲಾ ದಿನಗಳಲ್ಲೇ ನಾಟಕದ ಹುಚ್ಚು ಹತ್ತಿತು. ಎಂಇಎಸ್ ಕಾಲೇಜು ಸೇರುವ ಹೊತ್ತಿಗೆ ಹೆಚ್ಚಾಯಿತು.

ನರೇಶ ಮಯ್ಯ ನಿರ್ದೇಶನದ 'ಟ್ರಾಯ್‍ನ ಹೆಂಗಸರು' ನಾಟಕದಲ್ಲಿ ಹೆಕೂಬ ಎಂಬ ಸವಾಲಿನ ಪಾತ್ರ ಸಿಕ್ಕಿತು. ಅಭಿನಯವನ್ನು ಗಂಭೀರವಾಗಿ ತೆಗೆದುಕೊಂಡರು. ಒಳ್ಳೆಯ ಹೆಸರೂ ಬಂದಿತು. ಇದನ್ನು ಗಮನಿಸಿದ ಗೋಪಾಲಕೃಷ್ಣ ನಾಯರಿಯವರು ತಮ್ಮ ‘ಊರುಭಂಗ’ ಯಕ್ಷಗಾನ ನಾಟಕದಲ್ಲಿ ಅಶ್ವತ್ಥಾಮನ ಪಾತ್ರ ನೀಡಿದರು. ಎಂಇಎಸ್‍ನಲ್ಲಿ ರಂಗಶಾಲೆ ಆರಂಭವಾಗಲಿದೆ. ಅಲ್ಲಿ ಸೇರಿಕೊಳ್ಳಿ ಎಂದು ಸಲಹೆ ನೀಡಿದರು. ಮೊದಲ ಬ್ಯಾಚ್‍ಗೆ ಸೇರ್ಪಡೆ. ಓದು, ಅದಕ್ಕೂ ಮಿಗಿಲಾಗಿ ಅಭಿನಯ. ಒಟ್ಟೊಟ್ಟಿಗೇ ಸಾಗಿದವು. ಚಂದ್ರಶೇಖರ ಪಾಟೀಲರ ‘ಅಪ್ಪ’ ಅಸಂಗತ ನಾಟಕ ನಿರ್ದೇಶಿಸಿ ಸೈ ಎನಿಸಿಕೊಂಡರು. ‘ಡಂಡಂ’ ಎಂಬ ಮತ್ತೊಂದು ಕಿರುನಾಟಕ ಮಾಡಿಸಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಅದೇ ಕಾಲೇಜಿನಲ್ಲಿ ಎಂ.ಎ ಮಾಡಿಕೊಂಡು ಎಸ್‍ಜೆಆರ್‌ಸಿ ಮಹಿಳಾ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು.

ಸವಿತಾ

ಇದಲ್ಲ; ನನ್ನ ಸಾಧನೆ, ಸಿದ್ಧಿ ಏನಿದ್ದರೂ ‘ಅಭಿನಯ’ ಎನಿಸಿತು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಸೇರಿ, ಅಲ್ಲಿಯೂ ‘ಅಭಿನಯ’ವನ್ನೇ ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡರು. ಬಿಹಾರಿ ಹಿಂದಿ ಆಡುಭಾಷೆಯ ‘ಜಲ್ ದಮಾರೋ ಬಾಜೆ’ ನಾಟಕದಲ್ಲಿ ಅಭಿನಯಕ್ಕೆ ಒಳ್ಳೆಯ ಹೆಸರು ಬಂತು. ಮೂರು ವರ್ಷದ ಪದವಿ (2006-09) ಪೂರೈಸಿದರು.

ಅಖಾಡ ಬೇಕಿತ್ತು. ಕರ್ನಾಟಕಕ್ಕೆ ವಾಪಸಾದರು. ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕೇಂದ್ರದ ವತಿಯಿಂದ ಸುರೇಶ ಆನಗಳ್ಳಿ ನಡೆಸುತ್ತಿದ್ದ ರಂಗಶಿಬಿರಗಳ ಸಮನ್ವಯಕಿಯಾಗಿ ಸೇರಿದರು. ಬೇರೆ ಬೇರೆ ತಂಡಗಳಲ್ಲಿ ಅಭಿನಯಿಸಿದರು. ಹರಪನಹಳ್ಳಿಗೆ ಹೋಗಿ ಪರಶುರಾಮ ಸಂಘಟಿಸಿದ ಶಿಬಿರಗಳನ್ನು ನಿರ್ದೇಶಿಸಿದರು. ದಾಕ್ಷಾಯಣಿ ಭಟ್ ನಿರ್ದೇಶನದ ‘ರಾಜಾ ಸೋಮಶೇಖರ ನಾಯಕ’ ನಾಟಕದಲ್ಲಿ ರಾಣಿ ಪಾತ್ರದಲ್ಲಿ ಮೆಚ್ಚುಗೆಗಳಿಸಿದರು. ಅಲ್ಲಿಂದ ಸಾಣೇಹಳ್ಳಿಗೆ ನಡೆದರು. ಪಂಡಿತಾರಾಧ್ಯ ಸ್ವಾಮೀಜಿ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಶಿವಸಂಚಾರ’ದಲ್ಲಿ ‘ಯಹೂದಿ ಹುಡುಗಿ’ ನಾಟಕ ನಿರ್ದೇಶಿಸುವ ಅವಕಾಶ ಬಹುಬೇಗ ಸವಿತಾ ಅವರಿಗೆ ಲಭಿಸಿತು.

ಸಾಲದೆನಿಸಿತು. ಮತ್ತೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ವಾಪಸಾಗಿ ಅಲ್ಲಿನ ರೆಪರ್ಟರಿಯಲ್ಲಿ (ತಿರುಗಾಟ) ಹಿಂದಿ, ಇಂಗ್ಲಿಷ್ ನಾಟಕಗಳಲ್ಲಿ ಅಭಿನಯ ಶುರು ಮಾಡಿದರು. ದೇವೇಂದ್ರಕುಮಾರ್ ಅಂಕುರ್, ಹೇಮಾಸಿಂಗ್, ಅನಿಲ್ ಚೌಧರಿ, ಆದಿಲ್ ಹುಸೇನ್ ಮುಂತಾದ ಘಟಾನುಘಟಿಗಳ ನಿರ್ದೇಶನದಲ್ಲಿ ‘ಕಿಂಗ್‍ಲಿಯರ್’, ‘ಮಿಡ್‍ಸಮ್ಮರ್’, ‘ಮಹಾನಗರೋಂಕೆ ಜಂಗಲ್‍ಮೇ’, ‘ರುಸ್ತುಂ ಸೋಹ್ರಬ್’, ‘ಮೃಚ್ಚಕಟಿಕಂ’, ‘ಚಿತ್ರಪಟ ರಾಮಾಯಣ’, ‘ಅಂಧಯುಗ್’, ‘ಲೈಲಾ ಮಜ್ನು’ ಮುಂತಾದ ಹಿಂದಿ, ಇಂಗ್ಲಿಷ್ ನಾಟಕಗಳಲ್ಲಿ- ಯಾವ ಉತ್ತರದ ನಟ, ನಟಿಯರಿಗೆ ಕಡಿಮೆ ಇಲ್ಲವೆನ್ನುವಂತೆ ನಟಿಸಿದರು.

ದೇಶದ ಹಲವಾರು ನಗರಗಳಲ್ಲಿ ನಡೆದ ಇಂಗ್ಲಿಷ್, ಹಿಂದಿ ನಾಟಕೋತ್ಸವಗಳಲ್ಲಿ ನಟಿಸಿ ಬಹುಭಾಷಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಅಂತಹ ಉತ್ಸವವನ್ನು ಬೆಂಗಳೂರಿನಲ್ಲಿ ನೋಡುವ ಅವಕಾಶವೂ ರಂಗಾಸಕ್ತರಿಗೆ ದಕ್ಕಿತ್ತು. ಅನುರಾಧ ಕಪೂರರ ‘ವಿರಾಸತ್’ ನಾಟಕದ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಅದು ಸವಿತಾಗೆ ಹೆಚ್ಚು ಖುಷಿ ನೀಡಿದ ಪಾತ್ರವೂ ಹೌದು. ಹಿಂದಿ ಮಾತೃಭಾಷೆಯವರಿಗಿಂತ ನಿನ್ನ ಭಾಷೆಯಲ್ಲಿ ಹೆಚ್ಚು ಸ್ಪಷ್ಟತೆ ಇದೆ ಎನ್ನುವ ಮೆಚ್ಚುಗೆ ವ್ಯಕ್ತವಾಯಿತು.

ರಾಷ್ಟ್ರವ್ಯಾಪಿ ಗುರುತಿಸಲ್ಪಟ್ಟಿದ್ದರು. ಮತ್ತೆ ಕರ್ನಾಟಕಕ್ಕೆ ವಾಪಸಾದರು. ಇಷ್ಟೊಂದು ಅನುಭವ ಶ್ರೀಮಂತಿಕೆ ನಂತರ ನಾಟಕ ಬಿಟ್ಟರೆ ಮತ್ತೇನು ಎಂಬಂತೆ ಅಭಿನಯದ ಬೆಟ್ಟ ಹತ್ತುತ್ತಲೇ ಇದ್ದಾರೆ. ‘ಕೊಡೆಗಳು’, ‘ಸುಧಾರಿತ ಸೌಭದ್ರ’, ‘ಯಮನ ಸೋಲು’, ‘ಜಲಗಾರ’, ‘ಕೆರೆಗೆ ಹಾರ’, ‘ಯಕ್ಷ ಜನಮೇಜಯ’, ‘ಕಿರಗೂರಿನ ಗಯ್ಯಾಳಿಗಳು’ ಸೇರಿದಂತೆ 40ಕ್ಕೂ ಅಧಿಕ ಶೀರ್ಷಿಕೆಯ ನೂರಾರು ಪ್ರಯೋಗಗಳು; ಗೀತಗೋವಿಂದ, ಸತ್ಯನಾರಾಯಣ ವ್ರತ, ಲಂಕಾದಹನ ಸೇರಿದಂತೆ ನಾಲ್ಕಾರು ಯಕ್ಷಗಾನದ ನಟಿ; ಡಾಲ್‌ಹೌಸ್ ಮೈಮ್ ಪ್ರದರ್ಶನ, ಏಕಲವ್ಯ ದೊಡ್ಡಾಟ- ಒಂದೇ ಎರಡೇ ನಾಟಕ... ನಾಟಕ.. ನಾಟಕ.. ಅಭಿನಯ... ಅಭಿನಯ... ಅಭಿನಯ... ರಾಜ್ಯದ ಹಲವು ಊರುಗಳಲ್ಲಿ ಪ್ರದರ್ಶನಗಳಲ್ಲಿ ಅವರು ನಟಿಸಿದ್ದಾರೆ.

ನೀನಾಸಂ, ಅಭಿನಯ ತರಂಗದಲ್ಲಿ ತರಬೇತಿ ಪಡೆದ ನಟ, ನಿರ್ದೇಶಕ ಜಿ.ವಿ. ಪ್ರಸನ್ನ ಅವರನ್ನು ಕಳೆದ ವರ್ಷ ವರಿಸಿದ ಸವಿತಾ ಈಗಂತೂ ನಾಟಕಗಳಲ್ಲೇ ತಲ್ಲೀನ. ಅಭಿನಯಕ್ಕೆ ಪ್ರಥಮ ಆದ್ಯತೆ. ನೇಪಥ್ಯ ಕಲಾವಿದೆಯಾಗಿಯೂ ತೊಡಗಿಸಿಕೊಂಡಿರುವ ಸವಿತಾ ಟಾಗೂರರ ‘ಚಿತ್ರ’ ನಾಟಕವನ್ನು ‘ಅಂಗದೆ’ಯಾಗಿ ರೂಪಾಂತರಿಸಿ ಪ್ರಸನ್ನರ ಒಟ್ಟಿಗೆ ಅಭಿನಯಿಸಿದರು. ರಾಮು ರಾಮನಾಥ ರಚಿಸಿದ ತಮಿಳು ಮೂಲದ ಹಿಂದಿ ನಾಟಕ ‘ಕಾಮ್ರೇಡ್ ಕುಂಭಕರ್ಣ’ವನ್ನು ಕನ್ನಡಕ್ಕೆ ತರಬೇಕು ಎನ್ನುವ ಆಸೆ ಹೊಂದಿದ್ದಾರೆ.

ಉತ್ತಮ ನಟಿಯರು ಹಲವರಿದ್ದಾರೆ. ಸವಿತಾ ಉತ್ತಮ ಅತ್ಯುತ್ತಮ ನಟಿಯೂ ಹೌದು. ನಟಿಯಾಗಿ ಅವರ ವಿಶೇಷತೆಯನ್ನು ಗೋಪಾಲಕೃಷ್ಣ ನಾಯರಿ ಅವರ ಈ ಮುಂದಿನ ಮಾತುಗಳು ಚೆನ್ನಾಗಿ ಕಟ್ಟಿಕೊಡುತ್ತವೆ: ‘ನನ್ನ ಹಲವು ನಾಟಕಗಳಲ್ಲಿ ಅಭಿನಯಿಸಿರುವ ಸವಿತಾ ಅತ್ಯಂತ ಪ್ರಾಮಾಣಿಕಳು. ಆಧುನಿಕ ಸಂವೇದನಾಶೀಲ ಅವಿಷ್ಕಾರ ಮನೋಭಾವದ ವೃತ್ತಿಪರ ನಟಿ. ಗುಂಪಿನಲ್ಲಿ ತಾನು ಮಾತ್ರ ಚೆನ್ನಾಗಿ ನಟಿಸಬೇಕು ಎಂಬುದಕ್ಕೆ ಸೀಮಿತಗೊಳಿಸಿಕೊಳ್ಳದೆ, ಸಾಂಘಿಕತೆಗೆ ಒತ್ತುಕೊಡುವವಳು. ಸಹನಟ, ನಟಿಯರ ಜೊತೆಗೆ ಸರಳವಾಗಿ ಉಳಿಯುವಳು, ಪಾತ್ರದಲ್ಲಿ ಮೆರೆಯುವಳು. ಯಾವುದೇ ಊರಿಗೆ ಹೋದರೂ ತನ್ನ ವ್ಯಕ್ತಿತ್ವದಲ್ಲಿ ಪ್ರತಿಷ್ಠೆ ತೋರಿಸಲ್ಲ. ಪಾತ್ರವನ್ನು ಪ್ರತಿಷ್ಠೆಗೊಳಿಸುತ್ತಾಳೆ’. ಇಷ್ಟು ಮೆಚ್ಚುಗೆ ಸಾಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.