ADVERTISEMENT

ರಂಗಭೂಮಿ | ಊರುಕೇರಿಯಲ್ಲಿ ದಾಂಪತ್ಯ ಗೀತ

ಕಿಶನರಾವ್‌ ಕುಲಕರ್ಣಿ
Published 11 ಜನವರಿ 2025, 22:30 IST
Last Updated 11 ಜನವರಿ 2025, 22:30 IST
<div class="paragraphs"><p>ನಾಟಕದ ದೃಶ್ಯ</p></div>

ನಾಟಕದ ದೃಶ್ಯ

   

ಈ ರಂಗ ಪ್ರಯೋಗಕ್ಕೆ ರಂಗಮಂದಿರವೇ ಬೇಕು ಎಂದೇನಿಲ್ಲ; ಊರಿನ ಮನೆಯಂಗಳ, ಓಣಿ, ವಠಾರ, ಸಭಾಭವನದಲ್ಲಿ ಜನರು ಕುಳಿತು, ನಿಂತು ನೋಡಬಹುದು. ಈಗಾಗಲೇ ಹಲವಾರು ಯಶಸ್ವಿ ಪ್ರಯೋಗಗಳನ್ನು ಕಂಡಿರುವ ದಾಂಪತ್ಯ ಗೀತ ನಾಟಕ ಜನಮಾನಸದಲ್ಲಿ ಜಾಗಪಡೆದಿದೆ.

ರಾಮೇನಹಳ್ಳಿ ಮುಂಡರಗಿ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ. ಕೃಷಿಯನ್ನೇ ನಂಬಿರುವ ಆ ಹಳ್ಳಿಗರು ಇಡೀ ದಿನ ಹೊಲದಲ್ಲಿ ದುಡಿದು ಸಾಯಂಕಾಲ ಟಿ.ವಿ ಮುಂದೆ ಕುಳಿತು ಧಾರಾವಾಹಿಗಳನ್ನು ನೋಡುವುದು ಸಾಮಾನ್ಯ. ಆದರೆ ಅಂದು ಅವರೆಲ್ಲ ತಮ್ಮ ಮನೆಯ ಟಿ.ವಿ ಆಫ್ ಮಾಡಿ ಹಳ್ಳಿಯ ಮಧ್ಯದಲ್ಲಿದ್ದ ಸಭಾಭವನದ ಮುಂದೆ ಚಾಪೆ ಹಾಸಿಕೊಂಡು ಕುಳಿತು ನಾಟಕ ನೋಡುತ್ತಿದ್ದರು.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ‘ದಾಂಪತ್ಯ ಗೀತ’ ನಾಟಕದ ಸುದ್ದಿ ಹರಿದಾಡಿದ್ದರಿಂದ ನಾಟಕ ನೋಡಲು ಬಹುತೇಕರು ಸಭಾಭವನದ ಮುಂದೆ ಜಮಾಯಿಸಿದ್ದರೆ, ಮಕ್ಕಳು ಮೊದಲೇ ಚಾಪೆ, ಚೀಲ ಹಾಸಿ ಸ್ಥಳ ಕಾಯ್ದಿರಿಸಿದ್ದರು. ಕೆಲವರು ಬೈಕ್ ಮೇಲೆಯೇ ಕುಳಿತು ನೋಡುತ್ತಿದ್ದರೆ, ಜಾಗ ಸಿಗದವರು ಸಂದು, ಕಟ್ಟೆಯ ಮೇಲೆ ನಿಂತು ನೋಡುತ್ತಿದ್ದರು.

ಆರು ತಿಂಗಳಿಂದ ‘ದಾಂಪತ್ಯ ಗೀತ’ ನಾಟಕ ಎಲ್ಲೆಲ್ಲಿ ಪ್ರದರ್ಶನವಾಗಿದೆಯೋ ಅಲ್ಲೆಲ್ಲ ಇದೇ ರೀತಿ ಛಾಪು ಮೂಡಿಸಿದೆ.

ಅಂದಹಾಗೆ ಈ ನಾಟಕ, ಶಿಕ್ಷಕ ದಂಪತಿಯ ಸುತ್ತ ಹೆಣೆದ ಕಥೆ. ಪತಿ ಸಾಹಿತ್ಯ ಪ್ರೇಮಿ. ಸದಾ ಸಾಹಿತ್ಯ ರಚನೆ, ಭಾಷಣ, ಸಮ್ಮೇಳನ, ಹೋರಾಟ, ಬಂಡಾಯದಲ್ಲಿ ಮುಳುಗಿ ಹೋಗಿರುತ್ತಾನೆ. ಹೆಂಡತಿಗೆ ಇದ್ಯಾವುದು ಬೇಕಾಗಿರುವುದಿಲ್ಲ. ತನ್ನ ಪತಿ ತನಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಎಂಬುದು ಅವಳ ಮನದಮಿಡಿತ. ಹೆಂಡತಿ ಎಷ್ಟೇ ಸಿಟ್ಟಾಗಿದ್ದರೂ ಪತಿ ತನ್ನ ಸಾಹಿತ್ಯ, ಪ್ರೇಮ ಸಲ್ಲಾಪದ ಮೂಲಕ ಅವಳ ಮನಸ್ಸನ್ನು ತನ್ನಡೆಗೆ ಆಕರ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಹೆಂಡತಿಯನ್ನು ನೋಡಿ ಅವಳ ಮೇಲೆ ಸಾಹಿತ್ಯ ರಚಿಸುತ್ತಾನೆ, ತಾನು ಬರೆದಿದ್ದನ್ನು ಹಾಡುತ್ತಾನೆ, ನಗಿಸುತ್ತಾನೆ, ಕುಣಿಯುತ್ತಾನೆ, ಅಂತಿಮವಾಗಿ ಹೆಂಡತಿ ತನ್ನ ಸಾಹಿತ್ಯವನ್ನು ಪ್ರೀತಿಸುವ ಹಾಗೆ ಬದಲಾವಣೆ ಮಾಡುತ್ತಾನೆ.  

ನಾಟಕ ಆನಂದಿಸುತ್ತಿರುವ ಪ್ರೇಕ್ಷಕರು

ನಾಟಕದಲ್ಲಿ ಗಂಡ-ಹೆಂಡತಿಯ ಲಘು ಜಗಳ, ಪ್ರೀತಿ, ವಾತ್ಸಲ್ಯ, ಮೋಹದಂತಹ ನವರಸಗಳು ಸೇರಿದಂತೆ ಜನಪದ, ಕೃಷಿ, ಮಳೆ-ಬೆಳೆ, ಗರ್ಭಕಲಿಕೆ, ಮಕ್ಕಳನ್ನು ಬೆಳೆಸುವ ಪರಿ–ಹೀಗೆ ಎಲ್ಲ ವಿಷಯಗಳು ಎಳೆಎಳೆಯಾಗಿ ಬಂದು ಹೋಗುತ್ತವೆ. ಐಸ್ ಫ್ಯಾಕ್ಟರಿ, ಶುಗರ್ ಫ್ಯಾಕ್ಟರಿ, ಲವ್ ಫ್ಯಾಕ್ಟರಿ ಎಂಬ ಪದಗಳು ಸಂಭಾಷಣೆಯಲ್ಲಿ ಅಂತರಾರ್ಥ ಹೊಂದಿದೆ. ಮಧ್ಯದಲ್ಲಿ ಹಾಸ್ಯ, ಕಚಗುಳಿ ನೀಡುವ ಪ್ರಣಯದ ಮಾತುಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಮಧ್ಯದಲ್ಲಿ ಮಧುರ ಹಾಡುಗಳು, ಮನಸ್ಸಿಗೆ ಮುದನೀಡುವ ಸಂಭಾಷಣೆಯ ಮೂಲಕ ದಾಂಪತ್ಯದ ಮಜಲಿನ ಅನನ್ಯತೆ ಮೆರೆದಿದೆ.

ನಾಟಕ ನೋಡಿದ ಪ್ರೇಕ್ಷಕರಲ್ಲಿ ದಂಪತಿ ಮಧ್ಯೆ ಪ್ರೀತಿ ಹೇಗಿರಬೇಕು? ಅವರ ಭಾವನೆ, ಭಾಷೆ ಎಂತಹದ್ದಾಗಿರಬೇಕು, ಪರಸ್ಪರ ಸಾಮರಸ್ಯದಿಂದ ಕುಟುಂಬ ಹೇಗೆ ಕಟ್ಟಬಹುದು ಎಂಬ ಸಕಾರಾತ್ಮಕ ಯೋಚನೆಗಳು ಮೊಳಕೆಯೊಡೆದಿರುತ್ತವೆ. ಇಬ್ಬರು ಪಾತ್ರಧಾರಿಗಳ ಮೂಲಕ ಒಂದು ಗಂಟೆಯಲ್ಲಿ ನಾಟಕ ಮುಗಿದು ಹೋದರೂ ಜೀವನದುದ್ದಕ್ಕೂ ಮರೆಯದಂತೆ ಬದುಕಿನ ಪಾಠ ಹೇಳಿಕೊಡುತ್ತದೆ.

ಓಣಿಯಲ್ಲಿ ಪ್ರದರ್ಶನ ನಡೆದಾಗ ನಿಂತು ನೋಡಬಹುದಾದ ಪುಟ್ಟ ನಾಟಕ ಇದು. ಈಗಾಗಲೇ ರಂಗಮಂದಿರದಲ್ಲಿ, ಪುಟ್ಟ ವೇದಿಕೆಯಲ್ಲಿ, ವಠಾರ, ಮನೆಯಂಗಳ ಹೀಗೆ ಸಣ್ಣ ಜಾಗದಲ್ಲಿಯೂ ಹಲವಾರು ಪ್ರಯೋಗಗಳನ್ನು ಕಂಡಿದೆ. ನಾಟಕ ನೋಡುತ್ತಿದ್ದಾಗ ಕಥೆ, ವಿಷಯಗಳು, ಸನ್ನಿವೇಶಗಳು, ಅಲ್ಲಿ ಬರುವ ಪಾತ್ರಗಳು ಕ್ರಮೇಣ ನಾವಾಗಿ ಕಾಣತೊಡಗಿದಂತಾಗುತ್ತವೆ. ‘ಈ ನಾಟಕ ಸರಳವಾಗಿ ಓಣಿಯ ಮಧ್ಯದಲ್ಲಿಯೇ ಪ್ರದರ್ಶನವಾಗಬೇಕು’ ಎಂದು ನಾಟಕ ರಚನಾಕಾರ ನಿಂಗು ಸೊಲಗಿಯವರ ಹೇಳುತ್ತಾರೆ.

ನಿಜ ಜೀವನದಲ್ಲಿ ದಂಪತಿಯಾಗಿರುವ ಶ್ರೀಕಾಂತ ಮತ್ತು ಅಕ್ಕುಶ್ರೀ ನವಲಗರಿ ರಂಗಾಯಣದ ಕಲಾವಿದರಾಗಿದ್ದು, ನಾಟಕದಲ್ಲೂ ದಂಪತಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಂದು ಗಂಟೆಯ ಈ ಇಬ್ಬರೇ ರಂಗದ ಮೇಲೆ ಅಭಿನಯಿಸುತ್ತಿದ್ದರೂ ನೋಡುಗರಿಗೆ ಎಲ್ಲಿಯೂ ಬೇಸರ ಸುಳಿಯುವುದಿಲ್ಲ. ನಾಟಕದ ಕೊನೆಯಲ್ಲಿ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮನದನ್ನೆ ತೀರಿಕೊಂಡಾಗ ಆ ಶಿಕ್ಷಕ ಅನುಭವಿಸುವ ನೋವು ಪ್ರೇಕ್ಷಕರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡುತ್ತದೆ. ಶಿಕ್ಷಕ ತಾನು ಬರೆದ ಕೃತಿ ಸಮರ್ಪಿಸಿ ‘ಕುಟುಂಬದ ಕುಡಿಯಾಗಿ ಮೂಡಿ ಬಾ’ ಎನ್ನುವುದರೊಂದಿಗೆ ನಾಟಕ ಕೊನೆಗೊಳ್ಳುತ್ತದೆ.

ಈ ನಾಟಕ ಉಚಿತವಾಗಿ ಪ್ರದರ್ಶನವಾಗುತ್ತದೆ. ಆದರೆ ಗ್ರಾಮೀಣ ಜನರು ವಂತಿಕೆ ಸೇರಿಸಿ ದಂಪತಿ ಕಲಾವಿದರಿಗೆ ತಕ್ಕಮಟ್ಟಗೆ ನೆರವು ನೀಡುತ್ತಿರುವುದರಿಂದ ನಾಟಕ ಯಾವುದೇ ಅಡೆತಡೆ ಇಲ್ಲದೆ ಓಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.