ADVERTISEMENT

ರಂಗಭೂಮಿ | ವೃದ್ಧರ ಬದುಕಿನ ನೋವಿನ ಹಾಡು

ಕೆ.ನರಸಿಂಹ ಮೂರ್ತಿ
Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
<div class="paragraphs"><p>‘ಅಯಾನ್‌ ಶಾಂತಿ ಕುಟೀರ’ ನಾಟಕದ ದೃಶ್ಯ</p></div>

‘ಅಯಾನ್‌ ಶಾಂತಿ ಕುಟೀರ’ ನಾಟಕದ ದೃಶ್ಯ

   

ವೃದ್ಧರ ಬದುಕಿನ ಏಕಾಂಗಿತನ, ಅನಾಥಪ್ರಜ್ಞೆ, ಕಿವಿ ಕೇಳದ, ಕಣ್ಣು ಕಾಣದ, ಸರಿಯಾಗಿ ನಡೆಯಲೂ ಆಗದೆ ಬಾಧಿಸುವ ಅನಾರೋಗ್ಯ, ಮಕ್ಕಳ ಬರುವಿಕೆಗಾಗಿ ಕಾದು ಪ್ರಾಣಬಿಡುವ ಜೀವಗಳು.. ಇಂಥ ಸಮಸ್ಯೆಗಳ ಬಗ್ಗೆ ಹಿರಿಯರೇ ನಾಟಕ ಬರೆದು, ತಾಲೀಮು ನಡೆಸಿ ಅಭಿನಯಿಸಿದರೆ ಹೇಗಿರುತ್ತದೆ ಎಂಬ ಕಲ್ಪನೆಯ ಸ್ಪಷ್ಟ ಚಿತ್ರವೇ ‘ಅಯಾನ್‌ ಶಾಂತಿ ಕುಟೀರ’

ಮೈಸೂರಿನ ಕಿರು ರಂಗಮಂದಿರದಲ್ಲಿ ‘ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನತೋಪಿನ ಹವ್ಯಾಸಿಗಳ ತಂಡ’ ಪ್ರದರ್ಶಿಸಿದ ಈ ನಾಟಕದಲ್ಲಿ ವೃದ್ಧಾಶ್ರಮ ಮತ್ತು ವೃದ್ಧಾಪ್ಯವೇ ಪ್ರಧಾನ ಪಾತ್ರಗಳು. ಉಳಿದ ಪಾತ್ರಗಳೆಲ್ಲವೂ ಅವುಗಳನ್ನು ಅನುಸರಿಸುತ್ತವಷ್ಟೇ. ಇದು ವೃದ್ಧಾಪ್ಯವೇ ಮೈವೆತ್ತ ನಾಟಕ.

ADVERTISEMENT

ಅಲ್ಲಿ, ನಡೆಯಲು ಆಗದೆ ಗಾಲಿ ಕುರ್ಚಿ ಅವಲಂಬಿಸಿದ ವೃದ್ಧ ಶ್ರೀನಾಥ, ಮಗನಿಗಾಗಿ ಕಾದು ನಿರಾಶೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವೃದ್ಧೆ ನವೀನಮ್ಮನಿಂದ, ವೃದ್ಧರ ಆರೈಕೆ ಮಾಡುವ 25ರ ಮೋಹಕ ನಿಲುವಿನ, ಸುಂದರ ತರುಣಿ ಶೋಭಾವರೆಗೆ ಎಲ್ಲ ಪಾತ್ರಗಳೂ ವೃದ್ಧಾಪ್ಯದ ಸಮಸ್ಯೆಗಳಿಗೆ ವೈವಿಧ್ಯಮಯ ಕನ್ನಡಿ ಹಿಡಿಯುತ್ತವೆ. ಆದರೆ ಬದುಕು ಸಾಕೆನಿಸುವಂತೆ ಮಾಡುವ ವೃದ್ಧಾಪ್ಯ, ಸಾವು–ನೋವಿನ ನಡುವೆಯೇ ‘ಸರ್ವೇಜನಾ ಸುಖಿನೋಭವಂತು’ ಸಂದೇಶವೂ ಹೊರಬೀಳುತ್ತದೆ.

ಇದು ವೃದ್ಧಾಪ್ಯದ ಎಲ್ಲ ಸಂಕಟಗಳನ್ನೂ ಮೀರಿ ನಿಂತಾಗ ಮೂಡುವ ಲೋಕದೃಷ್ಟಿ. ವೃದ್ಧರ ಲವಲವಿಕೆಯ ದೃಷ್ಟಿಕೋನ, ನಿರಾಶೆಯ ನಿಲುವುಗಳೆರಡಕ್ಕೂ ನಾಟಕ ಸಾಕ್ಷಿಯಾಗಿದೆ.

‘ಅಯಾನ್‌ ಶಾಂತಿ ಕುಟೀರ’ ನಾಟಕದ ದೃಶ್ಯ

ಸರ್ವರಿಗೂ ಸುಖ–ಶಾಂತಿ ಕೋರುವ ವೃದ್ಧಪಾತ್ರಗಳೆಲ್ಲವೂ ಕುಟೀರದಲ್ಲಿ ದುಃಖ ಕ್ಷೋಭೆಯ ಮಡುವಿನಲ್ಲಿವೆ. ನಾಟಕ ಪ್ರೇಕ್ಷಕರನ್ನು ನೇರವಾಗಿ ಆ ಮಡುವಿಗೇ ಕರೆದೊಯ್ದು ನಿಲ್ಲಿಸುತ್ತದೆ. ರಂಗ ಸಜ್ಜಿಕೆ ವೃದ್ಧರ ನಿಲುವಿನಂತೆ ಸರಳ. ಅವರ ಓಡಾಟಕ್ಕೆ ತಕ್ಕಂತೆ ಅನುಕೂಲಕರವಾಗಿಯೇ ಇದೆ. ಸಂಭಾಷಣೆ ನೇರ ನಿಷ್ಠುರ. ಹಿತಕರವಾದ ನೆರಳು–ಬೆಳಕು. ಆಗಾಗ ಕಣ್ಣು ಕುಕ್ಕುವುದನ್ನು ತಪ್ಪಿಸಬಹುದಿತ್ತು.

90ಕ್ಕೆ ಒಂದು ಕಡಿಮೆ ಎಂಬ ವಯಸ್ಸಿನಲ್ಲಿ, ಗಾಲಿ ಕುರ್ಚಿಯಲ್ಲಿ ಕುಳಿತು ಅಭಿನಯಿಸುವುದರ ಜೊತೆಗೆ ನ.ರತ್ನ ಅವರು ನಾಟಕವನ್ನೂ ಬರೆದಿರುವುದು ವಿಶೇಷ. ಪ್ರದರ್ಶನಕ್ಕೂ ಮುನ್ನ, ನಾಟಕದ ಓದು-ವಿಶ್ಲೇಷಣೆಯೂ ನಡೆದಿದ್ದರ ಪರಿಣಾಮವಾಗಿಯೇ, ಇಡೀ ನಾಟಕ ವೃದ್ಧರ ಸ್ನೇಹಿಯಾಗಿ ರೂಪಗೊಂಡಿದೆ.

‌ನಾಟಕದ ಹದಿನೆಂಟು ಪಾತ್ರಗಳ ಪೈಕಿ ಬಹುತೇಕ ವೃದ್ಧಪಾತ್ರಗಳು. ಅಭಿನಯಿಸಿದವರೆಲ್ಲರೂ ಮೈ–ಮನ, ತಲೆಗೂದಲು ಹಣ್ಣಾದವರೇ. ರಂಗಭೂಮಿಯ ಹಲವು ನೆಲೆಗಳಲ್ಲಿ ದಶಕಗಳನ್ನು ಕಳೆದವರು.

ಹೀಗಾಗಿ ಇಲ್ಲಿ ಮಾಗಿದ ಅಭಿನಯವೂ ಉಂಟು. ಜೊತೆಗೇ ಒಮ್ಮೊಮ್ಮೆ ಸಂಭಾಷಣೆ ಮರೆಯುವ, ಮರೆತದ್ದನ್ನು ನೆನಪಿಸಿಕೊಂಡು ಮತ್ತೆ ಹೇಳುವುದೂ ಉಂಟು. ಕೆಲವೊಮ್ಮೆ ಇನ್ನೊಂದು ಪಾತ್ರದ ಮಾತು ಮುಗಿಯುವ ಮುನ್ನವೇ ಮುಂದಿನ ಮಾತನ್ನು ಆಡಿ, ಮೌನಕ್ಕೆ ಮೊರೆಹೋಗುವುದೂ ಉಂಟು. ಇಂಥ ಸನ್ನಿವೇಶಗಳನ್ನು ಮುಜುಗರಕ್ಕೆಡೆ ಮಾಡದಂತೆ ನಿಭಾಯಿಸುವಲ್ಲಿ ಸಹ ಪಾತ್ರಧಾರಿಗಳ ಜಾಣ್ಮೆ, ಅನುಭವವೂ ಹೊಳೆಯುತ್ತದೆ. ಆದರೂ, ತಾಲೀಮು ಇನ್ನಷ್ಟು ಚೆನ್ನಾಗಿ ನಡೆಯಬೇಕಿತ್ತು ಎಂದೆನಿಸದೇ ಇರದು. ಮುಕುಂದನ್‌ ಪಾತ್ರದ ತುಂಟ, ನಡೆ–ನುಡಿಗಳಿಂದ ನಾಟಕವನ್ನು ಆವರಿಸುವ ಬಿ.ಆರ್‌.ರವೀಶ್‌ ಸಂಗೀತವೂ ಅವರಂತೆಯೇ ಇದೆ.

‘ಅಯಾನ್‌ ಶಾಂತಿ ಕುಟೀರ’ ನಾಟಕದ ದೃಶ್ಯ

ವಿಷಾದವೇ ವೃದ್ಧಾಪ್ಯದ ಸ್ಥಾಯಿಭಾವ. ವೃದ್ಧರ ಎಲ್ಲ ಕಷ್ಟ, ನಷ್ಟ, ಸಂಕಟಗಳಿಗೂ ಈ ಭಾವವೇ ಆಶ್ರಯ ನೀಡುತ್ತದೆ. ನಾಟಕದಲ್ಲೂ ಸಹಜವಾಗಿ ಇದು ಒಡಮೂಡಿದೆ. ಅದಕ್ಕೆ ತಕ್ಕಂತೆ ಕಥಾಹಂದರ, ಪಾತ್ರಗಳ ಆಯ್ಕೆಯೂ ಆಗಿದೆ. ಹೀಗಾಗಿ ನಾಟಕ ನಡೆಯುವ ಅಷ್ಟೂ ಹೊತ್ತು ರಂಗಸಜ್ಜಿಕೆಯಲ್ಲಿರುವವರಷ್ಟೇ ಪ್ರಮಾಣದಲ್ಲಿ ಪ್ರೇಕ್ಷಕರು ವಿಷಾದದಲ್ಲಿ ಮುಳುಗೇಳಲೇಬೇಕು.

ರಾಮೇಶ್ವರಿ ವರ್ಮ, ಶ್ರೀಮತಿ ಹರಿಪ್ರಸಾದ್‌ ಅವರಂಥ ಹಣ್ಣಾದ ವೃದ್ಧ ಪಾತ್ರಧಾರಿಗಳು ಮೈಸೂರಿನ ರಂಗಪ್ರಿಯರಿಗೆ, ಅದನ್ನೂ ಮೀರಿ ಸಾಂಸ್ಕೃತಿಕ ವಲಯದಲ್ಲಿ ಬಹುತೇಕರಿಗೆ ಪರಿಚಿತರೂ, ಕೆಲವರಿಗೆ ಅತ್ಯಾಪ್ತರೂ ಆಗಿರುವುದರಿಂದ, ಅವರ ನಟನೆಯನ್ನೂ ನೋಡುವ ಪ್ರೇಕ್ಷಕರ ನೋಟದಲ್ಲೂ ಆಪ್ತತೆ ಮೂಡುವುದು ನಾಟಕದ ವಿಶೇಷ. ನಿರ್ದೇಶಕ ಎಚ್‌.ಎಸ್‌.ಉಮೇಶ್‌ ಅವರು ಈ ಎಲ್ಲ ಹಿರಿಯರಿಂದ ಅಭಿನಯದ ಕಲಾ ಕಸರತ್ತು ಮಾಡಿಸಿರುವುದು ಒಂದು ಸಾಹಸವೇ ಎನ್ನಬೇಕು.

ಪ್ರಯೋಗಶೀಲತೆ ಎಂದರೇನು ಎಂಬುದಕ್ಕೂ ಈ ನಾಟಕ ಒಂದು ಉತ್ತಮ ನಿದರ್ಶನ. ವೃದ್ಧರಿಂದ ರಚನೆಗೊಂಡು, ವೃದ್ಧರೇ ಅಭಿನಯಿಸಿದ ನಾಟಕ, ವೃದ್ಧರಿಗೋಸ್ಕರ ಮಾತ್ರ ಅಲ್ಲ. ಏಕೆಂದರೆ, ವೃದ್ಧರ ಸಮಸ್ಯೆಗಳನ್ನು ಅರಿಯಬೇಕಾದ ಇನ್ನಿತರ ಎಲ್ಲ ವಯಸ್ಸಿನವರಿಗೂ ಈ ನಾಟಕ ಒಂದು ಜೀವನಪಾಠದಂತೆಯೂ ಕಾಣುತ್ತದೆ.

‘ಅಯಾನ್‌ ಶಾಂತಿ ಕುಟೀರ’ ನಾಟಕದ ದೃಶ್ಯ

ತೆಂಗಿನತೋಪಿನ ಹವ್ಯಾಸಿಗಳು

ಮೈಸೂರಿನ ‘ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನತೋಪಿನ ಹವ್ಯಾಸಿಗಳ ತಂಡ’ವೇ– ಸಮತೆಂತೋ. ಈ ಹೆಸರಿನಲ್ಲಿ ಹವ್ಯಾಸಿಗಳು ನಾಟಕವಾಡಲು 1967ರಲ್ಲಿ ಶುರುವಾದ ಗೆಳೆಯರ ತಂಡ. ಸ್ಥಾಪಕರಲ್ಲಿ ಒಬ್ಬರಾದ ನ.ರತ್ನ ಮತ್ತು ರಾಮೇಶ್ವರಿ ವರ್ಮ ತೊಂಬತ್ತರ ಆಸುಪಾಸಿನಲ್ಲೂ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಹೊಸ ನಟ ನಿರ್ದೇಶಕರು ನಾಟಕಕಾರರನ್ನು ಪರಿಚಯಿಸುತ್ತಾ ಹಲವು ಪ್ರಯೋಗಗಳನ್ನೂ ಮಾಡಿ ಈ ತಂಡ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.