ADVERTISEMENT

ದಯಾನದಿಯ ದಂಡೆಯ ಮೇಲೆ ಶಾಂತಿಯ ಹಂಬಲ

ಜಡೇಕುಂಟೆ ಮಂಜುನಾಥ್
Published 18 ಜನವರಿ 2025, 23:33 IST
Last Updated 18 ಜನವರಿ 2025, 23:33 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಇತ್ತೀಚಿಗೆ ಚಿತ್ರದುರ್ಗದ ತ.ರಾ.ಸು. ರಂಗಮಂದಿರದಲ್ಲಿ ಕವಿ ಮೋದೂರು ತೇಜ ಅವರು ರಚಿಸಿರುವ ‘ದಯಾನದಿಯ ದಂಡೆಯ ಮೇಲೆ’ ನಾಟಕ ಧೀಮಂತ್ ರಾಮ್ ನಿರ್ದೇಶನದಲ್ಲಿ ಪ್ರದರ್ಶನ ಕಂಡಿತು. ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರೆಲ್ಲರೂ ಚಿತ್ರದುರ್ಗದ ಸರ್ಕಾರಿ ಪದವಿ ಕಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು. ಐತಿಹಾಸಿಕ ವಸ್ತುವನ್ನೊಳಗೊಂಡ ಗಂಭೀರ ನಾಟಕವನ್ನು ವಿದ್ಯಾರ್ಥಿಗಳ ಮೂಲಕ ರಂಗಕ್ಕೆ ತರುವಲ್ಲಿ ನಿರ್ದೇಶಕರ ಪ್ರಯತ್ನ ಮತ್ತು ಶ್ರದ್ಧೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿಗಳು ತಮ್ಮ ಪಾತ್ರದ ಪರಕಾಯ ಪ್ರವೇಶ ಮಾಡಿದವರಂತೆ ನಟಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಯುದ್ಧ ಎಲ್ಲಾ ಕಾಲಕ್ಕೂ ವಿನಾಶಕಾರಿಯಾದದ್ದೇ ಎನ್ನುವ ವಿಚಾರ ರಂಗದ ಮೇಲೆ ಧ್ವನಿ ಪೂರ್ಣವಾದ ದೃಶ್ಯಕಾವ್ಯವಾಗಿ ಮೂಡಿಬಂತು.

ಯುದ್ಧ ಎನ್ನುವುದು ಇತಿಹಾಸದ ಉದ್ದಕ್ಕೂ ತನ್ನ ಇರುವಿಕೆಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ನಡೆದು ಹೋಗಿರುವ ಎರಡು ಜಾಗತಿಕ ಮಹಾಯುದ್ಧಗಳಿಂದ ಪಾಠ ಕಲಿತಿಲ್ಲ. ಯುದ್ಧದ ಭೀಕರತೆಯ ಬಗ್ಗೆ, ಅದರಿಂದ ಪರಿಣಾಮದಿಂದ ಅಪಾರ ಸಾವು ನೋವು ಆಗಿವೆ. ಅವುಗಳ ಬಗ್ಗೆ  ಅರಿವಿದ್ದರೂ ಯಾವುದೋ ಉನ್ಮಾದಕ್ಕೆ ಒಳಗಾದವರಂತೆ ವರ್ತಿಸುತ್ತಿದ್ದೇವೆ. ಇಂತಹ ಯುದ್ಧ ಮಾಡುವ ಜಿದ್ದಿಗೆ ಬಿದ್ದು ಜನಸಾಮಾನ್ಯರಿಗೆ ಇನ್ನಿಲ್ಲದ ಸಂಕಟಗಳನ್ನು ತಂದೊಡ್ಡುತ್ತೇವೆ. ಇಂತಹ ವಿನಾಶಕಾರಿ ಯುದ್ಧವನ್ನು ವಿರೋಧಿಸಿ, ಶಾಂತಿ ಸ್ಥಾಪನೆಯ ಹಂಬಲಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದವರಲ್ಲಿ ಗೌತಮ ಬುದ್ದ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಆತನ ವಿಚಾರಗಳಿಂದ ಪ್ರಭಾವಿತನಾದ ಸಾಮ್ರಾಟ ಅಶೋಕ, ಕಳಿಂಗ ಯುದ್ಧದ ನಂತರ ಮನಃಪರಿವರ್ತನೆಯಾಗಿ ಯುದ್ಧದಿಂದ ವಿಮುಖನಾಗಿ ಅಖಂಡ ಭರತಖಂಡವನ್ನು ಶಾಂತಿಯುತವಾಗಿ ಆಳಿದ ಮೊಟ್ಟ ಮೊದಲ ಚಕ್ರವರ್ತಿಯಾಗಿ ಚರಿತ್ರೆಯಲ್ಲಿ ನಿಲ್ಲುತ್ತಾನೆ.

ಅಶೋಕ ನಡೆಸಿದ ಕಳಿಂಗ ಯುದ್ಧದ ವಿಷಯ ಗೊತ್ತಿರುವುದೆ. ಆದರೆ, ಅದರ ಹಿಂದಿನ ಕಾಲಘಟ್ಟದಲ್ಲಿ ಅಶೋಕನ ಮನಸ್ಸಿನ ತಾಕಲಾಟವನ್ನು ಈ ನಾಟಕ ಶೋಧಿಸುತ್ತದೆ. ಬಿಂದುಸಾರ ಕಾಲವಾದ ನಂತರ ಮೌರ್ಯ ಸಾಮ್ರಾಜ್ಯದ ಉತ್ತರಾಧಿಕಾರಕ್ಕಾಗಿ ಸಹೋದರರ ನಡುವೆ ನಡೆಯುವ ಪಿತೂರಿಗಳು, ಕಲಹಗಳು ವರ್ತಮಾನದ ರಾಜಕಾರಣಕ್ಕೆ ಮುಖಾಮುಖಿಯಾಗುವುದರೊಂದಿಗೆ ಕಾಲಾತೀತವಾಗಿ ಈ ನಾಟಕ ತುಂಬಾ ಪ್ರಸ್ತುತವೆನಿಸುತ್ತದೆ.

ADVERTISEMENT

ಕಳಿಂಗದ ದೊರೆ ಅನಂತಪದ್ಮನಾಭನ ಉದ್ದಟತನದಿಂದ ಕೋಪಗೊಂಡ ಅಶೋಕ ಕಳಿಂಗದ ಮೇಲೆ ದಂಡೆತ್ತಿ ಹೋಗಿ ಕೊನೆ ಮೊದಲಿಲ್ಲದ ಸಾವು ನೋವುಗಳಿಗೆ ಕಾರಣವಾದ ಕಳಿಂಗ ಯುದ್ಧ ನಡೆಯುವುದೇ ಈ ದಯಾನದಿ ದಂಡೆಯ ಮೇಲೆ. ಎಂಥ ವಿಪರ್ಯಾಸ ನೋಡಿ! ಆ ಯುದ್ಧದಲ್ಲಿ ತನ್ನ ಅಂಗರಕ್ಷಕನೂ ಗೆಳೆಯನೂ ಆದ ವಜ್ರದೇಹನನ್ನು ಕಳೆದುಕೊಂಡು ದುಃಖಿಸುವ ಅಶೋಕ ಪ್ರೇಕ್ಷಕರ ಕಣ್ಣಾಲಿಯನ್ನು ತೇವಗೊಳಿಸುತ್ತಾನೆ. ಯುದ್ಧ ನಡೆದು ಜಯ ದೊರೆಕಿದ ಮೇಲೆ ವಿಜಯದ ಉತ್ಸಾಹದಲ್ಲಿ ಮೈಮರೆಯುವ ರಾಜರೇ ಅಧಿಕ. ಆದರೆ, ಅಶೋಕ ಯುದ್ಧ ಭೂಮಿಗೆ ಹೋಗಿ ಅಲ್ಲಿನ ಸಾವು ನೋವುಗಳನ್ನು ಕಂಡು ಮಮ್ಮಲ ಮರುಗುತ್ತಾನೆ. ನಾಟಕದ ವಸ್ತುವಿನ ಗಟ್ಟಿತನ, ಪ್ರೇಕ್ಷಕರ ಮನಸಿಗೆ ತಾಕುವಂತಹ ಸಂಭಾಷಣೆ, ನುರಿತ ನಟರಂತೆ ಅಭಿನಯಿಸಿದ ವಿದ್ಯಾರ್ಥಿಗಳ ಸಹಜ ಅಭಿನಯ, ವಸ್ತ್ರವಿನ್ಯಾಸ ನಾಟಕದ ಯಶಸ್ಸಿಗೆ ಸಹಕಾರಿಯಾದ ಅಂಶಗಳು.

‘ಏಸೊಂದು ರೂಪಗಳೊ ಅಣ್ಣ, ಈ ಯುದ್ಧವೆಂಬ ರಕ್ಕಸನಿಗೆ ಏಸೊಂದು ಬಣ್ಣಗಳೊ ಅಣ್ಣ’ ಎನ್ನುವ ಹಾಡನ್ನು ಇಡೀ ನಾಟಕಕ್ಕೆ ರೂಪಕವಾಗಿ ಬಳಸಿಕೊಂಡು ಸಂಗೀತ ನೀಡಿದ ರಾಘವ ಕಮ್ಮಾರ, ಬೆಳಕಿನ ವಿನ್ಯಾಸದ ಮೂಲಕ ದೃಶ್ಯಗಳ ಪರಿಣಾಮವನ್ನು ಹೆಚ್ಚಿಸಿದ ಶಂಕರ್, ರಿದಂ ನುಡಿಸಿದ ಹೇಮಂತ ಸಂಡೂರು ಇವರೆಲ್ಲರೂ ನಾಟಕ ಅರ್ಥಪೂರ್ಣವಾಗಲು ಶ್ರಮಿಸಿದ್ದಾರೆ.

ಯುದ್ಧದಿಂದ ಧಾರ್ಮಿಕ ಸಂಘರ್ಷಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತಿಗೆ ಬುದ್ದನ ಕರುಣಾ ಮೈತ್ರಿಯ ವಿಚಾರಗಳು ಮದ್ದಾಗಬಲ್ಲವು ಎನ್ನುವುದನ್ನು ನಾಟಕದ ಆಶಯವಾಗಿಸುವಲ್ಲಿ ನಾಟಕಕಾರರು ಹಾಗೂ ನಿರ್ದೇಶಕರು ಸಫಲತೆಯನ್ನು ಸಾಧಿಸಿದ್ದಾರೆ. ‘ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಇನ್ನೊಬ್ಬರಿಗೆ ಕೇಡು ಬಯಸಲಾರ’ ಬುದ್ದನ ಈ ಮಾತು ನಾಟಕ ಮುಗಿದ ನಂತರವೂ ಪ್ರೇಕ್ಷಕರನ್ನು ಕಾಡುತ್ತದೆ. ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತದೆ.

ನಾಟಕದ ದೃಶ್ಯ
ನಾಟಕದ ದೃಶ್ಯ
ನಾಟಕದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.