ADVERTISEMENT

‘ವಾಟರ್ ಫಾರ್ ಎಲಿಫೆಂಟ್ಸ್’: ರಂಗದ ಮೇಲೆ ಬದುಕಿನ ಸರ್ಕಸ್‌!

ಇತ್ತೀಚೆಗೆ ನೋಡಿದ ಒಂದು ನಾಟಕ ‘ವಾಟರ್ ಫಾರ್ ಎಲಿಫೆಂಟ್ಸ್’ ಹೀಗೆ ಊರೂರು ಸಂಚರಿಸುವ ಸರ್ಕಸ್‌ ವಾಹನ ನಟರೊಂದಿಗೆ, ಪ್ರಾಣಿಗಳೊಟ್ಟಿಗೆ ಪ್ರಯಾಣಕ್ಕೆ ತೊಡಗುತ್ತದೆ.

ಕೃಷ್ಣಮೂರ್ತಿ ಹನೂರು
Published 7 ಡಿಸೆಂಬರ್ 2024, 22:30 IST
Last Updated 7 ಡಿಸೆಂಬರ್ 2024, 22:30 IST
<div class="paragraphs"><p>‘ವಾಟರ್ ಫಾರ್ ಎಲಿಫೆಂಟ್ಸ್’ ನಾಟಕದ ದೃಶ್ಯಗಳು</p></div>

‘ವಾಟರ್ ಫಾರ್ ಎಲಿಫೆಂಟ್ಸ್’ ನಾಟಕದ ದೃಶ್ಯಗಳು

   

ಎತ್ತರೆತ್ತರಕ್ಕೆ ತೂಗುವ ಹಗ್ಗದ ಹಲಗೆಯಲ್ಲಿ ನಿಂತು ಪಲ್ಟಿ ಹೊಡೆಯುತ್ತ, ಪ್ರೇಕ್ಷಕರಿಗೆ ಕೂತಲ್ಲೇ ಎದೆ ಡವಗುಟ್ಟುವಂತೆ ಮಾಡುತ್ತಿದ್ದ ದೃಶ್ಯಾವಳಿಯ ಸರ್ಕಸ್‌ಗಳು ಈಗಾಗಲೇ ಹಳೆಯ ಕಾಲದ ಸಂಗತಿಯಾಗಿ ಹೋಗಿವೆ. ಇಂಥ ಸರ್ಕಸ್‌ಗಳಲ್ಲಿ ಗಂಡಸರೆಂಬವರು ಜೋಕರುಗಳಾದರೆ ಹೆಣ್ಣುಮಕ್ಕಳು ರೋಚಕ ದೃಶ್ಯಗಳಲ್ಲಿ ಪಾಲುಗೊಳ್ಳುತ್ತಿದ್ದುದು ಆಶ್ಚರ್ಯವೇ. (ಮೇರಾ ನಾಮ್ ಜೋಕರ್ ಸಿನಿಮಾದಲ್ಲಿ ಸ್ವತಃ ರಾಜ ಕಪೂರರು ಜೋಕರ್ ಆಗಿದ್ದ ನೆನಪು.) ಆಕಾಶದಲ್ಲೆಂಬಂತೆ ತೂಗುಯ್ಯಾಲೆಯಾಟ ಇದ್ದರೆ, ನೆಲದ ಮೇಲೆ ಬೆಂಕಿ ಹಚ್ಚಿದ ವೃತ್ತಾಕಾರದ ಮೂರು ಸರಳುಗಳ ನಡುವೆ ತೂರುವವರು ಹೆಣ್ಣುಮಕ್ಕಳೇ ಆಗಿರುತ್ತಿದ್ದರು. ಇದು ಕಾರಣವಾಗಿಯೇ ಆ ಕಾಲಕ್ಕೆ ಒಂದು ಸರ್ಕಸ್‌ ಕಂಪನಿಗೆ ‘ಕಮಲ ತ್ರೀ ರಿಂಗ್ ಸರ್ಕಸ್’ ಎಂದೇ ನಾಮಧೇಯವಿದ್ದ ನೆನಪು. ಇನ್ನು ಸರ್ಕಸ್‌ನಲ್ಲಿ ಹೆಣ್ಣು ಮಕ್ಕಳಷ್ಟೇ ಪ್ರಮುಖವಾದವು ಪ್ರಾಣಿಗಳು. ಯಾವ ಸಮೂಹವನ್ನು ಕ್ರೂರ ಅಂದುಕೊಂಡಿದ್ದೇವೋ ಆ ಪ್ರಾಣಿಗಳು ಸರ್ಕಸ್‌ನಲ್ಲಿ ಹೆಣ್ಣುಮಕ್ಕಳು ಹೇಳಿದ್ದನ್ನು ಶಿರಸಾವಹಿಸಿ ಕಲಿತ ಆಟವನ್ನು ತೋರುತ್ತಿದ್ದವು. ಈ ಆನೆ, ಕುದುರೆ,ಹುಲಿ , ಸಿಂಹಗಳೂ ಕಂಪನಿಯೊಂದಿಗೆ ಊರೂರು ಸುತ್ತಬೇಕಿತ್ತು!

ಇತ್ತೀಚೆಗೆ ನೋಡಿದ ಒಂದು ನಾಟಕ ‘ವಾಟರ್ ಫಾರ್ ಎಲಿಫೆಂಟ್ಸ್’ ಹೀಗೆ ಊರೂರು ಸಂಚರಿಸುವ ಸರ್ಕಸ್‌ ವಾಹನ ನಟರೊಂದಿಗೆ, ಪ್ರಾಣಿಗಳೊಟ್ಟಿಗೆ ಪ್ರಯಾಣಕ್ಕೆ ತೊಡಗುತ್ತದೆ. ಈ ಸರ್ಕಸ್‌ ನಾಟಕದ ಮೊದಲ ದೃಶ್ಯದಲ್ಲಿ ಸುಮಾರು ಎಪ್ಪತ್ತು ವರ್ಷದ ಹಿರಿಯನೊಬ್ಬ, ಭಾರತೀಯ ಹಳೆಯ ನಾಟಕಗಳ ಸೂತ್ರಧಾರನಂತೆ, ತನ್ನ ಸರ್ಕಸ್‌ ಕಂಪನಿಯ ಜೀವನಾನುಭವಗಳನ್ನು ವಿವರಿಸಲು ತೊಡಗುವಲ್ಲಿ, ಪಾತ್ರಧಾರಿಗಳೆಲ್ಲ ಅವನ ಕಳೆದ ನೆನಪಿನಂತೆ, ಕನಸಿನಂತೆ ಸುತ್ತ ಸುಳಿಯತೊಡಗುತ್ತಾರೆ. ಅನಂತರ ಗುಂಪಿನೊಳಗೆ ಹಿರಿಯನ ಮುಖ ಚಹರೆಯದೇ ಹುಡುಗನೊಬ್ಬ ಪ್ರವೇಶಿಸುವುದರ ಮೂಲಕ ಸರ್ಕಸ್‌ ನಾಟಕದ ಕಥೆ ಮುಂದುವರೆಯುತ್ತದೆ. ಆ ಯುವಕನಿಗೆ ಸರ್ಕಸ್‌ನ ಹುಡುಗ ಹುಡುಗಿಯರ ವಿಚಿತ್ರ ಮೈಮುರಿತದ ಆಟ, ಪ್ರಾಣಿಗಳ ಸಹವಾಸ ಇದೆಲ್ಲ ಹೊಸದಾಗಿ ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳಾಗುತ್ತವೆ. ತಾಲೀಮು, ಸಂಜೆಯ ಆಟ ಇದೆಲ್ಲ ಕಠಿಣವೆಂಬಂತೆ ತೋರುತ್ತದೆ. ಇಷ್ಟಾಗಿಯೂ ಸರ್ಕಸ್‌ ಪಾತ್ರಧಾರಿಗಳ ಆಕಾಶದ ಹಾರಾಟದಲ್ಲಿ ಇವನ ನೋಟ, ಎಚ್ಚರದ ಕಲಿಕೆ ಆರಂಭವಾಗುತ್ತದೆ.

ADVERTISEMENT

ಸರ್ಕಸ್‌ ಜೀವನ ಎಂದರೆ ನೆಲದ ಮೇಲೆ ಸ್ಥಿರವಾಗಿ ತಣ್ಣನೆಯ ಮರದ ಕೆಳಗೆ ವಸ್ತ್ರ ಹೊದ್ದು,ಕಣ್ಣು ಮುಚ್ಚಿ ಕೂರುವುದಲ್ಲವಲ್ಲ. ಹಾಗೆ ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದ ಸರ್ಕಸಿನಲ್ಲಿ 23 ಅಡಿ ಎತ್ತರದಲ್ಲಿ ಹಗ್ಗ ಹಿಡಿದು ನಿಂತು ದೇಹವನ್ನು ನಿಶ್ಚಲ ಸ್ಥಿತಿಗೆ ತಂದು ಕಣ್ಣು ಮುಚ್ಚಬೇಕು. ಆಗಲಾದರೋ ಪ್ರೇಕ್ಷಕರ ಕಣ್ಣು ಅಚ್ಚರಿಯಿಂದ ಅಗಲವಾಗುತ್ತದೆ, ಮನಸು ದಿಗಿಲುಗೊಳ್ಳುತ್ತದೆ. ಆದರೆ ಆಟದಲ್ಲಿರುವವರು ಮಾತ್ರ ತಾವು ಅಪಾಯದಲ್ಲಿದ್ದೇವೆಂಬುದನ್ನು ತೋರಗೊಡುವುದೇ ಇಲ್ಲ! ಇಂಥ ಇವರ ಆಟದೊಂದಿಗೆ ಪ್ರಾಣಿಗಳೂ ಸೇರಿಕೊಳ್ಳುತ್ತವೆ. ಈ ಕ್ರಮದಲ್ಲಿ ಒಂದರ ಮೇಲೆ ಒಂದರಂತೆ ದೃಶ್ಯಗಳು ಪ್ರದರ್ಶನಗೊಳ್ಳುತ್ತ ಹೋದದ್ದು ನ್ಯೂಯಾರ್ಕಿನ ಬ್ರಾಡ್ವೇಯ ಇಂಪೀರಿಯಲ್ ಥಿಯೇಟರಿನಲ್ಲಿ.

ಸರ್ಕಸಿನ ರೋಚಕ ದೃಶ್ಯಾವಳಿಗಳೆಲ್ಲ ಕಥೆಯಾಗುತ್ತ, ನಮ್ಮದೇ ಯಾವುದೋ ಹಂತದ ಅನುಭವವೆನಿಸುತ್ತ, ಒಮ್ಮೆ ಲೌಕಿಕವೆನಿಸಿ, ಮುಂದಿನ ಘಳಿಗೆಯಲ್ಲೇ ಅದು ಯಾವುದೋ ಎತ್ತರ ಪ್ರಯಾಣದ ಅಲೌಕಿಕ ಸಂಗತಿ ಎನಿಸುತ್ತಿತ್ತು. ಹಾಗೆಯೇ ತನ್ನ ನಡು, ಮೈಕೈಗೆಲ್ಲ ಹಗ್ಗ ಸುತ್ತಿಕೊಳ್ಳುತ್ತ ಮೇಲೆ ಹಾಯುವ ದೃಶ್ಯದಲ್ಲಿ ಆ ನಟ ಅಲ್ಲಿಂದಲೇ ಎಚ್ಚರ ತಪ್ಪಿ ಬಿದ್ದರೆ ಎಂಬ ಆತಂಕ ಬೀಳುವ ದೃಶ್ಯದ ನಡುವೆಯೇ ಕೇಳಿಬರುತ್ತಿದ್ದ ಧ್ವನಿಪೂರ್ಣ ಸಂಭಾಷಣೆಗೆ ದೀರ್ಘ ಚಪ್ಪಾಳೆ
ಬೀಳುತ್ತಿತ್ತು.

ಎರಡೂವರೆ ಗಂಟೆ ಅವಧಿಯ ಈ ನಾಟಕದ ಒಂದು ಅರ್ಥಪೂರ್ಣ ದೃಶ್ಯ ಅಂದರೆ ರಂಗದ ನಟ್ಟ ನಡುವೆ 20 ಅಡಿ ಎತ್ತರದಲ್ಲಿ ಮೂವರು ಕುಳಿತಿದ್ದಾರೆ. ಅವರು ಸಿಂಹಾಸನದಲ್ಲಿ ಆಸೀನರಾಗಿರುವಂತಿದ್ದರೆ, ಎಡ ಬಲದಿಂದ ಅದೂ ನೆಲಸ್ತರದಿಂದ ಒಂದೇ ವೇಗದಲ್ಲಿ ಹಗ್ಗದ ಮೇಲೆ ನಡೆದು ಎತ್ತರದಲ್ಲಿ ಕೂತವರನ್ನು ಮುಟ್ಟಲು ಒಂದಿಬ್ಬರು ಹವಣಿಸುತ್ತಿದ್ದರು. ಆದರೆ ಈ ಆಕಾಂಕ್ಷಿಗಳು ಸಿಂಹಾಸನಸ್ಥರ ಬಳಿ ಬರುತ್ತಿದ್ದಂತೆಯೇ ಕೆಳಗೆ ನಿಂತವರು ಅವರಿಗೆ ಗೊತ್ತಾಗದಂತೆ ನಡುವಿಗೆ ಹಗ್ಗ ಕಟ್ಟಿ ಹಿಂದಕ್ಕೆ ಎಳೆದು ಹಾಕಿಬಿಡುತ್ತಿದ್ದರು. ಎಷ್ಟು ವೇಗದಲ್ಲಿ ಮೇಲೆ ಹೋಗುತ್ತಿದ್ದರೋ ಅಷ್ಟೇ ಬೇಗ ಕಾಣದ ಕೈಗಳ ಹಿಮ್ಮುಖ ಎಳೆತದಿಂದ ಹಿಂದೆ ಬೀಳುತ್ತಿದ್ದರು.

ಸಂಜೆಯಾಯಿತೆಂದರೆ ಸರ್ಕಸ್‌ ಗುಡಾರ ಆ ಹೊತ್ತಿನ ಪ್ರದರ್ಶನಕ್ಕಾಗಿ ಬಣ್ಣ ಬಣ್ಣದ ಲೈಟುಗಳೊಡನೆ ಎದ್ದುಬಿಡುವ ದೃಶ್ಯ ರಂಜನೀಯವೆನಿಸುತ್ತಿತ್ತು. ಒಂದೆಡೆ ಮೊಕ್ಕಾಮು ಮುಗಿದಲ್ಲಿ ಆಟದವರೆಲ್ಲ ರೈಲು ಬೋಗಿಯಲ್ಲಿ ಕೂತು ಪ್ರಯಾಣ ಮಾಡುವುದು ಮತ್ತೊಂದು ಮೋಜಿನ ದೃಶ್ಯ. ಇದೆಲ್ಲದರ ಹಿನ್ನೆಲೆಯಲ್ಲಿ ರಂಗದ ಹಿಂಭಾಗಕ್ಕೆ ನೀಲಿ ಆಕಾಶ ಒಮ್ಮೆ ಸ್ವಚ್ಛವಾಗಿ ನಕ್ಷತ್ರಗಳೊಡನೆ ಕಾಣಿಸಿದರೆ ಮತ್ತೊಮ್ಮೆ ಅದೇ ಆಕಾಶದಲ್ಲಿ ಕೆಂಪು ಹಳದಿಯ ಸಂಜೆ ಬೆಳಗಿನ ರಂಗು ತುಂಬಿಕೊಳ್ಳುತ್ತಿತ್ತು. ಅದಾಗಲೇ ಮೋಡಭರಿತ ವಾತಾವರಣವು ಮೂಡಿ ಇನ್ನೇನು ಮಳೆ ಹನಿ ಉದುರಬಹುದೆನಿಸುವ ಅನುಭವ. ಅದರಡಿಯೇ ಸರ್ಕಸ್ಸಿನ ಆಟದ ನಡುವಣ ಜೀವಿಗಳ ಒಳಮನದ ಕ್ರಿಯೆಗಳು ನಾಟಕದ ಮುಂದಿನ ಕಥೆಯಾಗಿರುತ್ತಿತ್ತು.

ಆನೆಯ ವೇಷವೂ ರಂಗದ ಮೇಲೆ ಬರುತ್ತಿದ್ದುದು ಸರಿ, ಆದರೆ ಆನೆಯ ದೇಹದ ಒಳಗೆ ಸೇರಿಕೊಂಡ ನಟರಲ್ಲಿ ಮುಂದಿನವರು ಹೆಜ್ಜೆಯಿಟ್ಟಂತೆ, ಅದಕ್ಕನುಗುಣವಾಗಿ ಹಿಂದಿನವರು ಹೆಜ್ಜೆಯಿಡುವುದರ ತಾಲೀಮು ಎಷ್ಟು ದಿನದ್ದೋ ಹೇಳುವಂತಿಲ್ಲ. ಇಂಥದೆಲ್ಲ ಪ್ರಾಣಿ, ಪುರುಷ, ಹೆಣ್ಣುಮಕ್ಕಳ ಸಾಹಸದ ನಡುವೆ ಸರ್ಕಸಿನಲ್ಲಿ ಒಬ್ಬ ಕುಂಟನೆನಿಸುವವನ ಪಾತ್ರವೂ ಇದ್ದು, ರಂಗದ ಮೇಲೆ ಆತನ ನಡೆದಾಟ, ಮಾತಿನ ವರಸೆ ಎಲ್ಲ ಪಾತ್ರಧಾರಿಗಳ ಜಿಗಿತವನ್ನು ಹಿಂದಿಕ್ಕುವಂತಿತ್ತು. ಆತ ಆಫ್ರಿಕನ್ ಅಮೆರಿಕನ್. ಇಷ್ಟಲ್ಲದೆ ನಾಟಕದ ನಡುವೆ ಮಂಚವೂ ಪ್ರತ್ಯಕ್ಷವಾಗಿ ಅಲ್ಲಿ ಪ್ರೇಮ ಸಲ್ಲಾಪ ಜರುಗುತ್ತಿರುವಲ್ಲಿ, ಅದೇ ಮಂಚ ರೋಗ ಶಯ್ಯೆಯೂ ಆಗಿ ಕಾಣಿಸಿಕೊಳ್ಳುತ್ತದೆ. ಮುಷ್ಠಿ ಬಿಗಿ ಹಿಡಿದಂತೆ, ಉಸಿರಾಡಲು ಸಮಯವಿಲ್ಲದಂತೆ, ನಿಮಿಷದ ಲೆಕ್ಕದಲ್ಲಿ ಜರುಗುವ ನಾಟಕದ ಕೊನೆ ಕೊನೆಗೆ 22 ಜನ ಪಾತ್ರಧಾರಿಗಳ ನಡುವೆ ಒಬ್ಬ ನಟನ ಬಾಯಿಂದ ಬರುವ ಒಂದು ಸಾರ್ವಕಾಲಿಕ ಸತ್ಯದ ಮಾತು, ‘ವಿ ಗಾಟ್ ನಥಿಂಗ್’ ಎಂಬುದು!

ನಾಟಕ ವೀಕ್ಷಣೆಯ ದರ ಇನ್ನೂರು ಡಾಲರ್, ರೂಪಾಯಿ ಲೆಕ್ಕದಲ್ಲಿ ಹದಿನೇಳು ಸಾವಿರ! ಆಟ ನೋಡಲು ಸೇರಿದ್ದ ಪ್ರೇಕ್ಷಕರ ಸಂಖ್ಯೆ ಒಂದು ಸಾವಿರದ ನಾನೂರು! ಆಸನ ಸಂಖ್ಯೆ ಇದ್ದದ್ದು ಅಷ್ಟೇ. ರಾತ್ರಿ ಒಂಬತ್ತುವರೆಗೆ ಷೋ ಮುಗಿದು ಹೊರಬಂದಲ್ಲಿ ನ್ಯೂಯಾರ್ಕಿನ ಬ್ರಾಡ್ ವೇಯ ಎಲ್ಲ ನಾಟಕಗಳ ತೆರೆ ತೆರಪಾಗಿ, ಬೀದಿಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ನಾಟಕ ಜಾತ್ರೆಯ ಜನ ನೆರೆದುಬಿಟ್ಟಿತ್ತು!

ನಾಟಕದ ದೃಶ್ಯ
drama

43 ಭಾಷೆಗಳಿಗೆ ಅನುವಾದ

ಈ ‘ವಾಟರ್ ಫಾರ್ ಎಲಿಫೆಂಟ್ಸ್’ ನಾಟಕ ರಚನೆಗೆ ಮೂಲ ಇದೇ ಹೆಸರಿನ ಕಾದಂಬರಿ. ಲೇಖಕಿ ಸಾರಾ ಗ್ರೂಯೆನ್. ಅಮೆರಿಕಾದ ವಾಯವ್ಯ ಕರೋಲಿನಾದಲ್ಲಿರುವ ಈಕೆಯ ಕಾದಂಬರಿಗಳು ಜಗತ್ತಿನ 43 ಭಾಷೆಗಳಿಗೆ ಅನುವಾದವಾಗಿದ್ದು ಅದಕ್ಕಿರುವ ಓದುಗರೂ ಅಸಂಖ್ಯಾತ ಎನ್ನಲಾಗಿದೆ. ನಾಟಕ ನಿರ್ದೇಶಕಿ ಜೆಸ್ಸಿಕಾ ಸ್ಟೋನ್. ಸರ್ಕಸ್‌ ವಿನ್ಯಾಸ ಶಾನ್ ಕೆರೋಲ್. ಈ ಸರ್ಕಸ್‌ ನಾಟಕದ ಸೂತ್ರಧಾರಿಗಳು ಲೇಖನದ ಆರಂಭಕ್ಕೆ ಹೇಳಿದಂತೆ ಹೆಣ್ಣು ಮಕ್ಕಳು ಎಂಬುದನ್ನು ಗಮನಿಸಬೇಕು.

ನ್ಯೂಯಾರ್ಕಿನ ಬ್ರಾಡ್ವೇಯ ಇಂಪೀರಿಯಲ್ ಥಿಯೇಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.