ADVERTISEMENT

‘ಮೆಕ್ಸಿಕನ್ ಅಮೆಟ್ಸ್’ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:45 IST
Last Updated 25 ಡಿಸೆಂಬರ್ 2018, 19:45 IST
ಮೆಕ್ಸಿಕೊ ಕಲಾ ಪ್ರದರ್ಶನ
ಮೆಕ್ಸಿಕೊ ಕಲಾ ಪ್ರದರ್ಶನ   

ದೆಹಲಿಯಲ್ಲಿರುವ ಮೆಕ್ಸಿಕೊದ ರಾಯಭಾರ ಕಚೇರಿಯು ‘ಮೆಕ್ಸಿಕನ್ ಅಮೇಟ್ಸ್’ ಎಂಬ ವಿಶಿಷ್ಟ ಕಲಾ ಪ್ರದರ್ಶನವನ್ನು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ಬಳಿಯ ‘ಗ್ಯಾಲರಿ ಜಿ’ಯಲ್ಲಿ ಏರ್ಪಡಿಸಿದೆ.

ಅಮೇಟ್ ಎಂಬ ತೊಗಟೆ ಕಾಗದದ ಮೇಲೆ ಮೆಕ್ಸಿಕೊದ ಸಾಂಪ್ರದಾಯಿಕ ಪ್ರಾಚೀನ ಕಲೆಯನ್ನು ಒಡಮೂಡಿಸಿರುವ ಚಿತ್ತಾಕರ್ಷಕ ಕಲಾ ಪ್ರದರ್ಶನ ಇದಾಗಿದ್ದು, ಭಾರತದಲ್ಲಿ ಮೆಕ್ಸಿಕನ್ ಕಲೆಯನ್ನು ಪ್ರಚುರಪಡಿಸಲು ಹಮ್ಮಿಕೊಳ್ಳಲಾಗಿದೆ. ಗ್ಯಾಲರಿ ಜಿ ಏಟ್ರಿಯಂನಲ್ಲಿ ಡಿಸೆಂಬರ್ 20ರಿಂದ ಪ್ರದರ್ಶನ ಆರಂಭವಾಗಿದ್ದು, 2019ರ ಜನವರಿ 10ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

ಅಮೇಟ್ ಎಂಬುದು ಒಂದು ರೀತಿಯ ಮರದ ತೊಗಟೆಯಿಂದ ತಯಾರಿಸುವ ವಿಶಿಷ್ಟ ಕಾಗದವಾಗಿದ್ದು, ಮೆಕ್ಸಿಕೊದ ಹಿಸ್ಪೇನಿಕ್ ನಾಗರಿಕತೆಯ ಕಾಲಕ್ಕಿಂತ ಹಿಂದಿನಿಂದ ಬಳಕೆಯಲ್ಲಿದೆ. ಮೆಕ್ಸಿಕೊದ ಒಟೋಮಿ ಎಂಬ ಜನಾಂಗದವರು ಮಾತ್ರ ಈ ಕಾಗದವನ್ನು ತಯಾರಿಸುತ್ತಾರೆ.

ADVERTISEMENT

ನಹುವಾ ಎಂಬ ಇನ್ನೊಂದು ಜನಾಂಗದವರು ಈ ಕಾಗದದ ಮೇಲೆ ಚಿತ್ರಗಳನ್ನು ರಚಿಸುತ್ತಾರೆ. ಇವೆರಡೂ ಸಾಂಪ್ರದಾಯಿಕ ಕಲೆಗಳ ಸಂಗಮವಾದ ನಂತರ ಅಮೇಟ್ ಕರಕುಶಲ ಕಲೆ ಮೆಕ್ಸಿಕದಲ್ಲಿ ವಾಣಿಜ್ಯಕವಾಗಿ ಜನಪ್ರಿಯಗೊಂಡಿದೆ.

ಮೆಕ್ಸಿಕೊದಲ್ಲಿ ಬೆಳೆಯುವ ಜೋನೋಟೆ ಎಂಬ ಮರದ ತೊಗಟೆಯನ್ನು ಜಜ್ಜಿ, ಅದನ್ನು ನಿಂಬೆಯ ನೀರಿನಲ್ಲಿ ಕುದಿಸಿ ಅಮೇಟ್ ಕಾಗದವನ್ನು ತಯಾರಿಸಲಾಗುತ್ತದೆ.

ಹಿಸ್ಪೇನಿಕ್ ಪೂರ್ವ ಅವಧಿಯಲ್ಲಿ ಇದನ್ನು ದೇವರಿಗೆ ಕಾಣಿಕೆಯಾಗಿ ಅರ್ಪಿಸಲು, ಶ್ರದ್ಧಾಂಜಲಿ ಸಲ್ಲಿಸಲು ಮುಂತಾದ ಕೆಲಸಗಳಿಗೆ ಮಾತ್ರ ಬಳಸಲಾಗುತ್ತಿತ್ತು. ಸ್ಪೇನ್ ದೇಶವು ಮೆಕ್ಸಿಕೊವನ್ನು ವಶಪಡಿಸಿಕೊಂಡ ಅವಧಿಯಲ್ಲಿ ಅಮೇಟ್ ಕಾಗದ ತಯಾರಿಕೆಯನ್ನು ನಿಷೇಧಿಸಲಾಗಿತ್ತು.

ಆದರೂ ಕೆಲ ಸಾಂಪ್ರದಾಯಿಕ ಗುಂಪುಗಳು ಇದನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಇಂದು ಕರಕುಶಲ ಕಲೆಯಾಗಿ ಅಮೇಟ್ ಕಾಗದದ ಮೇಲಿನ ಚಿತ್ರಕಲೆ ಮೆಕ್ಸಿಕೊದಲ್ಲಿ ಉಳಿದುಕೊಂಡಿದೆ. ಗುರೆರೋ ಎಂದೂ ಕರೆಯಲ್ಪಡುವ ನಹುವಾ ಜನಾಂಗದವರು ಮಾತ್ರ ಅಮೇಟ್ ಕಾಗದದ ಮೇಲೆ ಚಿತ್ರಗಳನ್ನು ರಚಿಸುತ್ತಾರೆ.

ಚಿತ್ರ ರಚಿಸುವ ವಿಧಾನ

ಸೆರಾಮಿಕ್ ಚಿತ್ರಕಾರರಾಗಿರುವ ನಹುಮ್ ಜನಾಂಗದವರು ಅಮೇಟ್ ಕಾಗದದ ಮೇಲೆ ಚಿತ್ರಗಳನ್ನು ರಚಿಸುತ್ತಾರೆ. ಆರಂಭದಲ್ಲಿ ಈ ಕಲಾವಿದರು ಹಕ್ಕಿ ಹಾಗೂ ಹೂವುಗಳನ್ನು ಮಾತ್ರ ಚಿತ್ರಿಸುತ್ತಿದ್ದರು. ಕ್ರಮೇಣ ತಮ್ಮ ಗ್ರಾಮೀಣ ಸಂಸ್ಕೃತಿ, ಮದುವೆ, ಕೃಷಿ, ಮೀನುಗಾರಿಕೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನೂ ಇದರ ಮೇಲೆ ಚಿತ್ರಿಸತೊಡಗಿದರು.

ಮೊದಲಿಗೆ ಕಪ್ಪು ಶಾಯಿಯಲ್ಲಿ ಅಮೇಟ್ ಕಾಗದದ ಮೇಲೆ ಔಟ್‍ಲೈನ್ ರಚಿಸಿಕೊಳ್ಳುವ ನಹುವಾ ಚಿತ್ರಕಾರರು, ನಂತರ ವಿವಿಧ ಬಣ್ಣಗಳನ್ನು ಅದರೊಳಗೆ ತುಂಬಿ ಅಂದದ ಕಲಾಕೃತಿಗಳನ್ನು ಮೂಡಿಸುತ್ತಾರೆ.

‘ಗ್ಯಾಲರಿ ಜಿ’ಯಲ್ಲಿ ಪ್ರದರ್ಶನಕ್ಕಿರುವ ಅಮೇಟ್ ಕಲಾಕೃತಿಗಳಲ್ಲಿ ಮೆಕ್ಸಿಕೊದ ಧಾರ್ಮಿಕ ಸಂಪ್ರದಾಯಗಳು, ದೈನಂದಿನ ಜನಜೀವನ, ಚರ್ಚ್‍ನಲ್ಲಿ ನಡೆಯುವ ಆರಾಧನೆ, ಪಕ್ಷಿಗಳು, ಹೂವುಗಳು, ಹಳ್ಳಿಗಳ ದೃಶ್ಯಾವಳಿ, ಕೃಷಿ, ಮೀನುಗಾರಿಕೆ, ಪ್ರಾಣಿಗಳ ಕದನ, ಮದುವೆ, ಗ್ರಾಮೀಣ ಹಬ್ಬಗಳ ಆಕರ್ಷಕ ಚಿತ್ರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.