ADVERTISEMENT

ಮೈಸೂರು ವಿಜ್ಞಾನ ನಾಟಕೋತ್ಸವ: ರಂಗಮಂಚದಲ್ಲಿ ‘ವಿಜ್ಞಾನ’

ಕೆ.ನರಸಿಂಹ ಮೂರ್ತಿ
Published 16 ಜುಲೈ 2022, 23:45 IST
Last Updated 16 ಜುಲೈ 2022, 23:45 IST
ಲೀಲಾವತಿ ನಾಟಕದ ದೃಶ್ಯದಲ್ಲಿ ಕನಸಿನಲ್ಲಿ ಬಂದ ಭಾಸ್ಕರಾಚಾರ್ಯ ಮತ್ತು ಕಾರ್ಲ್‌ ಬ್ರೂಕ್‌ ಜೊತೆ ಚಿನ್ಮಯಿ ಮಾತಿಗಿಳಿದಿದ್ದು ಹೀಗೆ... ಚಿತ್ರಗಳು: ಅನೂಪ್‌ ರಾಘ್‌ ಟಿ.
ಲೀಲಾವತಿ ನಾಟಕದ ದೃಶ್ಯದಲ್ಲಿ ಕನಸಿನಲ್ಲಿ ಬಂದ ಭಾಸ್ಕರಾಚಾರ್ಯ ಮತ್ತು ಕಾರ್ಲ್‌ ಬ್ರೂಕ್‌ ಜೊತೆ ಚಿನ್ಮಯಿ ಮಾತಿಗಿಳಿದಿದ್ದು ಹೀಗೆ... ಚಿತ್ರಗಳು: ಅನೂಪ್‌ ರಾಘ್‌ ಟಿ.   

ಇದು ಕಲೆಯಲ್ಲಿ ವಿಜ್ಞಾನವನ್ನು ಬೆಸೆಯುವ, ವಿಜ್ಞಾನವನ್ನು ಕಲೆಯ ಮೂಲಕ ಗ್ರಹಿಸಿ, ಮಂಡಿಸುವ ವೈಜ್ಞಾನಿಕ ಸಂವಹನ ಮಾದರಿ. ಇನ್ನು ಕೆಲವು ದಿನ ಕಾಯಿರಿ. ಪಕ್ಷಿತಜ್ಞ ಸಲೀಂ ಅಲಿ, ಸಿ.ವಿ.ರಾಮನ್‌, ಕ್ಲೋನಿಂಗ್ ಮತ್ತು ಕೋಪರ್ನಿಕಸ್ ಕುರಿತ ನಾಟಕಗಳೂ ಕನ್ನಡದಲ್ಲಿ ಬರಲಿವೆ!

ದಸರಾ, ಬಹುರೂಪಿ ಉತ್ಸವದಂತೆ ಈಗ ವಿಜ್ಞಾನ ನಾಟಕೋತ್ಸವದ ಮೂಲಕವೂ ಪಾರಂಪರಿಕ ನಗರ ಮೈಸೂರು ಗಮನ ಸೆಳೆಯುತ್ತಿದೆ. ಕಲೆ, ಸಾಹಿತ್ಯ, ಸಂಶೋಧನೆ, ಸಂಸ್ಕೃತಿಯ ಕ್ಷೇತ್ರದಲ್ಲಿ ಅಭಿರುಚಿ ನಿರ್ಮಾಣದ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಅರಮನೆಗಳ ನಗರವು ವಿಜ್ಞಾನ ನಾಟಕಗಳ ರಚನೆ, ಪ್ರದರ್ಶನ ಮತ್ತು ವೀಕ್ಷಣೆಯ ವಿಚಾರದಲ್ಲೂ ಅಭಿರುಚಿ ನಿರ್ಮಿಸುವ ಮಹತ್ವದ ಮತ್ತು ಅಪರೂಪದ ಕಾಯಕದಲ್ಲಿ ತೊಡಗಿದೆ.

ಇದು ಕಲೆಯಲ್ಲಿ ವಿಜ್ಞಾನವನ್ನು ಬೆಸೆಯುವ, ವಿಜ್ಞಾನವನ್ನು ಕಲೆಯ ಮೂಲಕ ಗ್ರಹಿಸಿ, ಮಂಡಿಸುವ ವೈಜ್ಞಾನಿಕ ಸಂವಹನ ಮಾದರಿ. ಈ ಮಾದರಿ ಸದ್ಯಕ್ಕೆ ಇತರೆ ಭಾರತೀಯ ಭಾಷೆಗಳಲ್ಲಿ ಇಲ್ಲ. ಹೀಗಾಗಿ ಇದು ಕನ್ನಡದ ಹೆಮ್ಮೆಯೂ ಹೌದು.

ADVERTISEMENT

ಉತ್ಸವ ಈಗಷ್ಟೇ ನಡೆಯುತ್ತಿರುವುದಲ್ಲ. ನಾಲ್ಕು ವರ್ಷಗಳಿಂದಲೂ ಉತ್ಸವಕ್ಕೆ ವಿಜ್ಞಾನ ನಾಟಕಗಳು ಮೆರುಗು ನೀಡಿವೆ. ಅನುವಾದಿತ ನಾಟಕಗಳಂತೆಯೇ ಕನ್ನಡದ್ದೇ ನಾಟಕಗಳೂ ಉತ್ಸವದ ಭಾಗವಾಗಿರುವುದು ವಿಶೇಷ. ಇನ್ನು ಕೆಲವು ದಿನ ಕಾಯಿರಿ. ಪಕ್ಷಿತಜ್ಞ ಸಲೀಂ ಅಲಿ, ಸಿ.ವಿ.ರಾಮನ್‌, ಕ್ಲೋನಿಂಗ್ ಮತ್ತು ಕೋಪರ್ನಿಕಸ್ ಕುರಿತ ನಾಟಕಗಳೂ ಕನ್ನಡದಲ್ಲಿ ಬರಲಿವೆ!

ಪರಿವರ್ತನ ರಂಗ ಸಮಾಜ, ಕಲಾ ಸುರುಚಿ ಸಾಂಸ್ಕೃತಿಕ ಬಳಗ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಜಂಟಿಯಾಗಿ ಆಯೋಜಿಸುತ್ತಿರುವ ಉತ್ಸವದ ಭಾಗವಾಗಿಯೇ, ವಿಜ್ಞಾನ ನಾಟಕಗಳ ರಚನೆಯ ಕುರಿತ ಸದ್ದಿಲ್ಲದ ಕಾರ್ಯಾಗಾರವೂ ನಡೆದಿದೆ.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಭಾರತೀಯ ಭಾಷೆಗಳಲ್ಲಿ ಸಂವಹನ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆ ‘ವಿಜ್ಞಾನ ಪ್ರಸಾರ್‌’ನ ‘ಸ್ಕೋಪ್‌’ ಯೋಜನೆ ಅಡಿ ಕರ್ನಾಟಕದಲ್ಲಿ ವಿಜ್ಞಾನ–ತಂತ್ರಜ್ಞಾನದ ಸಂವಹನ, ಜನಪ್ರಿಯ ವಿಜ್ಞಾನ ಹಾಗೂ ವಿಸ್ತರಣೆಯ ಕಾರ್ಯಕ್ರಮ ‘ಕುತೂಹಲಿ’, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜೊತೆಗೂಡಿ ನಡೆದಿರುವ ಉತ್ಸವ ಇದು.

ಕಲೆಯ ಮೂಲಕ ವಿಜ್ಞಾನ ಸಂವಹನವನ್ನು ಸಾಧಿಸುವ ಮೊದಲ ಪ್ರಯತ್ನಕ್ಕೆ (2018) ವೇದಿಕೆ ಒದಗಿಸಿದ್ದು ಮೈಸೂರಿನ ಕಲಾಮಂದಿರ. ಡೇವಿಡ್‌ ಆಬರ್ನ್‌ ಅವರ ‘ಪ್ರೂಫ್‌’, ಮೈಕೆಲ್‌ ಫ್ರೇನ್‌ ಅವರ ‘ಕೊಪನ್‌ ಹೇಗನ್’ ಜೊತೆಗೆ ಕನ್ನಡದ, ಎಸ್‌.ಆರ್‌.ರಮೇಶ್‌ ಅವರ ನಾಟಕ ‘ಬ್ರೋಕನ್‌ ಬ್ಲಾಸಂ’ ಆಗ ಪ್ರದರ್ಶನಗೊಂಡಿದ್ದವು. ವಿಜ್ಞಾನ, ಕಲೆ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವೂ ಅಂದಿನ ಉತ್ಸವದ ಭಾಗವಾಗಿತ್ತು.

ನಂತರದ ವರ್ಷದ ಉತ್ಸವದಲ್ಲಿ ಬರ್ಟೊಲ್ಟ್‌ ಬ್ರೆಕ್ಟ್‌ ಅವರ ‘ಗೆಲಿಲಿಯೋ’, ರಾಬರ್ಟ್‌ ಮಾರ್ಕ್‌ ಫ್ರೀಡ್ಮನ್‌ ಅವರ ‘ಮುಸ್ಸಂಜೆಯ ಸ್ವಗತಗಳು’, ನೀಲಾಂಜನ್‌ ಚೌಧರಿಯವರ ‘ಕವಿತೆಯ ವರ್ಗಮೂಲ’ ನಾಟಕ ಉತ್ಸವನ್ನು ಕಳೆಗಟ್ಟಿಸಿದವು. ವಿಶೇಷವೆಂದರೆ, ಆ ವರ್ಷ ವಿಜ್ಞಾನ ನಾಟಕ ರಚನಾ ಶಿಬಿರವೂ ಆಯೋಜನೆಗೊಂಡಿತ್ತು. ಅದು ವಿಜ್ಞಾನ ನಾಟಕಗಳ ರಚನೆಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿತು.

ಆ ವರ್ಷ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಜ್ಞಾನ ನಾಟಕ ಕಟ್ಟುವಲ್ಲಿನ ಸವಾಲುಗಳು, ವಿಜ್ಞಾನ ಮತ್ತು ಸಾಂಸ್ಕೃತಿಕ ಕಲೆಯ ವಿಷಯಗಳ ಬಗ್ಗೆ ಡಾ.ಸುದರ್ಶನ ಪಾಟೀಲ ಕುಲಕರ್ಣಿ ಮತ್ತು ನೀಲಾಂಜನ ಚೌಧರಿ ಮಾತನಾಡಿದ್ದರು. ಅದರ ಪರಿಣಾಮವಾಗಿಯೇ, ಎರಡು ವರ್ಷದ ನಂತರ ನಾಲ್ಕು ನಾಟಕಗಳ ರಚನೆ ಕಾರ್ಯ ಭರದಿಂದ ಸಾಗಿದೆ!

ಉತ್ಸವದ ಮೂರನೇ ವರ್ಷ ತೇಜಸ್ವಿನಿ ಜೋಯಿಸರ ಅರಿವಿನ ‘ಅಂಗಳದಲ್ಲಿ’, ಕಾರ್ಲ್‌ ಜೆರಾಸಿ ಅವರ ‘ಕ್ಯಾಲ್ಕ್ಯುಲಸ್‌’, ಭದ್ರಪ್ಪ ಶಿ ಹೆನ್ಲಿ ಅವರ ‘ನಿಲುಕದ ನಕ್ಷತ್ರ’ ನಾಟಕಗಳು ಪ್ರದರ್ಶನಗೊಂಡಿದ್ದವು. ಕೋವಿಡ್‌ ಹಾವಳಿಯ ನಡುವೆಯೂ ಉತ್ಸವ ನಿಲ್ಲಲಿಲ್ಲ ಎಂಬುದು ವಿಶೇಷ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯೂ ಉತ್ಸವಕ್ಕೆ ವೇದಿಕೆ ಕಲ್ಪಿಸಿದ್ದು ಇನ್ನೊಂದು ವಿಶೇಷ. ಆ ವರ್ಷ ನಾಟಕಗಳು ಎರಡು ಬಾರಿ ಪ್ರದರ್ಶನಗೊಂಡವು.

‘ವಿಜ್ಞಾನ ನಾಟಕೋತ್ಸವವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನದಲ್ಲಿ ಬಳಸಿಕೊಳ್ಳುವ ಚಳವಳಿಯನ್ನಾಗಿ ರೂಪಿಸುವ ಯೋಜನೆ ಮೊಳೆತದ್ದರ ಫಲವಾಗಿಯೇ ಮೈಸೂರು ನಾಟಕೋತ್ಸವ ಟ್ರಸ್ಟ್‌ ಸ್ಥಾಪನೆಯಾಯಿತು’ ಎಂದು ಸ್ಮರಿಸುತ್ತಾರೆ ಅರಿವು ಟ್ರಸ್ಟ್‌ನ ಡಾ.ಮನೋಹರ್‌ ಮತ್ತು ಜನಾರ್ದನ್.

2021ರಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೆರವಿನಿಂದ ಅರಿವು ಟ್ರಸ್ಟ್‌ ನಿರ್ಮಿಸಿದ ‘ಕ್ಯುಇಡಿ’ ನಾಟಕವನ್ನು ವಿಜ್ಞಾನ ದಿನಾಚರಣೆಯಂದು ಪ್ರದರ್ಶಿಸಲಾಗಿತ್ತು. ವಿಜ್ಞಾನ ಪ್ರಸಾರ್‌ ನೆರವಿನಿಂದ ಈ ನಾಟಕವನ್ನು ಏಳು ಜಿಲ್ಲೆಗಳಲ್ಲಿ, ಹದಿನೇಳು ಶಾಲೆ–ಕಾಲೇಜು, ಸಂಶೋಧನಾ ಸಂಸ್ಥೆಗಳಲ್ಲಿ ಪ್ರದರ್ಶಿಸಿರುವುದು ಹೆಗ್ಗಳಿಕೆ. ನಿರ್ದೇಶಕ ಯತೀಶ್‌ ಕೊಳ್ಳೇಗಾಲ ಅವರು ರಿಚರ್ಡ್‌ ಫೆಯ್‌ಮನ್ ಅವರ ಕ್ಯುಇಡಿ ಉಪನ್ಯಾಸಗಳನ್ನು ಆಧರಿಸಿ ರಚಿಸಿದ ಈ ನಾಟಕವನ್ನು ಇದುವರೆಗೂ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕನ್ನಡದ ವಿಜ್ಞಾನ ನಾಟಕಗಳ ಇತಿಹಾಸದಲ್ಲೇ ಇದೊಂದು ವಿಶೇಷ ಸಾಧನೆ ಎಂಬುದು ತಂಡದ ಪ್ರತಿಪಾದನೆ.

ಈ ಪ್ರಯತ್ನಗಳ ನಂತರದ್ದೇ ಮೈಸೂರು ವಿಜ್ಞಾನ ನಾಟಕೋತ್ಸವದ ಐದನೇ ಸಂಚಿಕೆ. ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಸಹಯೋಗದೊಂದಿಗೆ, ವಿಜ್ಞಾನ ನಾಟಕಗಳನ್ನು ರಚಿಸಲು ಲೇಖಕರಿಗೆ ವಿಶೇಷ ಕಮ್ಮಟವನ್ನೂ ನಡೆಸಲಾಗಿದೆ.

ಈ ಸಂಚಿಕೆಯಲ್ಲಿ ಜುಲೈ 15ರಿಂದ ಶುರುವಾಗಿರುವ ಉತ್ಸವದ ಮೊದಲ ನಾಟಕ ‘ಲೀಲಾವತಿ’, ಭಾರತೀಯ ಗಣಿತಜ್ಞ 2ನೇ ಭಾಸ್ಕರಾಚಾರ್ಯ ರಚಿಸಿದ ನಾಟಕ. ಎರಡನೇ ನಾಟಕ, 20ನೇ ಶತಮಾನದ ಪ್ರತಿಭಾವಂತ ವಿಜ್ಞಾನಿ ‘ಐನ್‌ಸ್ಟೀನ್‌’ ಜೀವನ ಆಧರಿಸಿದ ನಾಟಕ. ನೊಬೆಲ್‌ ಪ್ರಶಸ್ತಿ ವಿಜೇತ ಭೌತ ವಿಜ್ಞಾನಿ ಅಬ್ದುಸ್‌ ಸಲಾಮ್‌ ಬದುಕು–ಸಾಧನೆ ಆಧರಿಸಿದ ನಾಟಕದ ಮೂಲಕ ಉತ್ಸವ ಭಾನುವಾರ(ಜುಲೈ 17) ಕೊನೆಗೊಳ್ಳಲಿದೆ.

ವಿಜ್ಞಾನ ನಾಟಕಗಳು ವಿಜ್ಞಾನವನ್ನು ಸಾಮಾನ್ಯ ಜನರ ನಡುವೆ ಹರಡುವ ಚಳವಳಿಯಾಗಬೇಕು ಎಂಬ ಆಶಯದ ಜೊತೆಗೆ, ಈ ನಾಟಕಗಳ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವ ಸವಾಲು ಕೂಡ ನಾಟಕಕಾರರು ಮತ್ತು ಕಲಾವಿದರ ಮುಂದೆ ಇದೆ. ಈ ಸವಾಲವನ್ನು ಒಟ್ಟು ತಂಡ ಸಮರ್ಥವಾಗಿ ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಉತ್ಸವದ ಪ್ರೇಕ್ಷಕರ ಗ್ಯಾಲರಿ ಬಹುತೇಕ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.