ADVERTISEMENT

ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿ ರಂಗದ ಮೇಲೆ!

ಮೋಹನ್ ಕುಮಾರ ಸಿ.
Published 14 ಜೂನ್ 2025, 22:00 IST
Last Updated 14 ಜೂನ್ 2025, 22:00 IST
<div class="paragraphs"><p>ಮೈಮನಗಳ ಸುಳಿಯಲ್ಲಿ, ರಾಜೇಶ್,&nbsp;ಅಕ್ಷತಾ ಕುಮಟಾ</p></div>

ಮೈಮನಗಳ ಸುಳಿಯಲ್ಲಿ, ರಾಜೇಶ್, ಅಕ್ಷತಾ ಕುಮಟಾ

   

ಕಾದಂಬರಿ ಧ್ವನಿಸುವ ವಸ್ತುವನ್ನು ‘ಹಿಡಿ’ಯಾಗಿ ನಾಟಕದ ಮೂಲಕ ಪ್ರೇಕ್ಷಕರಿಗೆ ಕೊಡುವುದು ಸುಲಭವಲ್ಲ. ಕನ್ನಡ ರಂಗಭೂಮಿಯಲ್ಲಿ ಕೆಲವೇ ಕಾದಂಬರಿಗಳು ರಂಗವೇದಿಕೆಯಲ್ಲಿ ಮೈದಳೆದಿವೆ. ಅದೂ ದೀರ್ಘ ಪ್ರಯೋಗಗಳಾಗಿ! ‌‌‌

ಒಂದೂ ಮುಕ್ಕಾಲು ಗಂಟೆಯಲ್ಲಿ ಕೆಲವೇ ಪಾತ್ರಗಳು, ನಟರಿಂದ ಕಾದಂಬರಿಯ ‘ವಸ್ತು’ವನ್ನು ದಾಟಿಸಬಹುದು, ರೂಪಕಗಳ ರಂಗವಿನ್ಯಾಸ, ಜೀವಸಾರ ಸಂಗೀತ, ನವಿರಾದ ನಿರೂಪಣೆಯಿಂದ ಕಾವ್ಯಮಯವಾಗಿಸಬಹುದು ಎಂಬುದನ್ನು ‘ನಿರ್ದಿಗಂತ’ ರಂಗ ತಂಡವು ಕೆ.ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ನಾಟಕದ ಮೂಲಕ ಸಾಧ್ಯವಾಗಿಸಿದೆ.

ADVERTISEMENT

ಇಲ್ಲಿ ಕಾದಂಬರಿಯು ರಂಗಕಾವ್ಯವಾಗಿ ಸಹೃದಯರ ಎದೆಯಾಳಕ್ಕೆ ಇಳಿಯುತ್ತದೆ. ‘ಮೈ ಬೇರೆ.. ಮನಸ್ಸೇ ಬೇರೆ’ ಎಂಬ ಜಿಜ್ಞಾಸೆಯಲ್ಲಿ ಹುಟ್ಟಿದ ಕಾದಂಬರಿಗೆ ಕಾವ್ಯಲೇಪನವನ್ನು ಕಾರಂತರು ಸೃಷ್ಟಿಸಿದ ಪಾತ್ರಗಳ ಮೂಲಕವೇ ತಂಡವು ಗಟ್ಟಿಯಾಗಿ ಹೇಳಿದೆ. 

ಎಲ್ಲ ಪಾತ್ರಗಳು ರಂಗದಲ್ಲಿ ಕಾಣುವುದಿಲ್ಲ. ಎಲ್ಲ ಸಂಗತಿಗಳೂ ಮಾತಾಗಿಲ್ಲ. ಆದರೆ, ವರ್ತಮಾನಕ್ಕೆ ಬೇಕಾದ ಕಾದಂಬರಿಯ ಸತ್ವವನ್ನು ಪ್ರೇಕ್ಷಕರ ಎದೆಯಲ್ಲಿ ಬಿತ್ತುತ್ತಲೇ, ದ್ವಂದ್ವಗಳ ಸುಳಿಯಲ್ಲಿ ಸಿಲುಕಿರುವ ಅವರನ್ನು ಹೊರಗೆಳೆದು, ಜೀವ ಹಗುರಗೊಳಿಸುವುದನ್ನು ಈ ರಂಗಪ್ರಯೋಗ ಆಗು ಮಾಡಿದೆ. ರಂಗಾಯಣದ ಶ್ರೀರಂಗದಲ್ಲಿ ಪ್ರದರ್ಶನಗೊಂಡ ಅಮಿತ್ ಜೆ. ರೆಡ್ಡಿ ನಿರ್ದೇಶನದ ನಾಟಕ ವಿಸ್ಮಿತಗೊಳಿಸಿದೆ. 

‘ಮೈ– ಮನಸ್ಸು ಎರಡೂ ಬೇರೆ’ ಎಂದು ಹೇಳಿದ ಅಮ್ಮನ ಮಾತನ್ನು ಬದುಕಿನುದ್ದಕ್ಕೂ ಶೋಧಿಸುವ ಕಥಾ ನಾಯಕಿ, ವೇಶ್ಯೆ ಮಂಜುಳೆ, ‘ಮೈ– ಮನಸ್ಸು ಎರಡೂ ಒಂದೇ’ ಎಂದು ಅರ್ಥ ಮಾಡಿಕೊಳ್ಳುವ ಅವಳ ಹುಡುಕಾಟದಲ್ಲಿ ಕಾಮತೃಷೆ ತೀರಿಸಿಕೊಳ್ಳಲು ಬರುವ ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ಬರಾಯ, ಲಕ್ಷ್ಮಣತೀರ್ಥ ಎಂಬ ಪಾತ್ರಗಳು ಇಂದಿನ ಸಮಾಜಕ್ಕೆ ಕನ್ನಡಿ ತೋರಿದವು. ಪಮ್ಮ– ದುಗ್ಗಿ ಎಂಬ ವಯೋವೃದ್ಧ ದಂಪತಿಯ ಆದರ್ಶದ ಪ್ರೀತಿಯು ಪ್ರೇಕ್ಷಕರ ಒಳಗಿದ್ದ ಸತ್ಯದ ಭಾವಗನ್ನಡಿಯೇ ಆಗಿತ್ತು.

ಹೆಣ್ಣು–ಗಂಡಿನ ಸಂಬಂಧ ದೇಹ ತೃಷೆಗಷ್ಟೇ ಸೀಮಿತವೇ, ಲೈಂಗಿಕ ಸಂತೃಪ್ತಿ ಮಾತ್ರ ಮುಖ್ಯವೇ. ಇಲ್ಲ, ಜೀವನದ ದಾರಿಯುದ್ದಕ್ಕೂ ಬೇಕಾದ ಸಾಂಗತ್ಯವೇ. ಪ್ರೀತಿ ಮಾಡಲು ಮನಸ್ಸೊಂದಿದ್ದರೇ ಸಾಕೇ ಎಂಬ ಚರ್ಚೆ ನಾಟಕದುದ್ದಕ್ಕೂ ನಡೆಯುತ್ತದೆ. ಅದು ವೇಶ್ಯೆಯೊಬ್ಬಳ ಕಥೆಯಲ್ಲ. ಅದು ಎಲ್ಲರ ಕಥೆ. ಮಂಜುಳೆಯ ಮೈ– ಮನಸ್ಸು ಪ್ರತಿ ಗಂಡು– ಹೆಣ್ಣಿನದೂ ಆಗಿದೆ. ಮಂಜುಳೆ ಸುಂದರ ದಾಂಪತ್ಯದ ಪಾಠವನ್ನೂ ಮಾಡುತ್ತಾಳೆ.

ಆ ಪಾತ್ರವನ್ನು ಮಾಡಿರುವ ಅಕ್ಷತಾ ಕುಮಟಾ ಅವರ ಭಾವಶುದ್ಧ ಅಭಿನಯಕ್ಕೆ ಪೈಪೋಟಿ ನೀಡುವಂತೆ ರಾಜೇಶ್‌ ಮಾಧವನ್‌ ಅವರು ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ಬರಾಯ, ಲಕ್ಷ್ಮಣತೀರ್ಥ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜೇಶ್‌ ಒಂದು ಪಾತ್ರದಿಂದ ಪಾತ್ರಕ್ಕೆ ಜಿಗಿದರೂ ರೂಪಾಂತರಕ್ಕೆ ಭಾವ ಪ್ರಸನ್ನತೆ ತಂದುಕೊಡುತ್ತಾರೆ.

ಮಂಜುಳೆಯ ಯೌವ್ವನದ ದಿನಗಳಿಗೆ ಲೇಖಕಿ ವಿಜಯಮ್ಮ ಹಿನ್ನೆಲೆ ಧ್ವನಿಯಾಗಿದ್ದಾರೆ. ಪ್ರೇಕ್ಷಕರನ್ನು ಅತ್ತಿತ್ತ ಹೊರಳಿಸದಂತೆ, ಭಾವದಲೆಗಳನ್ನು ಏಳಿಸುವಂತೆ ಸತ್ವವಾದ ನಿರೂಪಣೆಯ ಗಟ್ಟಿ ಧ್ವನಿ ಅವರಿಂದ ನಾಟಕಕ್ಕೆ ಸಿಕ್ಕಿದೆ. ಧ್ವನಿಯ ಜೊತೆಗೆ ಬರುವ ಸಮುದ್ರದ ಅಲೆಗಳು, ಸಿಡಿಲು, ಮಳೆ, ಬೀಸುವ ಗಾಳಿಯ ಶಬ್ದವಿನ್ಯಾಸ ಮನದಣಿಸುತ್ತದೆ. ಹಿನ್ನೆಲೆಯ ಧ್ವನಿ ಭೂತವಾದರೆ, ಮಂಜುಳೆಯ ಪಾತ್ರ ವಾಸ್ತವವಾಗಿ ಎದುರು ನಿಂತಿರುತ್ತದೆ.   

ವಾಸುದೇವ ಪೈ ಜೊತೆಗಿನ ಸಂಬಂಧದಲ್ಲಿ ಪತ್ರ, ಮಾತಿನಲ್ಲಿ ಚೆನ್ನಾಗಿದ್ದರೂ, ಮಂಚದಲ್ಲಿ ದೇಹವನ್ನು ಹರಿದು ತಿನ್ನುವ ಹುಲಿಯಂತೆ, ಮಾರಿಯಮ್ಮನ ಮುಂದೆ ಕಡಿಯುವ ಕುರಿಯಾಗಬೇಕಾಯಿತು. ನಾನು ಹಿಂಸೆಗೊಳಪಟ್ಟೆ ಪಶುವೊಂದರಂತೆ, ಮೈಮನಗಳೆರಡರ ನೋವಿಗೆ ಗುರಿಯಾಗದೆ ಎನ್ನುತ್ತಾಳೆ ಮಂಜುಳೆ. ಈ ವೇಳೆಯೇ ಶೃಂಗಾರಕ್ಕೆ ಬೇಕಿರುವುದು ವೈಯ್ಯಾರ, ಒನಪಲ್ಲ. ಬೇರೇನೋ ಮುಗ್ಧತೆ, ಸಹಜತೆ ಬೇಕು ಎಂದು ಪಮ್ಮ–ದುಗ್ಗಿ ಎಂಬ ವೃದ್ಧರಲ್ಲಿ ನೋಡುತ್ತಾಳೆ. ಈ ನಂತರ ಬರುವವರೇ ಉಳ್ಳೂರು ಸುಬ್ಬರಾಯ ಮತ್ತು ಲಕ್ಷ್ಮಣತೀರ್ಥ. ಇವರಿಬ್ಬರಲ್ಲೂ ತನ್ನ ಆದರ್ಶದ ಪಮ್ಮ–ದುಗ್ಗಿಯನ್ನು ಕಾಣಲು ನೋಡುತ್ತಾಳೆ.  

ಉಳ್ಳೂರು ಸುಬ್ಬರಾಯ ಜೊತೆಗಿನ ಸಂಬಂಧದಲ್ಲಿ ಗಾಢಪ್ರೀತಿಯನ್ನು ಕಾಣುವ ಮಂಜುಳೆಗೆ, ಕಾಮತೃಪ್ತಿ ಸಿಗುವುದಿಲ್ಲ. ಕೊನೆಗೆ ಅವನೂ ಸಾಯುತ್ತಾನೆ. ಮಠದ ಸನ್ಯಾಸಿ ಲಕ್ಷ್ಮಣತೀರ್ಥ ಉರುಫ್ ಆನಂದಮೂರ್ತಿಯ ಸಂಬಂಧಲ್ಲಿ ಪ್ರೀತಿ–ತೃಪ್ತಿ ಎರಡೂ ಸಿಗುತ್ತದೆ. ಮೈ– ಮನಸ್ಸು ಒಂದೇ ಎಂದೇ ಖಾತ್ರಿ ಪಡಿಸಿಕೊಳ್ಳುತ್ತಾಳೆ. ಆದರೆ, ಆತ ಶಾಶ್ವತವಾಗಿ ಭೌತಿಕ ಜೀವನ ತೊರೆದು ಸಮಾಧಿಯಾಗಿಬಿಡುತ್ತಾನೆ. ಕೊನೆಯಲ್ಲಿ, ತಂಬೂರಿ ಹಿಡಿದ ಮಂಜುಳೆ ಹೇಳುವ ಮಾತಿದು, ‘ನನ್ನ ತಂಬೂರಿ, ದಂಡ ಉಳ್ಳೂರರು, ಅದರ ತಂತಿ ಆನಂದರು. ಅವರಿಬ್ಬರು ಜೊತೆಯಲ್ಲಿ ಅನುದಿನ ಇರುವುದರಿಂದ ನಾನು ಸುಮಂಗಲೆ, ನಿತ್ಯ ಸುಮಂಗಲೆ’ ಎನ್ನುತ್ತಾಳೆ.

ರೇಷ್ಮೇ ಹುಳು ಬುಟ್ಟಿಯ ಅಂಚಿನ ಅಚ್ಚೆಗಳ ಚಂದ್ರಿಕೆಯನ್ನು ರಂಗದ ಮೇಲೆ ಇರಿಸಲಾಗಿದ್ದು, ಇದು ವೃತ್ತಾಕಾರದಲ್ಲಿ ಸುರುಳಿ ಸುತ್ತಿದ ಕೋಟೆಯಂತೆ ಭಾಸವಾಗುತ್ತದೆ. ಇವುಗಳ ಮಧ್ಯೆ ಪಾತ್ರಗಳು ಸುತ್ತುತ್ತವೆ. ರೇಶಿಮೆಯ ಹುಳು ಗೂಡಿನಿಂದ ಬಿಡಿಸಿಕೊಂಡು ಚಿಟ್ಟೆಯಾಗಿ ಹಾರುವ ಅವಕಾಶವನ್ನು ಪಾತ್ರಗಳೇ ಭಾವಾಭಿನಯದ ಮೂಲಕ ತೋರುತ್ತವೆ.

ಪಮ್ಮ– ದುಗ್ಗಿ ಪಾತ್ರಗಳು ಬೊಂಬೆಗಳಾಗಿದ್ದು, ಆದರ್ಶ ದಾಂಪತ್ಯ ಕಟ್ಟಿಕೊಡುವ ಹಾಡಿನಿಂದಾಗಿ ಬೊಂಬೆಗಳು ನಾಟಕದ ಕೊನೆಯವರೆಗೂ ಸಜೀವವಾಗಿರುತ್ತವೆ. ಯಾವುದೇ ಕಲಾವಿದರೂ ಜೀವ ತುಂಬಿ ಅಭಿನಯಿಸಿದ್ದರೂ ಇಷ್ಟು ಪರಿಣಾಮಕಾರಿ ಆಗುತ್ತಿರಲಿಲ್ಲ. ಬೊಂಬೆಗಳು ಕಟ್ಟಿಕೊಡುವ ರೂಪಕ ಮನಸ್ಸಿನಲ್ಲಿ ಅಚ್ಚಳಿಯದಂತೆ ಜೀವಂತವಾಗುತ್ತದೆ. ಕಾದಂಬರಿಯನ್ನು ಕಾವ್ಯವಾಗಿಸಲು ಬೊಂಬೆ, ಬಿದಿರಿನ ಅಚ್ಚೆ, ಕನ್ನಡಿಗಳು, ಅವುಗಳಲ್ಲಿ ಮೂಡಿದ ಬೆಳಕಿನ ಬಿಂಬ, ಪ್ರತಿಬಿಂಬಗಳು ಪ್ರೇಕ್ಷಕರ ಮನೋಭಿವ್ಯಕ್ತಿಯೇ ಆಗಿವೆ. ಅವೇ ಬೆಳಕಿನ ಹಾದಿಯನ್ನು ತೋರುತ್ತವೆ. ಪಾತ್ರಗಳು ಪರಸ್ಪರ ಒಪ್ಪಿಸಿಕೊಳ್ಳುವ ಹರಿವಾಣ, ಕಾಯಿ ತುರಿದು ಮಾಡುವ ಪಂಚಾಮೃತವು ಪ್ರೇಕ್ಷಕರ ಬಾಯಿ ತುಂಬಿಸುತ್ತದೆ. ಕಾದಂಬರಿಯ ಆಯ್ದ ಭಾಗಗಳನ್ನು ನಿರ್ದೇಶಕರು ರಂಗರೂಪವಾಗಿಸಿದ್ದರೂ, ಒಂದು ದೃಶ್ಯದಿಂದ ಇನ್ನೊಂದು ದೃಶ್ಯದ ಚಲನೆಗೆ ಯಾವುದೇ ತಡೆಯಾಗಿಲ್ಲ.

ಪಾತ್ರಗಳ ಭಾವ ತೀವ್ರತೆಯನ್ನು ಹೆಚ್ಚಿಸಲು ನೃತ್ಯ, ಅದಕ್ಕೊಪ್ಪುವ ಸಂಗೀತ ನಾಟಕದಲ್ಲಿದೆ. ಚಲನೆ ವಿನ್ಯಾಸವನ್ನು ಶಕೀಲ್‌ ಅಹಮದ್‌ ಹಾಗೂ ಅನುಷಾ ವೀರೇಶ್ ಮಾಡಿದ್ದರೆ, ಅನುಷ್‌ ಎ.ಶೆಟ್ಟಿ ಅವರ ಸಂಗೀತವೇ ನಾಟಕಕ್ಕೆ ಜೀವ ನೀಡುತ್ತದೆ. ಬೆಳಕಿನ ವಿನ್ಯಾಸ ಬಾಷಾಸಾಬ್, ವಸ್ತ್ರ ವಿನ್ಯಾಸ ಎಚ್‌.ಕೆ.ಶ್ವೇತಾರಾಣಿ ಚಂದವಾಗಿ ಮಾಡಿದ್ದಾರೆ.
***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.