ADVERTISEMENT

ರಂಗಭೂಮಿ | ನೆಲ, ನುಡಿ ಗುರುತುಗಳ ಹುಡುಕಾಟ

ಸಂಸ್ಕೃತಿ ಸಂಗಮ– ನೆಲಸಂಸ್ಕೃತಿ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 22:30 IST
Last Updated 24 ಫೆಬ್ರುವರಿ 2024, 22:30 IST
<div class="paragraphs"><p><strong>ಮೇಲುಕೋಟೆ ಪುತಿನ ಕಲಾಮಂದಿರದಲ್ಲಿ ನಡೆದ ಕೋಟಿಗನಹಳ್ಳಿ ರಾಮಯ್ಯ ನಾಟಕದಲ್ಲಿ‌ ಮಕ್ಕಳ ಪ್ರದರ್ಶನ</strong></p></div>

ಮೇಲುಕೋಟೆ ಪುತಿನ ಕಲಾಮಂದಿರದಲ್ಲಿ ನಡೆದ ಕೋಟಿಗನಹಳ್ಳಿ ರಾಮಯ್ಯ ನಾಟಕದಲ್ಲಿ‌ ಮಕ್ಕಳ ಪ್ರದರ್ಶನ

   

‘ಅಯ್ಯೋ, ಕಟ್ಟಿಗೆ ಮಾರೋ ಸಿಟಿಜನ್....ಲಿಜನ್‌....ನಾವು ಚಂದ್ರಯಾನ ಪೂರೈಸಿ ಸೂರ್ಯಯಾನಕ್ಕೆ ಸಿದ್ಧತೆ ಮಾಡ್ತಾ ಇರೋರು! ಶೇರ್‌ ಮಾರ್ಕೆಟ್ಟಿನ ಶೂರರು, ಅಮೆಜಾನ್‌ನಲ್ಲಿ ಅಮೇಸಿಂಗ್‌ ಆದವರು..ಸ್ವಿಗ್ಗಿ ಆಪಲ್ಲಿ ಸುಗ್ಗಿ ಮಾಡೋರು, ನೀರೂ ನಿದ್ದೆ ಬಿಟ್ರೂ ಸೋಶಿಯಲ್‌ ಮೀಡಿಯಾ ಬಿಡದೋರು...’

–ಮಾರ್ಕೆಟ್ಟಲ್ಲಿ ಸೌದೆ ಮಾರಲು ದುಂಡಯ್ಯನಿಗೆ ಜಾಗ ಬಿಡದ ಜನ ಹೇಳೋ ಮಾತುಗಳು ಇವು.

ADVERTISEMENT

ದುಂಡಯ್ಯ ಯಾರೆಂದಿರಾ? ಮಂಡ್ಯ ಜಿಲ್ಲೆ ಮಳವಳ್ಳಿಯ ಅದ್ಭುತ ಜನಪದ ಕತೆಗಾರ. ‘ಈ ಕಾಲದಲ್ಲಿ ದುಂಡಯ್ಯ ಬದುಕಿದ್ದರೆ’ ಎಂಬ ಕಲ್ಪನೆಯಲ್ಲೆ ಕೋಲಾರ ಸೀಮೆಯ ಕೋಟಿಗಾನಹಳ್ಳಿ ರಾಮಯ್ಯನವರು ಬರೆದ ‘ಚಿಕ್‌ ಮಾರಿ ದೊಡ್‌ ಮಾರಿ’ ನಾಟಕದ ಈ ದೃಶ್ಯ, ಅತ್ಯಾಧುನಿಕ ಜೀವನದ ಜನಪದವನ್ನೂ, ಈ ನೆಲದ ಸಾಮಾನ್ಯರ ಅತಂತ್ರ ಸ್ಥಿತಿಯನ್ನೂ ಏಕಕಾಲಕ್ಕೆ ರಂಗದ ಮೇಲೆ ತರುತ್ತದೆ.

ಮೂವತ್ತು ವರ್ಷದ ಹಿಂದೆ ಇದೇ ರಾಮಯ್ಯ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮದ (ಡಿಪಿಇಪಿ) ಅಡಿ ಎಂಟು ಜಿಲ್ಲೆಗಳ ಜನಪದ ಕತೆಗಾರರನ್ನು ಹುಡುಕಿ ಕೋಲಾರದ ಗೊಲ್ಲಹಳ್ಳಿಯಲ್ಲಿ ಶಿಬಿರ ಮಾಡಿದ್ದಾಗ, ದುಂಡಯ್ಯ ಕೂಡ ಪಾಲ್ಗೊಂಡಿದ್ದರು. 

ಕೋಲಾರದ ತೇರಳ್ಳಿ ಬೆಟ್ಟ ಇಳಿದು ಮೇಲುಕೋಟೆಯ ಬೆಟ್ಟ ಏರಿರುವ ರಾಮಯ್ಯನವರು ಮಂಡ್ಯ ಜಿಲ್ಲೆಯಲ್ಲಿ ನಡೆಸಿರುವ ನೆಲ ಗುರುತು, ನುಡಿ ಗುರುತುಗಳ ಹುಡುಕಾಟದ ಕತೆಗಳಿವು. ಕತೆ ಎಂದರೆ ಕತೆಯಷ್ಟೇ ಅಲ್ಲ, ನಾಟಕವೂ ಹೌದು. ಏಕೆಂದರೆ, ಮಂಡ್ಯ ನೆಲದ ಕೆಲವು ಜನಪದ ಕತೆಗಳನ್ನು ಆಧರಿಸಿಯೇ ಅವರು ಸರಣಿ ಕತೆ–ನಾಟಕಗಳನ್ನು ಬರೆದಿದ್ದಾರೆ. ಆರು ಕತೆಗಳು ಮತ್ತು ಎರಡು ಗೀತ ರೂಪಕಗಳು ಮಂಡ್ಯದಲ್ಲಿ ಮತ್ತು ಮೇಲುಕೋಟೆಯಲ್ಲಿ ಫೆಬ್ರುವರಿಯ ಎರಡು ವಾರಂತ್ಯಗಳಲ್ಲಿ ಮಕ್ಕಳಿಂದ ಪ್ರದರ್ಶನಗೊಂಡಿರುವುದು ವಿಶೇಷ.

‘ಆದಿಮ’ ಸಂಸ್ಥೆಯ ಬಂಡೆಗಳ ನಡುವಿನ ಚಿಗುರುಗಳ ಕತೆಗಳನ್ನೇ ಅವರು ನಾಟಕಗಳನ್ನಾಗಿಸಿ, ಮಕ್ಕಳಿಂದಲೇ ಆಡಿಸಿದರು. ಮಂಡ್ಯ ಸೀಮೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಆಗಿದ್ದೂ ಅದೇ. ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳ ಮಕ್ಕಳು ನಾಟಕವಾಡುತ್ತಲೇ, ತಮ್ಮ ನೆಲದ–ನುಡಿಯ ಗುರುತುಗಳತ್ತ ಮನ ಕೊಟ್ಟರು. ಮೇಲುಕೋಟೆಯ ಪುತಿನ ರಂಗಮಂದಿರ, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗ ಈ ರಂಗ ಪಯಣಕ್ಕೆ ಸಾಕ್ಷಿಯಾದವು. ಮೇಲುಕೋಟೆಯ ‘ದೃಶ್ಯ ಟ್ರಸ್ಟ್‌’ನ ಗಿರೀಶ್‌ ಉತ್ಸವದ ಚಾಲಕ ಶಕ್ತಿಯಾಗಿ ನಿಂತರು. ಹಲವು ವರ್ಷಗಳ ಹಿಂದೆ ಅವರು ರಾಮಯ್ಯನವರ ನಾಟಕಗಳಲ್ಲಿ ಬಾಲನಟರಾಗಿದ್ದವರು.

‘ಸೋಮನಹಳ್ಳಿ ಬ್ರಿಡ್ಜ್’ ಎನ್ನುವುದು ನೆಲ ಗುರುತನ್ನು ಹಿಡಿದಿಟ್ಟ ಇನ್ನೊಂದು ನಾಟಕ. ‘ಯಾರದೋ ಸಂತರ ಹೆಜ್ಜೆ ಗುರುತು ಅಳಿಸದೆ ಇರಲಿ ಅಂಥ ಸೇತುವೆಯನ್ನು ಒಂದಡಿ ಅಗಲ ಕಿರಿದಾಗಿ ಕಟ್ಟಿದೆ. ಇದು ತಮಗೆ ತಿಳಿದಿರಲಿ ಅನ್ನೋದಷ್ಟೇ ನನ್ನ ಇಚ್ಛೆ. ಶಿಕ್ಷೆ ಕಡಿಮೆ ಮಾಡಿ ಅನ್ನೋದಲ್ಲ’ ಎಂದು ಡಿಸ್ಟ್ರಿಕ್ಟ್ ಕಲೆಕ್ಟರ್‌ ಬಳಿ ಧೈರ್ಯವಾಗಿ ಹೇಳಿದ ನಿಡಘಟ್ಟದ ಗುತ್ತಿಗೆದಾರ ಅಣ್ಣೇಗೌಡರ ದುರಂತ ಕತೆ.

ಒಂದು ರೂಪಾಯಿ ದಂಡ ವಿಧಿಸಿದ್ದಕ್ಕೆ ಅವರು ಅದೇ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆಂಬುದು ಇಲ್ಲಿನ ಜನರ ಮನದಲ್ಲಿದೆ. ‘ಸೋಮನಹಳ್ಳಿ ಬ್ರಿಡ್ಜ್‌’ ಅಂಥ ನೆಲ ಗುರುತು. ಅದನ್ನು ಹೇಳದೆ ಮಕ್ಕಳ ಶಿಕ್ಷಣ ಪೂರ್ಣಗೊಳ್ಳುವುದೇ ಎಂಬುದು ರಾಮಯ್ಯನವರ ಪ್ರಶ್ನೆ.

‘ಚಿಕ್ಕಂಕನಹಳ್ಳಿ ಮರಗಳು ಹೇಳಿದ ಕತೆ’, ‘ಉಜ್ಜಿನಿ ಚೌಡಮ್ಮ‘, ‘ದೊಡ್‌ ಮಾರಿ ಚಿಕ್‌ ಮಾರಿ’, ‘ಸೀರೆ ಹೇಳಿದ ಸಾವಿತ್ರಿ ಬಾ ಫುಲೆಯ ಕತೆ’ಯೂ ಇಂಥ ನೆಲ–ನುಡಿ ಗುರುತುಗಳನ್ನೇ ಗುರಿಯಾಗಿಸಿಕೊಂಡ ನಾಟಕಗಳು. ಉಳಿದಂತೆ, ‘ಪುಟಕ್‌ ಜರ್‌ ಜರ ಡುಬಕ್‌ ಮ್ಯಾ..‘ ಗೀತರೂಪಕಗಳಾದ ‘ಕೋಳಿಕೆ ರಂಗ’, ‘ಕೀಚ್‌ ಕೀಚ್‌ ಇಲಿ ಮತ್ತು ವ್ಯಾನಿಟಿ ಬ್ಯಾಗ್’ ಮಕ್ಕಳು, ಪ್ರೇಕ್ಷಕರನ್ನು ರಂಜಿಸಿದವು.

ನಾಟಕಗಳು ಪ್ರದರ್ಶನಗೊಂಡಿದ್ದು ಎರಡು ಪ್ರದೇಶಗಳಲ್ಲಿ. ಆದರೆ ಪ್ರದರ್ಶಿಸಿದ್ದು ಮಾತ್ರ ಜಿಲ್ಲೆಯ ವಿವಿಧ ದಿಕ್ಕುಗಳಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳು ಎಂಬುದೇ ವಿಶೇಷ. ಕೇವಲ ಒಂದು ತಿಂಗಳಲ್ಲಿ ಈ ಮಕ್ಕಳನ್ನು ರಂಗಕ್ಕೆ ಸಜ್ಜುಗೊಳಿಸಿದ್ದು, ದೃಶ್ಯ ಟ್ರಸ್ಟ್‌, ಶಿಕ್ಷಕರು ಮತ್ತು ನಿರ್ದೇಶಕರ ಪರಿಶ್ರಮಕ್ಕೆ ಸಾಕ್ಷಿ.

ಈ ನಾಟಕಗಳನ್ನಾಡಿದ ಕೆ.ಆರ್‌.‍ಪೇಟೆಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ, ಹುಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವಲಾಪುರದ ಕರ್ನಾಟಕ ಪಬ್ಲಿಕ್‌ ಶಾಲೆ, ಪಾಂಡವಪುರದ ದೊಡ್ಡಬ್ಯಾಡರಹಳ್ಳಿ, ಮದ್ದೂರಿನ ಕೆ.ಹೊನ್ನಲಗೆರೆ, ಮಳವಳ್ಳಿಯ ಮಾದರಹಳ್ಳಿ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಈಗ ಹೊಸ ರಂಗ ಜೀವನೋತ್ಸಾಹ ಮೂಡಿದೆ. ಇವರೊಂದಿಗೆ, ಶ್ರೀರಂಗಪಟ್ಟಣದ ‘ಗಮ್ಯ’ ತಂಡವೂ ಹಲವು ಶಾಲೆಗಳ ಮಕ್ಕಳ ತಮ್ಮದೇ ತಂಡದೊಂದಿಗೆ ಸೇರಿಕೊಂಡಿದೆ.

ಗುರುತುಗಳ ಹುಡುಕಾಟದಲ್ಲಿ ಮಕ್ಕಳಿಗೆ ನಟನೆಯ ಪಾಠ ಹೇಳಿಕೊಟ್ಟ ನಿರ್ದೇಶಕರನ್ನು ನೋಡಿದರೆ ಇನ್ನಷ್ಟು ಅಚ್ಚರಿ ಗ್ಯಾರಂಟಿ. ಕೊಪ್ಪಳದ ಶರೀಫ್, ಗೋಣಿಬಸು, ಬದಾಮಿಯ ಕುಮಾರ್, ಮೈಸೂರಿನ ಶೃತಿ ರಮೇಶ್‌, ಕೋಲಾರ ದೊಮ್ಮಸಂದ್ರದ ನರಸಿಂಹ, ಮಳವಳ್ಳಿ ಮಧು, ಕಾತ್ಯಾಯಿನಿ ಯಶೋಮಿತ್ರ...ಎಲ್ಲರೂ ಮೈಸೂರು–ಮಂಡ್ಯ–ಬಯಲುಸೀಮೆಯ ನುಡಿ–ನೆಲ ಗುರುತುಗಳನ್ನು ಎಳೆಯ ಮಕ್ಕಳೊಂದಿಗೆ ಹುಡುಕಾಡಿದ ಹದಿವಯಸ್ಸಿನ, ರಂಗಲೋಕದ ಕನಸುಗಾರರು.

‘ನಾಟಕದ ಮೂಲಕ ಮಕ್ಕಳಿಗೆ ಅದೆಷ್ಟು ಜ್ಞಾನಶಿಸ್ತುಗಳನ್ನು ಕಲಿಸಬಹುದು ಎಂಬುದಕ್ಕೆ ನೆಲ ಸಂಸ್ಕೃತಿ ನಾಟಕೋತ್ಸವ ಒಂದು ಚಿಕ್ಕ ಉದಾಹರಣೆಯಷ್ಟೇ’ ಎನ್ನುತ್ತಾರೆ ರಾಮಯ್ಯ. ‘ಇತಿಹಾಸ, ವಿಜ್ಞಾನ, ನೈತಿಕ, ಸಾಮಾಜಿಕ ಮೌಲ್ಯಗಳು, ಸಮಾಜಶಾಸ್ತ್ರ, ಮಾನವಶಾಸ್ತ್ರ, ಜೀವಶಾಸ್ತ್ರ ಎಲ್ಲವನ್ನೂ ಶುಷ್ಕವಾಗಿ ಹೇಳಿಕೊಡುವುದಕ್ಕಿಂತ ಆಯಾ ನೆಲದ ಮತ್ತು ನುಡಿಯ ಗುರುತುಗಳ ಮೂಲಕವೇ ಹೇಳಿಕೊಡಬೇಕೆಂದೇ ಸರಣಿ ನಾಟಕಗಳನ್ನು ಬರೆದೆ’ ಎನ್ನುವ ಅವರು ಇನ್ನೂ ಹಲವು ನಾಟಕಗಳ ರಚನೆಗೆಂದು ಮಂಡ್ಯದಲ್ಲೇ ನೆಲೆ ನಿಂತಿದ್ದಾರೆ.

‘ಸಾವಿತ್ರಿ ಬಾ ಫುಲೆ ನಮ್ಮ ನೆಲ ದೇವತೆ, ಇದು ಈ ನೆಲದ ಹೆಣ್ಣುಭ್ರೂಣ ಹತ್ಯೆಗೆ ನಾವು ತೋರುತ್ತಿರುವ ಪ್ರತಿರೋಧ..’

–‘ಸೀರೆ ಹೇಳಿದ ಸಾವಿತ್ರಿ ಬಾ ಫುಲೆ’ ನಾಟಕದ ಕೊನೆಯಲ್ಲಿ ಮೇಳದವರು ಹೇಳುವ ಮಾತುಗಳಿವು.

ಮಹಿಳೆಯೊಬ್ಬಳು ಶಿಕ್ಷಕಿಯಾಗುವುದಕ್ಕೆ ಸಮ್ಮತಿ ಇಲ್ಲದ ಕಾಲದಲ್ಲಿ, ಶಾಲೆಗೆ ಪಾಠ ಮಾಡಲು ಹೋಗುವಾಗ ಜನ ಕೆಸರು, ಸೆಗಣಿ ಎಸೆಯುತ್ತಿದ್ದರೆಂಬ ಕಾರಣಕ್ಕೆ ತಮ್ಮ ಬ್ಯಾಗಿನಲ್ಲಿ ಸೀರೆಯೊಂದನ್ನು ಇಟ್ಟುಕೊಂಡಿರುತ್ತಿದ್ದ ಮಹಾತಾಯಿ ಸಾವಿತ್ರಿಯ ಸೀರೆಯ ಕತೆಯ ನೆಪದಲ್ಲಿ, ಮಂಡ್ಯದ ಹೆಣ್ಣುಭ್ರೂಣ ಹತ್ಯೆಯನ್ನು ಖಂಡಿಸಬೇಕೆಂದು ಮಕ್ಕಳಿಗೆ ಹೇಳಲು ಈ ನಾಟಕಕ್ಕಿಂತ ಬೇರೆ ಯಾವ ಪಾಠ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.