ADVERTISEMENT

ಉತ್ತರ ಕರ್ನಾಟಕ ಸೊಗಡಿನ ‘ಮಹಾಸತಿ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2016, 19:30 IST
Last Updated 23 ಜೂನ್ 2016, 19:30 IST
-ಐಶ್ವರ್ಯ, ವಿನಯ್
-ಐಶ್ವರ್ಯ, ವಿನಯ್   

ಕೌಟುಂಬಿಕ ಪ್ರೇಮ ಕಥನಗಳಾದ ‘ಮೀನಾಕ್ಷಿ ಮದುವೆ’, ‘ಅರಮನೆ’, ‘ಸುಂದರಿ’ ಧಾರಾವಾಹಿಗಳ ಬಳಿಕ ಉದಯ ವಾಹಿನಿಯು ಈಗ ‘ಮಹಾಸತಿ’ ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ಕೊಡಲು ಸಿದ್ಧವಾಗಿದೆ. ಇದೇ 27ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ಕ್ಕೆ ‘ಮಹಾಸತಿ’ ಮೂಡಿಬರಲಿದೆ.

ವಿಭಿನ್ನ ಸಂಪ್ರದಾಯ ಅನುಸರಿಸುವ ಎರಡು ಕುಟುಂಬಗಳ ಮಧ್ಯೆ ನಡೆಯುವ ಕಥಾನಕವನ್ನು ‘ಮಹಾಸತಿ’ ಹೊಂದಿದೆ. ಇದರಲ್ಲಿ ಅಭಿನಯಸುತ್ತಿರುವ ಕಲಾವಿದರೆಲ್ಲರೂ ಉತ್ತರ ಕರ್ನಾಟಕದವರೇ ಆಗಿದ್ದಾರೆ. ಅಲ್ಲದೇ ಚಿತ್ರೀಕರಣವೆಲ್ಲ ಉತ್ತರ ಕರ್ನಾಟಕದಲ್ಲೇ ನಡೆಯುತ್ತಿದೆ.

ನಿರ್ಮಾಪಕ, ನಿರ್ದೇಶಕ ಹಾಗೂ ನಟ ಸುನೀಲ್ ಪುರಾಣಿಕ್ ‘ಮಹಾಸತಿ’ ಹೊಣೆ ಹೊತ್ತಿದ್ದಾರೆ. ಮೂಲತಃ ಧಾರವಾಡದವರಾದ ಅವರು ಈಗಾಗಲೇ ಹಲವು ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ಕಥೆಯನ್ನು ಇದಕ್ಕೆ ಬಳಸಿಕೊಂಡಿದ್ದಾರೆ. ‘ಜಾತಿ, ಧರ್ಮಗಳಿಗಿಂತ ಮಾನವೀಯತೆಯೇ ಮುಖ್ಯ ಎಂಬುದನ್ನು ಧಾರಾವಾಹಿ ಪ್ರತಿಪಾದಿಸಲಿದೆ’ ಎಂದು ಪುರಾಣಿಕ್ ವಿವರ ನೀಡಿದರು.

ಕಲಾವಿದರಾದ ಯಶವಂತ ಸರದೇಶಪಾಂಡೆ ಹಾಗೂ ಮಾಲತಿ ಸರದೇಶಪಾಂಡೆ, ಚಾನೆಲ್‌ನ ಕಾರ್ಯಕ್ರಮ ಮುಖ್ಯಸ್ಥ ಸುಧೀಂದ್ರ ಭಾರಧ್ವಾಜ್  ಹಾಗೂ ಫಿಕ್ಷನ್ ವಿಭಾಗದ ಮುಖ್ಯಸ್ಥ ಶ್ರೀನಿಧಿ ಮಾತನಾಡಿದರು. ಕೊಪ್ಪಳದ ಶೇಷಗಿರಿ ಗುಬ್ಬಿ ಸೇರಿದಂತೆ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.

ಸುನಿಲ್ ಪುರಾಣಿಕ್ ಹಾಗೂ ಎಸ್.ಎಂ. ಪಾಟೀಲ್ ಚಿತ್ರಕಥೆ ರಚಿಸಿದ್ದು, ಅಭಿರುಚಿ ಚಂದ್ರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ಯೋಗರಾಜ ಭಟ್ ಶೀರ್ಷಿಕೆ ಗೀತೆ ರಚಿಸಿದ್ದು, ರಘು ದೀಕ್ಷಿತ್ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಹಿರಿಯ ನಟಿ ಶೃತಿ ಕಥೆಯನ್ನು ನಿರೂಪಿಸಲಿದ್ದಾರೆ. ಹುಬ್ಬಳ್ಳಿ ಹುಡುಗ ವಿನಯ್ ಹಾಗೂ ಕಲಬುರ್ಗಿ ಮೂಲದ ಐಶ್ವರ್ಯ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.