ADVERTISEMENT

ಗುರುವಿನ ಸ್ಮರಣೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಅದು ಯಶೋಗಾಥೆಯ ಸಂಭ್ರಮ ಹಂಚಿಕೊಳ್ಳುವ ಕೂಟವಾಗಿದ್ದರೂ, ಅವರಲ್ಲಿ ಯಶಸ್ಸಿನ ಹಿಂದಿನ ನೋವುಗಳೂ ಮಾತುಗಳಲ್ಲಿ ಇಣುಕುತ್ತಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ `ಶ್ರೀ ಗುರುರಾಘವೇಂದ್ರ ವೈಭವ~ ಧಾರಾವಾಹಿ 500 ಕಂತುಗಳನ್ನು ಪೂರೈಸಿದ ಸಂತಸ ಅವರಲ್ಲಿ ಮನೆ ಮಾಡಿತ್ತು.

ಸಿನಿಮಾ ಮತ್ತು ಧಾರಾವಾಹಿ ಸಹವಾಸವೇ ಬೇಡ ಎಂದು ದೂರ ಉಳಿದಿದ್ದ ತಾವು ಈ ಧಾರಾವಾಹಿಗೆ ಬಂಡವಾಳ ಹೂಡಲು ಕಾರಣವಾದ ಸನ್ನಿವೇಶವನ್ನು ಎಳೆ ಎಳೆಯಾಗಿ ತೆರೆದಿಟ್ಟರು ನಿರ್ಮಾಪಕ ಪಟ್ಟಾಭಿರಾಮ್.

ನಿರ್ದೇಶಕ ಸುರೇಶ್ ಅವರಲ್ಲೂ ಹೇಳಲು ಸಾಕಷ್ಟು ವಿಷಯಗಳಿದ್ದವು. ಇದುವರೆಗೆ ಧಾರಾವಾಹಿಯಲ್ಲಿ ಸುಮಾರು 2 ಸಾವಿರ ಜನ ನಟಿಸಿದ್ದಾರಂತೆ. ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲ ಸುಮಾರು 25 ದೇಶಗಳಲ್ಲಿರುವ ಕನ್ನಡಿಗರು ಸಹ ಧಾರಾವಾಹಿ ವೀಕ್ಷಿಸುತ್ತಿದ್ದಾರೆ ಎಂಬ ಹೆಮ್ಮೆ ಅವರದು.

ಅಂದಹಾಗೆ `ಶ್ರೀ ಗುರುರಾಘವೇಂದ್ರ ವೈಭವ~ ತೆಲುಗಿನಲ್ಲಿ ಡಬ್ ಆಗಿ 200 ಕಂತುಗಳನ್ನು ಪೂರೈಸಿದೆ. ಶೀಘ್ರದಲ್ಲೇ ತಮಿಳಿಗೂ ಡಬ್ ಆಗಲಿದೆಯಂತೆ. ಚಿತ್ರತಂಡದ ಸಹಕಾರವನ್ನು ಹೊಗಳುವುದಕ್ಕೆ ಸುರೇಶ್ ಹೆಚ್ಚಿನ ಸಮಯ ಮೀಸಲಿಟ್ಟರು.

ಚಿತ್ರೀಕರಣದ ತಾಣ ತಮ್ಮದೇ ಮನೆಯಂತೆ ಮುದ ನೀಡಿತು ಎಂದು ಖುಷಿಪಟ್ಟರು ರಾಘವೇಂದ್ರ ಸ್ವಾಮಿ ಪಾತ್ರಧಾರಿ ಪರೀಕ್ಷಿತ್. ಹಲವೆಡೆ ರಾಘವೇಂದ್ರ ಸ್ವಾಮಿಗಳ ಫೋಟೋ ಪಕ್ಕದಲ್ಲಿ ತಮ್ಮ ಫೋಟೋವನ್ನೂ ಇಟ್ಟು ಪೂಜಿಸುತ್ತಿದ್ದುದ್ದನ್ನು ನೋಡಿ ಆಶ್ಚರ್ಯದ ಜೊತೆ ಮುಜುಗರ ಮತ್ತು ಭಯವೂ ಆಯಿತು ಎಂದರು.

ಮಾತಿಗಿಳಿಯುತ್ತಿದ್ದಂತೆ ಭಾವುಕರಾದರು ಮಾಸ್ಟರ್ ಆನಂದ್. ತಾವು ಹಾಸ್ಯ ಪಾತ್ರಗಳಿಗೇ ಸೀಮಿತವಾಗುತ್ತಿರುವುದರ ಬಗ್ಗೆ ಅವರಿಗೆ ನೋವಿತ್ತು. ನನ್ನ ರೀತಿಯ ಅನೇಕ ಕಲಾವಿದರನ್ನು ಹಾಸ್ಯ ಪಾತ್ರಗಳಿಂದಲೇ ಅಳೆಯುತ್ತಿದ್ದಾರೆ. ನಮ್ಮಲ್ಲೂ ಬೇರೆ ತರಹದ ಪಾತ್ರಗಳನ್ನು ಮಾಡುವ ಪ್ರತಿಭೆಯಿದೆ. ಆದರೆ ಅವಕಾಶಗಳಿಲ್ಲ ಎನ್ನುವಾಗ ಅವರ ಕಂಗಳು ಒದ್ದೆಯಾಗಿದ್ದವು.
 
ಈ ಧಾರಾವಾಹಿಯಲ್ಲೊಂದು ಪಾತ್ರ ಮಾಡುವ ಆಸೆ ಬಹುದಿನಗಳಿಂದ ಅವರಿಗಿತ್ತಂತೆ. ಆದರೆ ಇಲ್ಲಿಯೂ ಸಿಕ್ಕಿದ್ದು ಹಾಸ್ಯ ಪಾತ್ರವೇ. ಆ ಪಾತ್ರವೇ ದಿವಾನರಾಗಿ ಬದಲಾಗುವ ವ್ಯಕ್ತಿಯ ಪಾತ್ರವಾಗುವುದರಿಂದ ಕೊನೆಯಲ್ಲಿ ಸಮಾಧಾನವಾಯಿತು ಎಂದರು.

ಧಾರಾವಾಹಿಯ ಸಹಕಾರ ನಿರ್ದೇಶಕ ರಘುನಂದನ್, ಸುವರ್ಣ ವಾಹಿನಿಯ ಸುಧೀಂದ್ರ, ಛಾಯಾಗ್ರಾಹಕ ಆರ್.ಮಂಜುನಾಥ್ ಮಾತುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.