ADVERTISEMENT

ತಲೆಮಾರುಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST
ತಲೆಮಾರುಗಳ ಅನಾವರಣ
ತಲೆಮಾರುಗಳ ಅನಾವರಣ   

ಮಾತುಗಳ ಸೂಜಿಮೊನೆಯಿಂದಲೇ ಗುರುತಾದ ಸೇತುರಾಂ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ಅವರೆತ್ತಿಕೊಂಡಿರುವ ಧಾರಾವಾಹಿಯ ಹೆಸರು `ಅನಾವರಣ~.

ಕಾದ ಸೀಸೆಯನ್ನು ಕಿವಿಯೊಳಗೆ ಹಾಕುವುದು ಅಂತಾರಲ್ಲ; ಅಂಥ ಮಾತುಗಳನ್ನು ಹೊಸೆಯುವುದರಲ್ಲಿ ಪಳಗಿದ ಸೇತುರಾಂ ಈ ಬಾರಿ ತಮ್ಮನ್ನು ತಾವೇ ಮೀರುವ ಯತ್ನ ಮಾಡಿದ್ದಾರೆ. ಮೂರು ತಲೆಮಾರುಗಳ ಕಥೆಯನ್ನು ಒಂದೇ ಕ್ಯಾನ್ವಾಸ್ ಮೇಲೆ ಹೇಳಲು ಅವರು ಸಜ್ಜಾಗಿದ್ದಾರೆ.

ಹೊಸಯುಗದ ವೇಗಕ್ಕೆ ಒಗ್ಗಿಕೊಳ್ಳಲಾಗದ ದಂಪತಿ, ತಮ್ಮ ಅಗತ್ಯಕ್ಕೆ ತಕ್ಕಂತೆ ಮಕ್ಕಳನ್ನು ರೂಪಿಸುವುದರಲ್ಲಿ ತೊಡಗಿದ ಅವರ ಮಕ್ಕಳು, ಕೈಚಾಚಿದ್ದೆಲ್ಲಾ ಎಟುಕುತ್ತಿದ್ದರೂ ಗೊಂದಲದಲ್ಲಿರುವ ಮೊಮ್ಮಕ್ಕಳು- ಹೀಗೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅವರು ತೂಗಲು ಹೊರಟಿದ್ದಾರೆ.

ಅನಾವರಣದಲ್ಲಿ ಬಗೆಬಗೆಯ ಭಾವಗಳು ಬಿಚ್ಚಿಕೊಳ್ಳುತ್ತವೆ. ಈ ಸಲ ಪ್ರತಿ ಪಾತ್ರವೂ ಓತಪ್ರೋತವಾಗಿ ಮಾತನಾಡಕೂಡದು ಎಂಬ ಎಚ್ಚರ ವಹಿಸಿ ಸೇತುರಾಂ ಆಕ್ಷನ್, ಕಟ್ ಹೇಳಲು ನಿಂತಿದ್ದಾರೆ.

ಈ ಹಿಂದೆ ಅವರು ತಯಾರಿಸಿದ `ಮಂಥನ~, `ದಿಬ್ಬಣ~ ಧಾರಾವಾಹಿಗಳಲ್ಲಿ ನಿರ್ದೇಶನ ವಿಭಾಗದಲ್ಲಿ ರಮೇಶ್ ಇಂದಿರಾ ಅವರು ಕೈಜೋಡಿಸಿದ್ದರು. ಈ ಸಲ ನಿರ್ದೇಶಕನ ಕುರ್ಚಿಯ ಮೇಲೆ ಅವರೇ ಕೂರುವ ಅನಿವಾರ್ಯತೆ ಇದೆ. ಪ್ರಶಾಂತ್ ಹಾಲ್ದೊಡ್ಡೇರಿ ಸಹನಿರ್ದೇಶಕರಾಗಿ ತಂಡದಲ್ಲಿದ್ದಾರೆ.

ಐಎಎಸ್ ಅಧಿಕಾರಿ, ವೈದ್ಯ, ಆರ್ಕಿಟೆಕ್ಟ್ ಹೀಗೆ ವೃತ್ತಿಯಲ್ಲಿ ಸುಭದ್ರ ಸ್ಥಾನದಲ್ಲಿರುವವರ ಕುಟುಂಬದಲ್ಲಿನ ಸಂಕೀರ್ಣತೆಗೆ ಸೇತುರಾಂ ಕನ್ನಡಿ ಹಿಡಿಯಲಿದ್ದಾರೆ. ಬದುಕಿನಲ್ಲಿ ಚೆನ್ನಾಗಿಯೇ ನೆಲೆ ನಿಂತರೂ ಹೊಯ್ದಾಟದಲ್ಲಿರುವ ಮಕ್ಕಳ ಮನೆಯಿಂದ ಮನೆಗೆ ಹೋಗುವ ವೃದ್ಧರ ದೃಷ್ಟಿಯಲ್ಲಿ ಕಥಾರೇಖೆ ಸಾಗುತ್ತದೆ.

ಖುದ್ದು ಸೇತುರಾಂ ಅವರೂ ಧಾರಾವಾಹಿಯ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಧರ್ಮೇಂದ್ರ ಅರಸ್, ಗಿರೀಶ್, ಪೂರ್ಣಚಂದ್ರ ತೇಜಸ್ವಿ, ಹರಿಕೃಷ್ಣ, ದೀಪು, ಸುಂದರಶ್ರೀ, ನಂದಿನಿ, ಮಾನಸ, ಭವಾನಿ, ಆಶ್ವಿತಾ, ಬೇಬಿ ಸಿರಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಸತ್ಯಬೋಧ ಜೋಶಿ, ನಾಗರಾಜ್ ಹಾಗೂ ಸಂತೋಷ್ ಕ್ಯಾಮೆರಾ ವಿಭಾಗದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಬರುವ ಸೋಮವಾರದಿಂದ (ಜೂನ್ 20) ಈಟೀವಿಯಲ್ಲಿ `ಅನಾವರಣ~ ಪ್ರಾರಂಭ. ರಾತ್ರಿ 8.30ರಿಂದ ಅರ್ಧ ಗಂಟೆ ಸೋಮವಾರದಿಂದ ಶುಕ್ರವಾರದವರೆಗೆ ನೋಡಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.