ADVERTISEMENT

ಹೊಸ ಚಾನೆಲ್‌ ‘ಸೂಪರ್ ಚಾನೆಲ್’

ಹರವು ಸ್ಫೂರ್ತಿ
Published 3 ಆಗಸ್ಟ್ 2016, 8:41 IST
Last Updated 3 ಆಗಸ್ಟ್ 2016, 8:41 IST
ಚಾನೆಲ್‌ನ ರಾಯಭಾರಿ ಯಶ್‌
ಚಾನೆಲ್‌ನ ರಾಯಭಾರಿ ಯಶ್‌   

ಕನ್ನಡ ಕಿರುತೆರೆಯ ಮೇಲೆ ಮನರಂಜನೆಗಾಗಿ ಐದು ಚಾನೆಲ್‌ಗಳು ಇವೆ. ಇದರ ಸಾಲಿಗೆ  ಮತ್ತೊಂದು ಹೊಸ ಚಾನೆಲ್ ಸೇರಿಕೊಂಡಿದೆ. ಈಗಾಗಲೇ ‘ಕಲರ್ಸ್‌ ಕನ್ನಡ’ ಚಾನೆಲ್‌ ನಡೆಸುತ್ತಿರುವ ವೈಯಕಾಮ್‌ 18 ಮಿಡಿಯಾ ಸಂಸ್ಥೆ ಈ ಹೊಸ ‘ಕಲರ್ಸ್‌ ಸೂಪರ್’ ಚಾನೆಲ್‌ ಆರಂಭಿಸಿದೆ.

‘ಟೀವಿ ಪ್ರಿಯರಿಗಾಗಿ ಹೊಸ ಬಗೆಯ ಮನರಂಜನಾ ಕಾರ್ಯಕ್ರಮಗಳ ಸರಣಿಯನ್ನೇ ಹೊತ್ತು ತರಲಿದೆ ಕಲರ್ಸ್‌ ಸೂಪರ್‌’ ಎನ್ನುತ್ತಾರೆ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್.

ನಟ ಯಶ್ ಚಾನೆಲ್‌ನ ರಾಯಭಾರಿ. ಹೊಸ ಚಾನೆಲ್‌ನ ಪ್ರಚಾರದಲ್ಲಿಯೂ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ಚಾನೆಲ್‌ನಲ್ಲಿ ಮೂಡಿ ಬರಲಿರುವ ಕಾರ್ಯಕ್ರಮಗಳ ರೂಪರೇಶೆಗಳನ್ನು ಬಿಂಬಿಸುವ ವಿಡಿಯೊದಲ್ಲಿಯೂ ಅಭಿನಯಿಸಿದ್ದಾರೆ. ಯುಟ್ಯೂಬ್ ಹಾಗೂ  ಸಾಮಾಜಿಕ ಜಾಲ ತಾಣಗಳಲ್ಲಿ ಯಶ್ ಅಭಿಮಾನಿಗಳು ವಿಡಿಯೊ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಧಾರಾವಾಹಿ ಮತ್ತು ಸಿನಿಮಾ ಪ್ರಸಾರ ಮನರಂಜನ ಚಾನೆಲ್‌ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂಶಗಳು. ಈ ಪಟ್ಟಿಗೆ ಇದೀಗ ರಿಯಾಲಿಟಿ ಷೋಗಳೂ ಸೇರಿವೆ.

ಕನ್ನಡ ನೆಲಕ್ಕೆ ರಿಯಾಲಿಟಿ ಷೋಗಳನ್ನು ಮೊದಲ ಬಾರಿ ಪರಿಚಯಿಸಿದ್ದು ರಾಘವೇಂದ್ರ ಹುಣಸೂರು. ಸುವರ್ಣದಲ್ಲಿ ಬಂದ ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್‌’ ದೊಡ್ಡ ಹಿಟ್‌ ಕಾರ್ಯಕ್ರಮವೆನಿಸಿಕೊಂಡಿತ್ತು.

ಇದರ ಯಶಸ್ಸಿಗೆ ನಟ ಸುದೀಪ್‌ ಖಡಕ್ ನಿರೂಪಣೆ ಮಾಡಿದ್ದು ಒಂದು ಮುಖ್ಯ ಕಾರಣ. ಹೀಗೆ ನೆದರ್‌ಲೆಂಡ್ ಮೂಲದ ಎಂಡಾಮಲ್ ಸಂಸ್ಥೆ ಆರಂಭಿಸಿದ ‘ಬಿಗ್ ಬ್ರದರ್’ ರಿಯಾಲಿಟಿ ಷೋ ‘ಬಿಗ್‌ಬಾಸ್‌’ ಹೆಸರಿನಲ್ಲಿ ಕನ್ನಡಕ್ಕೆ ಬಂತು. ಇದರ ಚುಕ್ಕಾಣಿ ಹಿಡಿದಿದ್ದವರು ರಾಘವೇಂದ್ರ. ಇದೇ ಹಾದಿಯಲ್ಲಿ ಸಾಲು ಸಾಲು ರಿಯಾಲಿಟಿ ಷೋ ಗಳು ಕನ್ನಡ ಕಿರುತೆರೆಯಲ್ಲಿ ಮಿನುಗಿ ನೆನಪುಗಳನ್ನು ಬಿಟ್ಟು ಹೋಗಿವೆ. ಇದೀಗ ‘ಚಾಂಪಿಯನ್’ ಎಂಬ ರಿಯಾಲಿಟಿ ಷೋ ಪರಿಚಯಿಸುತ್ತಿದ್ದಾರೆ ಪರಮೇಶ್ವರ್ ಗುಂಡ್ಕಲ್.

ವಾರ್ತಾ ವಾಚಕರಾಗಿದ್ದ, ಬಿಗ್‌ಬಾಸ್ ಖ್ಯಾತಿಯ ರೆಹಮಾನ್ ಈ ರಿಯಾಲಿಟಿ ಷೋ ನಿರೂಪಕ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯುವತಿಯರೇ ಸ್ಪರ್ಧಿಗಳು.

ಧಾರಾವಾಹಿ ಪ್ಯಾಕೇಜ್
ಹೊಸ ಚಾನೆಲ್‌ ಹಲವು  ಹೊಸ ಧಾರಾವಾಹಿಗಳನ್ನೂ ಹೊತ್ತು ತರಲಿದೆ. ಪೌರಾಣಿಕ, ಸಾಹಸ, ಹಾಸ್ಯ, ಪ್ರೇಮ, ವಾತ್ಸಲ್ಯದ ರಸಧಾರೆ ಹರಿಸುವ ಹಲವು ಧಾರಾವಾಹಿಗಳೂ ಸಿದ್ಧವಾಗಿವೆ.

‘ಅನುರಾಗ’, ‘ನಾ ನಿನ್ನ ಬಿಡಲಾರೆ’, ‘ಮಂಗಳ್ಳೂರ್ ಹುಡ್ಗಿ ಹುಬ್ಳಿ ಹುಡುಗ’, ‘ಬಂಗಾರಿ’, ‘ಸರ್ಪ ಸಂಬಂಧ’, ‘ಗಿರಿಜಾ ಕಲ್ಯಾಣ’ ಹೀಗೆ ಸಾಲುಸಾಲು ಧಾರಾವಾಹಿಗಳು ಕಿರುತೆರೆಯ ಮೇಲೆ ರಾರಾಜಿಸಲಿವೆ.

‘ಮೂಢನಂಬಿಕೆ ಪ್ರತಿಪಾದಿಸುವ ಯಾವುದೇ ಧಾರಾವಾಹಿಯನ್ನು ನಾವು ಪ್ರಸಾರ ಮಾಡುವುದಿಲ್ಲ. ಫ್ಯಾಂಟಸಿ ಎನಿಸುವ ಕಥೆಗಳನ್ನು ಆಧರಿಸಿದ ಧಾರಾವಾಹಿ ರೂಪಿಸುತ್ತಿದ್ದೇವೆ. ಪೌರಾಣಿಕ ಹಿನ್ನೆಲೆಯ ಧಾರಾವಾಹಿಗಳು ಅತ್ಯಾಧುನಿಕ ತಂತ್ರಜ್ಞಾನದ ಪೂರ್ಣ ಲಾಭ ಪಡೆದಿವೆ. ಈವರೆಗೆ ಕನ್ನಡದಲ್ಲಿ ಇಂಥ ಪ್ರಯತ್ನ ಆಗಿಲ್ಲ’ ಎಂಬುದು ಪರಮೇಶ್ವರ್ ಅವರ ವಿಶ್ವಾಸ.

ಎಲ್ಲ ಕೇಬಲ್ ನೆಟ್‌ವರ್ಕ್ ಮತ್ತು ಡಿಟಿಎಚ್ ಪ್ಲಾಟ್‌ಫಾರಂಗಳಲ್ಲಿ ಕಲರ್ಸ್‌ ಸೂಪರ್‌ ಪ್ರಸಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.