ADVERTISEMENT

ಮಲಯಾಳ ನಟಿ-ಟಿವಿ ನಿರೂಪಕಿ ಸುಬಿ ಸುರೇಶ್ ನಿಧನ

ಪಿಟಿಐ
Published 22 ಫೆಬ್ರುವರಿ 2023, 7:25 IST
Last Updated 22 ಫೆಬ್ರುವರಿ 2023, 7:25 IST
   

ಕೊಚ್ಚಿ: ಮಲಯಾಳದ ಜನಪ್ರಿಯ ನಟಿ, ಟಿವಿ ನಿರೂಪಕಿ ಸುಬಿ ಸುರೇಶ್ ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ‌41 ವರ್ಷದ ಸುಬಿ ಕೆಲ ಕಾಲದಿಂದ ಯಕೃತ್ತು ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಟಿವಿ ಮತ್ತು ವೇದಿಕೆ ಕಾರ್ಯಕ್ರಮಗಳ ನಿರೂಪಣೆಗೆ ಸುಭಿ ಜನಪ್ರಿಯರಾಗಿದ್ದರು.


ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಇವರಿಗೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಕೊಚ್ಚಿನ್ ಕಲಾಭವನ ತಂಡದಲ್ಲಿ ಮಿಮಿಕ್ರಿ ಕಲಾವಿದೆಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಕ್ರಮೇಣ ಹಾಸ್ಯ ಕಾರ್ಯಕ್ರಮಗಳಲ್ಲಿ ಜನಪ್ರಿಯರಾದರು. ಅಲ್ಪಾವಧಿಯಲ್ಲಿಯೇ, ಅವರು ವಿವಿಧ ಟೆಲಿವಿಷನ್ ಚಾನೆಲ್‌ಗಳ ಲೈವ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದರು.


"ಸಿನೆಮಾಲಾ" ದಂತಹ ಪ್ರಸಿದ್ಧ ಟಿವಿ ಹಾಸ್ಯ ಸರಣಿ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದರು. 2006 ರಲ್ಲಿ "ಕನಕಸಿಂಹಾಸನಂ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಬಿ ಸುರೇಶ್ "ಎಲ್ಸಮ್ಮ ಎನ್ನ ಆಂಕುಟ್ಟಿ" ಮತ್ತು "ಹ್ಯಾಪಿ ಹಸ್ಬೆಂಡ್ಸ್" ಸೇರಿದಂತೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣದಾದರೂ ನೆನಪಿನಲ್ಲಿ ಉಳಿಯುವಂತಹ ಪ್ರಾತಗಳಲ್ಲಿ ಕಾಣಿಸಿಕೊಂಡರು.

ADVERTISEMENT


ಅನಿರೀಕ್ಷಿತ ನಿಧನಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸುಬಿ ರಿಯಾಲಿಟಿ ಶೋಗಳು ಮತ್ತು ಹಾಸ್ಯ ಕಾರ್ಯಕ್ರಮಗಳ ಮೂಲಕ ಮಲಯಾಳ ಜನತೆಯ ಹೃದಯದಲ್ಲಿ ಸ್ಥಾನ ಪಡೆದಿದ್ದರು. ಉತ್ತಮ ಭವಿಷ್ಯವನ್ನು ಹೊಂದಿದ್ದ ಭರವಸೆಯ ಕಲಾವಿದೆಯನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.