ADVERTISEMENT

ನಾನು ನಾಟಿ...ಘಾಟಿ ಅಲ್ಲ: ಧನರಾಜ್‌ ಸಿಎಂ

ರೋಹಿಣಿ ಮುಂಡಾಜೆ
Published 25 ಜನವರಿ 2019, 19:45 IST
Last Updated 25 ಜನವರಿ 2019, 19:45 IST
ಧನರಾಜ್‌ ಸಿ.ಎಂ.
ಧನರಾಜ್‌ ಸಿ.ಎಂ.   

* ನಟನೆ ಮತ್ತು ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಿರಿ. ಬಿಗ್‌ಬಾಸ್‌ಗೆ ಸೆಲೆಬ್ರಿಟಿಯಾಗಿ ಹೋಗಿದ್ದಿರಾ?
ನಾನು ಸೆಲೆಬ್ರಿಟಿ ಅಲ್ಲ ಹಾಗಾಗ ಜನಸಾಮಾನ್ಯನಾಗಿ ಹೋಗಿದ್ದೆ. ಬಿಗ್ ಬಾಸ್‌ನಂತಹ ರಿಯಾಲಿಟಿ ಶೋಗೆ ಹೋಗಿ ಬಂದವರು ಸೆಲೆಬ್ರಿಟಿಗಳಾಗ್ತಾರೆ ಅಂತಾರೆ. ನಾನು ಮಾತ್ರ ಯಾವತ್ತಿದ್ರೂ ಕಾಮನ್‌ಮ್ಯಾನ್‌ ಆಗಿಯೇ ಇರ್ತೇನೆ.

* ಫಿನಾಲೆಯ ಹೊಸ್ತಿಲಿನಿಂದಲೇ ಹೊರಬಂದ ಹಾಗಾಯ್ತು ಅನ್ನಿಸ್ತಿದೆಯಾ?
ನನ್ನ ಎಲಿಮಿನೇಷನ್‌ ತೀರಾ ಅನಿರೀಕ್ಷಿತವಾಗಿತ್ತು. ಭಾರಿ ಬೇಜಾರಾಗಿದ್ದು ನಿಜ. ಮನೆಯವರಿಗೆ ಹೇಗಪ್ಪಾ ಮುಖ ತೋರಿಸೋದು ಅಂದ್ಕೊಂಡೇ ಹೊರಬಂದೆ. ಆದರೆ ಮನೆಗೆ ಬಂದ ಮೇಲೆ, ವೀಕ್ಷಕರಿಗೂ ಈ ಎಲಿಮಿನೇಷನ್‌ ಅಸಮಾಧಾನ ತಂದಿದೆ ಎಂಬುದು ಗೊತ್ತಾಯ್ತು.

* ಮನೆಯವರ ಪ್ರತಿಕ್ರಿಯೆ ಹೇಗಿತ್ತು?
ಅದ್ಭುತವಾಗಿತ್ತು. ನಾನು ಸೋತು ಬಂದೆ ಅನ್ನೋ ಅಪರಾಧಿ ಪ್ರಜ್ಞೆಯಲ್ಲೇ ಮನೆಗೆ ಬಂದಿದ್ದೆ. ಆದರೆ ಅವರೆಲ್ಲರೂ ಹಬ್ಬದಡುಗೆ, ಕೇಕ್, ಸಿಹಿತಿಂಡಿ ಎಲ್ಲಾ ಮಾಡ್ಕೊಂಡು ಕಾಯ್ತಿದ್ರು. 'ನೀನು ನಿನ್ನ ಪ್ರಾಮಾಣಿಕ ನಡೆಯಿಂದ ಎಲ್ಲರ ಕಣ್ಮಣಿಯಾಗಿ ಬಿಟ್ಟಿದ್ದೀಯಪ್ಪ. ನೀನು ಸೋತಿಲ್ಲ' ಅಂದ್ರು.

ADVERTISEMENT

* ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮದೇ ಹವಾ ಇದ್ದಂತಿದೆ?
ಅಬ್ಬಾ ಹೌದು! ಮನೆಗೆ ಬಂದಾಗಿನಿಂದಲೂ ಅಭಿಮಾನಿಗಳ ಸಂದೇಶ, ಕಮೆಂಟ್‌ಗಳನ್ನು ಓದುತ್ತಲೇ ಇದ್ದೇನೆ. ಜನ ನನ್ನನ್ನು ಅಷ್ಟೊಂದು ಇಷ್ಟಪಟ್ಟಿದ್ದಾರೆ ಅಂದ್ರೆ ನಂಬಲಾಗುತ್ತಿಲ್ಲ. ಈ ಅಭಿಮಾನವೇ ನನಗೆ ಟ್ರೋಫಿ.

* ಸೀರಿಯಲ್, ಮಿಮಿಕ್ರಿ, ಡಬ್ಬಿಂಗ್‌- ಇವುಗಳಲ್ಲಿ ನಿಮ್ಮ ಮುಂದಿನ ದಾರಿ ಯಾವುದು?
ಮಿಮಿಕ್ರಿಗೆ ಅವಕಾಶ ಸಿಕ್ಕಿದರೆ ಮಾಡ್ತೀನಿ.ಅದನ್ನು ಇನ್ನೂ ಒಂದಿಷ್ಟು ಬೆಳೆಸ್ಬೇಕು. ಇದು ಎಲ್ಲರ ಸಲಹೆಯೂ ಹೌದು. ಸುದೀಪ್‌ ಸರ್‌ ಕೂಡಾ ಪ್ರತಿ ಸಲ ಮಿಮಿಕ್ರಿಯನ್ನು ಮೆಚ್ಚಿಕೊಂಡರು.ನಟನೆ ಮತ್ತು ಡಬ್ಬಿಂಗ್ ನನ್ನ ಅಚ್ಚುಮೆಚ್ಚಿನ ಕ್ಷೇತ್ರ. ಧಾರಾವಾಹಿ, ಸಾಕ್ಷ್ಯಚಿತ್ರ, ಕಿರುಚಿತ್ರ, ಕಮರ್ಷಿಯಲ್‌ ಪ್ರಾಜೆಕ್ಟ್‌ಗಳಿಗೆ ಡಬ್ಬಿಂಗ್ ಮಾಡೋದರಲ್ಲಿ ಬ್ಯುಸಿಯಾಗಿರುತ್ತಿದ್ದೆ. ನಾನು ಕಂಠದಾನ ಮಾಡಿದ ಮೊದಲ ಸಿನಿಮಾ ಕೆಜಿಎಫ್‌. ಇನ್ನು ಮುಂದೆ ಸಿನಿಮಾದಲ್ಲೂ ಡಬ್ಬಿಂಗ್‌ ಅವಕಾಶ ಸಿಕ್ಕೀತು ಅಂದುಕೊಂಡಿದ್ದೇನೆ.

* ಬರೀ ಸೋಲನ್ನೇ ಕಂಡವನು, ಇನ್ಮೇಲಾದರೂ ಅದೃಷ್ಟ ಬದಲಾಗುತ್ತೋ ನೋಡೋಣ ಎಂದು ಹೇಳಿದ್ದಿರಿ.
ಹೌದು. ಸಾಕಷ್ಟು ಸೋಲು, ಬೀಳುಗಳನ್ನು ಅನುಭವಿಸಿದ್ದೇನೆ. ಪ್ರಾಮಾಣಿಕತೆ, ವಂಚನೆ ಇಲ್ಲದ ನಡವಳಿಕೆಗೆ ಸ್ವಲ್ಪ ತಡವಾಗಿಯಾದರೂ ಗೆಲುವು ಸಿಗುತ್ತದೆ ಎಂದು ನಮ್ಮ ಮನೆಯಲ್ಲಿ ಯಾವಾಗಲೂ ಹೇಳುತ್ತಾರೆ.ಬಿಗ್‌ಬಾಸ್‌ನಂತಹ ದೊಡ್ಡ ವೇದಿಕೆಯ ಮೂಲಕ ನನ್ನ ವ್ಯಕ್ತಿತ್ವ ಸಾಬೀತಾಗಿದೆ. ಇನ್ನು ಮುಂದೆಯಾದರೂ ನನ್ನ ಬದುಕಿನ ಗತಿ ಬದಲಾಗುತ್ತದೆ ಎಂಬ ಆಶಾವಾದದಲ್ಲಿದ್ದೇನೆ.

* ಶಿವಣ್ಣ ತಮ್ಮ ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಅಂದ್ರಂತೆ?
ಹ್ಹಹ್ಹ. ಹೌದು. ಅದು ಮತ್ತೊಂದು ಅಚ್ಚರಿಯ ಕ್ಷಣ. ಆವತ್ತು ಶಿವಣ್ಣ ಮತ್ತು ನಿರ್ದೇಶಕ ಪ್ರೇಮ್ ಬಂದಿದ್ರು. 'ಇಲ್ಲಿ ಯಾರೋ ಶಿವಣ್ಣನಂಗೇ ಮಾತಾಡ್ತೀರಂತಲ್ಲ' ಅಂತ ಕೇಳಿದ್ರು. 'ಮಾತಾಡು ನೋಡೋಣ' ಅಂತ ಶಿವಣ್ಣನೂ ಅಂದ್ರು.

ನಾನು ಅವರಂತೆ ಮಾತಾಡಿದೆ. 'ಓಹ್ ಮೈ ಗಾಡ್, ಪಕ್ಕಾ ನನ್ನಂಗೆ ಮಾತಾಡ್ತೀರ್ರೀ ನೀವು' ಎಂದು ಖುಷಿಪಟ್ಟರು. ಬಿಗ್‌ಬಾಸ್‌ ಪಯಣದಲ್ಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಅದೂ ಒಂದು. ಟ್ರೋಫಿ, ನಗದು ಬಹುಮಾನ ನನಗೆ ಸಿಗದೇ ಇರಬಹುದು. ಆದರೆ ಸುದೀಪ್‌, ಶಿವಣ್ಣ, ಎಸ್.ನಾರಾಯಣ್‌, ಗಣೇಶ್‌ ಅವರಂತಹ ಘಟಾನುಘಟಿಗಳ ಪಕ್ಕದಲ್ಲಿ ಕುಳಿತು ನನ್ನ ಪ್ರತಿಭೆಯ ಕಿರುಪರಿಚಯಕ್ಕೆ ಅವಕಾಶ ಸಿಗ್ತು ನೋಡಿ. ಅದಕ್ಕಿಂತ ಇನ್ನೇನು ಬೇಕು?

ನಾನು ಹೈಸ್ಕೂಲ್ ದಿನಗಳಿಂದಲೇ ಶಿವಣ್ಣನ ದೊಡ್ಡ ಅಭಿಮಾನಿ. ನಮ್ಮಿಬ್ಬರ ಹುಟ್ಟಿದ ದಿನಾಂಕವೂ ಒಂದೇ (ಜುಲೈ 12). ಹಾಗಾಗಿ, ‘ನಿಮ್ಮ ಜೊತೆ ಬರ್ತ್ ಡೇ ಕೇಕ್ ಕಟ್ ಮಾಡ್ಬೇಕಲ್ಲ' ಎಂದು ಹೇಳಿಬಿಟ್ಟೆ. 'ಕೇಕ್ ಯಾಕಪ್ಪಾ ಒಟ್ಟಿಗೆ ಸಿನಿಮಾದಲ್ಲಿ ಮಾಡೋಣ ಬನ್ನಿ' ಅಂದ್ಬಿಟ್ಟರು. ಅದೇನಾದ್ರೂ ನಿಜವಾದ್ರೆ ನಾನೇ ಅದೃಷ್ಟವಂತ.

**

ಸ್ಪರ್ಧೆ ಎಂದ ಮೇಲೆ ಸೋಲು ಗೆಲುವು ಇದ್ದಿದ್ದೇ. ಮನೆಯೊಳಗಿದ್ದಾಗ ಆಟ, ವರ್ತನೆ ಮೂಲಕ ನಮ್ಮ ನಿಜವಾದ ಬಣ್ಣವನ್ನು ನಾವೇ ತೋರಿಸಿರುತ್ತೇವೆ. ಅದರ ಫಲಿತಾಂಶ ಗೊತ್ತಾಗೋದು ಹೊರಗೆ ಬಂದ ಮೇಲೆಯೇ. ನನಗೆ ಸಿಗುತ್ತಿರುವ ಜನರ ಪ್ರೀತಿಯೇ ಸಾಕು
- ಧನರಾಜ್‌ ಸಿ.ಎಂ, ಕೊನೆಯ ವಾರದಲ್ಲಿ ಹೊರಬಿದ್ದಿರುವ ಬಿಗ್‌ಬಾಸ್‌ ಸ್ಪರ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.