ADVERTISEMENT

ಹೆಣ್ಣುಮಕ್ಕಳ ಚಿತ್ತಚೋರ ಗಟ್ಟಿಮೇಳದ ಧ್ರುವ

ರೇಷ್ಮಾ
Published 17 ಸೆಪ್ಟೆಂಬರ್ 2020, 19:30 IST
Last Updated 17 ಸೆಪ್ಟೆಂಬರ್ 2020, 19:30 IST
ರಂಜನ್ ಎಸ್‌.
ರಂಜನ್ ಎಸ್‌.   

ಇತ್ತೀಚೆಗೆ ಸಿನಿಮಾ ನಟ–ನಟಿಯರಿಗಿಂತ ಧಾರಾವಾಹಿ ನಟ–ನಟಿಯರ ಮೇಲೆ ಜನರ ಕ್ರೇಜ್ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಧಾರಾವಾಹಿ ಕಲಾವಿದರನ್ನು ಆರಾಧಿಸುವ ಬಳಗವೇ ಇದೆ. ಧಾರಾವಾಹಿ ನೋಡುವುದಕ್ಕಿಂತ ಕಲಾವಿದರನ್ನು ನೋಡುವ ಸಲುವಾಗಿಯೇ ಟಿ.ವಿ ಮುಂದೆ ಕೂರುವ ಜನರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳು ಧಾರಾವಾಹಿ ನಟರನ್ನು ಆರಾಧಿಸುವುದು ಹೆಚ್ಚು. ಅವರ ಆರಾಧಕರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ನಟ ಜೀ ಕನ್ನಡದ ‘ಗಟ್ಟಿಮೇಳ’ದ ‘ಧ್ರುವ’. ಸದ್ಯ ಧ್ರುವ ಈ ಸೀರಿಯಲ್‌ನ ಮುಖ್ಯ ಆಕರ್ಷಣೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಪಾತ್ರಧಾರಿ ಮಂಡ್ಯ ಮೂಲದ ರಂಜನ್ ಎಸ್‌.

ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ನೋಡಿದ ಮೇಲೆ ತಾನು ನಟನಾಗಬೇಕು ಎಂಬ ಕನಸು ಕಂಡಿದ್ದರು ರಂಜನ್‌. ಆಗಿನ್ನೂ ಅವರಿಗೆ ಆರೇಳು ವರ್ಷ. ನಟನೆಗಿಂತ ಓದು ಮುಖ್ಯ ಎಂಬ ಮನೆಯವರ ಮಾತನ್ನು ತಳ್ಳಿ ಹಾಕದ ಇವರು ತಮ್ಮೂರಿನಲ್ಲೇ ಪದವಿ ಮುಗಿಸಿದರು. ನಂತರ ಬೆಂಗಳೂರಿಗೆ ಬಂದು ಟಿ.ಎಸ್‌. ನಾಗಾಭರಣ ಅವರ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದರು. ಅವರು ಮೊದಲು ನಟಿಸಿದ್ದು ‘3+3’ ಎಂಬ ಕನ್ನಡ ಕಿರುಚಿತ್ರದಲ್ಲಿ.

ಸಿನಿಮಾದಲ್ಲಿ ನಟಿಸಬೇಕು ಎಂದು ಆಡಿಷನ್‌ಗಳನ್ನು ನೀಡುತ್ತಿದ್ದ ಇವರಿಗೆ ಕಲರ್ಸ್‌ ಕನ್ನಡ ವಾಹಿನಿಯ ‘ಇಷ್ಟದೇವತೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಕಿರುತೆರೆ ಪಯಣ ಆರಂಭವಾಗಿತ್ತು. ಇಷ್ಟದೇವತೆ ಧಾರಾವಾಹಿಯಲ್ಲಿ ಅವರದ್ದು ಮುಖ್ಯ ಖಳನಾಯಕನ ಪಾತ್ರ. ಈ ಧಾರಾವಾಹಿ ಮುಗಿದ ಕೆಲ ತಿಂಗಳಲ್ಲೇ ಗಟ್ಟಿಮೇಳದಲ್ಲಿ ಎರಡನೇ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿತು. ಈ ಧಾರಾವಾಹಿ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಮಾತ್ರ ಸುಳ್ಳಲ್ಲ.

ADVERTISEMENT

ಹೆಸರು ತಂದುಕೊಟ್ಟ ಗಟ್ಟಿಮೇಳ

ಧ್ರುವ ಪಾತ್ರದ ಬಗ್ಗೆ ಮಾತನಾಡುವ ರಂಜನ್‌ ‘ಗಟ್ಟಿಮೇಳ ತಮಿಳು ಧಾರಾವಾಹಿಯೊಂದರ ರಿಮೇಕ್‌. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಬದಲಿಸಲಾಗಿದೆ. ಮೂಲಕಥೆಯಲ್ಲಿ ಧ್ರುವ ಪಾತ್ರವಿಲ್ಲ. ಕನ್ನಡದಲ್ಲಿ ಅದನ್ನು ಸೇರಿಸಿದ್ದಾರೆ. ಧ್ರುವ ಪಾತ್ರದಿಂದ ಧಾರಾವಾಹಿ ಅನೇಕ ತಿರುವು ಪಡೆದುಕೊಂಡಿದೆ. ಮುಂದೆ ಕೂಡ ಈ ಪಾತ್ರದಿಂದ ಹಲವು ತಿರುವುಗಳು ಎದುರಾಗುತ್ತವೆ. ಒಟ್ಟಾರೆ ಇದೊಂದು ಮುಖ್ಯ ಪಾತ್ರ’ ಎಂದು ವಿವರಿಸುತ್ತಾರೆ.

‘ಗಟ್ಟಿಮೇಳ ನನಗೆ ಹೆಚ್ಚು ಹೆಸರು ಹಾಗೂ ಖ್ಯಾತಿ ತಂದುಕೊಟ್ಟಿದೆ’ ಎನ್ನುವ ರಂಜನ್, ‘ಈಗ ನಾನು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೂ ಜನರು ನನ್ನ ಕಣ್ಣು ನೋಡಿ ‘ನೀವು ಗಟ್ಟಿಮೇಳದ ಧ್ರುವ ಅಲ್ವಾ?’ ಎಂದು ಗುರುತು ಹಿಡಿದು ಮಾತನಾಡಿಸುತ್ತಾರೆ. ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಪಾತ್ರ ನನ್ನನ್ನು ಹೆಚ್ಚು ಜನರು ಗುರುತಿಸುವಂತೆ ಮಾಡಿದೆ’ ಎನ್ನುತ್ತಾರೆ.

ಪೌರಾಣಿಕ ಪಾತ್ರ ಮಾಡುವಾಸೆ

‘ನಾನು ಸಿನಿಮಾದಲ್ಲಿ ನಟಿಸಬೇಕು ಎಂದುಕೊಂಡು ಈ ಕ್ಷೇತ್ರಕ್ಕೆ ಬಂದೆ. ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಕೂಡ ಬಂದಿದ್ದವು. ಜೊತೆಗೆ ಬೇರೆ ವಾಹಿನಿ ಹಾಗೂ ಬೇರೆ ಭಾಷೆಗಳ ಕಿರುತೆರೆಯಿಂದಲೂ ಅವಕಾಶ ಬಂದಿತ್ತು. ಆದರೆ ಕೊರೊನಾ ಹಾಗೂ ಸಮಯದ ಹೊಂದಾಣಿಕೆಯ ಕಾರಣದಿಂದ ಎಲ್ಲವೂ ಅರ್ಧಕ್ಕೆ ನಿಂತಿದೆ. ಮುಂದಿನ ದಿನಗಳಲ್ಲಿ ಖಂಡಿತ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎನ್ನುವ ರಂಜನ್‌ಗೆ ಪೌರಾಣಿಕ ಸಿನಿಮಾವೊಂದರಲ್ಲಿ ನಟಿಸುವ ಆಸೆಯಂತೆ.

‘ಕಾಲೇಜು ಮುಗಿಯುವವರೆಗೂ ನಾನು ಒಂದೇ ಒಂದು ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಸೆಮಿನಾರ್‌ಗಳಲ್ಲಿ ಕೂಡ ಭಾಗವಹಿಸಿರಲಿಲ್ಲ. ಆದರೆ ನಟನಾ ತರಬೇತಿ ಕೇಂದ್ರದಲ್ಲಿ ನಾನು ನಟಿಸುವುದನ್ನು ಕಲಿತಿದ್ದೇನೋ ಇಲ್ಲವೋ ಆದರೆ ಸ್ಟೇಜ್ ಫಿಯರ್ ಮಾತ್ರ ಕಡಿಮೆಯಾಗಿತ್ತು. ನಟನೆಯ ವಿಷಯಕ್ಕೆ ಬಂದರೆ ನಾನು ಈಗಲೂ ಕಲಿಯುತ್ತಿದ್ದೇನೆ. ಅದರಲ್ಲೂ ನಾನು ಮಂಡ್ಯದವನಾದ ಕಾರಣ ಮಂಡ್ಯದ ಭಾಷೆ ಧಾರಾವಾಹಿಗೆ ಹೊಂದುತ್ತಿರಲಿಲ್ಲ. ಆಗೆಲ್ಲಾ ನನ್ನ ಧಾರಾವಾಹಿ ತಂಡದವರು ನನಗೆ ಸಹಾಯ ಮಾಡಿದ್ದರು. ಹಿರಿಯ ನಟರು ನಟನೆಯ ಟಿಪ್ಸ್ ಹೇಳುತ್ತಿದ್ದರು. ಈಗಲೂ ನಾನು ನಟನೆ ಹಾಗೂ ಭಾಷೆಯ ವಿಷಯದಲ್ಲಿ ಕಲಿಯುತ್ತಿದ್ದೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.