ADVERTISEMENT

ಡಾಕ್ಟರ್ ಆ್ಯಕ್ಟರ್ ಆದಾಗ...

ರೇಷ್ಮಾ
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
ಆರತಿ ಪಡುಬಿದ್ರಿ
ಆರತಿ ಪಡುಬಿದ್ರಿ   

ಫಿಸಿಯೊಥೆರಪಿಸ್ಟ್ ಆಗಿ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ಆಕೆಗೆ ನಟಿಯಾಗಬೇಕು ಎಂಬ ಹಂಬಲವಿತ್ತು. ಮಾಡೆಲ್ ಆಗಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವಾಗಲೂ ನಟನೆಯ ಕನಸು ಮನದಲ್ಲಿತ್ತು. ಹೀಗಿದ್ದಾಗ ಕಿರುತೆರೆಯ ಲೋಕ ಅವರನ್ನು ಕೈಬೀಸಿ ಕರೆದಿತ್ತು. ಸಿಕ್ಕ ಅವಕಾಶವನ್ನು ಒಲ್ಲೆ ಎನ್ನದ ಅವರು ಅಕ್ಕನ ಪಾತ್ರವನ್ನೂ ಒಪ್ಪಿಕೊಂಡರು. ಹೀಗೆ ವೈದ್ಯೆಯಾಗಿ ನಟಿಯಾದವರು ಕಲರ್ಸ್ ಕನ್ನಡ ವಾಹಿನಿಯ ‘ಹೂಮಳೆ’ ಧಾರಾವಾಹಿಯ ಅಂಬಿಕಾ ಪಾತ್ರಧಾರಿ ಆರತಿ ಪಡುಬಿದ್ರಿ. ಹೂಮಳೆ ಇವರ ಮೊದಲ ಧಾರಾವಾಹಿ. ಇವರು ತಮ್ಮ ನಟನಾ ಪಯಣದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ.

ನಟನಾ ಹಾದಿ..

‘ಮಾಡೆಲ್‌ ಆಗಿದ್ದ ನನಗೆ ನಟಿಯಾಗಬೇಕು ಎಂಬ ಆಸೆ ಮೂಡಿದ್ದು ಸಹಜ. ಆದರೆ ನಟನೆ ಹಾಗೂ ವೃತ್ತಿ ಎರಡನ್ನೂ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆ ಕಾರಣಕ್ಕೆ ವೃತ್ತಿಯ ಮೇಲೆ ಗಮನ ಹರಿಸಿದ್ದೆ. ಆದರೆ ನಟನೆಯ ಸೆಳೆತ ನನ್ನನ್ನು ಬಿಡದ ಕಾರಣ ಆಡಿಷನ್ ನೀಡಿ ಹೂಮಳೆ ಧಾರಾವಾಹಿಗೆ ಆಯ್ಕೆ ಆದೆ. ಆಡಿಷನ್‌ ನೀಡಿದ್ದಾಗ ಯಾವ ಧಾರಾವಾಹಿ, ಏನು ಪಾತ್ರ ಎಂಬುದು ತಿಳಿದಿರಲಿಲ್ಲ. 2 ತಿಂಗಳ ನಂತರ ವಾಹಿನಿಯವರು ಕರೆ ಮಾಡಿ ಧಾರಾವಾಹಿ ಹಾಗೂ ‍ಪಾತ್ರ ಬಗ್ಗೆ ತಿಳಿಸಿದ್ದರು. ಹೀಗೆ ನನ್ನ ನಟನಾ ಪಯಣ ಆರಂಭವಾಗಿತ್ತು.‌

ADVERTISEMENT

ಅಂಬಿಕಾ ಪಾತ್ರದ ಬಗ್ಗೆ

ಹೂಮಳೆಯ ಅಂಬಿಕಾ ಪಾಸಿಟಿವ್‌ ಪಾತ್ರ. ಅವಳು ತಮ್ಮನಿಗೊಸ್ಕರ ಪ್ರೀತಿ ತೋರಿಸುವ ಅಕ್ಕ, ತಮ್ಮನ ಮಗನನ್ನು ತನ್ನ ಮಗನಂತೆ ನೋಡಿಕೊಳ್ಳುವ ಹೃದಯ ವೈಶಾಲ್ಯ ಉಳ್ಳವಳು. ಮೊದಲಿನಿಂದಲೂ ಪಾಸಿಟಿವ್‌ ಪಾತ್ರವನ್ನೇ ಮಾಡಬೇಕು ಎಂಬ ಆಸೆ ಹೊಂದಿದ್ದ ನನಗೆ ಈ ಪಾತ್ರದ ಬಗ್ಗೆ ಕೇಳಿದಾಗ ಖುಷಿಯಾಗಿತ್ತು. ಆ ಕಾರಣಕ್ಕೆ ತುಂಬಾ ಖುಷಿಯಿಂದ ಮಾಡುತ್ತಿದ್ದೇನೆ.

ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದು...

ಮಾಡೆಲಿಂಗ್‌ಗೂ ನಟನೆಗೂ ತುಂಬಾನೇ ವ್ಯತ್ಯಾಸವಿದೆ. ಮೊದಲ ಬಾರಿ ಆಡಿಷನ್‌ಗೆ ಹೋದಾಗ ಕ್ಯಾಮೆರಾ ಎದುರಿಸಿದ ಅನುಭವ ಇದ್ದ ಕಾರಣ ನಟಿಸುವುದು ಸುಲಭ ಎಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. ಮೊದಲು ತುಂಬಾನೇ ಭಯ ಪಟ್ಟಿದ್ದೆ. ಸಂಭಾಷಣೆ ನೆನಪಿದ್ದರೆ ಭಾವ ಅಭಿವ್ಯಕ್ತಿ ಮರೆತು ಹೋಗುತ್ತಿತ್ತು, ಭಾವ ಅಭಿವ್ಯಕ್ತಿ ನೆನಪಿದ್ದರೆ ಸಂಭಾಷಣೆ ಮರೆತು ಹೋಗುತ್ತಿತ್ತು. ಆದರೆ ಧಾರಾವಾಹಿ ತಂಡದವರು ನೀಡಿದ ಸಹಕಾರದ ಕಾರಣ ನಾನು ಇಂದು ನಟಿಯಾಗಿದ್ದೇನೆ. ಆದರೆ ಈಗಲೂ ಕಲಿಯುತ್ತಿದ್ದೇನೆ.

ಧಾರಾವಾಹಿ ತಂಡದ ಬಗ್ಗೆ...

ಕಲರ್ಸ್‌ ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುವುದೇ ನನಗೆ ಸಂತೋಷದ ವಿಷಯ. ಅದರೊಂದಿಗೆ ಧಾರಾವಾಹಿ ತಂಡವೂ ತುಂಬಾನೇ ಚೆನ್ನಾಗಿದೆ. ಎಲ್ಲರೂ ಸಹಕಾರ ನೀಡುತ್ತಾರೆ. ನಟನೆಯ ಬಗ್ಗೆ ತಿಳಿಸುತ್ತಾರೆ. ನಮ್ಮಲ್ಲಿನ ಕೊರತೆಗಳನ್ನು ಕಂಡು ಹಿಡಿದು ಹಾಗಲ್ಲ, ಹೀಗೆ ಎಂದು ತಿದ್ದುತ್ತಾರೆ. ಧಾರಾವಾಹಿ ತಂಡದ ಸಹಕಾರದಿಂದಲೇ ಧಾರಾವಾಹಿ ಹಾಗೂ ನಟರು ಇಷ್ಟು ಚೆನ್ನಾಗಿ ತೆರೆ ಮೇಲೆ ಕಾಣಿಸಲು ಸಾಧ್ಯ ಎಂಬುದು ನನ್ನ ಅನಿಸಿಕೆ.

ನಟಿಯಾಗಬೇಕು
ನನಗೆ ನಾಯಕಿಯೇ ಆಗಬೇಕು, ಇಂತಹದ್ದೇ ಪಾತ್ರ ಬೇಕು ಎಂಬುದೆಲ್ಲಾ ಇರಲಿಲ್ಲ. ಯಾವುದೇ ಪಾತ್ರ ಸಿಗಲಿ ನಾನು ಮಾಡುತ್ತೇನೆ. ಒಟ್ಟು ನಾನು ನಟಿ ಎನ್ನಿಸಿಕೊಳ್ಳಬೇಕು ಎಂಬುದಷ್ಟೇ ಮನಸ್ಸಿನಲ್ಲಿತ್ತು. ಒಂದು ಪಾತ್ರ ಮಾಡಬೇಕು, ಮಾಡಿದ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು ಎಂಬ ಉದ್ದೇಶವಿತ್ತು ಎಂದು ಮಾತು ಮುಗಿಸಿದರು ಆರತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.