ADVERTISEMENT

ವಿಷ್ಣುವಿನ ಲಕ್ಷ್ಮೀಯ ಮಾತು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:45 IST
Last Updated 25 ಅಕ್ಟೋಬರ್ 2018, 19:45 IST

ದುಂಡು ಮುಖ, ಅಗಲವಾದ ಕಣ್ಣುಗಳು, ಸದಾ ಮಂದಹಾಸ ಬೀರುವ ತುಟಿಗಳು, ನೋಟದಲ್ಲಿ ಹೊಳಪು, ಮಾತಿನಲ್ಲಿ ಗಾಂಭಿರ್ಯ, ಮೈ ತುಂಬಾ ಧರಿಸಿರುವ ಆಭರಣಗಳು ಇವೆಲ್ಲವೂ ‘ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯ ಲಕ್ಷ್ಮೀಯ ಹೊರ ನೋಟ.

ದೇವತೆ ಪಾತ್ರಕ್ಕೆ ಸರಿ ಹೊಂದುವಂತಹ ಮೈ ಕಟ್ಟು, ದೇಹ ಚರ್ಯೆ ಹೊಂದಿರುವ ಲಕ್ಷ್ಮೀ ಪಾತ್ರಧಾರಿಯ ಹೆಸರು ನಿಶಾ.

ಬೆಂಗಳೂರಿನವರಾದ ಇವರು ಬಾಲನಟಿಯಾಗಿ ಕಿರುತೆರೆ ಪ್ರವೇಶಿಸಿದವರು. ತನ್ನ ಮೂರನೇ ವಯಸ್ಸಿನಿಂದ ನೃತ್ಯ ಮಾಡಲು ಆರಂಭಿಸಿದ ಇವರಿಗೆ ನೃತ್ಯವೇ ನಟನಾ ಬದುಕಿಗೆ ಕಾಲಿರಿಸುವಂತೆ ಮಾಡಿತ್ತು.

ADVERTISEMENT

ಇವರ ನಾಟ್ಯವನ್ನು ನೋಡಿದ ನಿರ್ದೇಶಕ ಟಿ. ಎಸ್. ನಾಗಾಭರಣ ತಮ್ಮ ‘ಮಹಾಮಾಯೆ’ ಧಾರಾವಾಹಿಯಲ್ಲಿ ದೇವಿಯ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದರು. ಹೀಗೆ ಆರಂಭವಾದ ಅವರ ನಟನಾ ಪಯಣ ಸಿನಿಮಾ ಕ್ಷೇತ್ರಕ್ಕೂ ಪಸರಿಸಿತ್ತು. ‘ಜಾಕಿ’ ಸಿನಿಮಾದಲ್ಲಿ ಕುರುಡಿ ಪಾತ್ರ ಮಾಡಿದ್ದ ಇವರು, ‘ಹಳ್ಳಿ ಸೊಗಡು’ ಎಂಬ ಆರ್ಟ್ ಸಿನಿಮಾದಲ್ಲೂ ನಟಿಸಿದ್ದರು. ಆಮೇಲೆ ಕೆಲ ಕಾಲ ನಟನೆಯಿಂದ ದೂರವಿದ್ದು ಈಗ ಮತ್ತೆ ಲಕ್ಷ್ಮೀ ಪಾತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ನಟನೆ ಆರಂಭಿಸಿದ್ದು ದೇವಿ ಪಾತ್ರದ ಮೂಲಕ, ಈಗ ನನ್ನ ನಟನಾ ಬದುಕಿಗೆ ಬ್ರೇಕ್ ಸಿಗುತ್ತಿರುವುದು ದೇವಿ ಪಾತ್ರದ ಮೂಲಕ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ವಿಷ್ಣುವಿನ ಮನದರಸಿ.

ಮೊದಲ ಬಾರಿ ಇವರು ಕ್ಯಾಮೆರಾ ಎದುರಿಸಿದ್ದು ತಮ್ಮ 7ನೇ ವಯಸ್ಸಿನಲ್ಲಿ. ಆಗ ಇನ್ನೂ ನಟನೆಯ ಆಳ–ಅಗಲ ಅರಿವಿಲ್ಲದ ಕಾಲ. ಪಾತ್ರದಲ್ಲಿ ತಾನು ಆಳಬೇಕಾಗಿ ಬಂದಾಗ ತಮ್ಮ ತಾಯಿ ಸೇಫ್ಟಿಪಿನ್‌ನಿಂದ ಚುಚ್ಚಿ ಅಳುವಂತೆ ಮಾಡುತ್ತಿದ್ದರು ಎಂದು ತಮ್ಮ ನಟನೆಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

‘ನಾನು ಚಿಕ್ಕವಳಿದ್ದಾಗ ದೇವಿ ಪಾತ್ರ ಮಾಡುವುದಕ್ಕೂ ಈಗ ದೇವಿ ಪಾತ್ರ ಮಾಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ವಿಷ್ಣು ದಶಾವತಾರ ಧಾರಾವಾಹಿಗೆ ಆಯ್ಕೆಯಾದ ಮೇಲೆ ನಮಗೆ ಕೆಲವು ದಿನಗಳ ವರ್ಕ್‌ಶಾಪ್ ನಡೆಸಿದ್ದರು. ಆಗ ಕನ್ನಡದ ಒತ್ತರಕ್ಷರಗಳು, ಹ್ರಸ್ವದೀರ್ಘ ಅಕ್ಷರಗಳು, ಹ ಹಾಗೂ ಅ ಕಾರಗಳ ಉಚ್ಚಾರದ ಸ್ಪಷ್ಟತೆಯ ಬಗ್ಗೆ ತಿಳಿಸಿದ್ದರು. ಜೊತೆಗೆ ದೇವಿಯ ನಡಿಗೆ, ನೋಟ ಈ ಎಲ್ಲದರ ಬಗ್ಗೆ ರಿಸರ್ಹಲ್‌ ಮಾಡಿಸಿದ್ದರು. ಆದರೂ ಕ್ಯಾಮೆರಾ ಮುಂದೆ ನಿಂತಾಗ ನಟಿಸುವುದು ಕೊಂಚ ಕಷ್ಟ ಎನ್ನಿಸಿತ್ತು. ಮೊದಲ ಮೂರು ಎಪಿಸೋಡ್ ದೇವರ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಕಳೆದಿದ್ದೆ. ಆದರೆ ಜೀ ಕನ್ನಡ ವಾಹಿನಿ, ಧಾರಾವಾಹಿ ನಿರ್ದೇಶಕರು, ಸಹ ನಟರು ಎಲ್ಲರೂ ತುಂಬಾನೇ ಸಹಕಾರ ನೀಡಿದ್ದಾರೆ. ಈ ಕಾರಣದಿಂದ ನಾನು ಆತ್ಮವಿಶ್ವಾಸದಿಂದ ನಟಿಸಲು ಸಾಧ್ಯವಾಯಿತು’ ಎಂದು ತುಂಬು ಮನಸ್ಸಿನಿಂದ ಹೇಳುತ್ತಾರೆ.

ತನಗೆ ವೈವಿಧ್ಯದ ಜೊತೆಗೆ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುವ ಆಸೆ ಎನ್ನುವ ಇವರು ನಾನು ನಟಿಯಾಗದೇ ಇದ್ದಿದ್ದರೆ ಪುಲ್‌ಟೈಮ್ ಜಾಬ್ ಮಾಡಿಕೊಂಡಿರುತ್ತಿದ್ದೆ ಎನ್ನುತ್ತಾರೆ.

‘ಜನ ನನ್ನನ್ನು ಈ ಪಾತ್ರದಲ್ಲಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಭಯವಿತ್ತು. ಕಾರಣ ದೇವರ ಪಾತ್ರ ಎಂದ ಮೇಲೆ ಅವರದ್ದೇ ಆದ ಕಲ್ಪನೆ, ಗ್ರಹಿಕೆಗಳಿರುತ್ತದೆ. ಆ ಭಯವೇ ನನ್ನನ್ನು ಚೆನ್ನಾಗಿ ನಟಿಸುವಂತೆ ಮಾಡಿತ್ತು ಎನ್ನುವುದು ನಿಶಾರ ಮಾತು.

ಕಾಸ್ಟಿಂಗ್ ಕೌಚ್, ಮೀ ಟೂ ಅಭಿಯಾನಗಳ ಬಗ್ಗೆ ಮಾತನಾಡುತ್ತಾ ‘ನನಗೆ ಈವರೆಗೂ ಇಂತಹ ಅನುಭವಗಳಾಗಿಲ್ಲ. ಆದರೆ ಯಾರಿಗೂ ಅಂತಹ ಅನುಭವಗಳು ಆಗೇ ಇಲ್ಲ ಹೇಳಲು ಸಾಧ್ಯವಿಲ್ಲ. ಒಳ್ಳೆಯದ್ದೂ ಇದ್ದ ಮೇಲೆ ಕೆಟ್ಟದ್ದೂ ಇದ್ದೇ ಇರುತ್ತದೆ. ಆದರೆ ಅಂತಹ ಪರಿಸ್ಥಿತಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಅದು ನಿಂತಿದೆ. ಸೂಕ್ಷ್ಮತೆಯಿಂದ ಅಂತಹ ವ್ಯಕ್ತಿಗಳಿಗೆ ನಾನು ಅಂತಹವಳಲ್ಲ ಎಂಬುದನ್ನು ತಿಳಿಸಿ ಹೇಳಬೇಕು. ಸೂಜಿನೂ ಚುಚ್ಚಬೇಕು, ರಕ್ತನೂ ಬರಬಾರದು ಹಾಗೆ‍ಪರಿಸ್ಥಿತಿಯನ್ನು ನಿಭಾಯಿಸಬೇಕು’ ನೇರವಾಗಿ ನುಡಿಯುತ್ತಾರೆ.

ಭವಿಷ್ಯದಲ್ಲಿ ಒಳ್ಳೆಯ ಅವಕಾಗಳು ಬಂದರೆ ನಟನೆಯಲ್ಲೇ ಮುಂದುವರಿಯುತ್ತೇನೆ, ಸಧ್ಯಕೆ ನನ್ನ ಸಂಪೂರ್ಣ ಗಮನ ಇರುವುದು ಈ ಧಾರಾವಾಹಿ ಮೇಲೆ. ಧಾರಾವಾಹಿ ಮುಗಿದ ಮೇಲೆ ಮುಂದಿನ ಬಗ್ಗೆ ಯೋಚಿಸುತ್ತೇನೆ. ನನ್ನನ್ನು ನಂಬಿ ಪಾತ್ರ ನೀಡಿದ್ದಾರೆ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಧರ್ಮ. ಧಾರಾವಾಹಿ ಮುಗಿದ ಮೇಲೆ ಬೇರೆ ಕಡೆ ಗಮನ ಹರಿಸುತ್ತೇನೆ ಎಂದು ಮಾತು ಮುಗಿಸುತ್ತಾರೆ ಈ ಸುಂದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.