ADVERTISEMENT

ನನ್ನ ಎಪಿಸೋಡಲ್ಲಿ ಹೆಣ ಬೀಳಲ್ಲ!

ಬಿ.ಎಂ.ಹನೀಫ್
Published 12 ಅಕ್ಟೋಬರ್ 2019, 19:30 IST
Last Updated 12 ಅಕ್ಟೋಬರ್ 2019, 19:30 IST
ಎಂ.ಎಸ್‌. ನರಸಿಂಹಮೂರ್ತಿ
ಎಂ.ಎಸ್‌. ನರಸಿಂಹಮೂರ್ತಿ   

ಎಪ್ಪತ್ತಾಯಿತು ದೇಹಕ್ಕೆ. ಮನಸ್ಸಿಗೆ ಎಷ್ಟಾಯ್ತು?

ನಿಜ, ಮನಸ್ಸಿನ ವಯಸ್ಸಿನ ಲೆಕ್ಕ ಇಟ್ಟಿಲ್ಲ. ಆದರೆ, 69 ಆದವರಿಗೆಲ್ಲ 70 ಆಗುತ್ತೆ. ಅದರಲ್ಲಿ ವಿಶೇಷ ಏನೂ ಇಲ್ಲ. ಹಿಂದೆ 60 ಆದಾಗ ಗೊತ್ತಾಗಿತ್ತು. ಆಗ ಗೆಳೆಯರೆಲ್ಲ ಸೇರಿ ಸಮಾರಂಭ ಏರ್ಪಡಿಸಿದ್ದರು. ನಾನು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌ನಲ್ಲಿ ಮ್ಯಾನೇಜರ್‌ ಆಗಿದ್ದೆ. ಹಾಗಾಗಿ ಹತ್ತರಲ್ಲಿ ಕೌಂಟ್‌ ಮಾಡ್ತೇನೆ; ಮಲ್ಟಿಪಲ್‌ ಕೌಂಟ್ಸ್ ಆಫ್‌ ಟೆನ್‌. ಈಗ 70 ಆದಾಗ ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ, ಟಿ.ವಿಯಲ್ಲಿ ನಾನು ಬರೆದಿರುವ ಎಪಿಸೋಡ್‌ಗಳ ಸಂಖ್ಯೆ 10,000 ದಾಟಿದೆ. ನಿಜಕ್ಕೂ ನನಗೆ ಆಶ್ಚರ್ಯದ ಸಂಗತಿಯಿದು.

ಕರಾರುವಾಕ್ಕಾಗಿ ಲೆಕ್ಕ ಇಟ್ಟುಕೊಂಡಿದ್ದೀರಲ್ಲ..!

ADVERTISEMENT

ಅದಕ್ಕೂ ಕಾರಣವಿದೆ. 10 ವರ್ಷಗಳ ಹಿಂದೆ ನಾನು ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದೆ. ಆಗ ಕೋಲಾರದ ಪತ್ರಿಕೆಯವರೊಬ್ಬರು ಬಂದು ನಿಮ್ಮ ಎಲ್ಲ ಎಪಿಸೋಡ್‌ಗಳ ಹೆಸರು ಹೇಳಿ ಎಂದು ಕೇಳಿ ಬರೆದುಕೊಂಡರು. ಅದೇ ನನಗೆ ಒಂದು ‘ಬೇಸ್‌’ ಒದಗಿಸಿತು. ಆ ಬಳಿಕದ್ದು ನಾನು ಲೆಕ್ಕ ಇಟ್ಟೆ. ನಾನು ಟಿ.ವಿ.ಗೆ ಬರೆಯಲು ಶುರು ಮಾಡಿದ್ದು 1988ರಲ್ಲಿ. ‘ಕಂಡೆಕ್ಟರ್‌ ಕರಿಯಪ್ಪ’ ಮೊದಲ ಸೀರಿಯಲ್‌. ಸಿಹಿಕಹಿ ಚಂದ್ರು ಅವರದ್ದು. ಲಿಂಗರಾಜು, ಸಿಹಿಕಹಿ ಗೀತಾ, ಮಹದೇವ್‌ ಎಲ್ಲರನ್ನು ನೆನಪಿಸಿಕೊಳ್ಳಬೇಕು.ಅದು ರಬ್ಬರ್‌ನಂತೆ ಕಥೆ ಎಳೆದ ಸೀರಿಯಲ್‌ ಅಲ್ಲ, ಒಂದನ್ನೇ 100–200ಕ್ಕೆ ಹಿಗ್ಗಿಸಿದ್ದಲ್ಲ. ಪ್ರತಿ ಎಪಿಸೋಡ್‌ ಕೂಡಾ ಸ್ವತಂತ್ರ. ಇವತ್ತಿದ್ದು ಇವತ್ತಿಗೆ. ನಾಳೆ ಬೇರೆ ವಿಷಯ. ಇವತ್ತಿದ್ದು ಬೋರ್‌ ಹೊಡೆದರೂ ನಾಳೆ ಬೇರೆಯೇ ಇರುತ್ತಿತ್ತು. ಹಾಗಾಗಿ ಸಕ್ಸೆಸ್‌ ಆಯ್ತು.

ಕಳೆದ 53 ವರ್ಷಗಳಿಂದ ಒಂದೇ ಸಮನೆ ಬರೆಯುತ್ತಿದ್ದೀರಿ..?

ಬರವಣಿಗೆ ಒಂದು ಮೋಹ. ದುಃಖವಾದಾಗ, ಬೇಸರವಾದಾಗ ಅದೊಂದು ‘ಭಾವನೆಗಳ ಔಟ್‌ಲೆಟ್‌.’ ಇತ್ತೀಚೆಗೆ ನನ್ನ ಅಕ್ಕ ತೀರ್ಕೊಂಡ್ರು. ಅವತ್ತು ರಾತ್ರಿ ಎಲ್ಲ ಕ್ರಿಯೆಗಳನ್ನು ಮುಗಿಸಿಕೊಂಡು ಬಂದು ಮಧ್ಯರಾತ್ರಿ 3 ಗಂಟೆವರೆಗೆ ಕುಳಿತು ನಾಲ್ಕು ಎಪಿಸೋಡ್‌ಗಳನ್ನು ಬರೆದೆ. ದೇವರು ಕೊಟ್ಟ ವರ ಇದು.

ಆರೋಗ್ಯವನ್ನೂ ಅಷ್ಟೇ ಚೆನ್ನಾಗಿ ಉಳಿಸಿಕೊಂಡಿದ್ದೀರಿ..

ನಾನು ತಿನ್ನುವುದು ಕಡಿಮೆ. ಚಿಕ್ಕಂದಿನಿಂದಲೇ ತಾಯಿ ಹಾಗೆ ಅಭ್ಯಾಸ ಮಾಡಿಸಿದ್ರು. ಪ್ರೆಸ್ಟೀಜ್‌ ಇಡ್ಲಿ ಆದರೆ ಮೂರು, ಪೂರಿ ಆದರೆ ಎರಡು, ಮಸಾಲೆ ದೋಸೆ ಆದರೆ ಒಂದೇ. ಉಪ್ಪಿಟ್ಟು ಕೂಡಾ ಸಣ್ಣ ಬೌಲ್‌ನಲ್ಲಿ. ನಾಲ್ಕು ಇಡ್ಲಿ ತಿನ್ನಲೇ ಇಲ್ಲ. ಬೇರೆ ಕೆಲವು ಲೇಖಕರಂತೆ ‘ಬಿಸಿ ಪಾನೀಯ’ದ ಅಭ್ಯಾಸವೂ ಇಲ್ಲ.

60–70ರ ದಶಕದಲ್ಲಿ ಬರೆದ ನಿಮ್ಮ ನಗೆಬರಹಗಳಿಗೂ, ಈಗ ಟಿ.ವಿ ಬಂದ ಮೇಲಿನ ಹಾಸ್ಯ ಬರಹಗಳಿಗೂ ಏನು ವ್ಯತ್ಯಾಸ?

ವ್ಯತ್ಯಾಸ ಇದೆ. ಆಗಿನ ಪದ ಬಳಕೆ, ಸನ್ನಿವೇಶ ಈಗಿನ ಜನಕ್ಕೆ ಅರ್ಥವಾಗುವುದಿಲ್ಲ. ಈಗ ಭಾಷೆಯ, ಬದುಕಿನ ಶೈಲಿಯೂ ಬದಲಾಗಿದೆ. ಹಿಂದೆ ಪೋಸ್ಟ್, ಟೆಲಿಗ್ರಾಂಗಳ ಕಾಲ. ನಾನು ಜರಗನಹಳ್ಳಿಯಲ್ಲಿ ಬ್ಯಾಂಕ್‌ನಲ್ಲಿದ್ದಾಗ ಒಂದು ಘಟನೆ. ನನ್ನ ಪತ್ನಿಗೆ ಜ್ವರ. ಚಿಕಿತ್ಸೆಗೆ ಕೋಲಾರ ಅಥವಾ ಬೆಂಗಳೂರಿಗೆ ಕರೆದೊಯ್ಯಲು ರಜೆ ಬೇಕಿತ್ತು. ನಾನೊಬ್ಬನೇ ಮ್ಯಾನೇಜರ್‌. ನನಗೊಬ್ಬ ರಿಲೀವರ್‌ ಇಲ್ಲ. ಅವರಿಗೆ ಚಾರ್ಜ್‌ ಕೊಟ್ಟು ಹೋಗಬೇಕಿತ್ತು. ಆಗ ಫೋನ್‌ ಸಿಗುವುದೂ ಕಷ್ಟ. ಹೆಡ್‌ ಆಫೀಸಿಗೆ ಟೆಲಿಗ್ರಾಂ ಕಳಿಸಿದೆ. ‘ವೈಫ್‌ ಸಫರಿಂಗ್‌ ಫ್ರಂ ಟೈಫಾಯ್ಡ್‌. ಪ್ಲೀಸ್‌ ಸೆಂಡ್‌ ಎ ಸಬ್‌ಸ್ಟಿಟ್ಯೂಟ್‌’ ಅಂತ! ನಮ್ಮ ರೀಜನಲ್‌ ಮ್ಯಾನೇಜರ್‌ ರಾಜ್‌ಗೋಪಾಲ್‌ ನನಗಿಂತ ಕಾಮಿಡಿ. ಅವರ ಉತ್ತರ ಬಂತು– ‘ನೋ ಸಬ್‌ಸ್ಟಿಟ್ಯೂಟ್ ಅವಲೇಬಲ್‌. ಮೇಕ್‌ ಅರೇಂಜ್‌ಮೆಂಟ್ಸ್‌ ಲೋಕಲೀ’ ಅಂತ! ಹೇಗೆ ನಗೆ ಸೃಷ್ಟಿಯಾಗುತ್ತೆ ನೋಡಿ! ಲೋಕಲ್‌ ಅರೇಂಜ್‌ಮೆಂಟ್ ಅಂದರೆ ‘ಪಕ್ಕದ ಕೋಲಾರ ಅಥವಾ ಕೆ.ಆರ್‌. ಪುರಂನಿಂದ ಮ್ಯಾನೇಜರ್‌ಗೆ ಮಾತನಾಡಿ ನೀವೇ ವ್ಯವಸ್ಥೆ ಮಾಡಿಕೊಳ್ಳಿ’ ಅಂತ! ಇಂತಹ ಅನೇಕ ಹಾಸ್ಯ ಪ್ರಸಂಗಗಳಿವೆ. ಈಗ ವಾಟ್ಸ್‌ಆ್ಯಪ್‌, ಟ್ವಿಟ್ಟರ್‌, ಫೇಸ್‌ಬುಕ್‌ಗಳೆಲ್ಲ ಬಂದ ಮೇಲೆ ಜೋಕ್‌ಗಳು ಯಥೇಚ್ಛವಾಗಿವೆ. ಆದರೆ ಯಾರು ಬರೆದ ಜೋಕ್‌ ಅನ್ನುವುದೇ ಗೊತ್ತಾಗಲ್ಲ. ಯಾರದೋ ಜೋಕ್‌ ಇನ್ನೊಬ್ಬರ ಹೆಸರಲ್ಲಿ! ಯಾರದೋ ‘ಕೋಟ್‌’ ಇನ್ಯಾರದೋ ಹೆಸರಲ್ಲಿ ಓಡಾಡುತ್ತವೆ.

‘ಸುಧಾ’ದಲ್ಲಿ ನೀವು ಬಹಳ ವರ್ಷ ‘ನಗೆಹೊನಲು’ ಬರೆದಿದ್ದೀರಿ. ಬಳಿಕ ‘ನೀವು ಕೇಳಿದಿರಿ’ ಕಾಲಂಗೆ ಮೂರು ವರ್ಷ ಪ್ರಶ್ನೋತ್ತರ ನೋಡಿಕೊಂಡಿರಿ. ಗುಣಮಟ್ಟ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?

ಅದು ಮರೆಯಲಾಗದ ಅನುಭವ. ನನ್ನ ಮೊದಲ ನಗೆಬರಹ ಪ್ರಕಟವಾದದ್ದು ‘ಸುಧಾ’ದಲ್ಲಿ 1966 ಡಿಸೆಂಬರ್‌ 11ರಂದು. ಆ ಬಳಿಕ ‘ಪ್ರಜಾವಾಣಿ’ಯಲ್ಲಿ ಬರೆಯತೊಡಗಿದೆ. ‘ನಗೆಹೊನಲು’ ಬರೆಯುತ್ತಿದ್ದಾಗ ‘ಸುಧಾ’ದಲ್ಲಿ ಇದ್ದ ಅಣ್ಣಯ್ಯ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಒಮ್ಮೆಗೆ 10–12 ಜೋಕ್‌ಗಳನ್ನು ಕಳಿಸಿದರೆ ಅವರು ಪುನರುಕ್ತಿಗಳನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಿದ್ದರು. ಸ್ವಲ್ಪ ಏನಾದರೂ ಅಶ್ಲೀಲ ಅಂತ ಕಂಡುಬಂದರೆ. ‘ಮೂರ್ತಿಗಳೇ, ಇದು ನೀವು ಬರೆಯುವಂಥದ್ದಲ್ಲ. ನಿಮಗ್ಯಾಕೆ ಬೇಕಿದು’ ಎಂದು ಕಟುವಾಗಿ ಹೇಳೋರು. ಅದು ನನಗೆ ಮಾರ್ಗದರ್ಶನ. ಅ.ರಾ.ಮಿತ್ರ ಮೊದಲು ‘ವೃಶ್ಚಿಕ’ ಹೆಸರಲ್ಲಿ ‘ಸುಧಾ’ದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅವರು ಅಮೆರಿಕಗೆ ಹೊರಟಾಗ ನನಗೆ ಅವಕಾಶ ಸಿಕ್ಕಿತು. ಅಲ್ಲೂ ಹಲವು ಹಾಸ್ಯಪ್ರಸಂಗಗಳಿವೆ. ಒಮ್ಮೆ ಒಂದು ಪ್ರಶ್ನೆ– ಮದುವೆಯಾದ ಗೃಹಸ್ಥನಿಗೂ, ಜೈಲಿನಲ್ಲಿರುವ ಕೈದಿಗೂ ಏನು ವ್ಯತ್ಯಾಸ ಸರ್‌– ಎಂದೊಬ್ಬ ಕೇಳಿದ್ದ. ನಾನು ‘ಇಬ್ಬರೂ ಅವಕಾಶ ಸಿಕ್ಕಿದಾಗ ಗೋಡೆ ಹಾರಲು ಯತ್ನಿಸುವವರೇ’ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ವಾರ ಓದುಗನೊಬ್ಬ ನನಗೆ ಖಾಸಗಿ ಪತ್ರ ಬರೆದು, ‘ಎಷ್ಟು ಚೆನ್ನಾಗಿ ನಿಮ್ಮ ಅನುಭವವನ್ನೇ ಉತ್ತರವನ್ನಾಗಿ ಕೊಟ್ಟಿದ್ದೀರಿ ಸಾರ್‌..’ ಎಂದು ಹೊಗಳಿದ್ದ!

ಪತ್ರಿಕೆಗಳ ಹಾಸ್ಯಬರಹಗಳಿಗೂ, ದೃಶ್ಯ ಮಾಧ್ಯಮದ ನಗೆ ಸೀರಿಯಲ್‌ಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈ ಬದಲಾವಣೆಗೆ ನೀವು ಸರಾಗವಾಗಿ ಹೊಂದಿಕೊಂಡದ್ದು ಹೇಗೆ?

ನನಗೆ ಒಂದು ಅನುಕೂಲವಿತ್ತು. ಪತ್ರಿಕೆಗಳಿಗೆ ನಗೆಬರಹ ಬರೆಯುತ್ತಲೇ ಬಳಿಕ ರೇಡಿಯೊಗೆ ಪ್ರಹಸನ, ಹಾಸ್ಯಗಳನ್ನು ಬರೆಯತೊಡಗಿದೆ. ಆ ಬಳಿಕ ಟಿ.ವಿ.ಗೆ ಬಂದೆ. ರೇಡಿಯೊದಲ್ಲಿ ಎಚ್‌.ಎಸ್‌. ಪಾರ್ವತಿ, ಎ.ಎಸ್‌. ಮೂರ್ತಿ ನನ್ನಿಂದ ಬರೆಯಿಸಿದರು. ಟಿ.ವಿ.ಯಲ್ಲಿ ಆಂಗಿಕದ ಮೂಲಕ ಹಾಸ್ಯವನ್ನು ಸರಿದೂಗಿಸಬಹುದು. ಆದರೆ ರೇಡಿಯೊದಲ್ಲಿ ಕಷ್ಟ. ಅದನ್ನು ಯಶಸ್ವಿಯಾಗಿ ಮಾಡಿದ್ದರಿಂದ ಟಿ.ವಿ.ಯಲ್ಲಿ ಬರೆಯೋದು ಸುಲಭವಾಯಿತು.

11 ವರ್ಷ ಸರ್ವಿಸ್‌ ಇದ್ದಾಗಲೂ ವಿಆರ್‌ಎಸ್‌ ತಗೊಂಡು ಬ್ಯಾಂಕ್‌ ಕೆಲಸ ಬಿಟ್ರಿ. ಬ್ಯಾಂಕಲ್ಲಿ ಅಂಕಿ–ಸಂಖ್ಯೆ ಕೆಲಸ ಬೋರಾಗಿತ್ತಾ?

ಬ್ಯಾಂಕ್‌ನಲ್ಲಿ ಜನರ ಜೊತೆ ಒಡನಾಟ ಸಂತೋಷ ಕೊಡುತ್ತಿತ್ತು. ಬಹುಶಃ ನಾನುಬ್ಯಾಂಕಲ್ಲೇ ಇದ್ದಿದ್ದರೆ ಇಷ್ಟೊಂದು ಗೌರವ, ಕೀರ್ತಿ ಸಿಗ್ತಿರಲಿಲ್ಲ. ಬ್ಯಾಂಕಲ್ಲಿ ಇದ್ದಾಗಲೇ ‘ಕ್ರೇಝಿ ಕರ್ನಲ್‌’ ಸೀರಿಯಲ್‌ಗೆ ಸಂಭಾಷಣೆ ಬರೆದಿದ್ದೆ. ಅದು ವೀಕ್ಲಿ ಸೀರಿಯಲ್‌. ಬ್ಯಾಂಕ್‌ ಕೆಲಸ ಬಿಟ್ಟದ್ದೇ ಡೈಲಿ ಸೀರಿಯಲ್‌ ಬರೆಯತೊಡಗಿದೆ. ಸಿಹಿಕಹಿ ಚಂದ್ರು, ಗೀತಾ ಅವರನ್ನು ಇಲ್ಲಿ ನೆನಪಿಸಿಕೊಳ್ಳಬೇಕು. 100–150 ಅಂತ ಅಂದ್ಕೊಂಡಿದ್ದೆವು. 1200 ಎಪಿಸೋಡ್‌ವರೆಗೆ ಹೋಯ್ತು. ಪಾಪ ಪಾಂಡು, ಸಿಲ್ಲಿ ಲಲ್ಲಿ– ಎರಡೂ ಖ್ಯಾತಿ ಮತ್ತು ಹಣ ಯಥೇಚ್ಛವಾಗಿ ತಂದುಕೊಟ್ಟವು. ಇದರಲ್ಲಿ ಯಶಸ್ಸಿಗೆ ಮುಖ್ಯ ಕಾರಣ ಭಾಷೆಯ ಅಭಿರುಚಿ ಉಳಿಸಿಕೊಂಡದ್ದು. ನನ್ನ 10 ಸಾವಿರ ಎಪಿಸೋಡ್‌ಗಳಲ್ಲಿ ಒಂದರಲ್ಲೂ ಒಂದು ಹೆಣ ಬಿದ್ದಿಲ್ಲ! ಹಿರಿಯರಿಗೆ, ಮಹಿಳೆಯರಿಗೆ ಏಕವಚನದ ಪ್ರಯೋಗ ಮಾಡಿಲ್ಲ.ಈ ಅಭಿರುಚಿಯ ಪ್ರಶ್ನೆ ಬಂದಾಗ ‘ಉತ್ಥಾನ’ದ ಸಂಪಾದಕ ಭಾರತೀಪ್ರಿಯ (ವೆಂಕಟ್ರಾವ್‌) ಅವರನ್ನು ನೆನಪಿಸಿಕೊಳ್ಳಬೇಕು. ಕಾಲೇಜು ದಿನಗಳಲ್ಲೇ ಬರೆಯತೊಡಗಿದಾಗ ‘ಸ್ವಲ್ಪ ಕಲ್ಚರ್ಡ್‌ ಹ್ಯೂಮರ್‌ ಕೊಡು’ ಎಂದವರು ಅವರು.

‘ಸಿಲ್ಲಿ ಲಲ್ಲಿ’ನಲ್ಲಿ ವಿಚಿತ್ರ ಮ್ಯಾನರಿಸಂಗಳಿದ್ದವು?

ಅದೇನಾಯ್ತು ಅಂದ್ರೆ, ಪಾಪ ಪಾಂಡು ಮತ್ತು ಸಿಲ್ಲಿ ಲಲ್ಲಿ ಒಟ್ಟಿಗೇ ಬಂತಲ್ಲ. ಪಾಂಡುವಿನಲ್ಲಿ ಡೈಲಾಗ್‌ ಮುಖ್ಯವಾಗಿ ಇಟ್ಟುಕೊಂಡಿದ್ದೆವು. ಅದಕ್ಕಿಂತ ಭಿನ್ನವಾಗಿರಬೇಕು ಅಂತ ‘ಸಿಲ್ಲಿ ಲಲ್ಲಿ’ನಲ್ಲಿ ಆಂಗಿಕಕ್ಕೆ ಹೆಚ್ಚು ಒತ್ತು ಕೊಟ್ಟೆವು. ಅದು ಸ್ಲ್ಯಾಬ್‌ಸ್ಟಿಕ್‌ ಕಾಮಿಡಿ. ‘ಸಿಲ್ಲಿ ಲಲ್ಲಿ’ ಮಕ್ಕಳು ಹೆಚ್ಚು ಮೆಚ್ಚಿಕೊಂಡ ಸೀರಿಯಲ್‌.

ಈಗ ಹಾಸ್ಯಕ್ಕೆ ಹಿಂದಿನಷ್ಟು ‘ರೆಸ್ಪಾನ್ಸ್’ ಇದೆಯಾ?

ಹಾಸ್ಯಕ್ಕೆ ಹೆಚ್ಚು ಸಿಗೋರು ರಾಜಕಾರಣಿಗಳು. ಆದರೆ, ಹಿಂದಿನಂತೆ ಹಾಸ್ಯ ಮಾಡೋದು ಕಷ್ಟ. ಅಭಿಮಾನಿಗಳು ವೈಯಕ್ತಿಕವಾಗಿ ತಗೊಂಡು ಮೈಮೇಲೆ ಬರ್ತಾರೆ. ಯಾರು ಜನಪ್ರಿಯ ಇರ್ತಾರೋ ಅವರ ಬಗ್ಗೆ ಮಾತ್ರ ಜೋಕ್‌ ಮಾಡ್ತೀವಿ ಅನ್ನೋದನ್ನು ರಾಜಕಾರಣಿಗಳು ಅರ್ಥ ಮಾಡ್ಕೊಬೇಕು. ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌ ಮೇಲೆ ಎಷ್ಟೊಂದು ಜೋಕ್‌ಗಳಿವೆ!

ನೆಹರೂ ಅವರು ಶಂಕರ್‌ ವೀಕ್ಲಿಯಲ್ಲಿ ಬರುತ್ತಿದ್ದ ತಮ್ಮದೇ ಕಾರ್ಟೂನ್‌ಗಳನ್ನು ನೋಡಿ ನಗುತ್ತಿದ್ದರು. ಈಗಿನವರಿಗೆ ಅಂತಹ ಮನೋಭಾವ ಇಲ್ಲ. ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ರಾಜ್ಯದಾದ್ಯಂತ ನಡೆಸಿದ ಹಾಸ್ಯೋತ್ಸವಗಳನ್ನು ನಾನೇ ತಂಡಕಟ್ಟಿ ನಡೆಸಿದಾಗ ಸಾವಿರಾರು ಜನರು ಭಾಗವಹಿಸಿದ್ದರು. ಅಂತಹ ಸಾಹಸ ಮಾಡಿದ ಮೊದಲ ಪತ್ರಿಕಾ ಸಂಸ್ಥೆ ನಿಮ್ಮದು.ಕನ್ನಡಿಗರಲ್ಲಿ ಹಾಸ್ಯಮನೋಭಾವ ಬೆಳೆಸುವುದರಲ್ಲಿ ಪ್ರಜಾವಾಣಿಯ ಕೊಡುಗೆ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.