ADVERTISEMENT

ಪಾ..ಪ... ಸೌರಭ್‌: ನಿರೂಪಕ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ನಟನಾ ವೈಭವ

ಶರತ್‌ ಹೆಗ್ಡೆ
Published 21 ನವೆಂಬರ್ 2019, 19:30 IST
Last Updated 21 ನವೆಂಬರ್ 2019, 19:30 IST
ಸೌರಬ್‌ ಕುಲಕರ್ಣಿ
ಸೌರಬ್‌ ಕುಲಕರ್ಣಿ   

‘ನಾನಿನ್ನೂ ಕಲಿಯುತ್ತಲೇ ಇದ್ದೇನೆ. ಪೂರ್ಣ ಪ್ರಮಾಣದಲ್ಲಿ ನಟ, ನಿರ್ದೇಶಕ ಆಗಬೇಕು ಎಂಬ ಕನಸು ಇದೆ’ ಎಂದು ವಿನಮ್ರವಾಗಿಯೇ ಮಾತಿಗಿಳಿಯುವ ಸೌರಭ್‌, ತಮ್ಮ ಕಲಾ ಬದುಕಿನ ಹಾದಿಯನ್ನು ತೆರೆದಿಟ್ಟರು.

‘ಪಾಪ ಪಾಂಡು’ ಮೊದಲ ಆವೃತ್ತಿಯ ಧಾರಾವಾಹಿ 2003ರ ಸುಮಾರಿಗೆ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದಾಗ ಎಲ್‌ಕೆಜಿಯಲ್ಲಿದ್ದ ಈ ಹುಡುಗ, ಮುಂದೆ ಅದೇ ಧಾರಾವಾಹಿಯ ಸೀಸನ್‌ –2 ಬರಲಿದೆ,ತಾನು ಅದರಲ್ಲಿ ನಟಿಸುತ್ತೇನೆ ಎಂದು ಕನಸಲ್ಲಿಯೂ ಊಹಿಸಿದವರಲ್ಲ. ಈಗ ಅದೇ ಧಾರಾವಾಹಿಯ ಕಿಲಾಡಿ ಶ್ರೀಹರಿಯ ಪಾತ್ರದಲ್ಲಿ ಕಾಣಿಸಿಕೊಂಡು ಜನಮೆಚ್ಚುಗೆ ಗಳಿಸುತ್ತಿರುವ ನಟಸೌರಭ್‌ ಕುಲಕರ್ಣಿ.

ತಂದೆ ಸಂಜೀವ್‌ ಕುಲಕರ್ಣಿ, ತಾಯಿ ಭಾಗ್ಯ ಕುಲಕರ್ಣಿ. ತಂದೆ ನಿರೂಪಕರು, ಕಲಾಸಕ್ತರು. ಹಾಗಾಗಿ ಬಾಲ್ಯದಿಂದಲೇ ನಟನೆ, ಸ್ಟೇಜ್‌ ಷೋಗಳ ಗೀಳು ಹತ್ತಿತು.250ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ನಿರೂಪಣೆ ಕೂಡ ಮಾಡಿದ್ದೇನೆ ಎಂದರು ಸೌರಭ್‌.

ADVERTISEMENT

ಮೊದಲು ಕ್ಯಾಮೆರಾ ಎದುರಿಸಿದ್ದನ್ನು ನೆನಪಿಸಿಕೊಂಡ ಕುಲಕರ್ಣಿ, ‘ನಾನಾಗ ಎರಡನೇ ತರಗತಿಯಲ್ಲಿದ್ದೆ (2005), ಈಟಿವಿಯಲ್ಲಿ ಬಾಲಗಂಧರ್ವ ಕಾರ್ಯಕ್ರಮದ ಪ್ರೋಮೊ ಶೂಟ್‌ನಲ್ಲಿ ಕಾಣಿಸಿಕೊಂಡೆ. ಆಗಲೇ ತಂದೆಯವರೂ ಟಿ.ವಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದದ್ದೂ ನನಗೆ ವೇದಿಕೆ ಹತ್ತಲು ಒಂದು ಮೆಟ್ಟಿಲಾಯಿತು. 2007ರಲ್ಲಿ ಆರ್‌ಎನ್‌ ಜೆಗೋಪಾಲ್‌ ಅವರು ಉದಯ ಟಿ.ವಿಗಾಗಿ ರಾಮಾಯಣ ಧಾರಾವಾಹಿ ನಿರ್ಮಿಸಿದರು. ಅದರಲ್ಲಿ ಬಾಲ ಭರತನ ಪಾತ್ರ ಮಾಡಿದ್ದೆ. ಆದರೆ, ಆರ್‌ಎನ್‌ಜೆ ಅವರ ಅಕಾಲಿಕ ಮರಣದಿಂದಾಗಿ ಧಾರಾವಾಹಿ ಸ್ಥಗಿತಗೊಂಡಿತು. ನಾನು ನಟಿಸಿದ ಭಾಗ ಪ್ರಸಾರವಾಗಲಿಲ್ಲ. ಆ ಬಳಿಕ ಚೈತನ್ಯ ಎಂಬ ಮಕ್ಕಳ ಸಿನಿಮಾದಲ್ಲಿ ಸಹನಟನಾಗಿ ಕಾಣಿಸಿಕೊಂಡೆ. ಸುನಿಲ್‌ ಪುರಾಣಿಕ್‌ ನಿರ್ದೇಶನದ ಗುರುಕುಲ ಸಿನಿಮಾದಲ್ಲಿ ಉಪಮನ್ಯು ಪಾತ್ರ ನಿರ್ವಹಿಸಿದೆ’ ಎಂದರು.

‘ನನಗೆ ದೊಡ್ಡ ಬ್ರೇಕ್‌ ಕೊಟ್ಟಿದ್ದು ಬ.ಲ. ಸುರೇಶ್‌ ನಿರ್ದೇಶನದ ಗುರು ರಾಘವೇಂದ್ರ ವೈಭವ ಧಾರಾವಾಹಿ. 2010ರ ಅವಧಿಯಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಅದರಲ್ಲಿ ರಾಘವೇಂದ್ರ ರಾಯರ ಬಾಲ್ಯದ ಪಾತ್ರ ಬಾಲ ವೆಂಕಟನಾಥನಾಗಿ ಕಾಣಿಸಿಕೊಂಡೆ. ಅದರಲ್ಲಿ ಜನರು ನನ್ನನ್ನು ಬಹುವಾಗಿ ಗುರುತಿಸಿದರು. ರಾಯರು ಬಂದರು ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಇದು ನನಗೆ ಹೆಸರು ತಂದುಕೊಟ್ಟಿತು. ನಾನೂ ರಾಯರ ಭಕ್ತ. ಹೀಗಾಗಿ ಈ ಪಾತ್ರವೂ ಅಚ್ಚುಮೆಚ್ಚಿನದ್ದಾಗಿತ್ತು’ ಎಂದು ಸ್ಮರಿಸಿದರು ಸೌರಭ್‌.

ಈ ನಡುವೆ ‘ರೋಬೋ ಫ್ಯಾಮಿಲಿ’ಯಲ್ಲೂ ಕೆಲಕಾಲ ನಟಿಸಿದೆ. ಅದೂ ಒಳ್ಳೆಯ ತಂಡ. ಒಳ್ಳೆಯ ಅನುಭವ ಕಲಿಸಿತು. ರಂಗಭೂಮಿಯ ಒಡನಾಟ ಇದ್ದಿದ್ದರಿಂದ ಪ್ರಭಾತ್‌ ಕಲಾವಿದರ ತಂಡ ಸೇರಿ, ಹಲವು ನಾಟಕಗಳಲ್ಲಿ ನಟಿಸಿದೆ. ನನ್ನ ತಂದೆಯವರೇ ಕಟ್ಟಿದ ಸಂಭ್ರಮ ಸೌರಭ ಸಂಸ್ಥೆಯಲ್ಲೂ ಕೆಲಸ ಮಾಡುತ್ತಿದ್ದೇನೆ.ಬೆಂಗಳೂರು ಥಿಯೇಟರ್‌ ಆ್ಯನೆಸೆಂಬಲ್ (Theatre ensemble) ಅವರ ನಿರ್ಮಾಣದ ‘ನವ್ಯ ಕನ್ಯೆ’ಯರು ನಾಟಕದಲ್ಲಿ ನಟಿಸಿದೆ. ಮಂಡ್ಯ ರಮೇಶ್‌ ಪರಿಚಯವೂ ಸಿಕ್ಕಿತು.ಬಿ.ಜಯಶ್ರೀ ಅವರ ತಂಡಕ್ಕಾಗಿ ರಮೇಶ್‌ ಅವರು ಬೆಂಗಳೂರಿನಲ್ಲಿ ರಂಗ ಶಿಬಿರ ನಡೆಸಿದಾಗಅವರ ಬಳಿ ಕಲಿಯುವ ಅವಕಾಶವೂ ಸಿಕ್ಕಿತು. ನನ್ನ ಬೆಳವಣಿಗೆಗಳ ಎಲ್ಲ ಕ್ರೆಡಿಟ್‌ ಪ್ರಭಾತ್ ಕಲಾವಿದರ ತಂಡಕ್ಕೆ ಸಲ್ಲುತ್ತದೆ. ಮಂಡ್ಯ ರಮೇಶ್‌ ನೆಚ್ಚಿನ ಗುರು ಎನ್ನಲು ಸೌರಭ್‌ ಮರೆಯಲಿಲ್ಲ.

ಕ್ಯಾಮೆರಾ, ಆ್ಯಕ್ಷನ್‌: ‘ಬಿ.ಎ ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಓದಿದ್ದೇನೆ. ಈ ವೇಳೆ ನನ್ನ ಆಸಕ್ತಿ ಕಿರುಚಿತ್ರಗಳತ್ತ ಹೋಯಿತು. ಈವರೆಗೆ 5 ಕಿರುಚಿತ್ರ ನಿರ್ದೇಶಿಸಿದ್ದೇನೆ. ನನ್ನ ತಂಡದಲ್ಲಿ ವಿಭಿನ್ನ ಕ್ಷೇತ್ರಗಳ ಆಸಕ್ತರು ಮತ್ತು ಪರಿಣತರು ಇದ್ದಾರೆ.ಈ ವೇಳೆ ಎಸ್‌.ನಾರಾಯಣ್‌ ನಿರ್ದೇಶನದ ‘ಮನಸ್ಸು ಮಲ್ಲಿಗೆ’ಯಲ್ಲಿ ಒಂದು ಪಾತ್ರ ಸಿಕ್ಕಿತು. ನಾರಾಯಣ್‌ ಒಬ್ಬ ಒಳ್ಳೆಯ ಗುರು. ಅವರಿಂದಲೂ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ಕಾಲೇಜು ಶಿಕ್ಷಣ ಮುಗಿಸಿದ ವೇಳೆ ಸಿಹಿ ಕಹಿ ಚಂದ್ರು ಪರಿಚಯ ಆಯಿತು. ಅದಕ್ಕೂ ಮುನ್ನ ನಾವು ನಿರ್ಮಿಸಿದ ಕಿರುಚಿತ್ರ ‘ಬೆಂಗಳೂರು ಟ್ರಾಫಿಕ್‌ ಗೋಳು’ನಲ್ಲಿ ಗೌರವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಪಾಪ ಪಾಂಡುವಿಗೆ ನನಗೂ ಆಡಿಷನ್‌ನಲ್ಲಿ ಭಾಗವಹಿಸುವ ಅವಕಾಶ ಕೊಟ್ಟರು. ಅದರಲ್ಲಿ ಆಯ್ಕೆಯಾದೆ. ಪಾಪ ಪಾಂಡುವಿನಲ್ಲಿ ಈಗನಿರಂತರ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದ ಸೌರಭ್‌, ತನ್ನ ಬೆಳವಣಿಗೆಗೆ ಕಾರಣರಾದ ಸಿಹಿಕಹಿ ಚಂದ್ರು ಸೇರಿ ಎಲ್ಲರನ್ನೂ ಪ್ರೀತಿಯಿಂದ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.