ADVERTISEMENT

ಚಾನೆಲ್‌ಗಳಲ್ಲಿ ಪ್ರೀತಿಯ ಮಳೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 19:30 IST
Last Updated 11 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫೆಬ್ರುವರಿ 14ಕ್ಕೆ ಕಿರುತೆರೆಯ ತುಂಬಾ ಪ್ರೀತಿ ಪ್ರೇಮದ ಹೊಳೆಯೇ ಹರಿಯುತ್ತಿದೆ. ಚಿತ್ರರಂಗದ ಪ್ರಮುಖ ತಾರೆಯರು, ಉದಯೋನ್ಮುಖ ನಟರು, ನಿರೂಪಕರು ವಿಶೇಷ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾನೆಲ್‌ಗಳ ತುಂಬಾ ಪ್ರೇಮೋನ್ಮಾದವೇ ಹರಿಯಲಿದೆ ಎಂಬುದು ಕಾರ್ಯಕ್ರಮ ನಿರ್ಮಾಪಕರ ಅಂಬೋಣ.

ಸ್ಟಾರ್‌ ಸುವರ್ಣ ವಾಹಿನಿ ‘ಪ್ರೇಮೋತ್ಸವ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ನಟಿ ಶ್ವೇತಾ ಶ್ರೀವಾತ್ಸವ್‌ ಅವರ ನೃತ್ಯ ಕಾರ್ಯಕ್ರಮವೂ ಇದೆ.

‘ವೇದಿಕೆ ಮೇಲೆ ನೃತ್ಯ ಮಾಡುವುದು ಬೇರೆ. ಟಿವಿ ಶೋದಲ್ಲಿ ನೀಡುವಕಾರ್ಯಕ್ರಮವೇ ಬೇರೆ. ಸ್ಟಾರ್‌ ಸುವರ್ಣವಾಹಿನಿಯವರು ಕೇಳಿದಾಗ ಒಮ್ಮೆ ಅಂಜಿಕೆ ಆಗಿತ್ತು. ಆದರೆ, ಅವಕಾಶದ ಬಾಗಿಲು ತೆರೆದಾಗ ಹಿಂಜರಿಯುವುದು ಸಲ್ಲದು ಎಂದು ಕಾರ್ಯಕ್ರಮಕ್ಕೆ
ಒಪ್ಪಿಕೊಂಡು ಭಾಗವಹಿಸಿದ್ದೇನೆ’ ಎಂದು ಶ್ವೇತಾ ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಶ್ವೇತಾ ಜೊತೆಗೆ ಕಿಶನ್‌ ಬಿಳೆಗಲಿ, ನೇಹಾಗೌಡ, ಅನುಪಮಾ ಗೌಡ, ಶೈನಿ ಶೆಟ್ಟಿ ಇದ್ದಾರೆ. ಪ್ರೀತಿ, ಪ್ರೇಮದ ಬಿಂದಾಸ್‌ ಹಾಡುಗಳಿಗೆ ಇವರು ಹೆಜ್ಜೆ ಹಾಕಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಟ ನಿರಂಜನ್‌ ದೇಶಪಾಂಡೆ ನಿರೂಪಕರು. ಶಾಲಿನಿ ಸಹ ನಿರೂಪಕಿ. ದೀರ್ಘಕಾಲದ ಬಳಿಕ ನಿರಂಜನ್‌ ನಿರೂಪಕರಾಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

ADVERTISEMENT

ರಿಯಾಲಿಟಿ ಶೋ, ಹಾಡು, ನೃತ್ಯ, ಮಾತುಕತೆಯ ಕಾರ್ಯಕ್ರಮಗಳಿಗೆ ಮನರಂಜನಾ ವಾಹಿನಿಗಳು ಒತ್ತು ನೀಡಿವೆ. ಭಾನುವಾರವಾದ್ದರಿಂದ ಪ್ರತಿದಿನದ ಧಾರಾವಾಹಿಗಳು ಅಂದು ಇರುವುದಿಲ್ಲ.ಹಾಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಿರ್ಮಿಸಿವೆ. ಈ ನಡುವೆ ‘ಬ್ರಹ್ಮಗಂಟು’ ಧಾರಾವಾಹಿಯ ನಟಿ ಗೀತಾ ಭಾರತಿ ಭಟ್‌ ಅವರು ಹೊಸ ರೊಮ್ಯಾಂಟಿಕ್‌ ವಿಡಿಯೊ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ‘ಸ್ವೀಟು’ ಹೆಸರಿನ ಆಲ್ಬಂ ಫೆ. 14ರಂದು ಯುಟ್ಯೂಬ್‌ನಲ್ಲಿ ಈ ಆಲ್ಬಂ ಬಿಡುಗಡೆ ಆಗಲಿದೆ. ಗೀತಾ ಅವರು ಆಲ್ಬಂನ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಆಲ್ಬಂನ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಪರಿಕಲ್ಪನೆ ಎಲ್ಲವೂ ಆದಿತ್ಯ ವಿನೋದ್‌ ಅವರದ್ದು.

ಸಿನಿಮಾ ವಾಹಿನಿಗಳಂತೂ ಆ ದಿನವಿಡೀ ಪ್ರಮುಖ ನಟರ ಅಭಿನಯದ ಪ್ರೇಮಕಥೆಗಳ ಚಿತ್ರಗಳನ್ನೇ ಪ್ರಸಾರ ಮಾಡಲು ಸಿದ್ಧತೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.