ADVERTISEMENT

ಸಂಗೀತಾ ಹಾಡಿಗೆ ‘ಸೋನು’ ಮೆರಗು

ಸ್ಲಗ್: ಆಲ್ಬಂ ಸಾಂಗ್

ಮಂಜುಶ್ರೀ ಎಂ.ಕಡಕೋಳ
Published 9 ಅಕ್ಟೋಬರ್ 2020, 5:13 IST
Last Updated 9 ಅಕ್ಟೋಬರ್ 2020, 5:13 IST
ಶೈನ್ ಶೆಟ್ಟಿ, ಸಂಗೀತಾ ರಾಜೀವ್
ಶೈನ್ ಶೆಟ್ಟಿ, ಸಂಗೀತಾ ರಾಜೀವ್   

ಬಹುಭಾಷಾ ಹಿನ್ನೆಲೆ ಗಾಯಕಿ ಸಂಗೀತಾ ರಾಜೀವ್, ಖ್ಯಾತ ಗಾಯಕ ಸೋನು ನಿಗಮ್ ಅವರೊಂದಿಗೆ ಆಲ್ಬಂ ಸಾಂಗ್‌ನಲ್ಲಿ ಹಾಡಿದ ಖುಷಿಯಲ್ಲಿದ್ದಾರೆ. ಸಂಗೀತಾ ಅವರು ರಚಿಸಿ, ಸಂಯೋಜಿಸಿ, ಹಾಡಿರುವ ಹೊಸ ಆಲ್ಬಂ ಗೀತೆ ‘ನೀನೆ ನೀನೆ’ಯಲ್ಲಿ ಸೋನು ಹಾಡಿದ್ದಾರೆ.

ಸೋನು ಜತೆಗೆ ಹಾಡಬೇಕೆಂಬ ತಮ್ಮ ಕನಸು ನನಸಾದ ಖುಷಿಯಲ್ಲಿರುವ ಸಂಗೀತಾ ಅವರ ‘ನೀ ಹೀಂಗ ನೋಡಬ್ಯಾಡ’ ಹಾಡು ಈಚೆಗೆ ಭಾರಿ ಸದ್ದು ಮಾಡಿತ್ತು. 20 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಲಾಕ್‌ಡೌನ್ ಸಮಯದಲ್ಲಿ ಸೋನು ಅವರನ್ನು ಸಂಪರ್ಕಿಸಿದ್ದ ಸಂಗೀತಾ, ತಮ್ಮ ಹಿಂದಿನ ಆಲ್ಬಂ ಗೀತೆಗಳು, ಸಿನಿಮಾ ಸಂಗೀತದ ಲಿಂಕ್‌ಗಳನ್ನು ಕಳುಹಿಸಿ ಕೊಟ್ಟಿದ್ದರಂತೆ. ತಮ್ಮ ಹೊಸ ಆಲ್ಬಂಗೀತೆಯಲ್ಲಿ ಹಾಡಬೇಕೆಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಸೋನು ಲಾಕ್‌ಡೌನ್‌ ಕಾರಣ ಕ್ಕಾಗಿ ದುಬೈನಲ್ಲಿ ಉಳಿದಿದ್ದರು. ಅಲ್ಲಿಂದ ಮುಂಬೈಗೆ ಬಂದವರೇ ಸಂಗೀತಾ ಜೊತೆಗೆ ಅವರು ಹೊಸ ಹಾಡಿಗೆ ದನಿಯಾಗಿದ್ದಾರೆ. ‘ಸೋನು ಸರ್ ನನ್ನ ಸ್ಫೂರ್ತಿ, ಇಷ್ಟದ ಗಾಯಕ. ಈ ರೀತಿಯ ಸ್ವತಂತ್ರ ಹಾಡು ಹಾಡಲು ಒಪ್ಪಿಕೊಂಡದ್ದು ನನ್ನ ಪಾಲಿಗೆ ದೊಡ್ಡ ಗಿಫ್ಟ್. ಅವರಿಗಾಗಿಯೇ ಈ ಹಾಡು ರಚಿಸಿ, ಸಂಯೋಜಿಸಿದ್ದೆ. ಅವರು ಒಪ್ಪುವ ನಿರೀಕ್ಷೆ ಇರಲಿಲ್ಲ. ಆದರೆ, ಸೋನು ಅವರು ಕರೆ ಮಾಡಿ ಒಪ್ಪಿಕೊಂಡಾಗ ಆದ ಸಂತಸ ಅಷ್ಟಿಷ್ಟಲ್ಲ. ಹಾಡಿನ ಸಾಹಿತ್ಯ ಅರ್ಥ, ಕನ್ನಡವನ್ನು ಉಚ್ಛರಿಸುವ ಬಗೆ ಎಲ್ಲವನ್ನೂ ಇಂಚಿಂಚಾಗಿ ಕೇಳಿ ತಿಳಿದುಕೊಂಡ ಅವರ ಪರಿ ನನಗೆ ಬೆರಗು ಮೂಡಿಸಿತು. ಅವರು ನನಗೆ ಮೆಂಟರ್ ರೀತಿಯಲ್ಲಿ ತಿದ್ದಿ ತೀಡಿದರು..’ ಎಂದು ಸೋನು ಜತೆಗಿನ ಹಾಡಿನ ಪಯಣ ಬಿಚ್ಚಿಡುತ್ತಾರೆ ಸಂಗೀತಾ.

ADVERTISEMENT

‘ಇದುವರೆಗೆ ನಾನು ಸೋನು ಅವರನ್ನು ಭೇಟಿಯೇ ಆಗಿಲ್ಲ. ಎರಡು ತಿಂಗಳಲ್ಲಿ ಅವರೊಂದಿಗೆ ಫೋನ್‌ನಲ್ಲಿಯೇ ಮಾತನಾಡಿ, ಆಲ್ಬಂ ಸಾಂಗ್‌ಗೆ ತಯಾರಿ ನಡೆಸಿದೆ. ಅವರು ಮುಂಬೈನಲ್ಲಿ, ನಾನು ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮುಗಿಸಿದೆವು. ಹಾಡಿನ ಪ್ರತಿ ಹಂತದಲ್ಲೂ ಸೋನು ಅವರು ನೀಡಿದ ಬೆಂಬಲ ಮರೆಯಲಾಗದ್ದು. ಅಷ್ಟೇ ಅಲ್ಲ, ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲೂ ನನ್ನ ಹಾಡನ್ನು ಪ್ರಮೋಟ್ ಮಾಡಿದ್ದಾರೆ. ಕಿರಿಯ ಗಾಯಕಿಗೆ ಇಷ್ಟೊಂದು ಪ್ರೋತ್ಸಾಹ ನೀಡಿದ್ದು ನನ್ನ ಪಾಲಿನ ಅದೃಷ್ಟ’ ಎನ್ನುತ್ತಾರೆ ಅವರು.

ಸಂಗೀತಾ ಹಾಗೂ ಶ್ರೀನಾಥ್ ಹಡಗಲಿ ಸಾಹಿತ್ಯವಿರುವ ಈ ಹಾಡಿನಲ್ಲಿ ‘ಬಿಗ್‌ಬಾಸ್’ ವಿಜೇತ ಶೈನ್ ಶೆಟ್ಟಿ ಅಭಿನಯಿಸಿರುವುದು ವಿಶೇಷ. ಈ ಹಾಡಿಗೆ ರೋಷನ್ ಡಿಸೋಜಾ ಅವರ ಕಲಾ ವಿನ್ಯಾಸ ಹಾಗೂ‌ ಆಕಾಶ್ ಜೋಷಿ ಅವರ ನಿರ್ದೇಶನವಿದೆ.

‘ಆರು ತಿಂಗಳ ಹಿಂದೆ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಸಂಗೀತಾ ತಮ್ಮ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಲು ಆಫರ್ ಕೊಟ್ಟಿದ್ದರು. ಇದು ನನ್ನ ಮೊದಲ ಆಲ್ಬಂ ಸಾಂಗ್. ಇದರಲ್ಲಿ ಸೋನು ಅವರು ಹಾಡಿದ್ದು, ಅದಕ್ಕೆ ನಾನು ಪಾತ್ರಧಾರಿಯಾಗಿದ್ದು, ಭಿನ್ನ ಅನುಭವ ನೀಡಿತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶೈನ್ ಶೆಟ್ಟಿ.

‘ನೀನೆ ನೀನೆ’ ಯುಟ್ಯೂಬ್, ಸಾವನ್ ಸೇರಿದಂತೆ ಇತರ ಸಂಗೀತದ ವೇದಿಕೆಗಳಲ್ಲಿ ಬಿಡುಗಡೆಯಾಗಿದ್ದು ಹೆಚ್ಚೂಕಮ್ಮಿ ಹತ್ತು ಲಕ್ಷ ವೀಕ್ಷಣೆ ತಲುಪುವ ಹಂತದಲ್ಲಿದೆ. ಜನ ನನ್ನ ಹಾಡನ್ನು ಗುನುಗುನುನಿಸುವಂತಾಗಿದೆ. ಕನ್ನಡಿಗರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಸಂತಸ ತಂದಿದೆ ಎನ್ನುವ ಸಂಗೀತಾ, ಮತ್ತಷ್ಟು ಪ್ರಯೋಗಮುಖಿಯಾಗುವ ಇಂಗಿತ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.