ADVERTISEMENT

ಆರನೆಯ ಇಂದ್ರಿಯದ ಆಟ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 12:21 IST
Last Updated 7 ಜುಲೈ 2018, 12:21 IST
ಅಕುಲ್‌ ಬಾಲಾಜಿ
ಅಕುಲ್‌ ಬಾಲಾಜಿ   

ಕನ್ನಡದಲ್ಲಿ ರಿಯಾಲಿಟಿ ಶೋಗಳು ಹಲವಾರಿವೆ. ಅವುಗಳಲ್ಲಿ ಹಾಡುವ ಕಾರ್ಯಕ್ರಮಗಳೂ ಸೇರಿವೆ, ಹಾಡುಗಳಿಗೆ ಹೆಜ್ಜೆ ಹಾಕುವ ಕಾರ್ಯಕ್ರಮಗಳೂ ಸೇರಿವೆ. ಆದರೆ, ಕನ್ನಡಕ್ಕೆ ಒಂದು ಹೊಸ ಗೇಮ್‌ ಶೋ ಬೇಕು...

ಗೇಮ್‌ ಶೋ ಬೇಕು ಎಂಬುದು ಸ್ಟಾರ್‌ ಸುವರ್ಣ ವಾಹಿನಿಯ ಆಲೋಚನೆ ಆಗಿತ್ತು. ಈ ಆಲೋಚನೆಯನ್ನು ವಾಹಿನಿಯು ಈಗ ‘ಸಿಕ್ಸ್ತ್‌ ಸೆನ್ಸ್‌’ ಎನ್ನುವ ಹೊಸ ಕಾರ್ಯಕ್ರಮದ ಮೂಲಕ ಕಾರ್ಯರೂಪಕ್ಕೆ ತರುತ್ತಿದೆ. ಇದು ಶನಿವಾರದಿಂದ (ಜುಲೈ 7) ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಅಕುಲ್‌ ಬಾಲಾಜಿ ಅವರಿಗೆ ವಹಿಸಿದೆ ವಾಹಿನಿ.

ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಮೀರಿದ ಆರನೆಯ ಇಂದ್ರಿಯವೊಂದು ಇದೆ ಎಂಬುದು ಒಂದು ನಂಬಿಕೆ. ಆರನೆಯ ಇಂದ್ರಿಯದ ಸಾಮರ್ಥ್ಯ ಬಳಸಿಕೊಂಡು ಆಡಬೇಕಾದ ಗೇಮ್‌ ಇದು ಎಂಬುದು ವಾಹಿನಿಯ ಅಂಬೋಣ. ‘ಇದು ಈವರೆಗೆ ಕನ್ನಡದ ವೀಕ್ಷಕರು ಕಂಡಿರದ ಕಾರ್ಯಕ್ರಮ’ ಎಂದೂ ವಾಹಿನಿ ಹೇಳಿಕೊಂಡಿದೆ. ಅಂದಹಾಗೆ, ಇದರಲ್ಲಿ ಪಾಲ್ಗೊಳ್ಳುವವರು ಕನ್ನಡದ ಜನಪ್ರಿಯ ಸೆಲೆಬ್ರಿಟಿಗಳು. ಒಟ್ಟು 28 ಕಂತುಗಳಲ್ಲಿ ಇದು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

ADVERTISEMENT

ಈ ಕಾರ್ಯಕ್ರಮವು ‘ಸ್ಟಾರ್ ಮಾ’ ವಾಹಿನಿಯಲ್ಲಿ ಈಗಾಗಲೇ ಪ್ರಸಾರವಾಗಿದೆ. ತೆಲುಗಿನಲ್ಲಿ ಮೂಡಿಬಂದ ಇದರ ನಿರ್ದೇಶನ, ನಿರ್ಮಾಣ, ನಿರೂಪಣೆಯ ಹೊಣೆಯನ್ನು ಓಂಕಾರ್ ಅವರು ನಿಭಾಯಿಸಿದ್ದರು. ಕನ್ನಡದ ‘ಸಿಕ್ಸ್ತ್ ಸೆನ್ಸ್’ ಕಾರ್ಯಕ್ರಮದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ.

‘ಹೊಸ ಬಗೆಯ ಗೇಮ್ ಶೋ ನೋಡುವ ಕಾತರ ವೀಕ್ಷಕರಲ್ಲಿ ಇದೆ. ಅವರ ಅಭಿರುಚಿಗೆ ಸೂಕ್ತವಾದ ಕಾರ್ಯಕ್ರಮ ನೀಡುಲು ಸ್ಟಾರ್ ಸುವರ್ಣ ವಾಹಿನಿ ಸಿದ್ಧವಾಗಿದೆ. ಮೂರು ವರ್ಷ ವಯಸ್ಸಿನ ಮಕ್ಕಳಿಂದ ಆರಂಭಿಸಿ ನೂರು ವರ್ಷ ತುಂಬಿದ ಹಿರಿಯರೂ ಇದನ್ನು ನೋಡಿ ಮೆಚ್ಚಿಕೊಳ್ಳಬಹುದು’ ಎಂದಿದ್ದಾರೆ ವಾಹಿನಿಯ ಬಿಸಿನೆಸ್ ಹೆಡ್ ಸಾಯಿಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.