ADVERTISEMENT

ನಟನೆಗೆ ವೇದಿಕೆಯ ಮಿತಿ ಇಲ್ಲ

ರಾಘವೇಂದೆ ಕೆ.
Published 25 ಏಪ್ರಿಲ್ 2019, 12:08 IST
Last Updated 25 ಏಪ್ರಿಲ್ 2019, 12:08 IST
ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರ   

ಉದಯದ ‘ಬ್ರಹ್ಮಾಸ್ತ್ರ’ದ ಸಂತು ಅವರ ಸಂದರ್ಶನವಿದು. ತಮ್ಮ ವೃತ್ತಿ ಬದುಕಿನ ಕುರಿತು ಅವರು ವಿಸ್ತಾರವಾಗಿ ಜತೆಗೆ ಮಾತನಾಡಿದ್ದಾರೆ.

ತೆರೆಯ ಜೀವನ ಹೇಗಿದೆ?

ಮೊದಲಿನಿಂದಲೂ ಮನೋರಂಜನಾ ಕ್ಷೇತ್ರಕ್ಕೆ ಆಕರ್ಷಿತನಾಗಿದ್ದೆ. ಬಾಲ್ಯದಲ್ಲಿ ಮೂರು ವರ್ಷ ಭರತನಾಟ್ಯ ಅಭ್ಯಾಸ ಮಾಡಿದೆ. ನಂತರ ಅದನ್ನು ಅರ್ಧಕ್ಕೆ ಬಿಟ್ಟೆ. ದೊಡ್ಡವನಾದ ಮೇಲೆ ಬಾಲಿವುಡ್‌ ಫ್ರೀ ಸ್ಟೈಲ್‌, ಜುಮ್ಬಾ ಫಿಟ್‌ನೆಸ್‌ ಡಾನ್ಸ್‌ ಕಲಿತು ಜುಂಬಾ ಡಾನ್ಸ್‌ ಶಿಕ್ಷಕನಾಗಿ ಕೆಲಸ ಮಾಡ್ತಿದ್ದೆ. ಆ ನನ್ನ ಒಲವು ಅದನ್ನು ಅಭಿನಯದತ್ತ ತಿರುಗುವಂತೆ ಮಾಡಿತು. ಒಂದಿಷ್ಟು ಕಾಲ ‘ಸಮುದಾಯ’ ತಂಡದಲ್ಲಿ ನಾಟಕ ಆಡುತ್ತಿದ್ದೆ. ಆ ತಂಡದ ‘ನಮೋ ವೆಂಕಟೇಶ’ ಮತ್ತು ‘ಪಂಪಭಾರತ’ವನ್ನು ಅನೇಕ ಪ್ರದರ್ಶನಗಳನ್ನು ನೀಡಿದ್ದೇವೆ. ಪಂಪಭಾರತದ ಕರ್ಣ ಪ್ರೇಕ್ಷಕರ ಅಪಾರ ಪ್ರೀತಿಯನ್ನು ತಂದುಕೊಟ್ಟಿತು. ಅಷ್ಟು ಮಾತ್ರವಲ್ಲದೆ ಕಿರುತೆರೆಯತ್ತ ಮುಖ ತೋರಿಸುವಂತೆ ಮಾಡಿತು.

ADVERTISEMENT

ಕಿರುತೆರೆಗೆ ಬರಲು ರವಿ ಗರಣಿ ಕಾರಣ. ಅವರು ಚಿಕ್ಕ‍ಪಾತ್ರವೊಂದನ್ನು ಮೊದಲು ಕೊಟ್ಟರು. ನಂತರ ‘ಅವನು ಮತ್ತು ಶ್ರಾವಣಿ’ಯಲ್ಲಿ ಪ್ರಮುಖ ಪಾತ್ರ ಸಿಕ್ಕಿತು. ಈಗ ‘ಬ್ರಹ್ಮಾಸ್ತ್ರ’ದ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಬಣ್ಣ ನಮ್ಮನ್ನು ಆಕರ್ಷಿಸುತ್ತದೆ. ಅದೇ ನಮ್ಮ ಪ್ಯಾಶನ್‌ ಎನ್ನುವ ಮಟ್ಟಿಗೆ ಪ್ರಭಾವಿಸುತ್ತದೆ. ರಂಗಭೂಮಿಗೂ– ತೆರೆಗೂ ವ್ಯತ್ಯಾಸ ಇದೆ. ನಾಟಕದಲ್ಲಾದರೆ ನಟನೆಯ ಫಲಿತಾಂಶ ಆಗಲೇ ಸಿಗುತ್ತದೆ. ಪ್ರೋತ್ಸಾಹ, ಅಭಿನಂದನೆ ಎಲ್ಲದನ್ನೂ ಪ್ರತ್ಯಕ್ಷವಾಗಿ ಕಾಣಲು ಸಾಧ್ಯವಾಗುತ್ತದೆ. ಕಿರುತೆರೆಯಲ್ಲಾದರೆ ಅದು ಆ ತಕ್ಷಣಕ್ಕೆ ಗೋಚರಿಸುವುದಿಲ್ಲ. ಬಣ್ಣದ ಮೋಹಕ್ಕೆಪಾತ್ರವನ್ನು ನಮ್ಮದಾಗಿಸಿಕೊಳ್ಳತ್ತಾ ನಮ್ಮಿಷ್ಟಕ್ಕಾಗಿ ನಟಿಸುತ್ತೇವೆ. ಆದರೆ ನಾವೂ ವೀಕ್ಷಕರ ಮನಸ್ಸಿನಲ್ಲಿ ಉಳಿದಿರುತ್ತೇವೆ ಎಂದು ಇತ್ತೀಚೆಗೆ ದಾವಣಗೆರೆಯ ಹರಿಹರ– ಹರಪನಹಳ್ಳಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೊತ್ತಾಯಿತು. ನಮಗಾಗಿ ನಾವು ಮಾಡುವ ಅಭಿನಯ ವೀಕ್ಷಕರಿಗಾಗಿಯೂ ಮಾಡಬೇಕು ಎನ್ನುವ ಅರಿವನ್ನು ಅದು ಮೂಡಿಸಿತು.

* ಮುಂದಿನ ಯೋಜನೆಗಳು ಏನು

ಸದ್ಯದ ಯೋಚನೆಯಂತೆ ಭವಿಷ್ಯತ್ತು ಕೂಡ ಅಭಿನಯದಲ್ಲಿಯೇ ಕಳೆಯುತ್ತೇನೆ ಎಂದುಕೊಂಡಿದ್ದೇನೆ. ಏಕರೂಪ ಮಾದರಿಯ ಪಾತ್ರಗಳಿಗಿಂತ ಭಿನ್ನ ಭಿನ್ನ ಪಾತ್ರಗಳನ್ನು ನಿರ್ವಹಿಸಬೇಕು ಎನ್ನುವುದು ನನ್ನ ಬಯಕೆ. ಮಾತ್ರವಲ್ಲ, ಯಾವುದೋ ಒಂದಕ್ಕೆ ನಿರ್ದಿಷ್ಟ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅಂದರೆ ಒಬ್ಬ ನಟನಿಗೆ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಎಂಬ ಬೇಧ ಇರುವುದಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಹಾಗಾಗಿ ಅವಕಾಶ ಸಿಕ್ಕರೆ, ನನಗೆ ಇಷ್ಟವಾಗುವಂತಿದ್ದರೆ ಯಾವ ಮಾಧ್ಯಮವಾದರೂ ಸರಿ ಅದನ್ನು ಬಳಸಿಕೊಳ್ಳುತ್ತೇನೆ.

* ಸಂತು ಪಾತ್ರ ಹೇಗಿದೆ?

ತುಂಬಾ ಖುಷಿಯನ್ನು ಅನುಭವಿಸುವ ವ್ಯಕ್ತಿತ್ವ. ಇಂದಿನ ಬಹುತೇಕ ಯುವರಿಗೆ ಇಷ್ಟವಾಗುವ, ಮಾದರಿಯಾಗುವ ಪಾತ್ರ. ತನ್ನ ಮೇಲಿನ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದರೂ ಸಂತೂ ಎಂದೂ ಅದು ತನಗೆ ಭಾರವಾಯಿತು ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಆರಾಮಾಗಿ ಇರಲು ಬಯಸುತ್ತಾನೆ.

* ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದಾದರೆ..

ನಮ್ಮದು ದೇವನಹಳ್ಳಿ ಸಮೀಪದ ಶಿಡ್ಲಘಟ್ಟ. ಓದುವ ಸಂಬಂಧ ನಾನು ಬೆಂಗಳೂರಿಗೆ ಬಂದೆ. ನನ್ನ ತಂದೆ ರಾಜು ರೇಷ್ಮೆ ವ್ಯಾಪಾರ ಮಾಡುತ್ತಿದ್ದರು. ಅದು ಮುಗ್ಗರಿಸಿದ್ದರಿಂದ ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಅಮ್ಮ ಇಂದಿರಾ ರಾಜು ಗೃಹಿಣಿ. ಮನರಂಜನೆಯ ಮೋಹ ನನ್ನನ್ನು ಒಬ್ಬ ಕಲಾವಿದನನ್ನಾಗಿ ರೂಪಿಸಿದೆ. ಮೈಯಿಗೆ ಬಣ್ಣ ಸೋಂಕಿದರೆ ಅಂತಹ ಮೋಡಿಯನ್ನು ಅದು ಸೃಷ್ಟಿಸುತ್ತದೆ. ಈಗಲೂ ನನಗೆ ರಂಗಭೂಮಿ ಅತ್ಯಂತ ಆಕರ್ಷಣಿಯ ಕೇಂದ್ರವಾಗಿದೆ. ನಾನು ಒಬ್ಬ ನಟನಾಗಲು ರಂಗಭೂಮಿ ಕಾರಣವಾಗಿದೆ. ಇವತ್ತಿನ ನನ್ನ ವ್ಯಕ್ತಿತ್ವ ಬಹುತೇಕ ರಂಗಭೂಮಿಯಿಂದ ನಿರ್ಮಾಣ ಆಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.