ADVERTISEMENT

ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿ‌ ಸೌಜನ್ಯ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 19:18 IST
Last Updated 30 ಸೆಪ್ಟೆಂಬರ್ 2021, 19:18 IST
   

ರಾಮನಗರ:‌ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಿರುತೆರೆ ನಟಿ ಸೌಜನ್ಯಾ (ಸವಿ ಮಾದಪ್ಪ) (25) ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳದಲ್ಲಿ ಪೊಲೀಸರಿಗೆ ನಾಲ್ಕು ಪುಟಗಳ ಡೆಟ್‌ನೋಟ್ ದೊರೆತಿದೆ. ‘ನನ್ನ ಸಾವಿಗೆ ನಾನೇ ಕಾರಣ. ಇತ್ತೀಚೆಗೆ ನನ್ನ ಮಾನಸಿಕ ಆರೋಗ್ಯ ಸರಿಯಿಲ್ಲ. ಆರೋಗ್ಯ ಸಹ ಕೈ ಕೊಟ್ಟಿದೆ. ವೈಯಕ್ತಿಕ ಕಾರಣಗಳಿಗೆ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಮರಣ ಪತ್ರ ಬರೆದಿರುವ ಸೌಜನ್ಯಾ, ಇದಕ್ಕಾಗಿ‌ ಹೆತ್ತವರ ಕ್ಷಮೆ ಕೇಳಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಪುಟ್ಟ ಬರಹವೊಂದನ್ನು ಪೋಸ್ಟ್‌ ಮಾಡಿದ್ದ ಸೌಜನ್ಯಾ,ನಿಮ್ಮ ಜೀವನದ ಬಗ್ಗೆ ಹಾಗೂ ಗುರಿ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದರು.

ADVERTISEMENT

‘ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ’ ಎಂದು ಅವರು ಇನ್ನೊಂದು ಪೋಸ್ಟ್‌ನಲ್ಲಿ ಬರೆದಿದ್ದರು. ‘happiness, sadness ’ ಹ್ಯಾಶ್ ಟ್ಯಾಗ್ ಹಾಕಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ, ಗೆಳೆಯರು ಹಾಗೂ ಸಹೋದರರ ಫೋಟೋ ಹಾಕಿ ಅವರಿಗೆ ಧನ್ಯವಾದ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ಈ ಯುವತಿ ಕಳೆದ ಒಂದೂವರೆ ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದು, ನಾನಾ ಆಯಾಮಗಳ ಕುರಿತು ತನಿಖೆ ನಡೆಸುತ್ತಿದ್ದೇವೆ’ ರಾಮನಗರ ಎಸ್ಪಿ ಗಿರೀಶ್‌ ತಿಳಿಸಿದರು.

ಕೊಡಗು‌ ಜಿಲ್ಲೆಯ ಕುಶಾಲನಗರದವರಾದ ಸೌಜನ್ಯಾ ‘ಚೌಕಟ್ಟು’, ‘ಫನ್’ ಸಿನಿಮಾಗಳಲ್ಲಿ‌ ನಟಿಸಿದ್ದರು. ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಕುಂಬಳಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗಳ ಸಾವಿನ ಬಗ್ಗೆ ಅನುಮಾನ:ಸೌಜನ್ಯತಂದೆಯಿಂದ ದೂರು

ರಾಮನಗರ: ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಟಿಸೌಜನ್ಯತಂದೆ ಪ್ರಭು‌ ಮಾದಪ್ಪ ಕುಂಬಳಗೋಡು ಠಾಣೆ ಪೊಲೀಸರಿಗೆ ಗುರುವಾರ ರಾತ್ರಿ‌ ದೂರು‌ ನೀಡಿದರು.

ಸೌಜನ್ಯಆಪ್ತ ಸಹಾಯಕ‌ ಮಹೇಶ್ ಹಾಗೂ ನಟನೊಬ್ಬನ ವಿರುದ್ಧ ಅವರು ದೂರು ನೀಡಿದ್ದು, ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಪ್ರಭು ಮಾದಪ್ಪ 'ಮಗಳು ಅಪಾರ್ಟ್ ಮೆಂಟ್ ನಲ್ಲಿ ಒಬ್ಬಳೇ ಇದ್ದಳು. ಯಾರೋ ಕಿರುಕುಳ ನೀಡಿ ಅವಳ‌ ಸಾವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

ಕುಶಾಲನಗರ ತಾಲ್ಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸುವುದಾಗಿ‌ ಅವರು‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.