‘ಅಮ್ಮನಿಗೆ ನೀನು ಹಾಗೆಲ್ಲ ಹಿಂಸೆ ಕೊಡಲು ಹೇಗೆ ಸಾಧ್ಯ? ಅವಳನ್ನು ಕಿಟಕಿಯಿಂದಾಚೆ ಎಸೆಯುವಷ್ಟು ಕ್ರೂರಿಯೇ ನೀನು’ ಎಂದು, ಅಪ್ಪ ಮಹೇಶ್ ಭಟ್ ಅವರನ್ನು ಆಲಿಯಾ ಭಟ್ ತರಾಟೆಗೆ ತೆಗೆದುಕೊಂಡಿದ್ದಾರಂತೆ. ಈ ವಿಷಯವನ್ನು ಸ್ವತಃ ಆಲಿಯಾ ಅವರೇ ಬಹಿರಂಗಪಡಿಸಿದ್ದಾರೆ.
ಮಹೇಶ್ ಭಟ್ ತಮ್ಮ ಪತ್ನಿಗೆ ಹಿಂಸೆ ಕೊಟ್ಟಿದ್ದಾರೆಯೇ ಎಂಬ ಪ್ರಶ್ನೆ ಎದುರಾಯಿತೇ? 1991ರಲ್ಲಿ ‘ಸಡಕ್’ ಚಿತ್ರ ನೋಡುತ್ತಿದ್ದಾಗ, ಬಾಲಕಿ ಆಲಿಯಾ ತನ್ನ ತಂದೆಯನ್ನು ಪ್ರಶ್ನಿಸಿದ್ದ ರೀತಿಯಿದು.
‘ನನ್ನ ತಾಯಿಯನ್ನು (ಸೋನಿ ರಜ್ದಾನ್) ಕಿಟಕಿಯಿಂದ ಎಸೆಯುವ ದೃಶ್ಯವನ್ನು ನೋಡಲಾಗದೆ ಟಿ.ವಿ. ಮ್ಯೂಟ್ ಮಾಡಿದ್ದೆ. ಅಷ್ಟೇ ಅಲ್ಲ, ಅಮ್ಮನನ್ನು ಕ್ರೂರವಾಗಿ ನಡೆಸಿಕೊಂಡಿದ್ದಕ್ಕೆ ಅಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದೆ. ನಾನು ಆಗ ಸಣ್ಣವಳು. ಅದು ಸಿನಿಮಾ. ಕಿಟಕಿಯಿಂದ ಎಸೆಯುವ ಸನ್ನಿವೇಶ ನಿಜವಾಗಿ ನಡೆದಿರುವುದಿಲ್ಲ ಕೃತಕವಾಗಿ ಹಾಗೆ ತೋರಿಸಿರುವುದು ಎಂಬ ವಿವೇಚನೆಯೂ ನನಗಿರಲಿಲ್ಲ’ ಎಂದು ಆಲಿಯಾ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಮಹೇಶ್ ಭಟ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿಯೇ ಆಚರಿಸಿದ ಆಲಿಯಾ, ‘ಸಡಕ್ 2’ ಚಿತ್ರವನ್ನು ತನ್ನ ತಂದೆಯೇ ನಿರ್ದೇಶಿಸಲಿರುವುದು ಮತ್ತು ಅದರಲ್ಲಿ ತಾನು ಪ್ರಮುಖ ಪಾತ್ರ ನಿರ್ವಹಿಸಲಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿಕೊಂಡಿದ್ದರು. ಅದೇ ವೇಳೆ ‘ಸಡಕ್’ನ ನೆನಪುಗಳನ್ನು ಅವರು ಮೆಲುಕು ಹಾಕಿಕೊಂಡರು.
1991ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ‘ಸಡಕ್’ ಬಾಕ್ಸಾಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಸಂಜಯ್ ದತ್ ಮತ್ತು ಪೂಜಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ 13 ಹಾಡುಗಳೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದವು.
‘ಸಡಕ್–2’ನಲ್ಲಿ ಆಲಿಯಾ ಜೊತೆ ಪೂಜಾ ಭಟ್, ಆದಿತ್ಯ ರಾಯ್ ಕರ್ಪೂರ್ ಮತ್ತು ಸಂಜಯ್ ದತ್ ನಟಿಸಲಿದ್ದಾರೆ. ಮಹೇಶ್ ಭಟ್ ಅವರ ಲೆಕ್ಕಾಚಾರದಂತೆ ನಡೆದರೆ ಚಿತ್ರ 2020ರ ಮಾರ್ಚ್‌ನಲ್ಲಿ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.