ADVERTISEMENT

ಆಕರ್ಷಕ ನೀಲಿ ದೇಹದ ‘ಅನೋಡೋರಿಂಚಸ್’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 5:56 IST
Last Updated 27 ಫೆಬ್ರುವರಿ 2019, 5:56 IST
ಅನೋಡೋರಿಂಚಸ್ ಪಕ್ಷಿ
ಅನೋಡೋರಿಂಚಸ್ ಪಕ್ಷಿ   

ಪಕ್ಷಿ ಪ್ರಪಂಚದಲ್ಲಿ ಕೆಲವು ಪಕ್ಷಿಗಳು ತಮ್ಮ ದೇಹದಲ್ಲಿರುವ ಆಕರ್ಷಕ ಬಣ್ಣದಿಂದ ಗಮನಸೆಳೆಯುತ್ತವೆ. ಅಂತಹ ಪಕ್ಷಿಗಳಲ್ಲಿ ‘ಅನೋಡೋರಿಂಚಸ್’ ಸಹ ಒಂದು.ನೀಲಿ ಆಗಸದಲ್ಲಿ ಹಾರಾಡುವ ಈ ಪಕ್ಷಿಯ ದೇಹ ಬಹುತೇಕ ನೀಲಿಯಾಗಿರುತ್ತದೆ. ವಿಶಾಲವಾದ ರೆಕ್ಕೆಗಳನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಿಸುತ್ತದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ?

ಇದರ ದೇಹ ಬಹುತೇಕ ನೀಲಿ ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಗಳು, ಬೆನ್ನು ಮತ್ತು ಉದರ ಭಾಗ ನೀಲಿಮಯವಾಗಿರುತ್ತದೆ. ಆಕರ್ಷಕವಾದ ಕೊಕ್ಕನ್ನು ಹೊಂದಿದ್ದು, ಕೊಕ್ಕು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಕೊಕ್ಕುಗಳ ಇಕ್ಕೆಲಗಳು ಹಳದಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ಅಗಲವಾಗಿರುತ್ತವೆ. ಕಣ್ಣಿನ ಸುತ್ತಲೂ ಹಳದಿ ಬಣ್ಣ ಆವೃತವಾಗಿರುತ್ತದೆ.ಇದರ ಕಾಲುಗಳು ಸಣ್ಣ ಗಾತ್ರದಲ್ಲಿದ್ದರೂ, ಸದೃಢವಾಗಿರುತ್ತವೆ.

ADVERTISEMENT

ಎಲ್ಲೆಲ್ಲಿದೆ?

ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಪೆರುಗ್ವೆ ಮತ್ತುಅರ್ಜೆಂಟೀನಾಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಆಹಾರ

ಇದು ಸಸ್ಯಹಾರಿಯಾಗಿದೆ. ಕಾಳು, ಹಣ್ಣುಗಳನ್ನು ತಿಂದು ಜೀವಿಸುತ್ತದೆ.

ಜೀವನ ಕ್ರಮ ಮತ್ತು ವರ್ತನೆ

ಇದು ಬೇಸಿಗೆ ಸಮಯದಲ್ಲಿ ವಲಸೆ ಹೋಗುತ್ತದೆ. ಸಮಶೀತೋಷ್ಣ ವಲಯದಲ್ಲಿ ಕಾಲ ಕಳೆಯಲು ಹೆಚ್ಚು ಇಷ್ಟ ಪಡುತ್ತದೆ. ದಟ್ಟವಾ‌ದ ಕಾಡಿನ ಪ್ರದೇಶ ಮತ್ತು ನೀರಿನ ಹರಿವು ಹೆಚ್ಚಿರುವ ಪ್ರದೇಶಗಳಲ್ಲಿ ಕಾಲ ಕಳೆಯುತ್ತದೆ. ಕೆಲವೊಮ್ಮೆ ಗುಂಪಿನಲ್ಲಿ, ಕೆಲವೊಮ್ಮೆ ಜೋಡಿಯಾಗಿ ಕಾಣಿಸಿಕೊಳ್ಳುತ್ತವೆ.

ಸಂತಾನೋತ್ಪತ್ತಿ

ನವೆಂಬರ್‌ ಮತ್ತು ಏಪ್ರಿಲ್‌ ತಿಂಗಳ ನಡುವಿನ ಸಮಯ ಇವುಗಳ ಗರ್ಭಾವಸ್ಥೆಗೆ ಸೂಕ್ತವಾಗಿರುತ್ತದೆ. ಇದು ಒಂದು ಬಾರಿಗೆ ಅಂದಾಜು ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಒಂದರಿಂದ ಎರಡು ವಾರದ ಅಂತರದಲ್ಲಿ ಮರಿಗಳಾಗುತ್ತವೆ.ಅತೀ ಜಾಣ್ಮೆಯಿಂದ ಗೂಡುಗಳನ್ನು ಕಟ್ಟುತ್ತದೆ. ಪರಭಕ್ಷಕಗಳ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಮೊಟ್ಟೆಗಳನ್ನು ಎಚ್ಚರದಿಂದ ಕಾಪಾಡುತ್ತದೆ. ಮರಿಗಳ ಪೋಷಣೆ ಮತ್ತು ಪಾಲನೆಯಲ್ಲಿ ಗಂಡು ಪಕ್ಷಿ ಹೆಚ್ಚು ಕಾಳಜಿ ವಹಿಸುತ್ತದೆ. ಇವು 6 ರಿಂದ 10 ವರ್ಷಗಳ ನಡುವೆ ಪ್ರೌಢಾವಸ್ಥೆಗೆ ತಲುಪುತ್ತವೆ. ನಿರಂತರ ದಾಳಿ ಮತ್ತು ಕಾಡುಗಳ ಅವನತಿಯಿಂದ ಇದರ ಸಂತತಿ ಗಣನೀಯವಾಗಿ ಕುಸಿದಿದೆ.

**

ದೇಹದ ತೂಕ:2 ರಿಂದ 3 ಕೆ.ಜಿ

ಜೀವಿತಾವಧಿ:45 ರಿಂದ 50 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.